ಮನೋರಂಜನೆ

ದೇಸೀ ನೆಲದಲ್ಲಿ ಅರಳಿದ ಕೆಂಡಸಂಪಿಗೆ ಪ್ರೇಮ; ಹ್ಯಾಪಿ ಬರ್ತ್ ಡೇ

Pinterest LinkedIn Tumblr

Happy-Birthday-(2)ನನ್ನ ಮೂರು ಮಾತುಗಳನ್ನ ಈಡೇರಿಸ್ತೀಯಾ ಅಂತಾನೆ ಅವನು. ಅದಕ್ಕೆ ತಲೆಯಾಡಿಸಿ, “ಅದೇನು ಹೇಳಿ…’ ಅಂತಾನೆ ಇವನು. “ಮೊದಲ್ನೆದು, ಸಾವಿಗಿಂತ ಸಾವಿನ ಸುದ್ದಿ ಕೇಳುವ ದುಃಖವೇ ಜಾಸ್ತಿ. ಹಾಗಾಗಿ ನಾನು ಸಾಯುವ ಸುದ್ದಿ ನನ್‌ ಅವ್ವಣ್ಣಿಗೆ ಗೊತ್ತಾಗ್‌ಬಾರ್ಧು. ಎರಡ್ನೇದು, ಈ ಸಲ ದಸರಾದಲ್ಲಿ ನಡೆಯೋ ದೊಣ್ಣೆ ವರಸೆ ಆಟದಲ್ಲಿ ನೀನು ಆಟ ಆಡಿ ಗೆಲ್‌ಬೇಕು, ಮೂರ್ನೇದು ನನ್‌ ಅವ್ವಣಿನಾ ನೀನ್‌ ಮದ್ವೆಯಾಗಿ ಚೆನ್ನಾಗ್‌ ನೋಡ್ಕೊಬೇಕು. ಈ ಮೂರು ಮಾತನ್ನ ಈಡೇರಿಸ್ತೀಯಾ..’ ಅಂತ ಅವನಿಂದ ಭಾಷೆ ತಗೋತ್ತಾನೆ… ಮುಂದಾ? ನಡೆಯೋದೆಲ್ಲಾ “ಬರ್ತ್‌ಡೇ’ ಸಡಗರ ಮತ್ತು ಸಂಭ್ರಮ. ಹೀಗೆ ಯಾರು, ಯಾರಿಗೆ ಹೇಳ್ತಾರೆ, ಯಾರು ಭಾಷೆ ಕೊಡ್ತಾರೆ, ಅವ ಮಾತನ್ನೆಲ್ಲಾ ಇವ್ನು ನೆರವೇರಿಸ್ತಾನಾ ಎಂಬ ಕುತೂಹಲವಿದ್ರೆ, “ಹ್ಯಾಪಿ ಬರ್ತ್‌ಡೇ’ ಸಂಭ್ರಮದಲ್ಲಿ ಮಿಂದೇಳುವುದನ್ನ ಮಿಸ್‌ ಮಾಡ್ಕೊಬೇಡಿ.

ನಿರ್ದೇಶಕ ಮಹೇಶ್‌ ಸುಖಧರೆ, ಈ ಬಾರಿ ಹೊಸ ಫ್ಲೇವರ್‌ ಕಟ್ಟಿಕೊಟ್ಟಿದ್ದಾರೆ. ಬೇಳೆಯನ್ನು ಹದವಾಗಿ ಬೇಯಿಸಿ, ಅದಕ್ಕೆ ಬೆಲ್ಲದ ಪಾಕ ಬೆರೆಸಿ, ಏಲಕ್ಕಿ ಪುಡಿ ಉದುರಿಸಿ, ರುಬ್ಬಿದ ಬಳಿಕ ಘಮಘಮಿಸೋ “ಹೂರಣ’ ತುಂಬಿದ ಹೋಳಿಗೆ ರುಚಿಯಷ್ಟೇ ಹೊಸತನವೆನಿಸುವ, ಪಕ್ಕಾ ಗ್ರಾಮೀಣ ಸೊಗಡು ತುಂಬಿರುವ, ನಮ್ಮ ನೆಲದ ವಾಸನೆ ಇರುವ, ದೇಸೀತನ ಮೇಳೈಸಿರುವ ಸಿನಿಮಾದೂಟ ಉಣಬಡಿಸಿದ್ದಾರೆ.

