ಅಂತರಾಷ್ಟ್ರೀಯ

ಗೇಲ್‌ ಸ್ಪೋಟಕ ಶತಕ: ಇಂಗ್ಲೆಂಡ್ ಎದುರು ವಿಂಡೀಸ್‌ಗೆ ಜಯ

Pinterest LinkedIn Tumblr

gaiyle

ಮುಂಬೈ (ಪಿಟಿಐ): ಸ್ಪೋಟಕ ಆಟಕ್ಕೆ ಹೆಸರಾಗಿರುವ ಕ್ರಿಸ್‌ ಗೇಲ್‌ (ಔಟಾಗದೆ 100, 48ಎಸೆತ, 5 ಬೌಂಡರಿ, 11 ಸಿಕ್ಸರ್‌) ಅವರ ಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡ್ ಎದುರಿನ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 182 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು 2012ರ ಟೂರ್ನಿಯ ಚಾಂಪಿಯನ್‌ ವಿಂಡೀಸ್‌ 18.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು. ಗೇಲ್‌ ಆಟದ ಜೊತೆಗೆ ಮರ್ಲಾನ್‌ ಸ್ಯಾಮು ಯಲ್ಸ್‌ (37) ಕೂಡ ನೆರವಾದರು.

ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾಸನ್‌ ರಾಯ್‌ ಮತ್ತು ಅಲೆಕ್ಸ್‌ ಹೇಲ್ಸ್‌ 37 ರನ್ ಕಲೆ ಹಾಕಿ ಗಟ್ಟಿ ಬುನಾದಿ ನಿರ್ಮಿಸಿಕೊಟ್ಟರು.

ಬಳಿಕ ರೂಟ್‌ ಅಬ್ಬರಿಸಿದರು. 36 ಎಸೆತಗಳನ್ನು ಎದುರಿಸಿದ ರೂಟ್‌ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ ಒಳಗೊಂಡಂತೆ 48 ರನ್ ಗಳಿಸಿದರು. ಇವರು ಹೇಲ್ಸ್‌ ಜೊತೆ ಸೇರಿ ಎರಡನೇ ವಿಕೆಟ್‌ಗೆ 40 ಎಸೆತಗಳಲ್ಲಿ 55 ರನ್‌ ಕಲೆ ಹಾಕಿದರು. ಇದರಿಂದ ಆಂಗ್ಲರ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಗೇಲ್‌ ಅಬ್ಬರದ ಮುಂದೆ ಇವರ ಆಟವೆಲ್ಲಾ ಮಂಕಾಗಿ ಹೋಯಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 (ಜಾಸನ್‌ ರಾಯ್‌ 15, ಅಲೆಕ್ಸ್‌ ಹೇಲ್ಸ್ 28, ಜೋ ರೂಟ್‌ 48, ಜಾಸ್‌ ಬಟ್ಲರ್‌ 30, ಎಯೊನ್‌ ಮಾರ್ಗನ್‌ ಔಟಾಗದೆ 27, ಬೆನ್‌ ಸ್ಟೋಕ್ಸ್‌ 15; ಆ್ಯಂಡ್ರೆ ರಸೆಲ್‌ 36ಕ್ಕೆ2, ಡ್ವೇನ್‌ ಬ್ರಾವೊ 41ಕ್ಕೆ2, ಸುಲೆಮಾನ್‌ ಬೆನ್‌ 23ಕ್ಕೆ1).

ವೆಸ್ಟ್‌ ಇಂಡೀಸ್‌ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 183 (ಕ್ರಿಸ್‌ ಗೇಲ್ ಔಟಾಗದೆ 100, ಮರ್ಲಾನ್‌ ಸ್ಯಾಮುಯೆಲ್ಸ್‌ 37, ಆ್ಯಂಡ್ರೆ ರಸೆಲ್‌ ಔಟಾಗದೆ 16; ಆದಿಲ್‌ ರಶೀದ್ 20ಕ್ಕೆ1). ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 6 ವಿಕೆಟ್‌ ಗೆಲುವು. ಪಂದ್ಯ ಶ್ರೇಷ್ಠ: ಕ್ರಿಸ್‌ ಗೇಲ್‌.

Write A Comment