ಮನೋರಂಜನೆ

ಅಕ್ಟೋಬರ್ 7 ಕ್ಕೆ ಪ್ರಕಾಶ್ ರಾಜ್ ರ ‘ಇದೊಳ್ಳೆ ರಾಮಾಯಣ’ ಬಿಡುಗಡೆ

Pinterest LinkedIn Tumblr

Prakash-Raj_0ಬೆಂಗಳೂರು: ಅದ್ದೂರಿ ಸಿನೆಮಾಗಳ ಬದಲು ಭಾವನೆಗಳನ್ನು ಉಕ್ಕಿಸುವ ಸಿನೆಮಾಗಳನ್ನು ಮಾಡುವುದರ ಬಗ್ಗೆಯೇ ನಟ-ನಿರ್ದೇಶಕ-ನಿರ್ಮಾಪಕ ಪ್ರಕಾಶ್ ರಾಜ್ ಅವರಿಗೆ ಹೆಚ್ಚಿನ ಒಲವು. ತಮಿಳು ಸಿನೆಮಾ ‘ಅಭಿಯುಮ್ ನಾನುಂ’ ಅನ್ನು ಕನ್ನಡಕ್ಕೆ ‘ನಾನು ಮತ್ತು ನನ್ನ ಕನಸು’ ಎಂದು ಹಾಗು ಮಲಯಾಳಂ ಸಿನೆಮಾ ‘ಸಾಲ್ಟ್ ಅಂಡ್ ಪೆಪ್ಪರ್’ ಅನ್ನು ಕನ್ನಡಕ್ಕೆ ‘ಒಗ್ಗರಣೆ’ ಮಾಡಿದ್ದ ಪ್ರಕಾಶ್ ಈಗ ಮತ್ತೊಂದು ಮಲಯಾಳಂ ಸಿನೆಮಾ ‘ಶಟರ್’ ರಿಮೇಕ್ ಮಾಡಿ ಮುಗಿಸಿದ್ದಾರೆ. ‘ಇದೊಳ್ಳೆ ರಾಮಾಯಣ’ ಈಗ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಸಿನೆಮಾ ದಸರಾ ಹಬ್ಬಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬಗ್ಗೆ ಮಾತಿಗಿಳಿವ ಪ್ರಕಾಶ್ “ನಮಗೆ ರಾಮಾಯಣ ಎಂದರೆ ರಾಮ, ಸೀತೆ ಮತ್ತು ರಾವಣ. ಎಷ್ಟೋ ಪರಿಸ್ಥಿಗಳಲ್ಲಿ ನಾವು ರಾಮಾಯಣದ ಪಾತ್ರಗಳಾಗಿಬಿಡುತ್ತೇವೆ. ರಾಮ ಆಗುವುದು ಹಿತ ಆದರೆ ಎಷ್ಟೋ ಬಾರಿ ರಾವಣ ನಮ್ಮೊಳಗಿರುತ್ತಾನೆ. ಕೆಲವು ಬಾರಿ ನಮ್ಮ ಮಾಮೂಲಿ ಜೀವನದಿಂದ, ಬೇರೆ ದಾರಿ ಹಿಡಿದು ಅಹಿತಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇದನ್ನು ನಾವು ಅರಿತುಕೊಂಡು ಹೊಸ ವ್ಯಕ್ತಿಯಾಗಿ ಹೊಮ್ಮುವುದೇ ಇದಕ್ಕೆ ಪರಿಹಾರ. ಈ ಬದಲಾವಣೆಯೇ ಈ ಸಿನೆಮಾದ ಜೀವಾಳ” ಎಂದು ಪ್ರಕಾಶ್ ವಿವರಿಸುತ್ತಾರೆ.