ನಮ್ಮೂರಲ್ಲೇ ನಡೆದಿರುವ ನಮ್ಮೂರ ಹುಡುಗ, ಹುಡುಗಿಯ ನಿಷ್ಕಲ್ಮಷ ಪ್ರೀತಿ ಕಥೆ ಎನಿಸುವಷ್ಟರಮಟ್ಟಿಗೆ ಹೊಸದೊಂದು ಹಳ್ಳಿಸೊಗಡಿನ ದೃಶ್ಯಕಾವ್ಯ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇಡೀ ಚಿತ್ರ ಇಷ್ಟವಾಗೋದೇ, ಖುಷಿ ಕೊಡುವ ಗ್ರಾಮೀಣ ಭಾಷೆ, ಅಕ್ಕರೆ ತುಂಬಿರುವ ಸಕ್ಕರೆ ನಾಡಿನ ಪರಿಸರ, ಆ ಚೆಲುವು ಮತ್ತು ಚಿತ್ತಾರ ಇವೆಲ್ಲವೂ ಚಿತ್ರದ ಸೊಗಸು, ಸೊಬಗನ್ನು ಹೆಚ್ಚಿಸಿವೆ. ಆರಂಭದಿಂದ ಅಂತ್ಯದವರೆಗೂ ಗಟ್ಟಿ ಕಥೆ ನೋಡುಗನಲ್ಲಿ ಮಜ ಕೊಡುತ್ತ, ಅಲ್ಲಲ್ಲಿ ಹೃದಯ ಹಿಂಡುತ್ತ, ಭಾವನೆಗಳನ್ನು ಕೆದಕುತ್ತ, ಆಗಾಗ ಕಣ್ಣು ಒದ್ದೆ ಮಾಡುತ್ತ, ಮನ ಕಲಕುತ್ತಲೇ, ಬರ್ತ್‌ಡೇ ಒಳಗಿನ ಸಂಭ್ರಮ ಮತ್ತು ತಲ್ಲಣಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಇಡೀ ಸಿನಿಮಾ ನೋಡಿ ಹೊರಬಂದವರಿಗೆ ಆಗಷ್ಟೇ ಕತ್ತರಿಸಿದ ಸಕ್ಕರೆ ನಾಡಿನ “ಕಬ್ಬು’ ತಿಂದಷ್ಟೇ ಅನುಭವ.

ಪದೇ ಪದೇ ಕಾಡುವ ಗುಣ ಕಥೆಯಲ್ಲಿದೆ. ಆ ಕಥೆಗೆ ಕೊಬ್ಬರಿ ಮಿಠಾಯಿಯಷ್ಟೇ ರುಚಿಯಂತಿರುವ ಚಿತ್ರಕಥೆ, ಹೊಸ ಶೈಲಿಯ ನಿರೂಪಣೆ, ಚಿತ್ರದ ವೇಗ ಯಾವುದೇ ಕಿರಿಕಿರಿ ಇಲ್ಲದೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಡೀ ಚಿತ್ರಕ್ಕೆ ಎರಡುವರೆ ಗಂಟೆ ಕಾಲ ಹಿಡಿದಿಡುವ ತಾಕತ್ತಿದೆ. ಆ ತಾಕತ್ತಿನ ಹಿಂದಿನ ಶಕ್ತಿ ಅಂದ್ರೆ, ಮತ್ತದೇ ಕಥೆ, ಚಿತ್ರಕಥೆ, ಹೊಸ ಬಗೆಯ ನಿರೂಪಣೆ. ಇವುಗಳೊಂದಿಗೆ ಪೋಣಿಸಿರುವ ಮಂಡ್ಯ ಗತ್ತಿನ ಮಾತುಗಳು, ಹಳ್ಳಿ ಪದಪುಂಜವುಳ್ಳ ಹಾಡು, ಮಂಡ್ಯ ಗಂಡಸಿನ ಧಿಮಾಕು, ಆ ಮಾನವೀಯತೆ, ಕ್ಯಾಮೆರಾ ಕಣ್ಣಲ್ಲಿ ಅರಳಿರುವ ಮಂಡ್ಯದ ಸೊಗಸು, ಅದ್ಧೂರಿತನ ಇವೆಲ್ಲವೂ ಸೇರಿ “ಬರ್ತ್‌ಡೇ’ ಸಡಗರವನ್ನು ಹೆಚ್ಚಿಸಿವೆ.

