ಹೈದರಾಬಾದ್: ಮಲಯಾಳಂನ ಖ್ಯಾತ ನಟಿ ಕಲ್ಪನಾ ರಂಜನಿ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಮೃತರಿಗೆ 51 ವರ್ಷ ವಯಸ್ಸಾಗಿತ್ತು. ಸೋಮವಾರ ಬೆಳಗ್ಗೆ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.
ತೆಲಗು ಚಿತ್ರವೊಂದರ ಶೂಟಿಂಗಾಗಿ ಹೈದರಾಬಾದ್ನಲ್ಲಿದ್ದ ಕಲ್ಪನಾ ಅವರು ಕಳೆದ ಕೆಲ ದಿನಗಳಿಂದ ಹೋಟೆಲ್ನಲ್ಲಿ ಉಳಿದಿದ್ದರು. ಸೋಮವಾರ ಬೆಳಗ್ಗೆ ಹೋಟೆಲ್ ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಅವರನ್ನು ಸಮೀಪದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆಯೇ ಅವರಿಗೆ ಲಘು ಹೃದಯಾಘಾತ ಆಗಿರಬಹುದೆಂದು ಹೇಳಲಾಗಿದೆ.
1983ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ಕಲ್ಪನಾ ಅವರು ದಕ್ಷಿಣ ಭಾರತದ ಬಹುತೇಕ ಭಾಷೆಗಳ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಹೆಚ್ಚಿನ ಸಿನಿಮಾಗಳಲ್ಲಿ ಅವರು ಹಾಸ್ಯ ನಟಿಯಾಗಿಯೇ ಗುರುತಿಸಿಕೊಂಡಿದ್ದರು.