ಸಂದರ್ಶನ: ಜಕ್ಕಣಿಕ್ಕಿ ಎಂ.ದಯಾನಂದ
ಜೆನ್ನಿಫರ್ ಆ್ಯಂಟನಿ ಕೇರಳ ಮೂಲದ ಕನ್ನಡ ನಟಿ. ಸದ್ಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಾಂಧಾರಿ’ ಧಾರಾವಾಹಿಯಲ್ಲಿ ನಾಯಕ ನಟನ ತಾಯಿಯಾಗಿ ಅಭಿನಯಿಸುತ್ತಿದ್ದಾರೆ. ಕೇರಳದ ಕೊಟ್ಟಾಯಂ ಇವರ ಮೂಲ ಊರು. 40 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಇವರ ಪೋಷಕರು ಇಲ್ಲಿಯೇ ನೆಲೆಯೂರಿದರು. ಜೆನ್ನಿಫರ್ ಅವರು ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿಯೇ. ಮಲ್ಲೇಶ್ವರ ಕ್ಲೂನಿ ಕಾನ್ವೆಂಟ್‌ನಲ್ಲಿ ಪ್ರೌಢಶಿಕ್ಷಣ ನಂತರ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ‘ಗಾಂಧಾರಿ’ ಇವರ ಕನ್ನಡದ ಎರಡನೇ ಧಾರಾವಾಹಿ. ಕನ್ನಡ ಕಿರುತೆರೆ ಜತೆಗಿನ ಅವರ ಅಭಿಮಾನದ ಮಾತುಗಳು ಇಲ್ಲಿವೆ
*ಕನ್ನಡದಲ್ಲಿ ಮೊದಲ ಧಾರಾವಾಹಿ ಯಾವುದು?
ನಾನು 2014ರಲ್ಲಿ ‘ಸ್ವಾತಿ ಮುತ್ತು’ ಎಂಬ ಧಾರಾವಾಹಿಯಲ್ಲಿ ನಟಿಸಿದೆ. ದಿನೇಶ್ ಬಾನು ನಿರ್ದೇಶನದ ಇದು ಆರು ತಿಂಗಳ ಕಾಲ 1030 ಎಪಿಸೋಡ್ ಪ್ರಸಾರವಾಯ್ತು.
*ನಟನೆಯಲ್ಲದೆ ಚಿತ್ರಕಲೆಯ ಕುರಿತೂ ತುಡಿತವಿದೆ ಎಂದಿರಿ ಈ ಬಗ್ಗೆ ವಿವರಿಸಿ
ನಟನೆಯಷ್ಟೇ ನಾನು ಚಿತ್ರಕಲೆಯ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದೇನೆ. ನಾಲ್ಕು ವರ್ಷದವಳಾಗಿನಿಂದ ಪೇಯಿಟಿಂಗ್ ಬಗ್ಗೆ ಕುತೂಹಲ ಇತ್ತು. ಆಗಲೂ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೀತಾ ಇದ್ದೆ. ಆನಂತರ ಕಾಲೇಜಿಗೆ ಬಂದಾಗಲೂ ಚಿತ್ರಕಲೆಗೆ ಗಮನ ನೀಡುತ್ತಿದ್ದೆ. ಮದುವೆಯಾದ ನಂತರ ಪತಿ ನನ್ನ ಆಸಕ್ತಿಗೆ ಬೆಂಬಲ ನೀಡಿದರು.
ಪ್ರತಿ ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ‘ಪೇಯಿಟಿಂಗ್ ಪ್ರದರ್ಶನ’ ಮಾಡ್ತೇನೆ. ಅಲ್ಲದೆ ಚಿತ್ರಸಂತೆಯಲ್ಲಿಯೂ ಪ್ರದರ್ಶನ, ಮಾರಾಟ ಮಾಡಿದ್ದೇನೆ. ಈ ಬಾರಿಯ ಚಿತ್ರಸಂತೆಯಲ್ಲಿಯೂ ಮಾರಾಟವಾಗಿದೆ. ಲ್ಯಾಂಡ್ ಸ್ಕೇಪ್ ಹಾಗೂ ಪೋರ್ಟೇಟ್ ಮಾಡ್ತೇನೆ, ನೇಚರ್ ಪೇಯಿಟಿಂಗ್ ಅಂದರೆ ತುಂಬಾ ಇಷ್ಟಾ.
*ಚಿತ್ರಕಲೆಯನ್ನು ಅಕಾಡೆಮಿಕ್ ಆಗಿ ಕಲಿತಿದ್ದೀರಾ?