ಒಂದು ಅಪ್ಪಟ ದೇಸಿ ಕಥೆಗೆ ಪಕ್ಕಾ ಗ್ರಾಮೀಣ ಭಾಷೆಯ ವ್ಯಾಕರಣ ಇಲ್ಲಿ ಸರಿಯಾಗಿ ಬೆರೆತಿರುವುದರಿಂದಲೇ ಸಿನಿಮಾ ಎಲ್ಲೂ ಹಳಿ ತಪ್ಪಿಲ್ಲ. ಮೊದಲರ್ಧದ ಅವಧಿ ಕೊಂಚ ಜಾಸ್ತಿಯಾಯೆನೋ ಎಂಬ ಫೀಲ್‌ ಕಾಡುವ ಸಮಯದಲ್ಲೇ, ಮತ್ತದೇ ಮಂಡ್ಯ ಗಂಡಸಿನ ವರಸೆ, ಅವಳ ಹಿಂದೆ ಬೀಳುವ ಬಗೆ, ಅವಳಿಂದ ಬೈಯಿಸಿಕೊಳ್ಳುವ ಪರಿ, ಎದುರಾಳಿಗಳ ಜತೆ ಹೊಡೆದಾಡೋ ರೀತಿ, ಕಿವಿಗೊಪ್ಪುವ ಹಾಡು, ಕಣ್ಣೊಪ್ಪುವ ಸೌಂದರ್ಯ ಮೇಳೈಸಿ ತಕ್ಕಮಟ್ಟಿಗಿನ ಫೀಲ್‌ ಮಾಯವಾಗುತ್ತದೆ. ಇಡೀ ಚಿತ್ರದಲ್ಲೊಂದು ಹೈಲೈಟ್‌ ಅಂತ ಹೇಳುವುದಾದರೆ, ದೊಣ್ಣೆ ವರಸೆ. ಅದು ಚಿತ್ರದ ಒಂದು ಪಾತ್ರವಾಗಿಯೂ ಬೆರೆತಿದೆ. ಇಲ್ಲಿ ಚಿತ್ರದ ಅವಧಿಯನ್ನ ಸ್ವಲ್ಪ ಕಡಿಮೆ ಮಾಡಬಹುದಿತ್ತು. ಕೆಲ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಲು ಅವಕಾಶವೂ ಇತ್ತು. ಅವೆಲ್ಲವನ್ನೂ ತಾಳ್ಮೆಯಿಂದ ಮಾಡಿದ್ದರೆ , ನೋಡುಗನನ್ನು ಇನ್ನಷ್ಟು “ಹ್ಯಾಪಿ’ಯಾಗಿರಿಸಬಹುದಿತ್ತು.

“ಹ್ಯಾಪಿ’ ಕಥೆ; ಸಚಿನ್‌ (ಸಚಿನ್‌) ಹುಟ್ಟೂರು ನಾಗಮಂಗಲ. ಚಿಕ್ಕಂದಿನಲ್ಲೇ ಅಪ್ಪ, ಅಮ್ಮನ ಕಳಕೊಂಡವನು. ಅಣ್ಣ, ಅತ್ತಿಗೆ ತೋಳಲ್ಲೇ ಬೆಳೆದವನು. ಪೆನ್ನು, ಪುಸ್ತಕ ಹಿಡಿಯದೆ, ಹುಡುಗ್ರ ಜತೆ ಬ್ಯಾಟು ಬಾಲು ಹಿಡಿದು ಆಡಿದವನು. 24 ವರ್ಷಕ್ಕೇ 26 ಬಗೆಯ ಕೆಲಸ ಮಾಡಿ ಅರ್ಧಕ್ಕೇ ಬಿಟ್ಟವನು. ಅವನಿಗೆ ಅಣ್ಣ, ಅತ್ತಿಗೆ ಅಂದ್ರೆ ದೇವರ ಸಮಾನ. ಅಂಥಾ ಹುಡುಗನ ಕಣ್ಣಿಗೆ ನಂದಿಬಟ್ಲ ಕಣ್ಣಂಗಿರೋ, ಬೆಣ್ಣೆಯಂಥಾ ಹುಡುಗಿ ಅಂಜಲಿ (ಸಂಸ್ಕೃತಿ ಶೆಣೈ) ಬೀಳ್ತಾಳೆ. ಮೊದಲ ನೋಟಕ್ಕೇ ಫಿದಾ ಆಗೋ ಸಚಿನ್‌, ಅವಳ ಹಿಂದೆ ಬಿದ್ದು ಲವ್‌ ಮಾಡೋಕೆ ಶುರುಮಾಡ್ತಾನೆ. ಅವಳಿಗೂ ಅವನ ಮೇಲೆ ಮನಸ್ಸಾಗುತ್ತೆ. ಅವನಿಗೆ ಪ್ರಪಂಚ ಅಂದ್ರೆ ಅವಳೇ. ಇಂಥಾ ಟೈಮಲ್ಲಿ ಕೆಲ ಘಟನೆಗಳು ನಡೆಯುತ್ತವೆ, ಒಂದಷ್ಟು ತಿರುವುಗಳು ಬರುತ್ತವೆ. ಇಬ್ಬರೂ ಒಂದಾಗ್ತಾರಾ, ಇಲ್ಲವಾ ಅನ್ನೋದೇ ಸಸ್ಪೆನ್ಸ್‌.

