ಕೆಲವು ಕಲಾವಿದರು ಎಂಥ ರಿಸ್ಕ್ಗೆ ಬೇಕಾದರೂ ಕೈ ಹಾಕುತ್ತಾರೆ. ಪಾತ್ರ ಉತ್ತಮವಾಗಿ ಮೂಡಿಬರಬೇಕೆಂಬ ಏಕೈಕ ಕನವರಿಕೆ ಅವರದ್ದಾಗಿರುತ್ತದೆ. ಆದರೆ ಅಂಥ ಕಲಾವಿದರ ಸಂಖ್ಯೆ ತೀರಾ ವಿರಳ. ಇದೀಗ ಐಶ್ವರ್ಯಾ ರೈ ಬಚ್ಚನ್ ‘ನಾನು ಕೂಡ ಬದ್ಧತೆಯುಳ್ಳ ನಟಿ’ ಎಂಬುದನ್ನು ಸಾಬೀತು ಮಾಡಿದ್ದಾರೆ. ಬಹುದಿನಗಳ ನಂತರ ಮತ್ತೆ ಬಣ್ಣ ಹಚ್ಚಿರುವ ಐಶ್ವರ್ಯಾ ರೈ ಬಚ್ಚನ್ ಈಗ ಸುದ್ದಿಯ ಕೇಂದ್ರ ಬಿಂದು. ಅವರ ನಟನೆಯ ‘ಜಝ್ಬಾ’ ಮುಂದಿನ ತಿಂಗಳು (ಅ.9) ತೆರೆಗೆ ಬರುತ್ತಿದೆ. ಹೀಗಾಗಿ, ಚಿತ್ರತಂಡ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ನಿರ್ದೇಶಕ ಸಂಜಯ್ ಗುಪ್ತ ನೀಡಿರುವ ಮಾಹಿತಿಯೊಂದು ಐಶ್ ವೃತ್ತಿಬದ್ಧತೆಯನ್ನು ಎತ್ತಿ ಹಿಡಿದಿದೆ.
ಒಮ್ಮೆ ಚಿತ್ರೀಕರಣದ ವೇಳೆ ಐಶ್ವರ್ಯಾ ಪುತ್ರಿ ಅರಾಧ್ಯಳಿಗೆ ಆರೋಗ್ಯ ಕೈ ಕೊಟ್ಟಿತ್ತಂತೆ. ಆದರೂ ಐಶ್ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ನಡೆದುಕೊಂಡಿದ್ದಾರೆ. ನಿರ್ದೇಶಕರು ಶೂಟಿಂಗ್ ನಿಲ್ಲಿಸುವ ಬಗ್ಗೆ ಮಾತನಾಡಿದರೂ ‘ಶೂಟಿಂಗ್ ಮುಂದುವರೆಸಿ, ಪರವಾಗಿಲ್ಲ…’ ಎಂದಿದ್ದಾರೆ ಬಚ್ಚನ್ ಸೊಸೆ. ಅಷ್ಟೇ ಅಲ್ಲದೆ, ಯಾರಿಗೂ ಗೊತ್ತಾಗದಂತೆ ಆರಾಧ್ಯಾಳನ್ನು ಕ್ಯಾರವಾನ್ ಒಳಗೆ ಕೂರಿಸಿ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಂಡರಂತೆ ಐಶ್. ಇನ್ನೇನು ಆರಾಧ್ಯಾಳ ಆರೋಗ್ಯ ತೀರಾ ಹದಗೆಟ್ಟಿದೆ ಎನ್ನುವಾಗಲೇ ಚಿತ್ರತಂಡಕ್ಕೆ ಸತ್ಯ ಗೊತ್ತಾಗಿದ್ದು.
ಐಶ್ ಬದ್ಧತೆ ಕಂಡು ಬೆರಗಾಗಿರುವ ನಿರ್ದೇಶಕ ಸಂಜಯ್, ‘ಐಶ್ವರ್ಯಾ ಅವರ ಸ್ಥಾನದಲ್ಲಿ ನಾನಿದ್ದಿದ್ದರೆ ಮಗುವನ್ನು ಸೆಟ್ಗೆ ಕರೆದುಕೊಂಡು ಬರುತ್ತಿರಲಿಲ್ಲ. ಚಿತ್ರತಂಡಕ್ಕೆ ತೊಂದರೆಯಾಗಬಾರದು ಎಂದು ಹೀಗೆಲ್ಲ ಶ್ರಮಿಸುವ ಅವರು ನಿಜಕ್ಕೂ ಗ್ರೇಟ್’ ಎಂದಿದ್ದಾರೆ.