ಇಲ್ಲ. ನಾನು ಯಾವ ಕೋರ್ಸ್ ಮಾಡಿಲ್ಲ. ನಾನಾಗಿಯೇ ನೋಡಿ ಕಲಿತು ಪ್ರಯೋಗ ಮಾಡಿದ್ದೇನೆ. ನನ್ನ ಆಸಕ್ತಿಗೆ ಮನೆಯವರ ಸಂಪೂರ್ಣ ಸಹಕಾರವಿರುವುದೇ ದೊಡ್ಡ ಕೋರ್ಸ್
*ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದೀರಾ?
ಹೌದು. ಪತ್ತೆಮಾರಿ, ಭಾಸ್ಕರ್ ದ ರ‍್ಯಾಯಾಸ್ಕಲ್, ನೀವಾ, ಸಾಲ್ಟ್‌್ ಮ್ಯಾಂಗೊ ಟ್ರಿ, ಪುದಿಯನ್ ನಿಯಮಮ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದಲ್ಲದೆ ತಮಿಳಿನ ನಾಲ್ಕು ಹಾಗೂ ಹಿಂದಿನ ಒಂದು ಚಿತ್ರದಲ್ಲಿ ಇದ್ದೇನೆ.
*ಕನ್ನಡ ಚಿತ್ರಗಳಲ್ಲಿ ಯಾಕೆ ಕಾಣಿಸಿಕೊಳ್ಳಲಿಲ್ಲ?
ಕನ್ನಡದ ಒಂದು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಅದು ಇನ್ನೂ ಬಿಡುಗಡೆಯಾಗಿಲ್ಲ.
*ಎಂತಹ ಪಾತ್ರಗಳೆಂದರೆ ಇಷ್ಟ?
ನಾನೀಗ ಗಾಂಧಾರಿಯಲ್ಲಿ ಹೀರೊ ತಾಯಿ ಆಗಿ ಅಭಿನಯಿಸುತ್ತಿದ್ದೇನೆ. ಈಗಾಗಲೇ ವಿವಿಧ ರೀತಿಯ ಪಾತ್ರ ನಿರ್ವಹಿಸಿದ್ದೇನೆ. ಇನ್ನು ಮುಂದೆಯೂ ಒಳ್ಳೆಯ ಪಾತ್ರಗಳು ಸಿಕ್ಕರೆ ನಟಿಸಲು ಸಿದ್ಧ. ಚಿತ್ರಗಳಲ್ಲೂ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ನಟರಿಗೆ ಎಲ್ಲ ಪಾತ್ರಗಳೂ ಸವಾಲು ಒಡ್ಡುತ್ತವೆ.
*ಗಾಂಧಾರಿಗೆ ಹೇಗಿದೆ ಪ್ರತಿಕ್ರಿಯೆ?
ಕನ್ನಡದ ಪ್ರೇಕ್ಷಕರು ನನ್ನನ್ನು ಗುರುತಿಸಿದ್ದಾರೆ. ಎಲ್ಲಾದರೂ ಹೊರಗೆ ಕಂಡ ನೀವು ಈ ಸಿರಿಯಲ್‌ನಲ್ಲಿ ಬಂದಿದ್ದೀರಲ್ಲಾ ಎನ್ನುತ್ತಾರೆ. ಕನ್ನಡಿಗರ ಅಭಿಮಾನ ದೊಡ್ಡದು.
*ಗಾಂಧಾರಿಯಲ್ಲಿನ ಇತರ ಕಲಾವಿದರ ಸಹಕಾರ ಹೇಗಿದೆ?
ಚೆನ್ನಾಗಿ ಸಹಕರಿಸುತ್ತಾರೆ. ಕೇರಳ ಮೂಲವಾದರೂ ಕನ್ನಡ ಭಾಷೆ, ನಟನೆ ನನಗೆ ಅನ್ನ ನೀಡಿದೆ. ಇಲ್ಲೂ ಪ್ರತಿಭಾವಂತ ನಟರಿದ್ದಾರೆ.
*ಬೇರೆ ಧಾರಾವಾಹಿ ಇಲ್ಲವೇ?
ಉದಯ ಟೀವಿಯಲ್ಲಿ ಪ್ರಸಾರ ವಾಗುತ್ತಿರುವ ‘ಮೈನಾ’ ಎಂಬ ಧಾರಾವಾಹಿಯಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದೇನೆ.
*ಬೇರೆ ಹವ್ಯಾಸ?
ನಟನೆ ತಿಂಗಳಲ್ಲಿ ಹಲವು ದಿನ ಇರುತ್ತೇ. ಉಳಿದಂತೆ ಪೇಯಿಟಿಂಗ್ ಇದ್ದೇ ಇದೆ. ಮಕ್ಕಳ ಜೊತೆ ಅದೂ ಇದು. ಮನೆ ಕೆಲಸ ಇರುತ್ತೇ.