ಕನ್ನಡ ಚಿತ್ರರಂಗದಲ್ಲಿ ಈಗೀಗ ಹಾರರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಮೊದಲೆಲ್ಲ ವಿರಳವಾಗಿದ್ದ ಪ್ರೇತಾತ್ಮ, ಪುನರ್ಜನ್ಮ ಕಥೆಗಳನ್ನು ಒಳಗೊಂಡ ಸಿನಿಮಾಗಳು ಈಗ ಸಾಕಷ್ಟು ನಿರ್ಮಾಣವಾಗುತ್ತಿವೆ. ಸೇಡು, ಹತ್ಯೆ, ಇನ್ನೊಬ್ಬರನ್ನು ಕಾಡಿಸುವುದೇ ದೆವ್ವಗಳ ಕೆಲಸ ಎಂದು ಭಾವಿಸಿದ್ದವರು, ಅತೃಪ್ತ ಆತ್ಮಗಳ ಕೀಟಲೆಯನ್ನು ಈಗ ಬಗೆಬಗೆಯಲ್ಲಿ ನೋಡಬಹುದಾಗಿದೆ!
ಹೊಸ ಹೊಸ ನಿರ್ದೇಶಕರು ಚಿತ್ರರಂಗಕ್ಕೆ ಬಂದಂತೆಲ್ಲಾ, ಹಾರರ್ ಚಿತ್ರಗಳ ಶೈಲಿಯೂ ಬದಲಾಗುತ್ತಿದೆ. ಯೋಗೇಶ್ ನಿರ್ದೇಶನದ ‘ಚಂದ್ರಿಕ’, ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಬೆಚ್ಚಿಬಿಳಿಸುತ್ತಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡು ಏಕಕಾಲಕ್ಕೆ ಬಿಡುಗಡೆಯಾಗಿರುವ ‘ಚಂದ್ರಿಕ’, ಪ್ರೇತಾತ್ಮವೊಂದರ ಕಥೆ. ತನ್ನ ಗುರುಗಳು ವಾಸವಿದ್ದ ಮನೆಯೊಂದನ್ನು ಚಿತ್ರಕಲಾವಿದನೊಬ್ಬ ಖರೀದಿಸಿ, ಪತ್ನಿ ಜತೆ ಅಲ್ಲಿ ಬದುಕು ಆರಂಭಿಸುತ್ತಾನೆ. ಅಲ್ಲಿದ್ದ ಆತ್ಮವೊಂದು ಆತನ ಪತ್ನಿ ಮೇಲೆ ಬಂದು, ಕಾಟ ಕೊಡುತ್ತದೆ. ಒಂದು ಹಂತದಲ್ಲಿ ಕಲಾವಿದನನ್ನು ಹತ್ಯೆ ಮಾಡಲು ಕೂಡ ಯತ್ನಿಸುತ್ತದೆ. ‘ಆ ಆತ್ಮ ಯಾರದು? ಅದರ ಸೇಡಿಗೂ ಕಲಾವಿದನ ಬದುಕಿಗೂ ಏನು ಸಂಬಂಧ? ತನ್ನ ಗುರಿಯನ್ನು ದೆವ್ವ ತಲುಪುತ್ತದೆಯೇ? ಅದು ಚಿತ್ರದ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕ ಯೋಗೇಶ್.
ತೆಲುಗು ಭಾಷೆಯ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಯೋಗೇಶ್ ಅವರಿಗೆ ಸ್ವತಂತ್ರ ನಿರ್ದೇಶಕರಾಗಿ ಇದು ಮೊದಲ ಸಿನಿಮಾ. ‘ಹಾರರ್ ಮತ್ತು ಥ್ರಿಲ್ಲರ್ ಕಥೆಯಿದ್ದ ಈ ಸಿನಿಮಾದ ಚಿತ್ರಕಥೆಯನ್ನು ಸಾಕಷ್ಟು ಯೋಚಿಸಿ ರಚಿಸಿದ್ದೇನೆ. ಆಗಲೇ ನಾಯಕ ಪಾತ್ರಕ್ಕೆ ನಟ ಜೆ.ಕೆ. ಅವರೇ ಒಳ್ಳೆಯ ಆಯ್ಕೆ ಅನಿಸಿತು. ಅವರಲ್ಲಿ ಪ್ರಸ್ತಾಪ ಮಾಡಿದೆ. ಚಿತ್ರಕಥೆ ಕೇಳಿ ಅವರೂ ಒಪ್ಪಿಗೆ ಕೊಟ್ಟರು’ ಎನ್ನುತ್ತಾರೆ ಯೋಗೇಶ್.
‘ಗುರು-ಶಿಷ್ಯರ ಸಂಬಂಧ, ಪತಿ-ಪತ್ನಿ ಸಂಬಂಧಗಳನ್ನು ಸಮಾನವಾಗಿ ಕಟ್ಟಿಕೊಟ್ಟಿರುವ ಚಂದ್ರಿಕಾ ಪ್ರೇಕ್ಷಕನಿಗೆ ನಿರಾಶೆ ಮೂಡಿಸುವುದಿಲ್ಲ’ ಎನ್ನುವ ನಾಯಕ ಜೆ.ಕೆ., ಮೊದಲು ಕಥೆ ಕೇಳಿದಾಗ ತಾವು ಈ ಬಗೆಯ ಪಾತ್ರ ಮಾಡಲು ಸಾಧ್ಯವೇ ಎಂಬ ಗೊಂದಲದಲ್ಲಿ ಇದ್ದರಂತೆ. ನಂತರ ಸಂಪೂರ್ಣ ಚಿತ್ರಕತೆ ನೋಡಿದ ಬಳಿಕವೇ ಪಾತ್ರ ಇಷ್ಟವಾಗಿ ಒಪ್ಪಿಕೊಂಡರಂತೆ. ಹಳ್ಳಿಯಲ್ಲಿ ಬೆಳೆಯುವ ನೃತ್ಯಪಟು ಪಾತ್ರದಲ್ಲಿ ಕಾಮ್ನಾ ಜೇಠ್ಮಲಾನಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕಿ ಶ್ರೀಮುಖಿ ಪಾತ್ರ ಬೆಚ್ಚಿ ಬೀಳಿಸುವಂತಿದೆ.
ಬೆಂಗಳೂರು, ಮಡಿಕೇರಿ ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ರಾಜೇಂದ್ರಬಾಬು ಕ್ಯಾಮೆರಾ ಹಿಡಿದಿದ್ದಾರೆ. ಸಾಜಿದ್ ಖುರೇಷಿ ಅವರ ಕಥೆಗೆ ನಾಗೇಶ್ವರರಾವ್ ಸಂಭಾಷಣೆ ಬರೆದಿದ್ದಾರೆ. ಗುಣವಂತ್ ಸಂಗೀತ ಸಂಯೋಜಿಸಿದ್ದು, ವಿ.ಆಶಾ ಬಂಡವಾಳ ಹಾಕಿದ್ದಾರೆ. ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ಗಿರೀಶ ಕಾರ್ನಾಡ, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.