ಮನೋರಂಜನೆ

ಜೂನಿಯರ್‌ ಡ್ರಾಮಾಗೆ ಮಾಸ್ಟರ್‌ ಆನಂದ್‌ ಆ್ಯಂಕರ್‌

Pinterest LinkedIn Tumblr

SMಜೀ ಕನ್ನಡ ವಾಹಿನಿಯಲ್ಲಿ ಏಪ್ರಿಲ್‌ 30ರಿಂದ ಪ್ರಸಾರವಾಗಲಿರುವ “ಡ್ರಾಮಾ ಜೂನಿಯರ್‌’ ರಿಯಾಲಿಟಿ ಷೋಗೆ ಟಿ.ಎನ್‌.ಸೀತಾರಾಮ್‌, ನಟಿ “ಜ್ಯೂಲಿ’ ಲಕ್ಷ್ಮೀ ಹಾಗೂ ನಟ ವಿಜಯ್‌ ರಾಘವೇಂದ್ರ ತೀರ್ಪುಗಾರರಾಗಿ
ಕಾರ್ಯನಿರ್ವಹಿಸಲಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಓದಿದ್ದೀರಿ. ಈಗ ವಿಷಯ ಏನಪ್ಪಾ ಅಂದರೆ,
ಆ “ಡ್ರಾಮಾ ಜೂನಿಯರ್‌’ ರಿಯಾಲಿಟಿ ಷೋಗೆ ಮಾಸ್ಟರ್‌ ಆನಂದ್‌ ನಿರೂಪಕರು.

ಹೌದು, ಮಾಸ್ಟರ್‌ ಆನಂದ್‌ಗೆ ಇದು ನಿರೂಪಣೆಯ ಎರಡನೇ ಕಾರ್ಯಕ್ರಮ. ಈ ಹಿಂದೆ ಆನಂದ್‌ “ಕುಣಿಯೋನು
ಬಾರಾ’ ಎಂಬ ರಿಯಾಲಿಟಿ ಷೋಗೆ ನಿರೂಪಕರಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಆನಂದ್‌ಗೆ ಸಾಕಷ್ಟು ರಿಯಾಲಿಟಿ ಷೋಗಳನ್ನು ನಿರೂಪಿಸಲು ಅವಕಾಶ ಬಂದಿತ್ತಾದರೂ, ಆನಂದ್‌ಗೆ ಆ ಜವಾಬ್ದಾರಿ ವಹಿಸಿಕೊಳ್ಳಲು ಆಗಲಿಲ್ಲ. ಕಾರಣ, ಅವರು ನಿರ್ದೇಶನ, ನಟನೆ ಅಂತ ಬಿಜಿಯಾಗಿದ್ದರು.

ಇತ್ತೀಚೆಗೆ ಅವರು “ಬಿಗ್‌ಬಾಸ್‌’ ಮನೆಗೆ ಹೋಗಿ ಬಂದ ನಂತರ ಸಾಕಷ್ಟು ಅವಕಾಶಗಳೂ ಬಂದಿದ್ದುಂಟು. ಅವುಗಳ ಜತೆಯಲ್ಲಿ ಆನಂದ್‌ಗೆ “ಡ್ರಾಮಾ ಜೂನಿಯರ್‌’ ರಿಯಾಲಿಟಿ ಷೋ ನಿರೂಪಣೆ  ಮಾಡುವಂತಹ ಅವಕಾಶವೂ ಬಂತು. ಮಕ್ಕಳ ಜತೆಯಲ್ಲಿ ಮಾಡುವ ಕೆಲಸ ಎಂಬ ಕಾರಣಕ್ಕೆ ಆನಂದ್‌ ಅದನ್ನು ಬಿಡಲಿಲ್ಲ. ಈಗಾಗಲೇ ಆ ರಿಯಾಲಿಟಿ ಷೋನ ರೂಪುರೇಷೆಗಳು ನಡೆದಿವೆ. ಇದೇ ಏಪ್ರಿಲ್‌ 30 ರಿಂದ ಷೋ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಆನಂದ್‌, “ನನಗೆ ಈ ಹಿಂದೆಯೇ ಹಲವು ರಿಯಾಲಿಟಿ ಷೋಗಳ ನಿರೂಪಣೆಗೆ ಅವಕಾಶ ಬಂದಿತ್ತು. ಆದರೆ, ಮೆಗಾ ಸೀರಿಯಲ್‌ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೆ. ಅದರಲ್ಲೂ ಪ್ರೊಡಕ್ಷನ್‌ ನಾನೇ ನೋಡಿಕೊಳ್ಳಬೇಕಿತ್ತು. ಆಗ ಸಾಧ್ಯವಾಗಿರಲಿಲ್ಲ. ಈಗ ಮಕ್ಕಳೇ ಮಾಡುವ “ಡ್ರಾಮಾ’ ಷೋಗೆ ನಿರೂಪಕ ನಾಗಿದ್ದೇನೆ. ಈಗಾಗಲೇ ಮೆಗಾ ಆಡಿಷನ್‌ ನಡೆಯುತ್ತಿದೆ. ರಾಜ್ಯಾದ್ಯಂತ ಸಾವಿರಾರು ಮಕ್ಕಳು ಈ ಆಡಿಷನ್‌ ನಲ್ಲಿ ಭಾಗವಹಿಸಿದ್ದಾರೆ. ಆ ಪೈಕಿ 30 ಜನರನ್ನು ಮೊದಲ ಆಯ್ಕೆ ಮಾಡಿಕೊಂಡು, ಅಂತಿಮವಾಗಿ 16
ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಮುಂದಿನ ವಾರದಿಂದ ಮಕ್ಕಳ “ಡ್ರಾಮಾ’ ಶುರುವಾಗಲಿದೆ. ಮಕ್ಕಳ ಜತೆ ಕೆಲಸ ಮಾಡುವುದು ಕಷ್ಟದ ಕೆಲಸವೇ. ಅವರನ್ನು ಅರ್ಥ ಮಾಡಿಕೊಂಡರೆ ಯಾವ  ಕಷ್ಟವೂ ಇರುವುದಿಲ್ಲ. ಮಕ್ಕಳ ಪ್ಲಸ್‌ ಮತ್ತು ಮೈನಸ್‌ ಪಾಯಿಂಟ್‌ಗಳನ್ನು ಗುರುತಿಸಿಕೊಂಡು, ಅವರನ್ನು ತಮಾಷೆ ಮಾಡಿಕೊಂಡೇ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿ ಇದೆ. ನೋಡೋಣ, ಏನೇನಾಗುತ್ತೆ ಅಂತ. ಸದ್ಯಕ್ಕೆ ಸೀರಿ ಯಲ್ಸ್‌ ಪ್ಲಾನಿಂಗ್‌ ಇದೆ. ಸಿನಿಮಾಗಳಲ್ಲಿ ಅವಕಾಶವೂ
ಬರುತ್ತಿದೆ. ಈಗ ನೋಡಿದರೆ, ನಿರೂಪಣೆಯ ಜವಾಬ್ದಾರಿ ಹೆಗಲ ಮೇಲಿದೆ. ಸದ್ಯಕ್ಕೆ “ಡ್ರಾಮಾ’ದತ್ತ ಒಲವು ತೋರಿದ್ದೇನೆ’ ಎನ್ನುತ್ತಾರೆ ಆನಂದ್‌.
-ಉದಯವಾಣಿ

Write A Comment