ಅಂತರಾಷ್ಟ್ರೀಯ

ಮಹಿಳಾ ತಂಡವನ್ನು ನೋಡಿಯಾದರೂ ಆಡಲು ಕಲಿಯಿರಿ; ಪಾಕ್‌ ತಂಡದ ವಿರುದ್ಧ ಆಕ್ರೋಶ

Pinterest LinkedIn Tumblr

afridi

ಕರಾಚಿ (ಪಿಟಿಐ): ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದ ಭಾರತದ ಎದುರಿನ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲು ಕಂಡಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿನ ಮಾಧ್ಯಮಗಳು ಕೂಡ ಪಾಕ್‌ ತಂಡದ ನಾಯಕ ಶಾಹಿದ್ ಅಫ್ರಿದಿ ಮತ್ತು ಕೋಚ್‌ ವಕಾರ್‌ ಯೂನಿಸ್ ಅವರನ್ನು ತರಾಟೆಗೆ ತೆಗೆದುಕೊಂಡಿವೆ. ಕೆಲ ಅಭಿಮಾನಿಗಳು ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಮಾಜಿ ಕ್ರಿಕೆಟಿಗರೂ ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತದ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಆರು ವಿಕೆಟ್‌ಗಳ ಗೆಲುವು ಪಡೆದಿತ್ತು.

ಐಸಿಸಿ ಏಕದಿನ ವಿಶ್ವಕಪ್‌ ಮತ್ತು ಚುಟುಕು ಕ್ರಿಕೆಟ್‌ ಟೂರ್ನಿಯಲ್ಲಿ ಪಾಕ್ ತಂಡದ ಎದುರು ಭಾರತ ಒಮ್ಮೆಯೂ ಸೋತಿಲ್ಲ.

‘ಪಂದ್ಯಕ್ಕೂ ಮೊದಲು ಮಳೆ ಸುರಿದ ಕಾರಣ ಪಿಚ್‌ ಕೊಂಚ ತೇವವಾಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ದರಿಂದ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ಆದರೂ ನಾಯಕ ಅಫ್ರಿದಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿ ತಪ್ಪು ನಿರ್ಧಾರ ಕೈಗೊಂಡರು. ಅಫ್ರಿದಿ ಅವರ ಈ ತೀರ್ಮಾನದ ಹಿಂದೆ ಇರುವ ತಂತ್ರವಾದರೂ ಏನು’ ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ ಪ್ರಶ್ನಿಸಿದೆ.

‘ಅಂತಿಮ ಹನ್ನೊಂದರ ತಂಡದಲ್ಲಿ ಯಾರನ್ನು ಆಡಿಸಬೇಕು ಎಂಬುದನ್ನು ನಿರ್ಧರಿಸುವ ವಿಷಯದಲ್ಲಿ ಎಡವಟ್ಟಾಗಿದೆ. ನಾಯಕತ್ವ ಮತ್ತು ತಂಡದ ಆಡಳಿತ ತೆಗೆದುಕೊಂಡ ನಿರ್ಧಾರ ಸರಿಯಾಗಿರಲಿಲ್ಲ. ಅಫ್ರಿದಿ ಮತ್ತು ಯೂನಿಸ್‌ ಅವರಿಗೆ ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಏನಾದರೂ ಗೊತ್ತಿದೆಯೇ’ ಎಂದೂ ಆ ಪತ್ರಿಕೆ ಖಾರವಾಗಿ ಪ್ರಶ್ನಿಸಿದೆ.

‘ಭಾರತದ ಎದುರಿನ ಪಂದ್ಯದಲ್ಲಿ ಪಾಕ್ ಮಹಿಳಾ ತಂಡ ಯಾವ ರೀತಿ ಆಡಿತು ಎಂಬುದನ್ನು ಎಲ್ಲರೂ ನೋಡಿದ್ದೀರಿ. ನಿಮಗೆ ಗೆಲ್ಲುವುದು ಹೇಗೆ ಎಂಬ ತಂತ್ರ ಗೊತ್ತಿಲ್ಲದೇ ಹೋದರೆ ಮಹಿಳಾ ತಂಡವನ್ನಾದರೂ ನೋಡಿ ಕಲಿಯಿರಿ’ ಎಂದು ‘ದ ನೇಷನ್‌’ ಪತ್ರಿಕೆ ಕಟು ಟೀಕೆ ಮಾಡಿದೆ. ನವದೆಹಲಿಯಲ್ಲಿ ನಡೆದಿದ್ದ ಮಹಿಳಾ ಪಂದ್ಯದಲ್ಲಿ ಪಾಕ್ ತಂಡ ಭಾರತ ಎದುರು ಗೆಲುವು ಪಡೆದಿತ್ತು.

ಮುಗಿಯಿತೇ ಅಫ್ರಿದಿ ನಾಯಕತ್ವ?
ವಿಶ್ವ ಟೂರ್ನಿ ಮುಗಿದ ಬಳಿಕ ಅಫ್ರಿದಿ ಅವರನ್ನು ನಾಯಕತ್ವದಿಂದ ಕಿತ್ತು ಹಾಕಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಅಫ್ರಿದಿ ಆಟ ಮತ್ತು ನಾಯಕರಾಗಿ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಮಂಡಳಿಗೆ ತೀರಾ ಬೇಸರವಾಗಿದೆ ಎಂದೂ ತಿಳಿದು ಬಂದಿದೆ. ಅಷ್ಟೇ ಅಲ್ಲ, ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯನ್ನೇ ಬದಲಿಸುವ ಬಗ್ಗೆ ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್‌ ಸುಳಿವು ನೀಡಿದ್ದಾರೆ.

Write A Comment