ನಿರ್ದೇಶಕ ಮಹೇಶ್ ಸುಖಧರೆ ನಿರ್ದೇಶನದ “ಹ್ಯಾಪಿ ಬರ್ತ್ಡೇ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಹಿನ್ನೆಲೆ ಸಂಗೀತದ ಕೆಲಸ ಅಂತಿಮ ಹಂತದಲ್ಲಿದೆ. ಈಗ ವಿಷಯ ಏನಪ್ಪಾ ಅಂದರೆ, ಚಿತ್ರ ರಿಲೀಸ್ ಹಂತಕ್ಕೆ ಬಂದಿದ್ದರೂ ನಿರ್ದೇಶಕರು ಚಿತ್ರದ ನಾಯಕಿಯ ವಿಷಯವನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಹೇಶ್ ಸುಖಧರೆ, ತಮ್ಮ ಚಿತ್ರದ ನಾಯಕಿ ಬಗ್ಗೆ ಒಂದಷ್ಟು ಹೇಳಿಕೊಂಡಿದ್ದಾರೆ. ಅಂದಹಾಗೆ, ಹೀರೋ ಸಚಿನ್ಗೆ ಸಂಸ್ಕೃತಿ ಶೆಣೈ ಎಂಬ ಹುಡುಗಿ ನಾಯಕಿಯಾಗಿ ನಟಿಸಿದ್ದಾರೆ. ಹೌದು, ಸಂಸ್ಕೃತಿ ಶೆಣೈ ಮೂಲತಃ ಕಾರ್ಕಳದ ಹುಡುಗಿ. ಆದರೆ, ಸದ್ಯ ನೆಲೆಸಿರೋದು ಕೇರಳದ ಕೊಚ್ಚಿಯಲ್ಲಿ. ಸಂಸ್ಕೃತಿ ಶೆಣೈಗೆ “ಹ್ಯಾಪಿ ಬರ್ತ್ಡೇ’ ಕನ್ನಡದ ಮೊದಲ ಸಿನಿಮಾ. ಪಕ್ಕಾ ಹಳ್ಳಿಸೊಗಡಿನ ಕಥೆಯ ಪಾತ್ರಕ್ಕೆ ನಮ್ಮ ನೆಲದ ಬೊಗಸೆಗಣ್ಣಿನ ಹುಡುಗಿಯೊಬ್ಬಳು ಬೇಕಿದ್ದರಿಂದ, ಮಹೇಶ್ ಸುಖಧರೆ, ಅಂತಿಮವಾಗಿ ಸಂಸ್ಕೃತಿ ಶೆಣೈ ಅವರನ್ನ ಆಯ್ಕೆ ಮಾಡಿ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ.
ಸಂಸ್ಕೃತಿ ಶೆಣೈಗೆ ಸಿನಿಮಾ ಹೊಸದೇನಲ್ಲ. ಈಗಾಗಲೇ ಮಲಯಾಳಂ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಸ್ಕೃತಿ ತಂದೆ ಗೋವಿಂದಶೆಣೈ ವೃತ್ತಿಯಲ್ಲಿ ಡಾಕ್ಟರ್. ಅವರಿಗೆ ತಮ್ಮ ಮಗಳು ಸಂಸ್ಕೃತಿ ಚಿತ್ರರಂಗದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಆದರೆ, ನಿರ್ದೇಶಕರ “ಹ್ಯಾಪಿ ಬರ್ತ್ಡೇ’ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದಾಗ, ಗ್ರೀನ್ಸಿಗ್ನಲ್ ಕೊಟ್ಟದ್ದನ್ನು ಹೇಳುತ್ತಾರೆ ಮಹೇಶ್ ಸುಖಧರೆ.
ಮಹೇಶ್ ಸುಖಧರೆ ಹಿಂದಿನ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚು ಆದ್ಯತೆ ಇರುತ್ತಿತ್ತು. ಅದು ಈ ಚಿತ್ರದಲ್ಲೂ ಮುಂದುವರೆದಿದೆ. ಹಿಂದಿನ ಚಿತ್ರಗಳಲ್ಲಿ ಹೊಸ ಹುಡುಗಿಯರನ್ನೇ ಪರಿಚಯಿಸಿದ್ದ ಸುಖಧರೆ, ಈ ಚಿತ್ರದ ಮೂಲಕವೂ ಸಂಸ್ಕೃತಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಇದೊಂದು ಅಪ್ಪಟ ದೇಸಿ ಚಿತ್ರ. ಹಳ್ಳಿ ಸೊಗಡಿನಲ್ಲೇ, ಅದರಲ್ಲೂ ಪಕ್ಕಾ ಮಂಡ್ಯ ನೆಲದಲ್ಲಿ, ಆ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರವಾದ್ದರಿಂದ, ಇಲ್ಲಿರುವ ಪ್ರತಿಯೊಂದು ಪಾತ್ರವು ಕೂಡ ಆ ಸೊಗಡು, ಸಂಸ್ಕೃತಿಯನ್ನೇ ಬಿಂಬಿಸುವಂತಿವೆ. ಅಂದಹಾಗೆ, ನಿರ್ದೇಶಕರು, ಈ ಚಿತ್ರದ ನಾಯಕಿ ಆಯ್ಕೆಗಾಗಿ ಬೆಂಗಳೂರು, ಹೈದರಬಾದ್, ಚೆನ್ನೈ ಹಾಗು ಮುಂಬೈನಲ್ಲಿ ಆಡಿಷನ್ ಮಾಡಿದ್ದರೂ, ಕೊನೆಗೆ ಸಿಕ್ಕಿದ್ದು, ಕೇರಳದ ಬೆಡಗಿ ಸಂಸ್ಕೃತಿ ಶೆಣೈ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ರೆಬೆಲ್ಸ್ಟಾರ್ ಅಂಬರೀಷ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಚಿತ್ರರಂಗದ ಹಿರಿಯ ಕಲಾವಿದರಿದ್ದಾರೆ. ಚಿತ್ರವನ್ನು ಚೆಲುವರಾಯ ಸ್ವಾಮಿ ನಿರ್ಮಿಸಿದ್ದು, ವಿ.ಹರಿಕೃಷ್ಣ ಸಂಗೀತವಿದೆ. ಮೊದಲ ಸಲ ಜನಪದ ಶೈಲಿಯ ಹಾಡುಗಳನ್ನು ಹರಿಕೃಷ್ಣ ಕಟ್ಟಿ ಕೊಟ್ಟಿದ್ದಾರೆ. ವಿ.ನಾಗೇಂದ್ರಪ್ರಸಾದ್, ಯೋಗರಾಜ್ ಭಟ್, ಕೃಷ್ಣೇಗೌಡ, ಕೆ. ಕಲ್ಯಾಣ್ ಗೀತೆ ರಚಿಸಿದ್ದಾರೆ ಎಂದು ವಿವರ ಕೊಡುತ್ತಾರೆ ಮಹೇಶ್.
-ಉದಯವಾಣಿ
Comments are closed.