ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ಕುಮಾರ್ ಅವರ ಚೊಚ್ಚಲ ಸಿನಿಮಾ ‘ಜಾಗ್ವಾರ್’ನ ಅದ್ದೂರಿ ಆಡಿಯೋ ರಿಲೀಸ್, ಕೋಟಿಗಟ್ಟಲೆ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ ಮುಂತಾದವು ಭಾರಿ ಸುದ್ದಿ ಮಾಡುತ್ತಿವೆ. ಅಲ್ಲದೆ, ಇತ್ತೀಚೆಗೆ ಈ ಚಿತ್ರದ ಐಟಂಸಾಂಗ್ಗಾಗಿ ಖ್ಯಾತ ಬಹುಭಾಷಾ ನಟಿ ತಮನ್ನಾ ಹೆಜ್ಜೆ ಹಾಕಿ ಹೋಗಿದ್ದೂ ಚಿತ್ರದ ಕುರಿತ ನಿರೀಕ್ಷೆಯನ್ನು ಹೆಚ್ಚಿಸಿದೆ. ನಿಖಿಲ್ ಜತೆ ತಮನ್ನಾ ಹೇಗೆ ಕುಣಿದಿರಬಹುದು, ಹಾಡು ಹೇಗಿರಬಹುದು ಎಂಬಿತ್ಯಾದಿ ಬಗ್ಗೆ ಚಿತ್ರಾಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಆದಾಗ್ಯೂ ಈ ಐಟಂ ಸಾಂಗ್ಗಳಲ್ಲಿ ನಟಿಸಿರುವುದರ ಕುರಿತು ಸಿಕ್ಕಿರುವ ಪ್ರತಿಕ್ರಿಯೆಗೆ ಖುದ್ದು ತಮನ್ನಾ ಅವರೇ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖ್ಯಾತ ನಟಿಯರು ಐಟಂ ಸಾಂಗ್ಗಳಲ್ಲಿ ಕುಣಿದರೆ ಅಂಥ ಒಳ್ಳೆಯ ಪ್ರತಿಕ್ರಿಯೆ ಬರುವುದಿಲ್ಲ ಎಂಬ ಅಸಮಾಧಾನ ಅವರದ್ದು. ಅಸಲಿಗೆ ಅವರ ಬೇಸರ ಐಟಂ ಸಾಂಗ್ ಬಗ್ಗೆ ಅಲ್ಲ. ಐಟಂ ಸಾಂಗ್ಗಳಲ್ಲಿ ತಮ್ಮಂಥ ಖ್ಯಾತ ನಟಿಯರು ನರ್ತಿಸಿದರೆ ಜನ ನಕಾರಾತ್ಮಕವಾಗಿ ನೋಡುತ್ತಿರುವುದರ ಬಗ್ಗೆ. ‘ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರ ಇಂಥದ್ದೊಂದು ಅಭಿಪ್ರಾಯ ಚಾಲನೆಯಲ್ಲಿದೆ. ಅದೇ ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಕರೀನಾ ಕಪೂರ್ ಮುಂತಾದ ಹೆಸರಾಂತ ನಟಿಯರು ಐಟಂ ಸಾಂಗ್ಗಳಲ್ಲಿ ಕುಣಿದರೆ ಭಾರಿ ಮನ್ನಣೆ ಸಿಗುತ್ತದೆ’ ಎನ್ನುತ್ತಾರೆ ಅವರು.
‘ಐಟಂ ಸಾಂಗ್ಗಳ ಚಿತ್ರೀಕರಣ ಸಭ್ಯ ರೀತಿಯಲ್ಲಿ ನಡೆದರೆ ಅಂಥ ಹಾಡಿಗೆ ಹೆಜ್ಜೆ ಹಾಕುವುದರಲ್ಲಿ ತಪ್ಪೇನಿದೆ’ ಎನ್ನುವುದು ಅವರ ಪ್ರಶ್ನೆ. ತ್ರಿಭಾಷಾ ಚಿತ್ರ ‘ಅಭಿನೇತ್ರಿ’ಯಲ್ಲಿ ಅವರ ನೃತ್ಯದ ಟೀಸರ್ ನೋಡಿರುವ ಜನ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ‘ನನ್ನ ಸಮಕಾಲೀನ ನಟಿಯರಾದ ಶ್ರುತಿ ಹಾಸನ್ ಹಾಗೂ ಕಾಜಲ್ ಅಗರ್ವಾಲ್ ಕೂಡ ಇಂಥ ಐಟಂಸಾಂಗ್ಗಳಲ್ಲಿ ನರ್ತಿಸುತ್ತಿದ್ದಾರೆ. ಅದು ಚಿತ್ರಕ್ಕೆ ಒಂದು ಗ್ಲಾಮರ್ ತಂದುಕೊಡುತ್ತಿದೆ. ಪ್ರೇಕ್ಷಕರು ನಮ್ಮನ್ನು ಈ ರೀತಿಯ ಹಾಡುಗಳಲ್ಲಿ ನೋಡಲು ಇಷ್ಟಪಡುತ್ತಾರೆ’ ಎನ್ನುತ್ತಾರವರು. ಅಂದಹಾಗೆ, ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳುವುದಕ್ಕೆ ದುಬಾರಿ ಸಂಭಾವನೆ ಪಡೆಯುತ್ತಾರಂತೆ ಅವರು.
Comments are closed.