ಮನೋರಂಜನೆ

ಗ್ಲೇಡ್ಸ್‌ನಲ್ಲಿ ಉದಯಿಸಿದ ಮತ್ತೊಬ್ಬ ವೇಗಿ

Pinterest LinkedIn Tumblr

crick-ಕೆ. ಓಂಕಾರ ಮೂರ್ತಿ
ಮೈಸೂರಿನಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ‘ಎ’ ತಂಡದ ಐದು ವಿಕೆಟ್‌ ಕಬಳಿಸಿ ಪದಾರ್ಪಣೆ ಪಂದ್ಯದಲ್ಲಿಯೇ ಗಮನ ಸೆಳೆದ ಕರ್ನಾಟಕ ತಂಡದ ಪ್ರಸಿದ್ಧ ಕೃಷ್ಣ ಪ್ರಜಾವಾಣಿ ಚಿತ್ರ/ಎಚ್‌.ಜಿ. ಪ್ರಶಾಂತ್‌

ಮೈಸೂರು: ರಾಜ್ಯ ಕ್ರಿಕೆಟ್‌ನಲ್ಲಿ ಮತ್ತೊಬ್ಬ ವೇಗದ ಬೌಲಿಂಗ್‌ ತಾರೆಯ ಉದಯ ವಾಗಿದೆ. ಅದಕ್ಕೆ ವೇದಿಕೆಯಾಗಿದ್ದು ಗಂಗೋತ್ರಿ ಗ್ಲೇಡ್ಸ್‌. ಟೆಸ್ಟ್‌ ಪಂದ್ಯ ಆಡಿರುವ ಆಟಗಾರರು ಇರುವ ಬಾಂಗ್ಲಾ ದೇಶ ‘ಎ’ ತಂಡದ ಎದುರೇ ವೇಗಿ ಪ್ರಸಿದ್ಧ ಎಂ. ಕೃಷ್ಣ ಮಿಂಚು ಹರಿಸಿದರು.

ಕೆಪಿಎಲ್‌ನಲ್ಲಿ ಬಳ್ಳಾರಿ ಟಸ್ಕರ್ಸ್‌ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ 19 ವರ್ಷ ವಯಸ್ಸಿನ ಪ್ರಸಿದ್ಧ ಅವರಿಗೆ ಸ್ಥಾನ ಲಭಿಸಿತ್ತು. ಅವರು ಈ  ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ವಿಶೇಷವೆಂದರೆ ಇದು ಅವರ ಮೊದಲ ಪ್ರಥಮದರ್ಜೆ ಪಂದ್ಯ.

ಪ್ರಸಿದ್ಧ (49ಕ್ಕೆ5) ಹಾಗೂ ಶಿಶಿರ್‌ ಭವಾನೆ (ಬ್ಯಾಟಿಂಗ್‌ 55) ನೆರವಿನಿಂದ ಮೂರು ದಿನಗಳ ಕ್ರಿಕೆಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದು ರಣಜಿ ಚಾಂಪಿಯನ್‌ ಕರ್ನಾಟಕ.

ಪಾರಂಪರಿಕ ನಗರಿಯಲ್ಲಿ ಮಂಗಳ ವಾರ ಆರಂಭವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ಬಾಂಗ್ಲಾ ‘ಎ’ ಮೊದಲ ಇನಿಂಗ್ಸ್‌ನಲ್ಲಿ 38.4 ಓವರ್‌ಗಳಲ್ಲಿ ಕೇವಲ 158 ರನ್‌ಗಳಿಗೆ ಆಲೌಟಾಯಿತು. ಇದಕ್ಕುತ್ತರ ವಾಗಿ ಪ್ರಥಮ ಇನಿಂಗ್ಸ್‌ ಆರಂಭಿಸಿರುವ ರಾಜ್ಯ ತಂಡ ಮೊದಲ ದಿನದಾಟದ ಅಂತ್ಯಕ್ಕೆ 49 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿದೆ.

