ಮನೋರಂಜನೆ

ಜಾಗ್ವಾರ್ ಚಿತ್ರವಿಮರ್ಶೆ

Pinterest LinkedIn Tumblr

ಅಮಿತ್ ಎಂ.ಎಸ್.

nikhilkumar-deepthi
ಚಿತ್ರ: ಜಾಗ್ವಾರ್
ನಿರ್ಮಾಪಕರು: ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ
ನಿರ್ದೇಶಕ: ಮಹದೇವ್
ತಾರಾಗಣ: ನಿಖಿಲ್‌ ಕುಮಾರಸ್ವಾಮಿ, ದೀಪ್ತಿ ಸತಿ, ಜಗಪತಿ ಬಾಬು

ಅದ್ದೂರಿತನ, ಪ್ರತಿ ದೃಶ್ಯದಲ್ಲಿಯೂ ಎದ್ದುಕಾಣುವ ಸಿರಿವಂತಿಕೆ, ವೈರಿಗಳನ್ನು ಬಗ್ಗು ಬಡಿಯುವ ಕಿಚ್ಚು–ರೊಚ್ಚು, ಮೈನವಿರೇಳಿಸುವ ಸಾಹಸಗಳು, ಕೆಲವೊಂದು ಶಿಳ್ಳೆ ಹೊಡೆಸುವ ಸಂಭಾಷಣೆಗಳು, ಹೆಸರಾಂತ ಕಲಾವಿದರ ದಂಡು…

ಕಥೆಯ ಹೊರತಾಗಿ ಹೊಸ ನಾಯಕನಟನನ್ನು ಪರಿಚಯಿಸಲು ಅಗತ್ಯವಿರುವ ಎಲ್ಲ ಪ್ರಮುಖ ಅಂಶಗಳನ್ನು ‘ಜಾಗ್ವಾರ್’ ಒಳಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ನಾಯಕನಿಲ್ಲಿ ‘ಜಾಗ್ವಾರ್’ನಂತೆಯೇ ಬೇಟೆಯಾಡುವ, ವೇಗವಾಗಿ ಓಡುವ–ಜಿಗಿಯುವ ಚಾಣಾಕ್ಷ. ಈ ಮೂಲಕವೇ ಚಿತ್ರದ ಕಥೆಯ ಒಂದು ಎಳೆಯನ್ನು ಸುಲಭವಾಗಿ ಊಹಿಸಬಹುದು.

ವಂಚನೆ, ದ್ರೋಹ, ಕ್ರೌರ್ಯ ಮತ್ತು ಸೇಡಿನ ತಥಾಕಥಿತ ಸಂಗತಿಗಳನ್ನು ಬದಿಗಿರಿಸಿದರೆ ‘ಜಾಗ್ವಾರ್‌’ ಆರಂಭದಿಂದಲೂ ಕುತೂಹಲ ಉಳಿಸಿಕೊಳ್ಳುವ ಅಪ್ಪಟ ಮನರಂಜನೆಯ ಚಿತ್ರ. ಪ್ರತೀಕಾರದ ಕುಲುಮೆಯೊಳಗಿರುವ ನಾಯಕ, ಮತ್ತವನ ಸಾಹಸಗಳು ಮಾತ್ರವೇ ಇಡೀ ಸಿನಿಮಾವನ್ನು ಆವರಿಸಿಕೊಂಡಿಲ್ಲ. ತನ್ನ ತಾಯಿಯ ಬಯಕೆಯಂತೆ ವೈರಿಗಳನ್ನು ಸಂಹರಿಸಲು ಬರುವ ನಾಯಕನಲ್ಲದೆಯೇ, ಆದರ್ಶಗಳನ್ನು ಬೆಳೆಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ ನಾಯಕನ ಸೃಷ್ಟಿ ಈ ಚಿತ್ರದ ವಿಶೇಷ.

ಇತ್ತೀಚಿನ ದಿನಗಳಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ಟೀವಿ ವಾಹಿನಿಗಳ ‘ಟಿಆರ್‌ಪಿ’ ಹಪಹಪಿಯ ಹಿಂದಿನ ಕ್ರೌರ್ಯದ ಅನಾವರಣವಿದೆ. ಅದೇ ರೀತಿ ಕಾರ್ಪೊರೇಟ್‌ ಆಸ್ಪತ್ರೆಗಳ ಹಣದ ಲಾಲಸೆಯ ಚಿತ್ರಣವೂ ಇದೆ. ಈ ಎರಡಕ್ಕೂ ನೈತಿಕತೆಯ ಪಾಠ ಹೇಳುತ್ತಲೇ, ದುಷ್ಟರನ್ನು ಸಂಹರಿಸಲು ದಂಡನೆಯ ಮೊರೆ ಹೋಗುವ ಸಾಮಾಜಿಕ ಕಳಕಳಿಯನ್ನು ಮರೆಯುವ ಸಿನಿಮಾಗಳ ಸಾಲಿಗೆ ‘ಜಾಗ್ವಾರ್’ ಸೇರಿಕೊಳ್ಳುತ್ತದೆ.

ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ವೈದ್ಯನಾಗಿ ಜನಗಳ ಸೇವೆಗೆ ತನ್ನನ್ನು ಮುಡಿಪಾಗಿಟ್ಟುಕೊಂಡ ನಾಯಕನ ತಂದೆ, ತನ್ನ ಜೊತೆಗಿದ್ದವರಿಂದಲೇ ವಂಚನೆಗೆ ಒಳಗಾಗುತ್ತಾನೆ. ಅಪ್ಪನ ಸಾವು, ಅವಮಾನದ ಪ್ರತೀಕಾರ ತೀರಿಸಿಕೊಳ್ಳಲು ನಾಯಕನಿಗೆ ತಾಯಿಯ ಬೆಂಬಲವಿದೆ. ಅನಾಥನೆಂದು ಹೇಳಿಕೊಳ್ಳುತ್ತಾ ವೈದ್ಯ ವಿದ್ಯಾರ್ಥಿಯಾಗಿ ಆತ ಸೇರಿಕೊಳ್ಳುವುದು ತನ್ನ ಅಪ್ಪನನ್ನು ವಂಚಿಸಿದ ಖಳನ ಮಾಲೀಕತ್ವದ ಕಾಲೇಜಿಗೆ. ತನ್ನ ವೈರಿಗಳನ್ನು ಸಾಯಿಸುವುದನ್ನು ನೇರಪ್ರಸಾರ ಮಾಡಲು ಆತ ಬಳಸಿಕೊಳ್ಳುವುದು ಮತ್ತೊಬ್ಬ ವೈರಿಯ ಒಡೆತನದ ಸುದ್ದಿವಾಹಿನಿಯನ್ನು.

ನಿಖಿಲ್, ಸಾಧುಕೋಕಿಲ, ಅವಿನಾಶ್‌ ಹೊರತುಪಡಿಸಿದರೆ ಮಿಕ್ಕ ಪ್ರಮುಖ ಪಾತ್ರಗಳಲ್ಲಿ ತೆಲುಗಿನ ಕಲಾವಿದರೇ ತುಂಬಿಕೊಂಡಿದ್ದಾರೆ. ಕಥೆಯ ತಿರುಳು (ಕಥೆ: ವಿಜಯೇಂದ್ರ ಪ್ರಸಾದ್‌), ನಿರೂಪಣೆ ಮತ್ತು ದೃಶ್ಯಗಳಲ್ಲೂ ತೆಲುಗು ಸಿನಿಮಾಗಳ ಪ್ರಭಾವ ದಟ್ಟವಾಗಿ ಕಾಣಿಸುತ್ತದೆ. ಕನ್ನಡದ ಛಾಯೆ ಚಿತ್ರದಲ್ಲಿ ಕಡಿಮೆ. ಹೀಗಾಗಿ ‘ಜಾಗ್ವಾರ್‌’ ಕನ್ನಡ ಸಂಭಾಷಣೆಯುಳ್ಳ ತೆಲುಗಿನ ಸಿನಿಮಾ ಎಂಬಂತೆ ಕಂಡರೂ ಅಚ್ಚರಿಯಿಲ್ಲ.

ನಾಯಕರಾಗಿ ಪರಿಚಯವಾಗಿರುವ ನಿಖಿಲ್‌, ಹೊಡೆದಾಟ ಮತ್ತು ನೃತ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಚುರುಕುತನದ ಕೊರತೆ ಸಂಭಾಷಣೆ ಒಪ್ಪಿಸುವ ಪರಿ ಮತ್ತು ಭಾವಾಭಿನಯಗಳಲ್ಲಿ ಕಾಣಿಸುತ್ತದೆ. ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವ ನಾಯಕಿ ದೀಪ್ತಿ ಸತಿ ನಟನೆಯಿಂದಲೂ ಬಲು ದೂರ. ಮನೋಜ್‌ ಪರಮಹಂಸರ ಛಾಯಾಗ್ರಹಣ ದೃಶ್ಯಗಳನ್ನು ಅದ್ದೂರಿಯಾಗಿ ಸೆರೆಹಿಡಿಯುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದೆ. ಎಸ್‌.ಎಸ್‌. ತಮನ್‌ ಸಂಗೀತದಲ್ಲಿ ಹಾಡುಗಳು ಹಿನ್ನೆಲೆ ಸಂಗೀತದಂತೆಯೇ ಅಬ್ಬರ ಹೊಂದಿವೆಯೇ ವಿನಾ, ಮನಸಿನಲ್ಲಿ ಉಳಿಯುವುದಿಲ್ಲ. ‘ನೀನೇನು ಸಿ.ಎಂ. ಅಥವಾ ಪಿ.ಎಂ. ಫ್ಯಾಮಿಲಿಯಿಂದ ಬಂದವ್ನಾ’ ಎಂದು ನಾಯಕನನ್ನು ಕೇಳುವಂತಹ ಕೆಲವು ಸಂಭಾಷಣೆಗಳು ‘ಸಿನಿಮಾ’ ನಡುವೆಯೂ ನಾಯಕನ ಹಿನ್ನೆಲೆಯನ್ನು ನೆನಪಿಸುವಂತಿವೆ.

Comments are closed.