ಮನೋರಂಜನೆ

ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗ ಇದೀಗ ರಸ್ತೆ ಬದಿ ತಿಂಡಿ ಮಾರಾಟಗಾರ..!

Pinterest LinkedIn Tumblr

Indian_cricket_team-deaf-PTವಡೋದರಾ: ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೆಂದರೆ ಅದೊಂದು ಧರ್ಮವಾಗಿ ಬಿಟ್ಟಿದೆ. ಕ್ರಿಕೆಟಿಗರಿಗೆ ಇರುವಷ್ಟು ಅಭಿಮಾನಿಗಳು ಬಹುಶಃ ಬಾಲಿವುಡ್ ಮಂದಿಗೂ ಇರಲಾರರು.

ಅದರಲ್ಲೂ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಅಥವಾ ವಿಶ್ವಕಪ್ ತಂಡದಲ್ಲಿದ್ದ ಆಟಗಾರ ಎಂದರೆ ಒಂದು ರೀತಿಯ ಹೆಮ್ಮೆ. ಇಂತಹ ಕ್ರಿಕೆಟಿಗರ ಮನೆ ಬಾಗಿಲಿಗೇ ಜಾಹಿರಾತು ಸಂಸ್ಥೆಗಳು ಹೋಗಿ ಅವರಿಂದ ಜಾಹಿರಾತು ಒಪ್ಪಂದಕ್ಕೆ ಸಹಿ ಪಡೆಯುತ್ತವೆ ಎಂದರೆ ಅವರ ಖ್ಯಾತಿ ಇನ್ನೆಷ್ಟಿರಬಹುದು. ಆದರೆ ಇಂತಹ ಕ್ರಿಕೆಟ್ ಲೋಕದಲ್ಲಿಯೇ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಓರ್ವ ಕ್ರಿಕೆಟಿಗ ಇಂದು ತನ್ನ ಜೀವನಕ್ಕಾಗಿ ರಸ್ತೆಬದಿಯಲ್ಲಿ ತಿಂಡಿ-ತಿನಿಸು ಮಾರಾಟ ಮಾಡುತ್ತಿದ್ದಾನೆ ಎಂದರೆ ನೀವು ನಂಬುತ್ತೀರಾ..!

ಹೌದು..ಕಳೆದ 10 ವರ್ಷಗಳ ಹಿಂದೆ ಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಬಾರಿಸಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಲ್‍ರೌಂಡರ್ ಕ್ರಿಕೆಟಿಗನೊಬ್ಬ ಇಂದು ವಡೋದರಾ ಜಿಲ್ಲೆಯ ರಸ್ತೆ ಬದಿಯಲ್ಲಿ ಕಚೋರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾನೆ. ಆ ಕ್ರಿಕೆಟಿಗ ಬೇರಾರೂ ಅಲ್ಲ. ಗುಜರಾತ್ ಮೂಲದ ಇಮ್ರಾನ್ ಶೇಖ್. 10 ವರ್ಷಗಳ ಹಿಂದೆ ಅಂದರೆ 2005ರಲ್ಲಿ ನಡೆದ ಮೂಕ ಮತ್ತು ಕಿವುಡರ ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ಭಾರತದ ಪರ ಆಕರ್ಷಕವಾಗಿ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಕ್ರಿಕೆಟಿಗನೇ ಈ ಇಮ್ರಾನ್ ಶೇಖ್.