ವೇಗಿಗಳ ಆರ್ಭಟ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಮುಂದಾದ ಬಾಂಗ್ಲಾಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ವೇಗಿ ಪ್ರಸಿದ್ಧ ಅವರು ತಾವು ಮಾಡಿದ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ವಿಕೆಟ್‌ ಪಡೆ ದರು. ಅವರಿಗೆ ಮತ್ತೊಬ್ಬ ವೇಗಿ  ಶರತ್‌ ಉತ್ತಮ ಬೆಂಬಲ ನೀಡಿದರು.

ಪ್ರವಾಸಿ ತಂಡ ಕೇವಲ 1 ರನ್‌ಗೆ 2ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಸಂಕಟ ಅಲ್ಲಿಗೆ ನಿಲ್ಲಲಿಲ್ಲ. ಪ್ರಸಿದ್ಧ ದಾಳಿಗೆ ಸಿಲುಕಿ 41 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. ಕರಾರುವಾಕ್‌ ಬೌಲಿಂಗ್‌ ದಾಳಿಯ ಜೊತೆಗೆ ರಾಜ್ಯ ತಂಡದ ಫೀಲ್ಡಿಂಗ್‌ ಕೂಡ ಗಮನಸೆಳೆಯುವಂತಿತ್ತು.

ತಮ್ಮ ಮೊದಲ ಸ್ಪೆಲ್‌ನಲ್ಲಿ ಪ್ರಸಿದ್ಧ 4 ವಿಕೆಟ್‌ ಕಬಳಿಸಿದರು. ನಂತರ ಎರಡನೇ ಸ್ಪೆಲ್‌ನ ಮೊದಲ ಓವರ್‌ನಲ್ಲಿ ಮತ್ತೊಂದು ವಿಕೆಟ್‌ ಪಡೆದರು. ಈ ಹಂತದಲ್ಲಿ ಬಾಂಗ್ಲಾ ನೆರವಿಗೆ ಬಂದಿದ್ದು ಲಿಟನ್‌ ದಾಸ್‌ (50; 50 ಎ, 11 ಬೌಂ.) ಹಾಗೂ ಶುವಗಟ ಹಮ್‌ (55; 65 ಎ. 7 ಬೌಂ.1 ಸಿ.). ಪರಿಣಾಮ ಈ ತಂಡ 158 ರನ್‌ ಗಳಿಸಲು ಸಾಧ್ಯವಾಯಿತು.

ಎಚ್ಚರಿಕೆಯ ಆಟ: ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್‌ ಹಾಗೂ ಮಯಂಕ್ ಅಗರ ವಾಲ್‌ ವೇಗದ ಬೌಲರ್‌ಗಳನ್ನು ಸಮರ್ಥವಾಗಿಯೇ ಎದುರಿಸಿದರು. ಆದರೆ, ಸ್ಪಿನ್ನರ್‌ಗಳ ಎದುರು ತಡಕಾಡಿದರು. ಸಕ್ಲೇನ್‌ ಸಾಜಿಬ್‌ ಅವರ ಮೊದಲ ಓವರ್‌ನಲ್ಲಿಯೇ ಮಯಂಕ್‌ ಬೌಲ್ಡ್‌ ಆದರು. ಸಮರ್ಥ್ (25) ಆಫ್‌ ಸ್ಪಿನ್ನರ್‌ ಶುವಗಟ ಹಮ್‌ಗೆ ವಿಕೆಟ್‌ ಒಪ್ಪಿ ಸಿದರು. ಆ ಬಳಿಕ ಶುರುವಾಗಿದ್ದು ಕುಸಿತ.

