ಮನೋರಂಜನೆ

ಈ ವಾರವೂ ಬಿಝಿ ರಿಲೀಸ್; ಏಳು ಬೀಳಿನ ನಡುವೆ ಏಳು ಸಿನಿಮಾ

Pinterest LinkedIn Tumblr

kiraguruವಾರದಿಂದ ವಾರಕ್ಕೆ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹಾಗಂತ ಇದು ಗೆಲುವಿನ ಸಂಖ್ಯೆಯಲ್ಲ. ಬದಲಾಗಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ. ಫೆಬ್ರವರಿಯಿಂದ ಸತತವಾಗಿ ವಾರ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಐದು-ಆರರ ಸುತ್ತವೇ ಸುತ್ತುತ್ತಿದೆ. ಈ ವಾರ ಬರೋಬ್ಬರಿ ಏಳು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಹಾಗಂತ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯಲ್ಲಷ್ಟೇ ಏರಿಕೆಯಾಗುತ್ತಿವೆಯೇ ಹೊರತು ಗೆಲುವಿನ ಲೆಕ್ಕ ತಗೊಂಡರೆ ಇತ್ತೀಚಿನ ಫ‌ಲಿತಾಂಶ ನಿರಾಶದಾಯಕವಾಗಿವೆ. ಬಹುತೇಕ ಸಿನಿಮಾಗಳು ಒಂದು ವಾರದ ಮಟ್ಟಿಗಷ್ಟೇ ಥಿಯೇಟರ್‌ ಪ್ರವೇಶಿಸುತ್ತಿವೆ. ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದ ಚಿತ್ರಗಳು ಕೂಡಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫ‌ಲವಾಗುವ ಮೂಲಕ ಈಗ ಯಾವ ಸಿನಿಮಾಗಳ ಮೇಲೆ ನಿರೀಕ್ಷೆ ಇಡೋದು ಎಂಬ ಗೊಂದಲದಲ್ಲಿದ್ದ ಪ್ರೇಕ್ಷಕರಿದ್ದಾರೆ. ಸದ್ಯಕ್ಕೆ ಇಂತಹ ಸ್ಥಿತಿ ಇರುವಾಗಲೇ ಕ್ರಿಕೆಟ್‌ ಭಯವೋ, ಥಿಯೇಟರ್‌ ಸಿಗುತ್ತಿರುವ ಸಂತೋಷವೋ ಅಥವಾ ಸ್ಟಾಕ್‌ ಕ್ಲಿಯರೆನ್ಸೋ … ವಾರ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯಂತೂ ಹೆಚ್ಚುತ್ತಲೇ ಇವೆ. ಪರಿಣಾಮವಾಗಿ ಜನವರಿಯಿಂದ ಇಲ್ಲಿವರೆಗೆ 39 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ.

ಈ ವಾರ ಏಳು ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ರೆಡಿಯಾಗಿವೆ. “ಕಿರಗೂರಿನ ಗಯ್ನಾಳಿಗಳು’, “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’, “ಬುಲೆಟ್‌ ರಾಣಿ’, “ಅಹಂ’, “ಸಿಬಿಐ ಸತ್ಯ’, “ಸತ್ಯನಾರಾಯಣ’, “ಚಿರವಾದ ನೆನಪು’ ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಸುಮನಾ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’ ಚಿತ್ರ ಮೂವೀಲ್ಯಾಂಡ್‌ ಚಿತ್ರಮಂದಿರವನ್ನು ಘೋಷಿಸಿಕೊಂಡಿದ್ದು, ಸಿನಿಮಾ ಬಗ್ಗೆ ಒಂದಷ್ಟು ನಿರೀಕ್ಷೆಯಂತೂ ಇದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ ಈ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್‌, ಕಾರುಣ್ಯ ರಾಮ್‌, ಸೋನು, ಸುಕೃತಾ, ಮಾನಸ, ಕಿಶೋರ್‌, ಅಚ್ಯುತ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಈ ಬಾರಿ ನಿರೀಕ್ಷೆ ಹುಟ್ಟಿಸಿರುವ ಮತ್ತೂಂದು ಸಿನಿಮಾವೆಂದರೆ ಅದು ಸುನಿ ನಿರ್ದೇಶನದ “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’. ಚಿತ್ರದಲ್ಲಿ ಪ್ರವೀಣ್‌ ಹಾಗೂ ಮೇಘನಾ ಗಾಂವ್ಕರ್‌ ನಟಿಸಿದ್ದು, ಚಿತ್ರ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಅದು ಬಿಟ್ಟರೆ “ಬುಲೆಟ್‌ ರಾಣಿ’ಯಲ್ಲಿ ನಿಶಾ ಕೊಠಾರಿ ನಟಿಸಿದ್ದು, ಇದೊಂದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ. ಗ್ಲಾಮರ್‌ ಬೆಡಗಿ ನಿಶಾ ಇಲ್ಲಿ ರಗಡ್‌ ಆಗಿ ಕಾಣಸಿಕೊಂಡಿದ್ದಾರೆ. ಚಿತ್ರ ಮೇನಾಕದಲ್ಲಿ ಬಿಡುಗಡೆಯಾಗುತ್ತಿದೆ. ಅದು ಬಿಟ್ಟರೆ “ಅಹಂ’ ಮಲ್ಟಿಪ್ಲೆಕ್ಸ್‌ನಲ್ಲಿ ತೆರೆಕಂಡರೆ, “ಸಿಬಿಐ ಸತ್ಯ’ ಸ್ವಪ್ನ ಹಾಗೂ “ಚಿರವಾದ ನೆನಪು’ ತ್ರಿಭುವನ್‌ ಚಿತ್ರಮಂದಿರಗಳನ್ನು ಘೋಷಿಸಿಕೊಂಡಿವೆ. ಹರೀಶ್‌ ರಾಜ್‌ ಅವರ “ಸತ್ಯನಾರಾಯಣ’ ಚಿತ್ರ ಇನ್ನೂ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರದ ಹುಡುಕಾಟದಲ್ಲೇ ಇದೆ.

ಸದ್ಯಕ್ಕೆ ಬಿಡುಗಡೆಯನ್ನು ಘೋಷಿಸಿಕೊಂಡಿರುವ ಇಷ್ಟು ಸಿನಿಮಾಗಳಲ್ಲಿ ಶುಕ್ರವಾರದ ಹೊತ್ತಿಗೆ ಯಾವ ಸಿನಿಮಾ ಹಿಂದೆ ಸರಿಯುತ್ತದೆ ಎಂದು ಕಾದು ನೋಡಬೇಕು. ಏಕೆಂದರೆ ಘೋಷಿಸಿಕೊಂಡ ಕೆಲವು ಸಿನಿಮಾಗಳು ಥಿಯೇಟರ್‌ ಸಮಸ್ಯೆಯಿಂದಾಗಿ ಕೊನೆಗಳಿಗೆಯಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ಅದೇನೇ ಆದರೂ ವಾರ ವಾರ ಇಷ್ಟು ಸಿನಿಮಾ ಬಿಡುಗಡೆಯಾಗುವ ಜೊತೆಗೆ ಫ‌ಲಿತಾಂಶ ಕೂಡಾ ಚೆನ್ನಾಗಿ ಸಿಕ್ಕರೆ ಬಂಡವಾಳ ಹಾಕಿದವರ ಮುಖದಲ್ಲಿ ಮಂದಹಾಸ ಮೂಡಬಹುದು.
-ಉದಯವಾಣಿ

Write A Comment