ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿರುವ ರಾಜಮೌಳಿ ನಿರ್ದೇಶನದ ಬಾಹುಬಲಿ ಈಗ ಕಲೆಕ್ಷನ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ. ಈ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದ ಧೂಮ್ 3 ಚಿತ್ರವನ್ನು ಬ್ರೇಕ್ ಮಾಡಿದೆ.
ಜುಲೈ 10 ರಂದು ಬಿಡುಗಡೆಯಾಗಿದ್ದ ಬಾಹುಬಲಿ ಇದುವರೆಗೆ 545 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಧೂಮ್ 3ಯ ದಾಖಲೆಯನ್ನು ಬ್ರೇಕ್ ಮಾಡಿದೆ. 2013ರಲ್ಲಿ ಅಮೀರ್ ಖಾನ್ ಅಭಿನಯದ ಧೂಮ್ 3 ಒಟ್ಟು 543 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಸದ್ಯ ಭಾರತೀಯ ಚಿತ್ರರಂಗದಲ್ಲಿ ಪಿಕೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದರೆ, ಎರಡನೇ ಸ್ಥಾನದಲ್ಲಿ ಭಜರಂಗಿ ಭಾಯಿಜಾನ್ ಇದೆ. 2014ರ ಡಿಸೆಂಬರ್‍ನಲ್ಲಿ ಬಿಡುಗಡೆಯಾಗಿದ್ದ ಅಮೀರ್ ಖಾನ್, ಅನುಷ್ಕಾ ಶರ್ಮಾ ಅಭಿನಯದ ಪಿಕೆ ಒಟ್ಟು 735 ರೂ. ಕಲೆಕ್ಷನ್ ಮಾಡಿದ್ದರೆ, ಭಜರಂಗಿ ಭಾಯಿಜಾನ್ 565 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‍ನಲ್ಲಿ ಮುನ್ನುಗ್ಗುತ್ತಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಹೊರತು ಪಡಿಸಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಪಟ್ಟ ಬಾಹುಬಲಿಗೆ ಸಿಕ್ಕಿದೆ.