ಪರದಾಡಿದ ರಾಬಿನ್‌: ರಾಬಿನ್‌ ಉತ್ತಪ್ಪ ಕಣಕ್ಕಿಳಿಯುತ್ತಿದ್ದಂತೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸಿ ದರು. ಆದರೆ, ಅವರು ಕೂಡ ಸ್ಪಿನ್ನರ್‌ಗಳ ಎದುರು ಪರದಾಡಿದರು. ಅದರಲ್ಲೂ ಎಡಗೈ ಸ್ಪಿನ್ನರ್‌ ಸಕ್ಲೇನ್‌ ಅವರ ಎರಡು ಓವರ್‌ಗಳಲ್ಲಿ ಒಂದೂ ರನ್‌ ಗಳಿಸಲಿಲ್ಲ. ಈ ನಿರಾಸೆಯಿಂದ ಚೆಂಡನ್ನು ಮೇಲೆತ್ತಲು ಹೋಗಿ ಕೈಸುಟ್ಟುಕೊಂಡರು. ಮಿಡ್‌ಆನ್‌ನಲ್ಲಿ ನಾಸಿರ್‌ ಉತ್ತಮ ಕ್ಯಾಚ್‌ ಪಡೆದರು.

ತೀರ್ಪಿಗೆ ಅಸಮಾಧಾನ: ನಾಯಕ ಸಿ.ಎಂ. ಗೌತಮ್‌ ವಿರುದ್ಧ ಅಂಪೈರ್‌ ನೀಡಿದ ತೀರ್ಪು ತುಸು ವಿವಾದಕ್ಕೆ ಕಾರಣವಾಯಿತು. ಸಕ್ಲೇನ್‌ ಬೌಲಿಂಗ್‌ ನಲ್ಲಿ ಚೆಂಡು ಬ್ಯಾಟ್‌ಗೆ ತಾಗಿ ವಿಕೆಟ್‌ ಕೀಪರ್‌ ಕೈಸೇರುವ ಮುನ್ನ ನೆಲಕ್ಕೆ ತಾಗಿದಂತಿತ್ತು. ಈ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗೌತಮ್‌ ಕೆಲ ಸೆಕೆಂಡ್‌ ಕ್ರೀಸ್‌ನಲ್ಲೇ ನಿಂತಿದ್ದರು.
23 ರನ್‌ಗಳ ಅಂತರದಲ್ಲಿ 4 ವಿಕೆಟ್‌ ಕಳೆದುಕೊಂಡ ರಾಜ್ಯ ತಂಡ ಆತಂಕದ ಸುಳಿಗೆ ಸಿಲುಕಿತು. ಸಕ್ಲೇನ್‌ ಹಾಗೂ ಶುವಗಟ ಸೊಗಸಾದ ದಾಳಿ ಸಂಘಟಿಸಿದರು. ಅಭಿಷೇಕ್‌ ರೆಡ್ಡಿ 28 ರನ್‌ (38 ಎ. 5 ಬೌಂ.) ಗಳಿಸಿದರು.

ಶಿಶಿರ್‌, ಸುಚಿತ್‌ ಆಸರೆ: ಆತಿಥೇಯ ತಂಡ ನೂರು ರನ್‌ಗಳ ಗೆರೆ ಮುಟ್ಟಿದ್ದು 191 ಎಸೆತಗಳಲ್ಲಿ. ಬಳಿಕ ಶಿಶಿರ್‌ ಭವಾನೆ ಹಾಗೂ ಸುಚಿತ್‌ ತಂಡಕ್ಕೆ ಆಸರೆ ಯಾದರು. 88 ಎಸೆತ ಎದುರಿಸಿರುವ ಶಿಶಿರ್‌ 1 ಸಿಕ್ಸರ್‌ ಹಾಗೂ 8 ಬೌಂಡರಿ ಬಾರಿಸಿದ್ದಾರೆ. ಮುರಿಯದ ಏಳನೇ ವಿಕೆಟ್‌ಗೆ ಇವರಿಬ್ಬರು 63 ರನ್‌ ಸೇರಿಸಿ ತಂಡ ಇನಿಂಗ್ಸ್ ಮುನ್ನಡೆ ಪಡೆಯಲು ಕಾರಣರಾದರು.

