ಮನೋರಂಜನೆ

‘ಸ್ವತಂತ್ರಪಾಳ್ಯ’ದಲ್ಲಿ ಹೊಸಬೆಳಕು: ವೆಂಕಟ್

Pinterest LinkedIn Tumblr

huchh‘ಬಿಗ್‌ಬಾಸ್’ ಮೂಲಕ ಪಡೆದ ಖ್ಯಾತಿಯನ್ನು ಬಳಸಿಕೊಳ್ಳಲು ವೆಂಕಟ್‌ ಅವರು ತಮ್ಮ ‘ಹುಚ್ಚ ವೆಂಕಟ್‌’ ಸಿನಿಮಾವನ್ನು ಮೂರು ವಾರಗಳ ಹಿಂದೆ ಮರುಬಿಡುಗಡೆ ಮಾಡಿದ್ದರು. ಅದರ ಮುಂದಿನ ಹೆಜ್ಜೆ ಎಂಬಂತೆ, ವೆಂಕಟ್ ನಿರ್ದೇಶನದ ಮೊದಲ ಚಿತ್ರ ‘ಸ್ವತಂತ್ರಪಾಳ್ಯ’ವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಮಾಪಕ ಹೇಮಂತ ಸುವರ್ಣ ನಿರ್ಧರಿಸಿದ್ದಾರೆ. 2009ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಜನವರಿ 8ರಂದು ಮತ್ತೆ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

ರೌಡಿಸಂ ಹಾಗೂ ತಂದೆ–ಮಗನ ಭಾವನಾತ್ಮಕ ನಂಟಿನ ಕಥೆಯುಳ್ಳ ಸ್ವತಂತ್ರಪಾಳ್ಯ ಎಲ್ಲ ಕಾಲಕ್ಕೂ ಸಲ್ಲುವ ಸಿನಿಮಾ ಎನ್ನುತ್ತಾರೆ ವೆಂಕಟ್. ‘ರೌಡಿಸಂ ಎಷ್ಟು ಕೆಟ್ಟದ್ದು ಎಂಬುದನ್ನು ನಾನು ಅದರಲ್ಲಿ ಹೇಳಿದ್ದೇನೆ. ರೌಡಿಯಾಗಲು ಹಾತೊರೆಯುವ ಯುವಕರಿಗೆ ಅದರಲ್ಲಿ ಒಳ್ಳೆಯ ಸಂದೇಶವಿದೆ’ ಎನ್ನುವ ಅವರು, ರೌಡಿಸಂ ಲೋಕವನ್ನು ಬಿಟ್ಟು ಬರುವವರಿಗೆ ಬದುಕಲು ಒಳ್ಳೆಯ ಅವಕಾಶಗಳು ಸಿಗಬೇಕು ಎಂದು ಸಲಹೆ ಮಾಡುತ್ತಾರೆ.

‘ಅರ್ಜುನ್ – ದಾಮಿನಿ ಮುಖ್ಯಪಾತ್ರಗಳಲ್ಲಿ ಇದ್ದಾರೆ. ಸಿ.ಆರ್‌. ಸಿಂಹ, ಜಯಂತಿ, ಸುದರ್ಶನ್, ಕೀರ್ತಿರಾಜ್ ಸೇರಿದಂತೆ ಹಲವು ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ವಿರಾಮದ ಬಳಿಕ ನಾನೂ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ವೆಂಕಟ್.

ಕಥೆ, ಸಂಭಾಷಣೆಯನ್ನು ಬರೆದಿರುವ ವೆಂಕಟ್, ಯಾರೂ ಊಹಿಸದಂಥ ಕ್ಲೈಮ್ಯಾಕ್ಸ್‌ ಬರೆದಿದ್ದಾರೆ ಎಂದು ನಿರ್ಮಾಪಕ ಹೇಮಂತ ಸುವರ್ಣ ಶ್ಲಾಘಿಸಿದರು. ಲಾಂಗು–ಮಚ್ಚುಗಳು ಇದ್ದರೂ ರಕ್ತಪಾತದ ದೃಶ್ಯಗಳು ಇಲ್ಲ ಎಂದ ಅವರು, ‘ಯುವಕರು ಪ್ರೀತಿ ಮಾಡುವ ಮುನ್ನ ಒಂದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂಬ ಸಂದೇಶ ಸಿನಿಮಾದಲ್ಲಿದೆ’ ಎಂದರು.

ಈ ಚಿತ್ರದಲ್ಲಿ ನಟಿಸಿದ್ದ ಬೇಬಿ ಶ್ರೇಯಾ, ಸಿನಿಮಾವೊಂದದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ‘ವಾಯುಪುತ್ರ’ ಹಂಚಿಕೆದಾರರ ಮೂಲಕ ರಾಜ್ಯದ ಸುಮಾರು 40 ಕೇಂದ್ರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Write A Comment