ಬೃಹತ್ ಸಮಾರಂಭದಲ್ಲಿ ‘ರಾಕ್ಷಸಿ’ ಸಿನಿಮಾದ ಗೀತೆಗಳ ಆಡಿಯೊ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಬಿಡುವು ಮಾಡಿಕೊಂಡು ಬಂದ ಮಳೆರಾಯ ಕಾರ್ಯಕ್ರಮವನ್ನು ಭಗ್ನಗೊಳಿಸಿದ್ದ. ಸರಿ, ಮಳೆ ನಿಂತ ನಂತರದ ಬೆಳಗ್ಗೆ ಸೀಡಿ ಬಿಡುಗಡೆ ಮಾಡಿ ಸಂಭ್ರಮಿಸಿದೆ ‘ರಾಕ್ಷಸಿ’ ಚಿತ್ರತಂಡ.
ಸಮಾರಂಭದ ಮುಖ್ಯ ಆಕರ್ಷಣೆ ನಟ ಪುನೀತ್ ರಾಜಕುಮಾರ್ ಮತ್ತು ತಮಿಳು ನಟ ವಿಶಾಲ್. ‘ವೇದಿಕೆ ನನಗೆ ಆಗಿಬರುವುದಿಲ್ಲ’ ಎನ್ನುತ್ತಲೇ ಮೈಕ್ ಎತ್ತಿಕೊಂಡ ವಿಶಾಲ್, ಪುನೀತ್ ಬರುವಿಕೆಯ ಕಾರಣಕ್ಕಾಗಿ ಸಮಾರಂಭಕ್ಕೆ ಬರುವುದಾಗಿ ಒಪ್ಪಿಕೊಂಡೆ ಎಂದರು. ‘ರಾಕ್ಷಸಿ’ ಚಿತ್ರದಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿರುವ ವಿಶಾಲ್ ಅವರ ತಂದೆ ಜಿ.ಕೆ. ರೆಡ್ಡಿ ಮಾತನಾಡಿ– ‘ತಮಿಳಿನಲ್ಲಿ ನಟನೆ ಮಾಡಿದ್ದರೂ ಕನ್ನಡದಲ್ಲಿ ನಟಿಸಬೇಕೆಂಬ ನನ್ನ ಆಸೆ ಈ ಚಿತ್ರದ ಮೂಲಕ ಈಡೇರಿದೆ’ ಎಂದರು. ತಮಿಳಿನ ‘ಪಿಸಾಸು’ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಾಯಕರೂ ಆಗಿದ್ದಾರೆ ನವರಸನ್.
‘ಸಿನಿರಸಿಕರು ಚಿತ್ರಮಂದಿರಕ್ಕೆ ಬಂದು ಹಾಕಿದ ಹಣ ಹಿಂತಿರುಗುವಂತೆ ನಿರ್ಮಾಪಕರನ್ನು ಪ್ರೋತ್ಸಾಹಿಸಬೇಕು’ ಎಂದು ಪುನೀತ್ ಚುಟುಕಾಗಿ ಮಾತು ಮುಗಿಸಿದರು. ನಾಯಕಿ ಸಿಂಧು ಲೋಕನಾಥ್ ಹಾಡೊಂದಕ್ಕೆ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ತಮಿಳು ನಿರ್ದೇಶಕ ಎ.ಆರ್. ಮುರುಗದಾಸ್ ಅವರ ಶಿಷ್ಯ ಅಶ್ರಫ್ ‘ರಾಕ್ಷಸಿ’ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಆರೋಲ್ ಕೊರಲ್ಲಿ ಎಂಬುವರು ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ. ಕಲ್ಯಾಣ್ ಎಲ್ಲ ಹಾಡುಗಳನ್ನು ಬರೆದಿದ್ದಾರೆ.
ಕ್ರೇನಿನಿಂದ ಇಳಿದು ಬಂದ ಭೂತದ ವೇಷಧಾರಿ ನೀಡಿದ ಸೀಡಿಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು. ಚಿತ್ರರಂಗದ ಇತರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
‘ಹುಲಿದುರ್ಗಾ’ ಡಬ್ಬಿಂಗ್ ಪೂರ್ಣ
ಕೆ. ಸುಧಾಕರ್ ನಿರ್ಮಿಸುತ್ತಿರುವ ‘ಹುಲಿದುರ್ಗಾ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈಗ ‘ಹುಲಿದುರ್ಗಾ’ದ ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ವಿಕ್ರಮ್ ಯಶೋಧರ ಎಸ್. ನಿರ್ದೇಶನದ ಈ ಚಿತ್ರಕ್ಕೆ ರಮೇಶ್ ರಾಜ್ ಛಾಯಾಗ್ರಹಣ, ಈಶ್ವರ್ ಇ.ಎಸ್. ಸಂಕಲನ, ಸಿದ್ದು ಸಂಗೀತ, ವಿ.ನಾಗೇಂದ್ರ ಪ್ರಸಾದ್, ಮನೋಹರ್ ಕಿರಾಳು ಸಾಹಿತ್ಯವಿದೆ. ಸುಪ್ರೀತ್, ನೇಹಾ ಪಾಟೀಲ್, ರಘು ವಿಜಯ್, ಗುರುರಾಜ್ ಹೊಸಕೋಟೆ, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.