ಸ್ಕೋರ್‌ಕಾರ್ಡ್‌

ಬಾಂಗ್ಲಾದೇಶ  ’ಎ‘ ಮೊದಲ ಇನಿಂಗ್ಸ್‌ 158 (38.4  ಓವರ್‌ಗಳಲ್ಲಿ)
ಅನಾಮುಲ್‌ ಹಕ್‌ ಬಿ ಪ್ರಸಿದ್ಧ ಎಂ. ಕೃಷ್ಣ  05
ರೋನಿ ತಾಲ್ಲೂಕ್ದರ್ ಸಿ ಶಿಶಿರ್‌ ಭವಾನೆ ಬಿ ಪ್ರಸಿದ್ಧ ಎಂ. ಕೃಷ್ಣ  00
ಮೊಮಿನುಲ್‌ ಹಕ್‌ ಸಿ ಶ್ರೇಯಸ್‌ ಗೋಪಾಲ್‌ ಬಿ ಎಚ್‌.ಎಸ್‌. ಶರತ್‌  01
ಲಿಟನ್‌ ಕುಮಾರ್‌ ದಾಸ್‌ ಸಿ ಸಿ.ಎಂ. ಗೌತಮ್‌ ಬಿ ಜೆ. ಸುಚಿತ್‌  50
ಸೌಮ್ಯ ಸರ್ಕಾರ್‌ ಸಿ ಶಿಶಿರ್‌ ಭವಾನೆ ಬಿ ಪ್ರಸಿದ್ಧ ಎಂ. ಕೃಷ್ಣ  00
ನಾಸಿರ್‌ ಹುಸೇನ್‌ ಸಿ ಸಿ.ಎಂ. ಗೌತಮ್‌ ಬಿ ಪ್ರಸಿದ್ಧ ಎಂ. ಕೃಷ್ಣ  08
ಶುವಗಟ ಹಮ್‌ ಎಲ್‌ಬಿಡಬ್ಲ್ಯು ಬಿ ಉದಿತ್‌ ಪಟೇಲ್‌  55
ಕಮ್ರುಲ್‌ ಇಸ್ಲಾಮ್‌ ರಬಿ ಎಲ್‌ಬಿಡಬ್ಲ್ಯು ಬಿ ಪ್ರಸಿದ್ಧ ಎಂ. ಕೃಷ್ಣ  08
ಜುಬೀರ್‌ ಹುಸೇನ್‌ ಸಿ ಅಭಿಷೇಕ್‌ ರೆಡ್ಡಿ ಬಿ ಶ್ರೇಯಸ್‌ ಗೋಪಾಲ್‌  04
ಸಕ್ಲೇನ್‌ ಸಾಜಿಬ್‌ ಔಟಾಗದೆ  15
ಅಲ್‌ ಅಮಿನ್‌ ಹುಸೇನ್‌ ಸಿ ಮಯಂಕ್‌ ಅಗರವಾಲ್‌ ಬಿ ಉದಿತ್‌ ಪಟೇಲ್‌ 05
ಇತರೆ (ಬೈ–6, ಲೆಗ್‌ಬೈ–1)  07
ವಿಕೆಟ್‌ ಪತನ:  1–0 (ರೋನಿ; 1.1); 2–1 (ಮೊಮಿನುಲ್‌; 4.1); 3–27 (ಅನಾಮುಲ್‌; 9.2); 4–27 (ಸೌಮ್ಯ; 9.5); 5–41 (ನಾಸಿರ್‌; 11.4); 6–76 (ಲಿಟನ್‌; 19.1); 7–104 (ಕಮ್ರುಲ್; 27.3); 8–109 (ಜಬೀರ್‌; 28.3); 9–148 (ಶುವಗಟ; 36.3);  10–158 (ಅಲ್‌ ಅಮಿನ್; 38.4).

