ಢಾಕಾ: ಸುಮಾರು ಒಂದು ವರ್ಷಗಳ ಕಾಲ 11 ವರ್ಷದ ಬಾಲಕಿಯನ್ನು ಮನೆ ಕೆಲಸದಾಕೆಯನ್ನಾಗಿ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ್ದ ಆರೋಪದಲ್ಲಿ ಅಕ್ಟೋಬರ್‌ನಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಬಾಂಗ್ಲಾದೇಶ ವೇಗದ ಬೌಲರ್ ಶಹಾದತ್ ಹುಸೈನ್ ಹಾಗೂ ಅವರ ಪತ್ನಿ ನ್ರಿಟ್ಟೊ ಶಹಾದತ್ 14 ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
ಪೊಲೀಸರಿಂದ ಬಂಧನವಾದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಂಡಿರುವ ಹುಸೈನ್ ಇದೀಗ ಬಾಂಗ್ಲಾದೇಶ ಮಹಿಳಾ ಹಾಗೂ ಮಕ್ಕಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ಎದುರಿಸುತ್ತಿದ್ದಾರೆ.
ಹುಸೈನ್ ಹಾಗೂ ಅವರ ಪತ್ನಿ ಜ.12 ರಂದು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಹ್ಯಾಪಿ ಹೆಸರಿನ 11ರ ಬಾಲಕಿ ಹುಸೈನ್ ಹಾಗೂ ಅವರ ಪತ್ನಿ ತನಗೆ ನಿರಂತರ ಚಿತ್ರಹಿಂಸೆ ನೀಡಿರುವುದಾಗಿ ದೂರು ನೀಡಿದ್ದಳು. ಹುಸೈನ್ ಬಾಂಗ್ಲಾದೇಶ ಪರ 38 ಟೆಸ್ಟ್ ಹಾಗೂ 51 ಏಕದಿನ ಪಂದ್ಯಗಳನ್ನು ಆಡಿದ್ದರು.