ಈತನ ಆಲ್‍ರೌಂಡ್ ಪ್ರದರ್ಶನ ಕಂಡು ಸ್ವತಃ ಬಿಸಿಸಿಐ 3 ವರ್ಷದ ಹಿಂದೆ ಮೂಕ ಹಾಗೂ ಕಿವುಡ ತಂಡಕ್ಕೆ ನಾಯಕನಾಗಿ ಕಾರ್ಯನಿರ್ವಹಿಸುವಂತೆ ಬಡ್ತಿ ನೀಡಿತ್ತು. ಆದರೆ ಇಂದು ಈ ಅದ್ಭುತ ಪ್ರತಿಭೆ ಕ್ರಿಕೆಟ್ ನಿಂದ ದೂರವಾಗಿದ್ದು, ಜೀವನ ನಿರ್ವಹಣೆಗೆ ಬೀದಿಬದಿಯಲ್ಲಿ ಕಚೋರಿ ಮಾರುವಂತಾಗಿದೆ. ಕಳೆದೊಂದು ವಾರದ ಹಿಂದೆ 30 ವರ್ಷದ ಇಮ್ರಾನ್ ಶೇಖ್ ಅವರು ವಡೋದರಾದ ಹಳೆ ಪಾದ್ರ ರಸ್ತೆಯಲ್ಲಿ ಬದಿಯಲ್ಲಿ ಕಚೋರಿ ಮಾರಾಟ ಮಾಡಲು ಶುರು ಮಾಡಿದ್ದಾರೆ.

ಈ ಬಗ್ಗೆ ಇಮ್ರಾನ್ ಶೇಖ್ ಅವರಲ್ಲಿ ವಿಚಾರಿಸಿದರೆ, ಕ್ರಿಕೆಟ್ ಆಡುವುದು ನನ್ನ ವೃತ್ತಿ ಹಾಗೂ ಅದನ್ನು ಮುಂದುವರೆಸುವ ಆಸೆಯೂ ಇದೆ. ಆದರೆ ಕ್ರಿಕೆಟ್ ಆಟ ಆಡುವುದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಜೀವನ ನಿರ್ವಹಣೆಗೆ ಹಣ ಹೊಂದಾಣಿಕೆ ಮಾಡುವುದು ಕಷ್ಟವಾಗುತ್ತಿದೆ. ಕ್ರಿಕೆಟ್‍ನಿಂದ ನಾನು ಹೆಚ್ಚು ಹಣ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ನನ್ನ ಬದುಕು ಸಾಗಿಸಲು ಈ ವೃತಿ ಆಯ್ಕೆ ಮಾಡಿಕೊಂಡೆ. ನನ್ನ ಪತ್ನಿ ರೋಜಾಳಿಗೆ ಸಹಾಯವಾಗಲೆಂದು ಕಚೋರಿ ಮಾರಾಟ ಅಂಗಡಿ ತೆರದು ಹೊಸ ವೃತಿ ಆರಂಭಿಸಿದೆ. 15 ವರ್ಷದ ಹುಡುಗನಿಂದಲೇ ಕ್ರಿಕೆಟ್ ಆಡಲು ಶುರು ಮಾಡಿದ್ದ ನನಗೆ ಕೋಚ್ ನಿತೇಂದ್ರ ಸಿಂಗ್ ಅವರು ಉನ್ನತ ಮಟ್ಟಕ್ಕೆ ಬೆಳೆಯಲು ನೆರವಾಗಿದ್ದಾರೆ ಅವರಿಗೆ ನಾನು ಚಿರಋಣಿ ಎಂದು ಇಮ್ರಾನ್ ತಿಳಿಸಿದ್ದಾರೆ.

ಕ್ರಿಕೆಟಿಗರೆಂದರೆ ಜನಪ್ರಿಯತೆ, ಜಾಹಿರಾತು, ಹಣ, ಪಾರ್ಟಿ, ವಿದೇಶ ಪ್ರವಾಸ ಮತ್ತು ಬಾಲಿವುಡ್ ಗೆಳತಿಯರು ಎನ್ನುವ ಈ ಭಾರತದಲ್ಲಿ ಕ್ರಿಕೆಟ್ ನ ಇತರೆ ವರ್ಗಗಳನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ಇಮ್ರಾನ್ ಶೇಖ್ ರಂತಹ ಅದೆಷ್ಟೋ ಪ್ರತಿಭಾವಂತ ಆಟಗಾರರು ಪ್ರವರ್ಧಮಾನಕ್ಕೆ ಬರುವ ಮೊದಲೇ ಮರೆಯಾಗುವ ಅಪಾಯವಿದೆ.

Write A Comment