ಬೌಲಿಂಗ್‌: ಎಚ್‌.ಎಸ್‌. ಶರತ್‌ 7–2–28–1, ಪ್ರಸಿದ್ಧ ಎಂ. ಕೃಷ್ಣ 12–2–49–5, ಮಯಂಕ್ ಅಗರವಾಲ್‌ 1–0–5–0, ಶ್ರೇಯಸ್‌ ಗೋಪಾಲ್‌ 9–1–36–1, ಜೆ. ಸುಚಿತ್‌ 6–1–22–1, ಉದಿತ್‌ ಪಟೇಲ್‌ 3.4–0–11–2

ಭಾರತ  ’ಎ’ ಮೊದಲ ಇನಿಂಗ್ಸ್‌ 163ಕ್ಕೆ6 (49 ಓವರ್‌ಗಳಲ್ಲಿ)
ಆರ್‌. ಸಮರ್ಥ ಎಲ್‌ಬಿಡಬ್ಲ್ಯು ಬಿ ಶುವಗಟ ಹಮ್‌  25
ಮಯಂಕ್‌ ಅಗರವಾಲ್‌ ಬಿ ಸಕ್ಲೇನ್‌ ಸಾಜಿಬ್‌  16
ಅಭಿಷೇಕ್‌ ರೆಡ್ಡಿ ಎಲ್‌ಬಿಡಬ್ಲ್ಯು ಬಿ ಶುವಗಟ ಹಮ್‌  28
ರಾಬಿನ್‌ ಉತ್ತಪ್ಪ ಸಿ ನಾಸಿರ್ ಹುಸೇನ್‌ ಬಿ ಸಕ್ಲೇನ್‌ ಸಾಜಿದ್‌  01
ಸಿ.ಎಂ. ಗೌತಮ್‌ ಸಿ ಅನಾಮುಲ್ ಹಕ್‌ ಬಿ ಸಕ್ಲೇನ್‌ ಸಾಜಿಬ್‌  03
ಶ್ರೇಯಸ್‌ ಗೋಪಾಲ್‌ ಸಿ ಜುಬೇರ್‌ ಹುಸೇನ್‌ ಬಿ ಶುವಗಟ ಹಮ್  17
ಶಿಶಿರ್‌ ಭವಾನೆ ಬ್ಯಾಟಿಂಗ್‌  55
ಜೆ. ಸುಚಿತ್‌ ಬ್ಯಾಟಿಂಗ್‌  14
ಇತರೆ (ಲೆಗ್‌ಬೈ–3, ನೋಬಾಲ್‌–1)  04
ವಿಕೆಟ್‌ ಪತನ: 1–28 (ಮಯಂಕ್‌; 7.5); 2–52 (ಸಮರ್ಥ್‌; 14.4); 3–65 (ಉತ್ತಪ್ಪ; 19.1); 4– 69 (ಗೌತಮ್‌; 21.1); 5–75 (ಅಭಿಷೇಕ್‌; 22.2); 6–100 (ಗೋಪಾಲ್; 32.1)
ಬೌಲಿಂಗ್‌: ಅಲ್‌ ಅಮಿನ್ ಹುಸೇನ್‌ 9–0–31–0, ಕಮ್ರುಲ್‌ ಇಸ್ಲಾಮ್‌ ರಬಿ 4–0–19–0 (ನೋಬಾಲ್‌–1), ಸಕ್ಲೇನ್‌ ಸಾಜಿಬ್‌ 14–3–48–3, ಶುವಗಟ ಹಮ್‌ 16–4–29–3, ಜುಬೀರ್‌ ಹುಸೇನ್‌ 3–0–27–0, ನಾಸಿರ್‌ ಹುಸೇನ್     3–2–6–0

Write A Comment