ಮನೋರಂಜನೆ

ಹೊಸ ಪ್ರಭೆಯಲ್ಲಿ ದೀಪ್ತಿ

Pinterest LinkedIn Tumblr

crec11deepti-ಗಣೇಶ ವೈದ್ಯ
ಬಳುಕುವ ನಡಿಗೆಗೆ ಒಪ್ಪುವಂಥ ಉಡುಗೆ ಸಿದ್ಧಪಡಿಸಿ, ರ್‍ಯಾಂಪ್ ಮೇಲಿನ ರೂಪದರ್ಶಿಯನ್ನು ಸುಂದರಗೊಳಿಸುವ ಮುಖ್ಯ ಜವಾಬ್ದಾರಿ ಉಡುಪು ವಿನ್ಯಾಸಕಾರರದ್ದು. ಈ ಉಡುಪು ವಿನ್ಯಾಸವನ್ನೇ ಕಾಯಕವನ್ನಾಗಿಸಿಕೊಂಡವರು ದೀಪ್ತಿ ಕಾಪ್ಸೆ. ಅವರೀಗ ವಿನ್ಯಾಸಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಸೌಂದರ್ಯದ ಜಗತ್ತಿನಲ್ಲಿ ಮುಳುಗಿ ಮಿಂಚಲು ರೆಡಿಯಾಗಿದ್ದಾರೆ. ಅಂದರೆ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾರೆ, ‘ಜ್ವಲಂತಂ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ದೀಪ್ತಿ ಕಾಪ್ಸೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್.ಸಿ ಮುಗಿಸಿ ಜಾಹೀರಾತು ಮತ್ತು ಧಾರಾವಾಹಿಗಳಿಗೆ ಉಡುಪು ವಿನ್ಯಾಸ ಮಾಡುತ್ತಿದ್ದಾಗಲೇ ‘ದ ಸೂಟ್’ ಎಂಬ ಕನ್ನಡ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡುವ ಅವಕಾಶ ದೊರೆಯಿತು. ನಂತರ ಅದೇ ಚಿತ್ರದಲ್ಲಿ ‘ಒಂದು ಚಿಕ್ಕ ಪಾತ್ರ ಮಾಡಿ’ ಎಂಬ ಕೋರಿಕೆಯೂ ಬಂತು. ಇಂಥ ಸಂದರ್ಭವನ್ನು ಕನಸಿನಲ್ಲೂ ಯೋಚಿಸಿರದ ದೀಪ್ತಿಗೆ ಏನು ಮಾಡಬೇಕೆಂದು ತಕ್ಷಣಕ್ಕೆ ಗೊತ್ತಾಗದಿದ್ದರೂ ಒಪ್ಪಿಕೊಂಡಿದ್ದರು. ಅಲ್ಲಿಂದಲೇ ಅವರಿಗೆ ‘ಚಂದನವನ’ದ ಗಾಳಿ ಹಿತವೆನಿಸಿದ್ದು.

‘ದ ಸೂಟ್’ ನಿರ್ದೇಶಕ ಭಗತ್ ಹಾಗೂ ದೀಪ್ತಿ ಸ್ನೇಹಿತರು. ಭಗತ್ ಅವರಿಂದಾಗಿ ಒಂದು ತಿಂಗಳು ನಟನೆಯ ತರಬೇತಿ ಪಡೆದು ಆ ಚಿತ್ರದಲ್ಲಿ ಬಣ್ಣಹಚ್ಚಿದರು. ಅದಿನ್ನೂ ಬಿಡುಗಡೆಯಾಗದಿದ್ದರೂ ದೀಪ್ತಿಗೆ ‘ಜ್ವಲಂತಂ’ ಎಂಬ ಚಿತ್ರಕ್ಕೆ ನಾಯಕಿಯಾಗುವ ದೊಡ್ಡ ಅವಕಾಶವೇ ಬಂತು. ಆಗ ಅವರಿಗಾದ ಅಚ್ಚರಿ ಅಷ್ಟಿಷ್ಟಲ್ಲ. ‘ನಾಯಕಿಯಾಗಲು ಎಷ್ಟೊಂದು ನಟಿಯರು ಪ್ರಯತ್ನಿಸುತ್ತಾರೆ. ಆದರೆ ನಾನು ಪ್ರಯತ್ನಿಸದೆ ನಾಯಕಿಯಾಗಿದ್ದಕ್ಕಾಗಿ ತುಂಬಾ ಖುಷಿಯೆನಿಸುತ್ತದೆ’ ಎಂದು ತಮ್ಮ ಭಾಗ್ಯವನ್ನು ನೆನೆಯುತ್ತಾರೆ. ಹಾಗೇ ತನ್ನಮೇಲೆ ನಂಬಿಕೆಯಿಟ್ಟು ತನ್ನಿಂದ ಕೆಲಸ ತೆಗೆಸಿದ ‘ಜ್ವಲಂತಂ’ ನಿರ್ದೇಶಕ ಅಂಬರೀಷ್ ಅವರಿಗೂ ದೀಪ್ತಿ ನೂರು ನಮಸ್ಕಾರ ಹೇಳುತ್ತಾರೆ.

