ಮನೋರಂಜನೆ

ಮೇ 27ಕ್ಕೆ ಅಪೂರ್ವ: ಸಕ್ಸೆಸ್‌ಮೀಟ್‌ ಜೊತೆ ಬರ್ತ್‌ಡೇನಾ ರವಿಚಂದ್ರನ್?

Pinterest LinkedIn Tumblr

raviಇತ್ತೀಚಿನ ದಿನಗಳಲ್ಲಿ ರವಿಚಂದ್ರನ್‌ ಎದುರಿಸುತ್ತಿದ್ದ ಪ್ರಶ್ನೆಗಳು ಎರಡು. “ಅಪೂರ್ವ’ ಯಾವಾಗ ರಿಲೀಸ್‌ ಎಂಬುದು ಕನಸುಗಾರನ ಸಿನಿಮಾಸಕ್ತರ ಪ್ರಶ್ನೆಯಾದರೆ, ಈ ಸಲ ಆದ್ರೂ ನಿಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೀರಾ ಎಂಬುದು ಅಭಿಮಾನಿಗಳ ಪ್ರಶ್ನೆ. ಈ ಎರಡೂ ಪ್ರಶ್ನೆಗಳಿಗೂ ರವಿಚಂದ್ರನ್‌ ಉತ್ತರ ಕೊಡಲು ನಿರ್ಧರಿಸಿದ್ದಾರೆ.

ಇದೇ ಮೇ 27ರಂದು “ಅಪೂರ್ವ’ ತೆರೆ ಕಾಣಲಿದೆ. ಲಿಫ್ಟ್ನಲ್ಲಿ ಇಡೀ ಚಿತ್ರವನ್ನು ಶೂಟಿಂಗ್‌ ಮಾಡಿದ್ದರ ಬಗ್ಗೆ ರವಿಚಂದ್ರನ್‌ ಈಗಾಗಲೇ ಹೇಳಿಕೊಂಡಿದ್ದಾರೆ. ಆ ಕಾರಣಕ್ಕೇ ಈ ಸಿನಿಮಾ ಎಲ್ಲರ ಕುತೂಹಲ ಕೆರಳಿಸಿದೆ ಅನ್ನುವುದು ರವಿಚಂದ್ರನ್‌ಗೂ ಗೊತ್ತಿದೆ.

ಎಷ್ಟೋ ಸಂದರ್ಭಗಳಲ್ಲಿ ಅಪೂರ್ವ ನೂರು ಕೋಟಿ ಕಲೆಕ್ಷನ್‌ ಮಾಡುವ ಸಿನಿಮಾ ಅಂತಲೂ ಹೇಳಿರೋದರಿಂದ, ಪ್ರೇಕ್ಷಕರ ನಿರೀಕ್ಷೆ ಹತ್ತುಪಟ್ಟಾಗಿದೆ. ಏನೇ ಆದರೂ ತನಗೆ ಪೂರ್ತಿ ತೃಪ್ತಿಯಾಗದ ಹೊರತು, ಸಿನಿಮಾ ರಿಲೀಸ್‌ ಮಾಡೋಲ್ಲ ಅಂತ ಕೂತಿದ್ದ ರವಿಚಂದ್ರನ್‌ ಇದೀಗ ಅಂತಿಮ ಹಂತದ ಕೆಲಸಗಳನ್ನು ಪೂರೈಸಿ, ಪೋಸ್ಟರ್‌ ಡಿಸೈನ್‌ ಮಾಡುವುದಕ್ಕೆ ಕೂತಿದ್ದಾರೆ. ಮೇ 27ರಂದು “ಅಪೂರ್ವ’ ತೆರೆಕಂಡರೆ, ಮೇ 31ರಂದು ರವಿಚಂದ್ರನ್‌ ಹುಟ್ಟುಹಬ್ಬ. ಹುಟ್ಟುಹಬ್ಬದ ಸಂದರ್ಭದಲ್ಲಿ ನಟರ ಸಿನಿಮಾಗಳು ಬಿಡುಗಡೆಯಾಗುವ ಟ್ರೆಂಡ್‌ ಇತ್ತೀಚೆಗೆ ಕಡಿಮೆ ಆಗುತ್ತಿದೆ.

ಇದೀಗ ಮತ್ತೆ ಅದೇ ಟ್ರೆಂಡ್‌ ಹುಟ್ಟುಹಾಕಲು ರವಿಚಂದ್ರನ್‌ ನಿರ್ಧರಿಸಿದ್ದಾರೆ. “ಅಪೂರ್ವ’ ಸಕ್ಸೆಸ್‌ ಮೀಟ್‌ ಮತ್ತು ಬರ್ತಡೇ ಎರಡೂ ಒಟ್ಟಿಗೇ ನಡೆದರೂ ಆಶ್ಚರ್ಯಪಡಬೇಕಾಗಿಲ್ಲ. ಮೇ 27ಕ್ಕೆ ಕಾಯೋದಷ್ಟೇ ಅಭಿಮಾನಿಗಳು ಮಾಡಬೇಕಾದ ಕೆಲಸ.
-ಉದಯವಾಣಿ

Write A Comment