ಗೂಳಿಹಟ್ಟಿ ಕಾಳಗದಲ್ಲಿ ಪಡ್ಡೆ ಹುಡುಗರ ಕೈಚಳಕವಿರುವ ಚಿತ್ರವಿದು. ಹಳ್ಳಿಯಲ್ಲಿ ಕಿತ್ತು ತಿನ್ನುವ ಬಡತನದ ನೋವನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳಲು ಮಾಯಾನಗರಿಗೆ ಬರುವ ಹಳ್ಳಿಯ ಪಡ್ಡೆಹೈಕಳು ರೌಡಿಸಂ ಕೂಪಕ್ಕೆ ಬಿದ್ದು ಹೇಗೆ ಬಲಿಯಾಗುತ್ತಾರೆ ಎಂಬ ಒಂದೆಳೆಯ ವಿಷಯ ಇಟ್ಟುಕೊಂಡು
ನಿರ್ದೇಶಕ ಶಶಾಂಕ್‌ರಾಜ್ ಗೂಳಿಹಟ್ಟಿ ಚಿತ್ರದ ಮೂಲಕ ರೌಡಿಸಂ ಒಳ್ಳೆಯದಲ್ಲ ಎಂಬ ಸಂದೇಶವನ್ನು ಭೀಕರವಾಗಿ ತೆರೆಯಮೇಲೆ ತಂದಿದ್ದಾರೆ. ಹಣ ಸಂಪಾದನೆ ಮಾಡಲು ಅಪ್ಪ-ಅಮ್ಮನ ಆಸೆಯಂತೆ ಬೆಂಗಳೂರಿಗೆ ಬರುವ ಗೂಳಿಹಟ್ಟಿ ಹುಡುಗ ಪಚ್ಚಿ (ಪವನ್) ನಾಲ್ವರು ಸ್ನೇಹಿತರೊಂದಿಗೆ ಡಾನ್ ಸತ್ಯನ ಜೊತೆ ಸೇರಿ ಡೀಲ್ ಮಾಡುವುದರಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಡಾಬಾದಲ್ಲಿ ಡ್ಯಾನ್ಸ್ ಮಾಡುವ ಡ್ಯಾನ್ಸರ್ ಒಬ್ಬಳ ಸ್ನೇಹ ಹಾಗೂ ಉಪದೇಶದಿಂದ ಎಲ್ಲರೂ ಬದಲಾಗಿ ಸ್ವಂತ ಹೊಟೇಲ್ ಪ್ರಾರಂಭಿಸುತ್ತಾರೆ. ಅದನ್ನು ಸಹಿಸದ ಡಾನ್ ಸತ್ಯ ಮರಳಿ ಅವರನ್ನು ತನ್ನ ಜೊತೆ ಬರುವಂತೆ ಒತ್ತಾಯಿಸಿ ವಿಫಲನಾಗುತ್ತಾನೆ. ಅಲ್ಲಿಂದ ಸಾವಿನ ಸರಮಾಲೆ ಪ್ರಾರಂಭವಾಗುತ್ತದೆ. ಸಿನಿಮಾದ ಎಲ್ಲಾ ಪಾತ್ರಗಳಲ್ಲೂ ಒಂದೊಂದು ರೀತಿಯಲ್ಲಿ ಏರುಪೇರುಗಳು ಉಂಟಾಗುತ್ತವೆ. ದ್ವಿತಿಯಾರ್ಧದಿಂದ ಪ್ರಾರಂಭವಾಗುವ ಸಾವಿನಾಟ ಕೊನೆಯ ಕ್ಷಣದವರೆಗೂ ಮುಂದುವರೆಯುವುದರಿಂದ ಪ್ರೇಕ್ಷಕ ಅಸಹಾಯಕತೆಯಿಂದ ನೋಡುವುದು ಅನಿವಾರ್ಯ. ರೌಡಿಗಳು ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಒಳ್ಳೆಯ ದಾರಿ
ಹಿಡಿದರೂ ಅದು ಹೆಚ್ಚು ಕಾಲ ಮುಂದುವರೆಯುವುದಿಲ್ಲ ಎಂಬುದನ್ನು ಭೀಕರವಾಗಿ ತೆರೆಯ ಮೇಲೆ ತೋರಿಸಲಾಗಿದೆ. ಪಡ್ಡೆಹೈಕಳ ಹುಡುಗಾಟಿಕೆ, ಪ್ರೀತಿ ಎಲ್ಲವೂ ಇರುವ ಈ ಚಿತ್ರವನ್ನು ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡಬಹುದು. ದಾರಿ ತಪ್ಪಿದ ಹುಡುಗರನ್ನು ಸರಿದಾರಿಗೆ ತರುವ ಪಾತ್ರದಲ್ಲಿ ಮಮತ ರಾಹುತ್ ಕಾಣಿಸಿಕೊಂಡಿದ್ದಾರೆ. ನಾಯಕ ಪವನಸೂರ್ಯ, ಸ್ನೇಹಿತರಾಗಿ ಮಹೇಶ್, ಅಪ್ಪುಸೂರ್ಯ, ಅಜಂತಾ ವೆಂಕಟೇಶ್, ರಾಘವ ಲವಲವಿಕೆಯಿಂದ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿ ತೇಜಸ್ವಿನಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಶರತ್ ಲೋಹಿತಾಶ್ವ ಹಾಗೂ ಆದಿ ಲೋಕೇಶ್ ಅಬ್ಬರಿಸಿದ್ದಾರೆ. ಋಷಿಕುಮಾರಸ್ವಾಮಿ ಹಾಡಿರುವ ಒಂದು ಹಾಡು ಇಷ್ಟವಾಗುತ್ತದೆ. ಛಾಯಾಗ್ರಾಹಕ ಆರ್.ವಿ.ನಾಗೇಶ್ವರರಾವ್ ಅವರ ಕ್ಯಾಮರ ಕೈಚಳಕ ಮೆಚ್ಚುವಂತಹದ್ದು. ನಿರ್ದೇಶಕ-ಶಶಾಂಕ್‌ರಾಜ್, ನಿರ್ಮಾಣ-ಭಾರ್ಗವ, ತಾರಾಗಣದಲ್ಲಿ-ಪವನ್‌ಸೂರ್ಯ, ತೇಜಸ್ವಿನಿ, ರಂಗಾಯಣ ರಘು, ದೊಡ್ಡಣ್ಣ, ಋಷಿ ಕುಮಾರಸ್ವಾಮಿ ಮೊದಲಾದವರು ಇದ್ದಾರೆ.