ಕ್ಯಾಮೆರಾಮನ್ ಒಬ್ಬರು ದೀಪ್ತಿಗೆ ನಾಯಕಿಯಾಗುವಂತೆ ಯಾವಾಗಲೂ ಸಲಹೆ ನೀಡುತ್ತಿದ್ದರು. ಆಗೆಲ್ಲ ದೀಪ್ತಿ ಅದನ್ನು ತಿರಸ್ಕರಿಸಿದ್ದರು. ನಾಯಕಿಗಾಗಿ ಹುಡುಕಾಟ ನಡೆಸಿದ್ದ ‘ಜ್ವಲಂತಂ’ ತಂಡಕ್ಕೆ  ಅದೇ ಕ್ಯಾಮೆರಾಮನ್ ದೀಪ್ತಿಯ ಫೋಟೊ ಕಳಿಸಿ, ನಂತರ, ‘ನಾನು ಫೋಟೊ ಕಳಿಸಿದ್ದೇನೆ. ಒಮ್ಮೆ ಹೋಗಿ ಬಾ’ ಎಂದಿದ್ದಕ್ಕಾಗಿ ದೀಪ್ತಿ ಆಡಿಷನ್ ಎದುರಿಸಿ ಬಂದಿದ್ದರು. ಆಗ ಅವರಲ್ಲಿ ಆತಂಕವಿತ್ತು. ಆದರೆ ಸಂಜೆ ವೇಳೆಗೆಲ್ಲ ‘ನೀವು ಆಯ್ಕೆಯಾಗಿದ್ದೀರಿ’ ಎಂಬ ಸಂದೇಶವೊಂದು ಮೊಬೈಲ್‌ನಲ್ಲಿತ್ತು.

ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಲೋಕದಲ್ಲೂ ಮಿಂಚಿದವರು ದೀಪ್ತಿ. ಹಾಗಾಗಿ ಅಚಾನಕ್ಕಾಗಿ ಕ್ಯಾಮೆರಾ ಎದುರಿಸುವ ಪ್ರಮೇಯ ಬಂದಾಗ ಕಷ್ಟವೆನ್ನಿಸಿಲ್ಲ. ಅವರು ಹುಟ್ಟಿದ್ದು ಬೆಳದಿದ್ದೆಲ್ಲ ಬೆಂಗಳೂರಲ್ಲೇ. ಮೊದಲಿನಿಂದಲೂ ನಗರದ ಜೀವನವನ್ನೇ ಕಂಡು ಗೊತ್ತಿರುವ ಅವರಿಗೆ ಹಳ್ಳಿ ಜೀವನದ ಗಂಧಗಾಳಿಯೂ ಇಲ್ಲ. ಆದರೀಗ ‘ಜ್ವಲಂತಂ’ನಲ್ಲಿ ಮುಗ್ಧ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧತೆಯಿದ್ದರೂ ತೀರಾ ‘ಡಿ ಗ್ಲಾಮರ್’ ಆಗಿ ಗೌರಮ್ಮನಂತೆಯೂ ಅವರು ಕಾಣಿಸಿಕೊಳ್ಳುತ್ತಿಲ್ಲ.

‘ಯಾವ ಪಾತ್ರವನ್ನಾದರೂ ಸವಾಲಾಗಿ ಸ್ವೀಕರಿಸಿ ಮಾಡಬಲ್ಲೆ’ ಎಂಬ ಭರವಸೆ ಅವರಲ್ಲಿದೆ. ಆದರೆ ತುಂಬಾ ಬೋಲ್ಡ್ ಪಾತ್ರಗಳು ತನಗೆ ಒಗ್ಗುವುದಿಲ್ಲ ಎಂಬುದು ಅವರ ಅನಿಸಿಕೆ.

