ಮನೋರಂಜನೆ

ಬಾಂಬೆ ಮಿಠಾಯಿ ಚಲನಚಿತ್ರ ವಿಮರ್ಶೆ; ಸ್ವಲ್ಪ ಸಿಹಿ; ಸ್ವಲ್ಪ ಎಲಾಸ್ಟಿಕ್

Pinterest LinkedIn Tumblr

bombay-mit

ಬೆಂಗಳೂರು: ಹಿರೋಯಿಸಂ ಸಿನೆಮಾಗಳಿಂದಲೇ ತುಂಬಿ ಹೋಗಿರುವ ಕನ್ನಡ ಚಲನಚಿತ್ರೋದ್ಯಮದಲ್ಲಿ, ಅದನ್ನು ಮೀರಲು ನಿರ್ದೇಶಕ ಚಂದ್ರಮೋಹನ್ ಪ್ರಯತ್ನಿಸಿದ್ದಾರೆ. ಆದರೆ ಇವರು ಹೆಣೆದಿರುವ ಕಥೆ ಹಿರೋ ಕೇಂದ್ರಿತ ಸಿನೆಮಾಗಳಿಗೆ ಸೆಡ್ಡು ಹೊಡೆಯುವಷ್ಟು ಸಶಕ್ತವಾಗಿದೆಯೇ? ಬಗೆ ಬಗೆ ವಿನ್ಯಾಸದ ಬಾಂಬೆ ಮಿಠಾಯಿಯಂತೆ ಈ ಸಿನೆಮಾ ಪ್ರೇಕ್ಷಕರಿಗೆ ಸಿಹಿಯಾಗಿದೆಯೇ?

ವಿಷ್ಣು (ವಿಕ್ರಮ್), ಶ್ಯಾಮ್(ದೇಶಪಾಂಡೆ), ಸುಂದರ(ಚಿಕ್ಕಣ್ಣ) ಗೆಳೆಯರು. ಇವರಿಗೆ ಇನ್ನೊಬ್ಬ ಸಿರಿವಂತ ಗೆಳೆಯ ರಾಕಿ. ಕಾರವಾರದಲ್ಲಿರುವ ರಾಕಿಯ ಹುಟ್ಟು ಹಬ್ಬ ಆಚರಿಸಲು ಇವೆರೆಲ್ಲರೂ ಬೆಂಗಳೂರಿನಿಂದ ತೆರಳುತ್ತಾರೆ. ಇವರ ಜೊತೆ ವಿಷ್ಣುವಿಗೆ ತನ್ನ ಗೆಳತಿಯೊಬ್ಬಳಿಂದ ಪರಿಚಯವಾದ ಬಾಂಬೆಯಿಂದ ಬಂದಿರುವ ಅದಿತಿ(ದಿಶಾ ಪಾಂಡೆ) ಕೂಡ ಸೇರಿಕೊಳ್ಳುತ್ತಾಳೆ. ಅದಿತಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕಿರುವುದರಿಂದ ಇವರ ಜೊತೆಗೂಡಿ ಹೊರಡುತ್ತಾಳೆ. ಇವರು ಕಾರವಾರ ತಲುಪುವಾಗ ನಡೆಯುವ ಚೇಷ್ಟೆಗಳೇ ಮೊದಲಾರ್ಧ. ಕಾರವಾರದಲ್ಲಿ ರಾಕಿ ಮನೆಗೆ ತಲುಪಿದ ಮೇಲೆ ಸಣ್ಣ ಜಗಳವಾಗಿ ಅಚಾತುರ್ಯವಾಗುತ್ತದೆ. ಆ ಜಗಳ ಏನು? ಅಚಾತುರ್ಯ ಏನು? ಮುಂದೇನಾಗುತ್ತದೆ? ಎಂಬುದೇ ಕಥೆ.

