ಮೈಸೂರು, ಸೆ.16: ಬಳ್ಳಾರಿ ಟಸ್ಕರ್ಸ್ ವಿರುದ್ಧ ಇಲ್ಲಿ ನಡೆದ ಕೆಪಿಎಲ್‌ನ 25ನೆ ಪಂದ್ಯದಲ್ಲಿ 3 ರನ್‌ಗಳ ರೋಚಕ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಪ್ಲೇ-ಆಫ್‌ನಲ್ಲಿ ಅವಕಾಶ ದೃಢಪಡಿಸಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಗ್ರೌಂಡ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 111 ರನ್‌ಗಳ ಸವಾಲನ್ನು ಪಡೆದ ಬಳ್ಳಾರಿ ಟಸ್ಕರ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 107 ರನ್ ಗಳಿಸಿತು.
ಟೈಗರ್ಸ್ ತಂಡದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಬಳ್ಳಾರಿ ಟಸ್ಕರ್ಸ್‌ನ ಆಟ ನಡೆಯಲಿಲ್ಲ. ಅಗ್ರ ಸರದಿಯ ಬ್ಯಾಟಿಂಗ್ ವೈಫಲ್ಯದ ಕಾರಣದಿಂದಾಗಿ ಟಸ್ಕರ್ಸ್‌ಗೆ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.
4 ಓವರ್‌ಗಳಲ್ಲಿ 15 ರನ್‌ಗೆ 3 ವಿಕೆಟ್ ಕಳೆದುಕೊಂಡ ಟಸ್ಕರ್ಸ್ ತಂಡಕ್ಕೆ ಅಮಿತ್ ವರ್ಮ ಮತ್ತು ದೇವರಾಜ್ ಪಾಟೀಲ್ ನಾಲ್ಕನೆ ವಿಕೆಟ್‌ಗೆ 35 ರನ್ ಸೇರಿಸಿದರು. ಟಸ್ಕರ್ಸ್ ತಂಡ 10 ಓವರ್‌ಗಳಲ್ಲಿ 41 ರನ್ ಗಳಿಸಿತು. ಅಂತಿಮ 10 ಓವರ್‌ಗಳಲ್ಲಿ 70 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ದೇವರಾಜ್ ಪಾಟೀಲ್ ಮತ್ತು ಅನಿರುದ್ಧ ಜೋಶಿ 5ನೆ ವಿಕೆಟ್‌ಗೆ 38 ರನ್ ಸೇರಿಸಿದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದೇವರಾಜ್ ಪಾಟೀಲ್ 27 ರನ್ ಗಳಿಸಲು 40 ಎಸೆತಗಳನ್ನು ಎದುರಿಸಿದರು. ಇದು ಟಸ್ಕರ್ಸ್‌ನ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಆದರೆ ಅನಿರುದ್ಧ್ ಜೋಶಿ 23 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 33 ರನ್ ಗಳಿಸುವ ಮೂಲಕ ಹೋರಾಟ ನಡೆಸಿದರು. 19ನೆ ಓವರ್‌ನ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 101 ರನ್ ಗಳಿಸಿದ್ದ ಟಸ್ಕರ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳ ಆವಶ್ಯಕತೆ ಇತ್ತು. ಆದರೆ ಸಂತೆಬೆನ್ನೂರು ಅಕ್ಷಯ್ ಕೇವಲ 6 ರನ್ ಬಿಟ್ಟುಕೊಟ್ಟರು. 19.4ನೆ ಓವರ್‌ನಲ್ಲಿ ಎಸ್‌ಪಿ ಮಂಜುನಾಥ್(11) ಅವರನ್ನು ರನೌಟ್ ಮಾಡಿ ಗೆಲುವಿನ ರೂವಾರಿ ಎನಿಸಿಕೊಂಡರು. ಅಕ್ಷಯ್ 1 ವಿಕೆಟ್(4-1-12-1) ಉಡಾಯಿಸಿದ್ದರೂ ಟಸ್ಕರ್ಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟೈಗರ್ಸ್ 110/9: ಹುಬ್ಬಳ್ಳಿ ಟೈಗರ್ಸ್ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದಕೊಂಡು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 110 ರನ್ ಗಳಿಸಿತ್ತು. ಬಳ್ಳಾರಿ ಟಸ್ಕರ್ಸ್‌ನ ಬೌಲರ್‌ಗಳಾದ ಕಾರ್ತಿಕ್(3-22), ಅಮಿತ್ ವರ್ಮ (2-18), ಅನಿಲ್ ಐಜಿ (2-25), ಪ್ರಸನ್ನ ಪಾಟೀಲ್(1-13) ಮತ್ತು ಎನ್.ಅಯ್ಯಪ್ಪ (1-30) ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿತು.
ಮೊದಲ 10 ಓವರ್‌ಗಳಲ್ಲಿ 58 ರನ್ ಗಳಿಸಿದ ಹುಬ್ಬಳ್ಳಿ ತಂಡ ಅಂತಿಮ ಹತ್ತು ಓವರ್‌ಗಳಲ್ಲಿ 52 ರನ್ ಸೇರಿಸಿತು. ಕೆಬಿ ಪವನ್(24), ನಾಯಕ ಕುನಾಲ್ ಕಪೂರ್(26), ಚೇತನ್ ವಿಲಿಯಮ್(20), ಶಿವಿಲ್ ಕೌಶಿಕ್(15) ಎರಡಂಕೆಯ ಸ್ಕೋರ್ ದಾಖಲಿಸಿದರು. ಇದರಿಂದಾಗಿ ಟೈಗರ್ಸ್‌ನ ಸ್ಕೋರ್ 100ರ ಗಡಿ ದಾಟಿತು.