‘ಕಿರೀಟ’ ಎಂಬ ಮತ್ತೊಂದು ಚಿತ್ರವನ್ನು ದೀಪ್ತಿ ಒಪ್ಪಿಕೊಂಡಿದ್ದಾರೆ. ‘ಕಿರೀಟ’ದಲ್ಲಿ ಅವರದ್ದು ತುಂಬಾ ಚಾಲೆಂಜಿಂಗ್ ಪಾತ್ರವಂತೆ. ಒಂದು ತಮಿಳು ಚಿತ್ರದ ಅವಕಾಶವೂ ಬಂದಿದ್ದು ಅದಕ್ಕೆ ಸಹಿಯನ್ನೂ ಮಾಡಿದ್ದಾರೆ. ಚಿತ್ರೀಕರಣ ಆರಂಭವಾಗಬೇಕಷ್ಟೇ. ಅದು ಸ್ತ್ರೀ ಪ್ರಧಾನ ಚಿತ್ರವೆಂಬುದು ಅವರಿಗೆ ಖಷಿ.
‘ಅಲ್ಲಿಗೆ ಬಹುತೇಕ ಕನ್ನಡ ನಟಿಯರಂತೆ ನೀವೂ ಪರಭಾಷೆಗೆ ಹತ್ತಿರವಾಗುತ್ತಿದ್ದೀರಿ’ ಎಂದು ಕುಟುಕಿದರೆ ‘ಖಂಡಿತ ಇಲ್ಲ. ಎಲ್ಲರೂ ಹೀಗೆ ಹೇಳುತ್ತಾರೆ ಎಂದೇ ನಾನು ಕನ್ನಡ ಚಿತ್ರಗಳನ್ನೇ ಒಪ್ಪಿಕೊಳ್ಳುತ್ತಿರುವುದು. ಬೇರೆ ಭಾಷೆಗಳಿಂದ ಐದಾರು ಅವಕಾಶಗಳು ಬಂದಿವೆ. ಅವನ್ನೆಲ್ಲ ಒಪ್ಪಿಕೊಂಡಿಲ್ಲ. ಆದರೆ ಈಗ ಒಪ್ಪಿಕೊಂಡಿರುವ ತಮಿಳು ಚಿತ್ರದ ಕಥೆ ತೀವ್ರವಾಗಿ ಹಿಡಿಸಿದ ಕಾರಣಕ್ಕಾಗಿ ಒಪ್ಪಿಕೊಂಡೆ. ಕನ್ನಡವೇ ನನ್ನ ಆದ್ಯತೆ’ ಎಂದು ಕನ್ನಡ ಪ್ರೀತಿ ತೋರುತ್ತಾರೆ. ಅವರ ಮಾತೃಭಾಷೆ ಮರಾಠಿ ಆಗಿದ್ದರೂ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡಬಲ್ಲರು.

ಈ ಮುನ್ನ ಸಮಯ ಸಿಕ್ಕಾಗಲೆಲ್ಲ ಚಿತ್ರ ಬಿಡಿಸುವುದರಲ್ಲಿ ಕಾಲ ಕಳೆಯುತ್ತಿದ್ದ ದೀಪ್ತಿ ಈಗ ಹಳೆಯ ಸಿನಿಮಾಗಳನ್ನು ನೋಡುತ್ತಾರಂತೆ. ಚಿತ್ರರಂಗಕ್ಕೆ ತಮ್ಮನ್ನು ಹತ್ತಿರವಾಗಿಸಿಕೊಳ್ಳುವ ಅವರ ಪ್ರಯತ್ನದಲ್ಲಿ ಇದೂ ಒಂದು. ಸದ್ಯ ಡಾನ್ಸ್ ಅನ್ನು ಕಾಳಜಿಯಿಂದ ಕಲಿಯುತ್ತಿದ್ದಾರೆ. ‘ಜ್ವಲಂತಂ’ ಚಿತ್ರ ಪೂರ್ಣಗೊಂಡಿದ್ದು ಅದರ ಬಿಡುಗಡೆಯೇ ದೀಪ್ತಿಯ ಮುಂದಿನ ನಿರೀಕ್ಷೆ.

Write A Comment