ಹಾಸ್ಯ ಎಂದರೆ ಹೆಚ್ಚು ಡಬಲ್ ಮೀನೀಂಗ್ ಜೋಕ್ಸ್ ಗಳನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಹೆಣೆದಿರುವ ಚಂದ್ರಮೋಹನ್ ತಮ್ಮ ಈ ಪ್ರಯತ್ನದಲ್ಲಿ ಸ್ವಲ್ಪ ಗಮನ ಸೆಳೆದರು, ಇನ್ನೂ ಪರಿಣಾಮಕಾರಿಯಾದ ಸ್ಕ್ರಿಪ್ಟ್ ಹೆಣೆಯಬಹುದಿತ್ತು ಎಂದೆನಿಸದೆ ಇರಲಾರದು. ಮೊದಲನೆಯ ಕೊರತೆ ಎದ್ದು ಕಾಣುವುದು ನಟರ ಎಸ್ಟಾಬ್ಲಿಶ್ಮೆಂಟ್ ನಲ್ಲಿ. ಸುಂದರ, ಬಾಳೆ ಮಂಡಿ ವ್ಯವಹಾರ ನಡೆಸುತ್ತಾನೆ ಹಾಗು ಮೂರೂ ಜನ ಗೆಳೆಯರು ಎಂಬುದನ್ನು ಬಿಟ್ಟರೆ ಉಳಿದ ನಟರ ಹಿನ್ನಲೆ ನಮಗೆ ತಿಳಿಯುವುದೇ ಇಲ್ಲ. ಇದರಿಂದ ಚಲನಚಿತ್ರದಲ್ಲಿ ಹುಟ್ಟುವ ಹಾಸ್ಯ ಸಾಂದರ್ಭಿಕವಾಗದೆ ಬರೀ ಮಾತಿನಲ್ಲೇ ಪ್ರಾರಂಭವಾಗಿ ಮಾತಿನಲ್ಲೇ ಮುಕ್ತಾಯವಾಗುತ್ತದೆ. ಮೊದಲಾರ್ಧವಿಡೀ ಅದಿತಿಯನ್ನು ಸೆಳೆಯಲು ಈ ಗೆಳೆಯರು ಪ್ರಯತ್ನಿಸುವುದರ ಸುತ್ತಲೇ ನಡೆದು ಅವರು ಕಾರವಾರಕ್ಕೆ ನಡೆಸುವ ಪ್ರಯಾಣದಲ್ಲಿ ಈ ಹಾಸ್ಯ ಮಿಶ್ರಿತ ಸಂಭಾಷಣೆಗಳು ಪ್ರೇಕ್ಷಕರನ್ನು ಅಲ್ಲಲ್ಲಿ ನಗಿಸುತ್ತವೆ. ಈ ಚಲನಚಿತ್ರ ಬಹುತೇಕ ನಡೆಯುವುದು ರಸ್ತೆಯಲ್ಲಾದರೂ, ನಟರ ನಡುವಿನ ಸಂಬಂಧಗಳಲ್ಲಿ ಅಷ್ಟೇನೂ ಮಹತ್ತ್ವದ ಬೆಳವಣಿಗೆ ಕಂಡುಬರುವುದಿಲ್ಲವಾದ್ದರಿಂದ ಇದನ್ನು ‘ರೋಡ್ ಸಿನೆಮಾ’ ವಿಭಾಗಕ್ಕೆ ಸೇರಿಸಿವುದು ತುಸು ಕಷ್ಟವೇ! ಅಲ್ಲಲ್ಲಿ ನಿಲ್ಲಿಸಿ ಕರ್ನಾಟಕದ ಪ್ರೇಕ್ಷಣಿಯ ಪ್ರದೇಶಗಳಾದ ಶ್ರೀರಂಗಪಟ್ಟಣ, ಬೈಲುಕೊಪ್ಪ, ಗೋಕರ್ಣ ಬೀಚ್ ಮುಂತಾದ ಪ್ರದೇಶಗಳನ್ನು ನೋಡುವ ಸೌಭಾಗ್ಯ ಪ್ರೇಕ್ಷಕನಿಗೆ ಸಿಗುತ್ತದೆ. ಬೈಲುಕೊಪ್ಪದ ಇತಿಹಾಸವನ್ನು ಈ ಗೆಳೆಯರಿಗೆ ನಟಿ ವಿವರಿಸುವ ಬೋಧನೆಯು ಕೂಡ ಸಿನೆಮಾ ಒಳಗೊಂಡಿದೆ. ಇವರು ರಾಕಿಯ ಮನೆಗೆ ತಲುಪಿ ಹುಟ್ಟುಹಬ್ಬದ ಔತಣಕೂತದ ನಂತರ ನಡೆಯುವ ಒಂದು ಅಚಾತುರ್ಯದಿಂದ ದ್ವಿತೀಯಾರ್ಧದಲ್ಲಿ ಸಿನೆಮಾ ಒಂದು ರೀತಿಯ ಗಂಭೀರತೆ ಪಡೆಯುತ್ತದೆ. ಇಲ್ಲೂ ಕೂಡ ಈ ಗಂಭೀರತೆಯಲ್ಲಿ ಈ ಗೆಳೆಯರ ನಡುವೆ ಬರಬಹುದಾದ ಉದ್ವಿಘ್ನತೆ, ಘರ್ಷಣೆ, ಭಿನ್ನಾಭಿಪ್ರಾಯ ಈ ಯಾವುದನ್ನು ಸೆರೆ ಹಿಡಿಯುವ ಪ್ರಯತ್ನ ಅಷ್ಟಾಗಿ ಆಗಿಲ್ಲ. ಇಡೀ ಸಿನೆಮಾದುದ್ದಕ್ಕೂ ಎಲ್ಲವೂ ಸುಗಮವಾಗಿಯೇ ಸಾಗುತ್ತಿದೆ ಎಂಬ ಭಾವನೆ ಪ್ರೇಕ್ಷಕನಲ್ಲಿ ಗಟ್ಟಿಯಾಗಿ ನಿಂತುಬಿಡುತ್ತದೆ. ದ್ವಿತೀಯಾರ್ಧದಲ್ಲಿ ಬುಲೆಟ್ ಪ್ರಕಾಶ್ ಆಗಮನವಾದರೂ ಅವರು ತಮ್ಮ ಹಾಸ್ಯದಿಂದ ಕಚಗುಳಿ ನೀಡುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ. ಆದರೆ ಗೆಳೆಯರಿಬ್ಬರು ಪೋಲಿಸರಿಂದ ತಪ್ಪಿಸಿಕೊಂಡು ಹೋಗುವಾಗ ಕಾರಿನಲ್ಲಿ ಡ್ರಾಪ್ ಪಡೆಯುವ ಅಜ್ಜಿ(ಕಿಶೋರಿ ಬಲ್ಲಾಳ್) ತಮ್ಮ ಅಲ್ಪಾವಧಿ ನಟನೆಯಲ್ಲಿ ತಮ್ಮ ಸಂಬಂಧಿಗಳ ವಿವಿಧ ಸಾವಿನ ವೃತ್ತಾಂತಗಳನ್ನು ಹೇಳುತ್ತ ನಗೆಯಲೆ ಉಕ್ಕಿಸುತ್ತಾರೆ. ಸುಖಾಂತ್ಯವನ್ನು ನೀಡುವ ನಿಟ್ಟಿನಲ್ಲಿ ನಿರ್ದೇಶಕರು ಬಹಳ ಪೇವಲವಾಗಿ ಸಿನೆಮಾವನ್ನು ಮುಗಿಸಿಬಿಡುತ್ತಾರೆ. ಇನ್ನು ಸ್ವಲ್ಪ ಹೆಚ್ಚಿನ ಪರಿಶ್ರಮವಿದ್ದರೆ ಹೀರೋ ಕೇಂದ್ರಿತ ಸಿನೆಮಾಗಳಿಗಿ ಸೆಡ್ಡು ಹೊಡೆದು ಗಟ್ಟಿಯಾಗಿ ನಿಲ್ಲಬಹುದಾಗಿದ್ದ ಶಕ್ತಿಯುಳ್ಳ ಸಿನೆಮಾವಾಗಬಹುದಿತ್ತೇನೋ! ವಿಕ್ರಮ್, ದೇಶಪಾಂಡೆ,ಚಿಕ್ಕಣ್ಣ ಮತ್ತು ದಿಶಾ ಪಾಂಡೆ ಅವರ ನಟನೆ ಇನ್ನೂ ಮಾಗಬಹುದಿತ್ತು. ದಿಶಾ ಪಾಂಡೆಯವರ ಗ್ಲ್ಯಾಮರ್ ಮತ್ತು ನೃತ್ಯ ಯುವಕರನ್ನು ಸೆಳೆಯುತ್ತದೆ! ಇನ್ನುಳಿದಂತೆ ವೀರ ಸಮರ್ಥ ಅವರ ಸಂಗೀತ ಸಾಧಾರಣ. ಒಂದೆರಡು ಹಾಡುಗಳು ಕೇಳುವಂತಿವೆ. ಕೆಲವು ಹಾಡುಗಳಲ್ಲಿ ಒಳ್ಳೆಯ ಡ್ಯಾನ್ಸ್ ಇದೆ. ಪ್ರೇಕ್ಷಣೀಯ ಸ್ಥಳಗಳನ್ನು ಸೆರೆಹಿಡಿಯುವ ಲಾಂಗ್ ಶಾಟ್ ಗಳಲ್ಲಿ ಸಿನೆಮಾಟೋಗ್ರಾಫರ್ ಉತ್ತಮ ಕೆಲಸ ಮಾಡಿದ್ದಾರೆ.

