ಲಾಹೋರ್: ಪಾಕಿಸ್ತಾನದ ತನ್ನ ಮನೆ ಮೇಲೆ ಭಾರತದ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಪೊಲೀಸರು ಕ್ಲೀನ್ ಚಿಟ್ ನೀಡದ ಕಾರಣ, ಪಾಕಿಸ್ತಾನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಗುರುವಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅನಿಖ್ ಅನ್ವರ್ ಜಾಮೀನು ನೀಡಲು ನಿರಾಕರಿಸಿದ್ದಾರೆ. ತೀರ್ಪಿನಿಂದ ಬೇಜಾರಾಗಿದ್ದು, ಇದನ್ನು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಡ್ರಾಜ್ ವಕೀಲರು ತಿಳಿಸಿದ್ದಾರೆ.
ನಾನು ವಿರಾಟ್ ಕೊಹ್ಲಿಗಾಗಿಯೇ ಭಾರತ ತಂಡವನ್ನು ಬೆಂಬಲಿಸುತ್ತಿದ್ದು, ಆತನಿಗಾಗಿಯೇ ಮನೆ ಮೇಲೆ ಭಾರತದ ಧ್ವಜ ಹಾರಿಸಿದೆ. ಆದರೆ, ಅದೊಂದು ಅಪರಾಧವೆಂಬ ಕಲ್ಪನೆಯೂ ನನಗಿರಲಲ್ಲ,’ ಎಂದು ಡ್ರಾಜ್ ಅಳಲು ತೋಡಿಕೊಂಡಿದ್ದಾನೆ.
ಇದು ಕೇವಲ ಕ್ರೀಡಾ ಮನೋಭಾವವಾಗಿದ್ದು, ಫುಟ್‌ಬಾಲ್ ಪಂದ್ಯಗಳಿರುವಾಗ ಬ್ರೆಜಿಲ್ ಅಥವಾ ಆಸ್ಟ್ರೇಲಿಯಾ ಧ್ವಜವನ್ನು ಹಾರಿಸಿದಂತೆ, ನನ್ನ ಕಕ್ಷಿದಾರ ಭಾರತೀಯ ಧ್ವಜವನ್ನು ಹಾರಿಸಿದ್ದಾನೆ. ಅವನು ಮುಗ್ಧ,’ ಎಂದು ಡ್ರಾಜ್ ವಕೀಲರು ವಾದಿಸಿದರೂ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. 22 ವರ್ಷದ ಉಮರ್ ಡ್ರಾಜ್ ವೃತ್ತಿಯಲ್ಲಿ ಟೈಲರ್ ಆಗಿದ್ದು ಗರಿಷ್ಠ 10 ವರ್ಷಗಳ ಸೆರೆ ವಾಸದ ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.