ಮನೋರಂಜನೆ

ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ಸಿನಿಮಾ ಹಿಟ್;ದಕ್ಷನ ಬಗ್ಗೆ ಮೆಚ್ಚುಗೆ

Pinterest LinkedIn Tumblr

Daksha-Yagnaಹೊಸಬರೇ ಸೇರಿ ಮಾಡಿದ ಪೌರಾಣಿಕ ಸಿನಿಮಾ “ದಕ್ಷಯಜ್ಞ’ ಚಿತ್ರಕ್ಕೆ ಈಗ ಜನರಿಂದ ಮೆಲ್ಲನೆ ಮೆಚ್ಚುಗೆ ಸಿಗುತ್ತಿದೆ. ಅದರಲ್ಲೂ ಮೈಸೂರು, ಚಾಮರಾಜನಗರ, ಹಾಸನ, ಪಾಂಡವಪುರ ಹಾಗು ಅಲ್ಲಿನ ಸುತ್ತಮುತ್ತಲ ಊರುಗಳಲ್ಲಿರುವ ಟೆಂಟ್‌ಗಳಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆಳವಣಿಗೆ ಕೊಂಚ ಖುಷಿ ಕೊಟ್ಟಿದ್ದರೂ, ನಿರ್ದೇಶಕ ಜಿಬಿಎಸ್‌. ಸಿದ್ದೇಗೌಡ ಅವರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಬೇಜಾರಿದೆ. ಅದಕ್ಕೆ ಕಾರಣ, ಒಳ್ಳೆಯ ಚಿತ್ರಕ್ಕೆ ಸಿಗದ ಚಿತ್ರಮಂದಿರಗಳು. ಆರಂಭದಲ್ಲಿ ಸುಮಾರು ಮೂವತ್ತು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರೂ, ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ಈ ಬೆಳವಣಿಗೆ ನಿರ್ದೇಶಕರಲ್ಲಿ ನೋವನ್ನುಂಟುಮಾಡಿದೆ.

ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸಿದ್ದೇಗೌಡ, “ತಾಲೂಕು ಮಟ್ಟದಲ್ಲಿರುವ ಚಿತ್ರಮಂದಿರಗಳಿಗೆ ಜನರೇ ಬರುತ್ತಿರಲಿಲ್ಲ. ಆದರೆ, ಅಂತಹ ಚಿತ್ರಮಂದಿರದಲ್ಲಿ “ದಕ್ಷಯಜ್ಞ’ ಪ್ರದರ್ಶನವಾಗಿ, ಅದರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನಾಡಿದ್ದರಿಂದ ಸಿನಿಮಾ ನೋಡದೇ ಇರುವ ವೃದ್ಧರೂ ಸಹ ಬಂದು ನೋಡುತ್ತಿದ್ದಾರೆ. ಪೌರಾಣಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಚಿತ್ರದ ಬಗ್ಗೆ ಫೋನ್‌ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ, ಇಂದಿನ ಪೀಳಿಗೆ ಯಾಕೆ ಇಂತಹ ಸಿನಿಮಾ ಬಗ್ಗೆ ಒಲವು ತೋರುತ್ತಿಲ್ಲ ಎಂಬುದು ನಮಗೆ ಬೇಸರ ತಂದಿದೆ. ಪೌರಾಣಿಕ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎಂಬ ಕಾರಣಕ್ಕೆ, ನಾಟಕವೊಂದನ್ನು ಚಿತ್ರಕ್ಕೆ ಅಳವಡಿಸಿದರೂ, ನಮ್ಮ ಪ್ರಯತ್ನಕ್ಕೆ ಸರಿಯಾದ ಪ್ರತಿಫ‌ಲ ಸಿಕ್ಕಿಲ್ಲ’ ಎನ್ನುತ್ತಾರೆ ನಿರ್ದೇಶಕರು.

ಈಗ ಚಿತ್ರ ಸದ್ಯಕ್ಕೆ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆ ಕೂಡ ಉತ್ತಮ ರೀತಿಯಲ್ಲಿದೆ. ಹಾಕಿದ ಹಣಕ್ಕೆ ಮೋಸ ಆಗುವುದಿಲ್ಲ ಎಂಬ ನಂಬಿಕೆಯಿಂದಲೇ ಇದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಅನ್ನುವವರಿಗೆ ಇಂತಹ ಪೌರಾಣಿಕ ಸಿನಿಮಾ ಕಟ್ಟಿಕೊಟ್ಟರೂ, ಅದರ ಹಿನ್ನೆಲೆ ತಿಳಿದುಕೊಳ್ಳುವ ಆಸಕ್ತಿ ಇಂದಿನ ಯುವಕರಿಗಿಲ್ಲವಾಗಿದೆ. ದಯವಿಟ್ಟು, ಯೂತ್ಸ್, ನಮ್ಮಂತಹ ರಂಗಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ವಿತರಕರು ಸಹ ನಮ್ಮಂತಹ ಚಿತ್ರಗಳನ್ನು ವಿತರಣೆ ಮಾಡುವ ಮೂಲಕ ಸಣ್ಣ ಕಲಾವಿದರನ್ನು ಬೆಳೆಸಬೇಕು ಎಂದು ಮನವಿ ಮಾಡುತ್ತಾರೆ ಸಿದ್ದೇಗೌಡ.
-ಉದಯವಾಣಿ

Comments are closed.