ಮನೋರಂಜನೆ

50 ವರ್ಷಗಳ ಸಿನೆಮಾ ವೃತ್ತಿಜೀವನ ಪೂರೈಸಿದ ಅಡೂರ್ ಗೋಪಾಲಕೃಷ್ಣ

Pinterest LinkedIn Tumblr

adoorತಿರುವನಂತಪುರಂ: ಹಲವಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣ, ಸಿನೆಮಾ ವೃತ್ತಿಜೀವನದ 50 ವಸಂತಗಳನ್ನು ಪೂರೈಸಿದ್ದು ಸದ್ಯಕ್ಕೆ ಮಲೆಯಾಳಿ ಸಿನೆಮಾ ‘ಪಿನ್ನೆಯುಮ್’ ನಿರ್ದೇಶನದಲ್ಲಿ ನಿರತರಾಗಿದ್ದಾರೆ.
ಅಡೂರ್ ಎಂದೇ ಪ್ರಖ್ಯಾತವಾಗಿರುವ 75 ವರ್ಷದ ನಿರ್ದೇಶಕ ಎಂದಿಗೂ ಸಿನೆಮಾಗಳನ್ನು ನಿರ್ದೇಶಿಸಲು ಆತುರಪಟ್ಟವರಲ್ಲ. 1965 ರಲ್ಲಿ 20 ನಿಮಿಷದ ಶಾರ್ಟ್ ಫಿಲಂ ‘ಎ ಗ್ರೇಟ್ ಡೇ’ ನಿರ್ದೇಶಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಅಡೂರ್, 11 ಸಿನೆಮಾಗಳು, 30 ಕ್ಕೂ ಹೆಚ್ಚು ಶಾರ್ಟ್ ಫಿಲಂಗಳು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅವರ ಕೊನೆಯ ಚಿತ್ರ 2008 ರಲ್ಲಿ ನಿರ್ದೇಶಿಸಿದ ‘ಒರು ಪೆನ್ನುಂ ರಾಂಡಾಣುಮ್’ (ಅಪರಾಧದ ವಾತಾವರಣ) 115 ನಿಮಿಷಗಳ ಚಲನಚಿತ್ರ.
1960 ರಲ್ಲಿ ಗಾಂಧಿಗ್ರಾಮ್ ಗ್ರಾಮ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಸರ್ಕಾರಿ ಕೆಲಸ ಹಿಡಿದಿದ್ದ ಅಡೂರ್ 1962 ರಲ್ಲಿ ಕೆಲಸ ತೊರೆದು ಸಿನೆಮಾ ನಿರ್ದೇಶನ ಅಧ್ಯಯನ ಮಾಡಲು ಪುಣೆಯ ಎಫ್ ಟಿ ಐ ಐ ಕಾಲೇಜು ಸೇರಿದರು. 1965 ರಲ್ಲಿ ಪದವಿ ಪಡೆದು ಹೊರಬಂದರು.
ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 16 ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿರುವ ಅಡೂರ್, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೆ, 2004 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾಜನರು ಕೂಡ.
‘ಎಲಿಪ್ಪತಾಯಾಂ’, ‘ಮುಖಾಮುಖಮ್’, ‘ಅನಂತರಂ’, ‘ಸ್ವಯಂವರಂ’ ವಿಮರ್ಶಕ ಮತ್ತು ಜನಮೆಚ್ಚುಗೆ ಪಡೆದ ಅವರ ಕೆಲವು ಸಿನೆಮಾಗಳು.
1984 ರಲ್ಲಿ ಪದ್ಮಶ್ರೀ ಪಡೆದ ಅಡೂರ್ ಅವರಿಗೆ 2006 ರಲ್ಲಿ ಪದ್ಮಭೂಷಣ ಗೌರವ ನೀಡಲಾಗಿದೆ. ಅವರ ಪುತ್ರ ಅಶ್ವತಿ ಮಹಾರಾಷ್ಟ್ರ ಕ್ಯಾಡರ್ ನ ಐ ಎ ಎಸ್ ಅಧಿಕಾರಿ.

Comments are closed.