ಮುಂಬೈ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೀಗ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ದಿಲ್ ವಾಲೆ ಸಿನಿಮಾದ ಮೇಲೆ ತುಂಬಾನೆ ಪರಿಣಾಮ ಬೀರಿದೆ…ಹೌದು ದಿಲ್ ವಾಲೆ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿರುವುದಕ್ಕೆ ಶಾರುಖ್ ತುಂಬಾ ಅಪ್ ಸೆಟ್ ಆಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಅಸಹಿಷ್ಣುತೆ ಕುರಿತ ಬಿಸಿ, ಬಿಸಿ ಚರ್ಚೆ ನಡೆಯುತ್ತಿರುವ ವೇಳೆಯೇ ನಟ ಶಾರುಖ್ ಖಾನ್ ಕೂಡಾ ಧ್ವನಿಗೂಡಿಸಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿಕೆ ನೀಡಿದದರು. ಶಾರುಖ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿತ್ತು…ಅಲ್ಲದೇ ಶಾರುಖ್ ಅಭಿಮಾನಿಗಳೂ ಕೂಡಾ ಆಕ್ರೋಶವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ದಿಲ್ ವಾಲೆ ಸಿನಿಮಾಕ್ಕೆ ದೇಶದ ಕೆಲವೆಡೆ ಪ್ರತಿಭಟನೆ ಕೂಡಾ ವ್ಯಕ್ತವಾಗಿತ್ತು.
ಏತನ್ಮಧ್ಯೆ ತಾನು ಕ್ಷಮೆ ಕೇಳುವಂತಹ ಯಾವ ಹೇಳಿಕೆಯನ್ನೂ ನೀಡಿಲ್ಲ. ಆದರೂ ದಿಲ್ ವಾಲೆ ಗಳಿಕೆ ಮೇಲೆ ಪರಿಣಾಮ ಬಿದ್ದಿರುವುದಾಗಿ ಶಾರುಖ್ ಅಸಮಾಧಾನವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನಾನು ಅಂತಹ ಹೇಳಿಕೆ ನೀಡಿದ್ದರೆ, ನನ್ನ ತಪ್ಪಿನ ಅರಿವು ನನಗಾಗುತ್ತಿತ್ತು. ಆದರೂ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಶಾರುಖ್ ತಿಳಿಸಿದ್ದಾರೆ.
ನನ್ನ ಹೇಳಿಕೆ ಬಗ್ಗೆ ಅನಾವಶ್ಯಕವಾಗಿ ಹುಯಿಲೆಬ್ಬಿಸಿದ್ದರಿಂದ ದಿಲ್ ವಾಲೆ ಸಿನಿಮಾ ಕಲೆಕ್ಷನ್ ನಲ್ಲಿ ಹಿಂದೆ ಬೀಳುವಂತಾಗಿದೆ ಎಂದು ಶಾರುಖ್ ಬೇಸರ ವ್ಯಕ್ತಪಡಿಸಿದ್ದಾರೆ.
-ಉದಯವಾಣಿ