ಸಚಿನ್‌ಗೆ ಇದು ಮೊದಲ ಚಿತ್ರವಾದರೂ, ಅನುಭವಿ ನಟನಂತೆ ಕಾಣುತ್ತಾರೆ. ಡೈಲಾಗ್‌ ಡಿಲವರಿ, ಬಾಡಿಲಾಂಗ್ವೇಜ್‌ನ ಹಿಡಿತವಿದೆ. ರಿಸ್ಕೀ ಸ್ಟಂಟ್‌ನಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಎಮೋಷನಲ್‌ ಸೀನ್‌ನಲ್ಲಿನ್ನೂ ಧಮ್‌ ಕಟ್ಟಬಹುದಿತ್ತು. ಸಂಸ್ಕೃತಿ ಶೆಣೈ ಮುದ್ದಾಗಿ ಕಾಣಿಸುವುದರ ಜತೆಗೆ, ಮಂಡ್ಯ ನೆಲದ ಬಜಾರಿ ಹುಡುಗಿಯಾಗಿ, ಸ್ವಾಭಿಮಾನದ ಹೆಣ್ಣಾಗಿ ಇಷ್ಟವಾಗುತ್ತಾರೆ. ಅಚ್ಯುತ ಇಲ್ಲಿ ಒಳ್ಳೇ ಅಪ್ಪನಾಗಿ, ಹೃದಯ ಭಾರವಾಗುವಷ್ಟು ಭಾವುಕತೆ ಹೆಚ್ಚಿಸುವಲ್ಲಿ ಸಫ‌ಲ. ರಾಜೇಶ್‌ ನಟರಂಗ, ರವಿಕಾಳೆ ಕಾಣಿಸಿಕೊಂಡಷ್ಟು ಕಾಲ ನೆನಪಲ್ಲುಳಿಯುತ್ತಾರೆ. ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌, ಚಿಕ್ಕಣ್ಣ ತಕ್ಕಮಟ್ಟಿಗೆ ನಗಿಸುವ ಮೂಲಕ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಭಗ್ನಪ್ರೇಮಿ ಕುಡುಕನಾಗಿ ಶ್ರೀನಗರಕಿಟ್ಟಿ ಸಿನಿಮಾ ಆರಂಭ, ಅಂತ್ಯಕ್ಕೆ ಸಾಕ್ಷಿಯಾಗುತ್ತಾರೆ. ಸಿನಿಮಾದ ವಿಶೇಷತೆ ಅಂದರೆ ಅದು ಸಂಗೀತ ಮತ್ತು ಕ್ಯಾಮೆರಾ.

ಹರಿಕೃಷ್ಣ ಸಂಗೀತದಲ್ಲಿ ಎಲ್ಲಾ ಹಾಡುಗಳಲ್ಲೂ ಹೊಸ ಫ್ಲೇವರ್‌ ತುಂಬಿದೆ. ಅದಕ್ಕೆ ಕಾರಣ, ಗೀತರಚನೆಕಾರರ ಕೈಚಳಕ. ಇನ್ನು, ಸುರೇಶ್‌ ಜಯಕೃಷ್ಣ ಕ್ಯಾಮೆರಾದಲ್ಲಿ ಮಂಡ್ಯ ನೆಲದ ಸೊಬಗಿದೆ, ನಾಗಮಂಗಲ ಬೆಣ್ಣೆಯಂಥಹ ಚೆಲುವಿದೆ.
ಚಿತ್ರ : ಹ್ಯಾಪಿ ಬರ್ತ್‌ಡೇ
ನಿರ್ದೇಶನ : ಮಹೇಶ್‌ ಸುಖಧರೆ
ನಿರ್ಮಾಣ : ಧನಲಕ್ಷ್ಮೀ ಚೆಲುವರಾಯಸ್ವಾಮಿ, ಭಾಗ್ಯ ಸುಖಧರೆ
ತಾರಾಗಣ : ಸಚಿನ್‌, ಸಂಸ್ಕೃತಿ ಶೆಣೈ, ಅಂಬರೀಶ್‌, ಶ್ರೀನಗರಕಿಟ್ಟಿ, ಅಚ್ಯುತ, ರಾಜೇಶ್‌ ನಟರಂಗ, ರವಿಕಾಳೆ, ಸಾಧುಕೋಕಿಲ, ಚಿಕ್ಕಣ್ಣ, ಬುಲೆಟ್‌ ಪ್ರಕಾಶ್‌ ಇತರರು.

*ವಿಜಯ್‌ ಭರಮಸಾಗರ

-ಉದಯವಾಣಿ

Comments are closed.