ತೊಂಬತ್ತರ ದಶಕದ ಜನಪ್ರಿಯ ಬಾಲಿವುಡ್ ಜೋಡಿಗಳಲ್ಲಿ ರವೀನಾ ಟಂಡನ್- ಗೋವಿಂದಾ ಜೋಡಿಯೂ ಒಂದು. ಬಡೇ ಮಿಯಾ ಛೋಟೇ ಮಿಯಾ ಚಿತ್ರದ ಕಿಸಿ ಡಿಸ್ಕೋ ಜಾಯೇ ಹಾಡಿನ ಸ್ಟೆಪ್ಪುುಗಳು, ದುಲ್ಹೇ ರಾಜಾ ಚಿತ್ರದ ಕಾಮಿಡಿ ಕಾಂಬಿನೇಷನ್ನು, ಅಖಿಯೋಂಸೆ ಗೋಲಿ ಮಾರೋ.. ಹಾಡು ಹೀಗೆ ಅವರ ಕೆಮಿಸ್ಟ್ರಿ ಮಸ್ತಾಗಿ ವರ್ಕೌಟ್ ಆಗಿತ್ತು.
ಬರೋಬ್ಬರಿ ಒಂಬತ್ತು ಚಿತ್ರಗಳಲ್ಲಿ ಅವರು ಜೋಡಿಯಾಗಿದ್ದರು. ಸ್ಯಾಂಡ್‌ವಿಚ್ ಅವರು ಜೊತೆಜೊತೆ ಕುಣಿದ ಕೊನೆಯ ಚಿತ್ರ. ಈ ಜೋಡಿಯನ್ನು ಮಿಸ್ ಮಾಡ್ಕೊಳ್ತಿದ್ದವರಿಗೆ ಹಾಗೂ ಕೇಳಿ ಬಲ್ಲವರಿಗೆ ಮತ್ತೊಮ್ಮೆ ಇವರನ್ನು ತೆರೆಮೇಲೆ ನೋಡುವ ಅವಕಾಶ. ಆದರೆ ಇದು ಬೆಳ್ಳಿತೆರೆಯ ಮೇಲಲ್ಲ, ಕಿರುತೆರೆಯಲ್ಲಿ. ಹಾಗಂತ ಯಾವುದೋ ಟೆಲಿಫಿಲ್ಮು ಸೀರಿಯಲ್ಲುಗಳಲ್ಲಿ ಅವರು ಜೊತೆಯಾಗುತ್ತಿಲ್ಲ. ಇವರಿಬ್ಬರೂ ಇದೀಗ ನೂತನ ಡ್ಯಾಸ್ ರಿಯಾಲಿಟಿ ಶೋ ವೊಂದರ ತೀರ್ಪುಗಾರರು. ಇವರಿಗಿಂತ ಜಡ್ಜ್ ಸಿಗಲು ಸಾಧ್ಯವಿದೆಯೇ?
ವಿ ಚಾನೆಲ್ ನಲ್ಲಿ ಏ.24ರಿಂದ ಪ್ರಸಾರವಾಗುವ ಈ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 10ಗಂಟೆಗೆ ನೋಡಬಹುದಾಗಿದೆ. ಕಿರುತೆರೆ ಇವರಿಬ್ಬರಿಗೂ ಹೊಸತಲ್ಲವಾದರೂ ಇವರಿಬ್ಬರ ಕಾಂಬಿನೇಷನ್ ಮಾತ್ರ ಕಿರುತೆರೆಗೆ ಹೊಸತು. ಗೋವಿಂದಾ ಇದ್ದಲ್ಲಿ ನಗುವಿಗೂ ಬರವಿಲ್ಲ. ಡ್ಯಾಸ್, ಹಾಡು, ಎಂಟರ್ಟೇನ್‌ಮೆಂಟ್‌ಗೂ ಬರವಿಲ್ಲ. ಈಗ ಅವರಿಗೊಬ್ಬ ತಕ್ಕ ಜೋಡಿಯೂ ಸಿಕ್ಕಿರುವುದರಿಂದ ಶೋ ಇನ್ನೂ ಕಳೆಗಟ್ಟಲಿದೆ.
ಗೋವಿಂದಾ ಕೂಡ ಜಡ್ಜ್ ಎಂದು ಗೊತ್ತಿಲ್ಲದೆಯೇ ಈ ಆಫರ್ ಒಪ್ಪಿದ್ದ ರವೀನಾ ಈಗ ಗೋವಿಂದಾ ಇರೋದು ತಿಳಿದು ಇನ್ನೂ ಥ್ರಿಲ್ ಆಗಿದ್ದಾರೆ. ಅಂದಹಾಗೆ ಶೋ ಹೆಸರು ಇನ್ನಾದರೂ ಫೈನಲ್ ಆಗಿಲ್ಲ.