ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ‘ದೊಡ್ಡಮನೆ ಹುಡುಗ’ ಚಿತ್ರ ಸಂಪೂರ್ಣ ಸ್ಥಳೀಯ ಭಾಷೆಯ ಮೇಲೆ ನಿರ್ಮಾಣವಾಗುತ್ತಿದ್ದು, ಕೋಲಾರ, ಮಂಡ್ಯ ಹಾಗೂ ಹುಬ್ಬಳ್ಳಿ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮೂಲಕ ಕರ್ನಾಟಕದ ಭಾಷಾ ವೈವಿಧ್ಯತೆಯನ್ನು ಸೆರೆ ಹಿಡಿಯಲಾಗಿದೆ.
ಫೆಬ್ರವರಿ 8ರಿಂದ ಚಿತ್ರದ ಹಾಡಿನ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಟ್ರಾಕ್ ಸಂಪೂರ್ಣ ಹುಬ್ಬಳ್ಳಿ ಭಾಷೆಯಲ್ಲಿದೆ. ನಿರ್ದೇಶಕ ಸೂರಿ ಪ್ರಕಾರ,’ಯಾಕ್ ಮಗನ ಮೈಯಾಗ ಹೆಂಗೈತಿ… ಹಂಗೆ ಹೋಗಬ್ಯಾಡ್ ನಿಲ್ಲ… ಯೆಲ್ಲೋ ನೋಡಬ್ಯಾಡ… ಚುರು ಗಾಡಿ ನಿಲ್ಸು… ಐಸ್ ಕ್ಯಾಂಡ್ ಕೊಡ್ಸು.’ ಎಂಬ ಹಾಡು ಪಕ್ಕಾ ಹುಬ್ಬಳ್ಳಿ ಭಾಷೆಯಲ್ಲಿದೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಕೋಲಾರ ಹುಡುಗಿಯಾಗಿಯಾಗಿದ್ದು, ಆಕೆ ಹುಬ್ಬಳ್ಳಿಗೆ ಏಕೆ ಬಂದಳು ಎಂಬುದು ಚಿತ್ರ ತೆರೆಕಂಡ ಮೇಲೆ ಪ್ರೇಕ್ಷಕರಿಗೆ ತಿಳಿಯಲಿದೆ ಎಂದರು.
ವಿಶೇಷ ಎಂದರೆ, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಸಹ ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡುತ್ತಾರೆ. ಅಲ್ಲದೆ ಚಿತ್ರದಲ್ಲಿ ಕರ್ನಾಟಕದ ಇತರೆ ಭಾಗದ ಭಾಷೆಗಳನ್ನು ಬಳಸಿಕೊಳ್ಳುವ ಯತ್ನ ಮಾಡಿದ್ದೇವೆ ಎಂದು ಸೂರಿ ತಿಳಿಸಿದ್ದಾರೆ.
ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ ವಿ ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದು, ಹಿನ್ನೆಲೆ ಗಾಯಕರನ್ನು ಹಾಗೂ ನೃತ್ಯ ನಿರ್ದೇಶಕರನ್ನು ಸೂರಿ ಅವರು ಇನ್ನೂ ಆಯ್ಕೆ ಮಾಡಬೇಕಿದೆ.
ಆಯಾ ಭಾಷೆಯಲ್ಲೇ ಧ್ವನಿ ನೀಡುವ ಮೂಲಕ ಹಾಡಿಗೆ ನ್ಯಾಯ ಕೊಡುವ ಹಿನ್ನೆಲೆ ಗಾಯಕರನ್ನು ನಾವು ಹುಡುಕುತ್ತಿದ್ದೇವೆ ಎಂದು ಸೂರಿ ಹೇಳಿದ್ದಾರೆ.