ರಣವಿಕ್ರಮ ಚಿತ್ರದ ಪೊಲೀಸ್ ಗೆಟಪ್’ನಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ಪವರ್’ಫುಲ್ ನಟ ಪುನೀತ್ ರಾಜ್ ಕುಮಾರ್ ಈಗ ದೊಡ್ಮನೆಯಲ್ಲಿ ಬ್ಯುಸಿಯಾಗಿರುವುದು ಗೊತ್ತೆ ಇದೆ.
ಇತ್ತೀಚೆಗೆ ಕಾಲಿವುಡ್’ನಲ್ಲಿ ತೆರೆಕಂಡಿದ್ದ ತನಿ ಒರುವನ್ (ಏಕಾಂಗಿ) ಚಿತ್ರವನ್ನು ಅಪ್ಪು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರಂತೆ. ಈ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲು ನಾಯಕ ನಟ ಪುನೀತ್ ರಾಜ್ ಉತ್ಸಕರಾಗಿದ್ದಾರೆ ಎಂದು ತಮಿಳು ಚಿತ್ರ ನಿರ್ದೇಶಕ ಮೋಹನ್ ರಾಜಾ ತಿಳಿಸಿದ್ದಾರೆ.
ಜಯಂ ರವಿ-ನಯನತಾರ ಜೋಡಿಯ ಈ ಚಿತ್ರವು ಬಿಡುಗಡೆಯಾದ ಎಲ್ಲಾ ಕೇಂದ್ರದಲ್ಲೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ತನಿ ಒರುವನ್’ನಲ್ಲಿ ಜಯಂ ರವಿ ನಿರ್ವಹಿಸಿದ ಐಪಿಎಸ್ ಅಧಿಕಾರಿಯ ಪಾತ್ರವನ್ನು ಪವರ್ ಸ್ಟಾರ್ ಕನ್ನಡದಲ್ಲಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರದ್ಯಾಂತ ಗಮನ ಸೆಳೆದಿರುವ ಈ ಥ್ರಿಲ್ಲರ್ ಚಿತ್ರವನ್ನು ಸೌತ್ ಬ್ಯೂಟಿ ಜೆನಿಲಿಯಾ ಮರಾಠಿ ಭಾಷೆಗೆ ರಿಮೇಕ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಟಾಲಿವುಡ್ ರಿಮೇಕ್’ನಲ್ಲಿ ಮಹೇಶ್ ಬಾಬು ಅಥವಾ ರಾಮ್ ಚರಣ್ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಬಾಲಿವುಡ್ ಅವತರಣಿಕೆಯಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಪವರ್’ಸ್ಟಾರ್ ಪುನೀತ್ ರಾಜ್ ಕುಮಾರ್ ಸೂರಿ ನಿರ್ದೇಶನದ ದೊಡ್ಮನೆ ಹುಡ್ಗ ಹಾಗೂ ಚಕ್ರವ್ಯೂಹ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪೃಥ್ವಿ ಚಿತ್ರದಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಪವರ್ ಸ್ಟಾರ್ ಈ ಮೂಲಕ ಐಪಿಎಸ್ ಆಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