ಹುಡುಗಿ ಬೊಂಬೆಯ ಲಂಗದಿಂದ ಎಳೆದೆಳೆದು ತೆಗೆಯುವ ಬಾಂಬೆ ಮಿಠಾಯಿ ಒಂದು ಕಾಲಕ್ಕೆ ಬಹಳ ಪ್ರಸಿದ್ಧಿ. ಇದೆ ರೂಪಕದಲ್ಲಿ ನಾಯಕನಟಿಯ ಉಡುಗೆ ತೊಡುಗೆಗೆ ಆಕರ್ಷಿತರಾಗಿ ಗೆಳೆಯರ ನಡುವೆ ಉಂಟಾಗಬಹುದಾದ ಅವಾಂತರಗಳು, ಪ್ರೀತಿ ಹಾಗೂ ಒಂದು ಪ್ರಯಾಣವನ್ನು ಸೃಷ್ಟಿಸಲು ನಿರ್ದೇಶಕ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ಬಾಬೆ ಮಿಠಾಯಿಯಲ್ಲಿ ವಿಧ ವಿಧದ ಗೊಂಬೆಗಳನ್ನು ಮಾಡಿ ತಿನ್ನಲು ಮಾರುತ್ತಾರೆ. ಏರೋಪ್ಲೇನ್ ಮಿಠಾಯಿ ಅತಿ ಹೆಚ್ಚಿನ ಬೆಲೆಯದ್ದು, ಕೈಗಡಿಯಾರ ಅತಿ ಕಡಿಮೆ ಬೆಲೆಯದ್ದು. ನಕ್ಲೇಸ್ ಮಿಠಾಯಿ ಮಧ್ಯಮದ್ದು. ಇಲ್ಲಿ ಚಂದ್ರಮೋಹನ್ ಏರೋಪ್ಲೇನ್ ಮಾಡಲು ಸಾಧ್ಯವಾಗದೆ, ಅಥವಾ ಕೈಗಡಿಯಾರವನ್ನು ಮಾಡದೆ ನೆಕ್ಲೇಸ್ ಮಾಡಿದ್ದಾರೆ. ಸಾಧಾರಣ ಯಶಸ್ಸು ಕಂಡಿದ್ದಾರೆ. ಒಮ್ಮೆ ಮಿಠಾಯಿಯ ರುಚಿ ನೋಡಬಹುದು!

Write A Comment