ಎಲ್ಲ ವಯಸ್ಸಿನವರು ನೋಡಬಹುದಾದ ಸಿನೆಮಾಗಳನ್ನು ನಿರ್ಮಿಸುವುದರಲ್ಲಿ ನನಗೆ ನಂಬಿಕೆ ಎನ್ನುವ ಪ್ರಕಾಶ್ ತಮ್ಮ ಎಲ್ಲ ಹಿಂದಿನ ಸಿನೆಮಾಗಳಿಗೆ ‘ಯು-ಪ್ರಮಾಣಪತ್ರ’ ಸಿಕ್ಕಿರುವುದನ್ನು ನೆನಪಿಸಿಕೊಳ್ಳುತ್ತಾರೆ. “ನಾವು ಜವಾಬ್ದಾರಿಯತವಾಗಿರಬೇಕು. ಕಥೆಗಳನ್ನು ಹೇಳಲು ವಿಭಿನ್ನ ಮಾರ್ಗಗಳಿವೆ. ನಾನು ಮಾಡುವ ಎಲ್ಲ ಸಿನೆಮಾಗಾಳಿಗೆ ‘ಯು-ಪ್ರಮಾಣಪತ್ರ’ ಪಡೆಯಲೇಬೇಕು ಎಂಬ ನಿಯಮ ಹಾಕಿಕೊಂಡಿದ್ದೇನೆ. ಮೂಲ ಮಲಯಾಳಂ ಸಿನೆಮಾ ‘ಶಟರ್’ಗೆ ಯು/ಎ ಪ್ರಮಾಣಪತ್ರ ಸಿಕ್ಕಿತ್ತು. ಆದರೆ ಎಲ್ಲ ವಯಸ್ಸಿನವರು ನೋಡುವಂತೆ ಮಾಡಲು ಸಾಧ್ಯ. ಈ ಸಿನೆಮಾದಲ್ಲಿ ವೇಶ್ಯೆಯ ಪಾತ್ರವಿದೆ ಆದರೆ ಅದನ್ನು ಕೂಡ ಸುಂದರವಾಗಿ ತೋರಿಸಬಹುದು ಮತ್ತು ನಾನು ಈ ಆಯಾಮಗಳ ಬಗ್ಗೆ ಹೆಚ್ಚು ಗಮನಹರಿಸಿದ್ದೇನೆ” ಎನ್ನುತ್ತಾರೆ.
ನಟನೆಯಲ್ಲಿಯೂ ಪ್ರಾಮಾಣಿಕತೆ ಉಳಿಸಿಕೊಳ್ಳುವುದು ಮುಖ್ಯ ಎನ್ನುವ ಪ್ರಕಾಶ್ “ಇಂದು ಎರಡು ರೀತಿಯ ಸಿನೆಮಾಗಳಿವೆ, ಒಂದು ಮನರಂಜನಾತ್ಮಕ ಮತ್ತು ವಾಣಿಜ್ಯಾತ್ಮಕ. ನಾನು ಎರಡರಲ್ಲೂ ನಟಿಸಿದ್ದೇನೆ ಆದರೆ ಯಾವುದರಲ್ಲಿಯೂ ನಾನು ಅತಿರೇಕದಿಂದ ನಟಿಸಿರುವುದು ನಿಮಗೆ ಕಾಣುವುದಿಲ್ಲ. ನಟನಾಗಿ ಸಾಮಾಜಿಕ ಜವಾಬ್ದಾರಿ ಅರಿತಿದ್ದೇನೆ. ಸಿನೆಮಾರಂಗದಲ್ಲಿ ಎರಡು ದಶಕ ಕಳೆದ ಮೇಲೆ ನಿಮ್ಮ ವ್ಯಕ್ತಿತ್ವ ಬೇರೆಯವರಿಗೆ ಉದಾಹರಣೆಯಾಗಬೇಕು” ಎನ್ನುತ್ತಾರೆ.
‘ಇದೊಳ್ಳೆ ರಾಮಾಯಣ’ ಸಿನೆಮಾದಲ್ಲಿ ಪ್ರಿಯಾಮಣಿ, ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ.

Comments are closed.