ಮನೋರಂಜನೆ

7 ಗಾಯಕಿಯರು ನಾಯಕಿಯರಾದರು:ಫ‌ಲಿತಾಂಶದಲ್ಲಿ ಹಾಡುವವರೇ ಆಡುವವರು

Pinterest LinkedIn Tumblr

hiroಸಾಮಾನ್ಯವಾಗಿ ಗಾಯಕಿಯರು ತೆರೆಯ ಹಿಂದಷ್ಟೇ ಹಾಡುವ ಮೂಲಕ ಸುದ್ದಿಯಾಗುತ್ತಾರೆ. ಕೆಲವರು ತೆರೆಯ ಮೇಲೆಯೂ ಹಾಡಿ, ನಲಿದಾಡಿ ಸುದ್ದಿಯಾಗುವುದೂ ಉಂಟು. ಈಗ “ಫ‌ಲಿತಾಂಶ’ ಚಿತ್ರದಲ್ಲಿ ಏಳು ಮಂದಿ ಹಿರಿಯ ಗಾಯಕಿಯರು ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ. ಹೌದು, ನಿರ್ದೇಶಕ ಎಂ.ಆರ್‌.ಕಪಿಲ್‌ ಅವರ ಚೊಚ್ಚಲ ನಿರ್ದೇಶನದ “ಫ‌ಲಿತಾಂಶ’ ಚಿತ್ರದಲ್ಲಿ ಹಿರಿಯ ಗಾಯಕಿಯರಾದ ಬಿ.ಕೆ.ಸುಮಿತ್ರ, ಇಂದೂ ವಿಶ್ವನಾಥ್‌, ರಮಾ ಅರವಿಂದ್‌, ಮಾನಸ ಹೊಳ್ಳ, ಸುರೇಖ, ಪ್ರಾರ್ಥನಾ ಹಾಗು ವೀಣಾ ಸುಮರಾಣಿ ಅವರು “ಅ ಆ ಇ ಈ ಅಕ್ಷರಮಾಲೆ ಬಾಳಿಗೆ ಬೆಳಕನೆ ವಿದ್ಯೆಯೆನ್ನುವ ಮಕ್ಕಳಿಗೆ ಭೋದನೆ ನೀಡಲು…’ ಎಂಬ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಪುಟ್ಟಣ್ಣ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಈ ಹಾಡಿನ ಚಿತ್ರೀಕರಣವನ್ನು ನಡೆಸಲಾಯಿತು. ಈ ಹಾಡಿನೊಂದಿಗೆ “ಫ‌ಲಿತಾಂಶ’ ಶೇ.90 ರಷ್ಟು ಭಾಗ ಚಿತ್ರೀಕರಣಗೊಂಡಿದೆ.

“ಫ‌ಲಿತಾಂಶ’ದಲ್ಲಿ ಮಕ್ಕಳ ಹಾಗು ಪೋಷಕರ ನಡುವಿನ ಸಂಬಂಧ ಹೇಗಿರಬೇಕು, ಹೇಗಿರಬಾರದು ಎಂಬ ಸಂದೇಶವಿದೆಯಂತೆ. ಅಂದಹಾಗೆ, ಇದು ಮಕ್ಕಳ ಕುರಿತಾದ ಕಥೆ. ನಿರ್ದೇಶಕರೇ ಕಥೆ ಹೆಣೆದಿದ್ದಾರೆ. “ಜೀವನದಲ್ಲಿ ನಡೆದ ಸಣ್ಣ ಘಟನೆ ಕಥೆಗೆ ಪ್ರೇರಣೆ. ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧ ಹೇಗಿರಬೇಕು, ಮಕ್ಕಳ ಓದಿನ ಬಗ್ಗೆ ಪೋಷಕರು ಹೇಗೆ ಕಾಳಜಿ ವಹಿಸಬೇಕು, ಕೆಲಸದ ಒತ್ತಡಗಳಿಂದಾಗಿ ಮಕ್ಕಳ ಬಗ್ಗೆ ಗಮನಹರಿಸದಿದ್ದರೆ, ಅವರ ಲೈಫ್ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ, ಈಗಿನ ವಾಟ್ಸಾಪ್‌, ಫೇಸ್‌ಬುಕ್‌, ಮೊಬೈಲ್‌ಗ‌ಳಿಂದ ಮಕ್ಕಳು ಹೇಗೆ ಹಾದಿ ತಪ್ಪುತ್ತಾರೆ, ಓದದೆ, ಹೇಗೆ ದುರಂತಕ್ಕೀಡಾಗುತ್ತಾರೆ ಎಂಬ ವಿಷಯದ ಮೇಲೆ ಸಿನಿಮಾ ಮಾಡುತ್ತಿರುವುದಾಗಿ ಹೇಳುತ್ತಾರೆ ಕಪಿಲ್‌.

ಪಿ.ಕಿಶೋರ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಘ ರಮಣ ಸಂಗೀತ ನೀಡಿದ್ದಾರೆ. ಪ್ರಸನ್ನ ಕ್ಯಾಮೆರಾ ಹಿಡಿದಿದ್ದಾರೆ. ಸುಶೀಲ್‌ ಬಾಬು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಡಾ.ದೊಡ್ಡರಂಗೇಗೌಡ, ಡಾ.ಭರತ್‌ ದೊಡ್ಡರಂಗೇಗೌಡ, ಉದಯಲೇಖ ಗೀತೆ ರಚಿಸಿದ್ದಾರೆ. ಚಿತ್ರದಲ್ಲಿ ಜೈಜಗದೀಶ್‌, ವಿಕ್ಟರಿ ವಾಸು, ಗುಬ್ಬಿ ನಟರಾಜ್‌, ಭಾಗ್ಯಶ್ರೀ, ಸುಶೀಲ್‌ ಬಾಬು, ಶಂಕರ್‌ ಭಟ್‌, ರಾಮು ಕಣಗಾಲ್‌, ಗೀರಿಶ್‌, ದೀಪ್ತಿ, ಉಮಾಶಂಕರ್‌, ಅಪೂರ್ವ, ಮೀನಾಕ್ಷಿ, ಮಂಜುಳ, ಸುಚೇಂದ್ರ ಪ್ರಸಾದ್‌, ಕು.ಸೌಂದರ್ಯ, ಕೃಷ್ಣವೇಣಿ, ಪೂಜಾ, ಮಾ.ಭರತ್‌, ಮಾ.ತೇಜಸ್‌, ಮಾ.ಹೇಮಂತ್‌ ಇತರರು ನಟಿಸಿದ್ದಾರೆ.
-ಉದಯವಾಣಿ

Comments are closed.