ಮನೋರಂಜನೆ

ಮೇಷ್ಟ್ರು ಕಿವಿಗೆ ಬೀಗ ಹಾಕಿದ್ದು!: ಸಂಚಾರಿ ವಿಜಯ್

Pinterest LinkedIn Tumblr

KRM-Editನಾನು ಪಿಯುಸಿಯಲ್ಲಿದ್ದಾಗ ಒಬ್ಬ ಮಾಸ್ಟರು ಇದ್ದರು. ಆಗ ತಾನೇ ಕೆಲಸ ಸಿಕ್ಕಿತ್ತು ಅನ್ನಿಸುತ್ತೆ. ಆ ಮಾಸ್ಟರು ಹುಡುಗರ ಜತೆ ಹೆಚ್ಚು ಬೆರೆಯುತ್ತಿದ್ದರು. ಅವರ ಮನೆಗೂ ನಾವು ಹೋಗುತ್ತಿದ್ದೆವು. ಆದರೆ ಆ ಪಾರ್ಟಿ ಒಂದು ರೂಪಾಯಿಯೂ ಖರ್ಚು ಮಾಡುತ್ತಿರಲಿಲ್ಲ. ನಮ್ಮಿಂದಲೇ ಎಲ್ಲವನ್ನೂ ಪೀಕುತ್ತಿದ್ದರು.

ನಾವು ಎಷ್ಟು ಪ್ರಯತ್ನಿಸಿದರೂ ದುಡ್ಡು ಬಿಚ್ಚಿಸಲು ಸಾಧ್ಯವಾಗಲಿಲ್ಲ. ಇದನ್ನು ಒಂದು ಚಾಲೆಂಜ್ ಎಂದುಕೊಂಡೆವು. ಒಂದು ದಿನ ಮಾಸ್ಟರು ಚೆನ್ನಾಗಿ ನಿದ್ದೆ ಮಾಡುತ್ತಿದ್ದರು. ಅವರ ಕಿವಿಗೆ ಓಲೆ ಹಾಕುವ ಜಾಗ ಜಗ್ಗಿ ಜಗ್ಗಿ ದೊಡ್ಡದಾಗಿತ್ತು. ಒಂದು ಬೀಗವನ್ನು ತಂದು ಆ ಕಿವಿಯ ತೂತಿಗೆ ಸೇರಿಸಿ ಲಾಕ್ ಮಾಡಿದೆವು. ಆ ಮೇಲೆ ಎಲ್ಲರಿಗೂ ಪಾರ್ಟಿ ಕೊಡಿಸಿದ ನಂತರವೇ ಆ ಲಾಕ್ ಓಪನ್ ಆದದ್ದು. ಆ ನಂತರ ಆ ಮಾಸ್ಟರು ಸ್ವಲ್ವ ಎಚ್ಚರವಾದರು.

ಹೈಸ್ಕೂಲ್‌ನಲ್ಲಿ ಒಬ್ಬ ಶಿಕ್ಷಕರು ಇದ್ದರು. ನಾವು ಏನೇ ಮಾಡಿದರೂ ಬೈಯುತ್ತಿದ್ದರು. ಇವರ ವಿರುದ್ಧ ನಮಗೆ ಸಿಟ್ಟು. ಒಂದು ದಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ. ಶಿಕ್ಷಕರ ಶೌಚಾಲಯ ಹೌಸ್‌ಫುಲ್. ಹುಡುಗರ ಶೌಚಾಲಯಕ್ಕೆ ಮಾಸ್ಟರು ಹೋದರು.  ನಾವು ಆ ಶೌಚಾಲಯದ ಬೀಗ ಹಾಕಿದೆವು. ಅರ್ಧ ಗಂಟೆ ಮಾಸ್ಟರು ಕೂಗಾಟ. ಕೊನೆಗೆ ಯಾರೋ ಬಂದು ಬೀಗ ಹೊಡೆದರು. ನಾವು ಮಾತ್ರ ಸಿಕ್ಕಿಕೊಳ್ಳಲಿಲ್ಲ.

ಹೀಗೆ ಒಮ್ಮೆ ಕಾಲೇಜಿನಲ್ಲಿ ನಾನು ಹಿಂಭಾಗದ ಬೆಂಚಿನಲ್ಲಿ ಕುಳಿತು ರಾಕೆಟ್ ಬಿಡುತ್ತಿದ್ದೆ. ಅದು ಯಾರ ಮೇಲೆ ಬಿದ್ದರೂ ಚಿಂತೆ ಇರಲಿಲ್ಲ. ಗಣಿತದ ಮೇಷ್ಟ್ರು ಬೋರ್ಡು ಕಡೆ ತಿರುಗಿ ಏನೋ ಬರೆದು ನಮ್ಮತ್ತ ತಿರುಗಿದರು. ನಾವು ಬಿಟ್ಟ ರಾಕೆಟ್ ಸೀದಾ ಅವರ ಮೂಗಿನ ಮೇಲೆ ಬಿತ್ತು. ಎರಡು ವಾರ ಕಾಲೇಜಿನಿಂದ ಡಿಬಾರ್! ಪ್ರೈಮರಿ ಸ್ಕೂಲಿನಲ್ಲಿದ್ದಾಗ ಯಾರನ್ನಾದರೂ ಹೊಡೆಯುವುದಕ್ಕೆ ಮಾಸ್ಟರು ಕೋಲು ತರಲು ನನ್ನ ಕಳುಹಿಸಿದರೆ ವಾಪಸು ಶಾಲೆಗೆ ಬರುತ್ತಲೇ ಇರಲಿಲ್ಲ. ಬಂದರೂ ಅವರ ತರಗತಿ ಮುಗಿದಿರುತ್ತಿತ್ತು. ಒಂದು ಒಂದು ಸಲ ನನ್ನ ಹುಡುಕುವುದಕ್ಕೆ ಮತ್ತೊಬ್ಬ ಮಾಸ್ಟರನ್ನು ಕಳುಹಿಸುತ್ತಿದ್ದರು.

Write A Comment