ಮನೋರಂಜನೆ

ಮೊಮ್ಮಗ ವಿನಯ್‌ ರಾಜಕುಮಾರ್‌ನ ಕಣ್ಣಲ್ಲಿ ತಾತ ರಾಜಕುಮಾರ್‌

Pinterest LinkedIn Tumblr

psmec24-raj_0

-ಗಣೇಶ್‌ ವೈದ್ಯ
ವರನಟ ರಾಜಕುಮಾರ್ ಅವರ ಹುಟ್ಟುಹಬ್ಬ (ಏಪ್ರಿಲ್ 24) ಎಂದರೆ ‘ಅಭಿಮಾನಿ ದೇವರು’ಗಳಿಗೆ ಹಬ್ಬ. ಇಡೀ ಜೀವನವನ್ನೇ ಆದರ್ಶವೆಂಬಂತೆ ಬದುಕಿದ ‘ಅಣ್ಣಾವ್ರು’ ತಮ್ಮ ಸಿನಿಮಾಗಳಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪ್ರೇರಣೆಯಾದವರು.
ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಈ ದಿನವನ್ನು ಸ್ಮರಿಸಿದರೆ, ‘ಸಿದ್ಧಾರ್ಥ’ ಚಿತ್ರದ ಮೂಲಕ ಇತ್ತೀಚೆಗಷ್ಟೇ ಸಿನಿಮಾರಂಗಕ್ಕೆ ಕಾಲಿರಿಸಿದ ರಾಜಕುಮಾರ್ ಅವರ ಮೊಮ್ಮಗ, ಈ ವಂಶದ ಮೂರನೇ ಕುಡಿ ವಿನಯ್‌ ರಾಜಕುಮಾರ್‌ಗೆ ತಾತನ ಇದುವರೆಗಿನ ಹುಟ್ಟುಹಬ್ಬಕ್ಕಿಂತ ಈ ಬಾರಿಯ ಹುಟ್ಟುಹಬ್ಬ ಸ್ವಲ್ಪ ಭಿನ್ನವೆನಿಸಿದೆ. ಏಕೆಂದರೆ ವಿನಯ್ ಅಭಿನಯದ ಎರಡನೇ ಚಿತ್ರದ ಶೀರ್ಷಿಕೆ ಘೋಷಣೆ ಆಗುತ್ತಿರುವುದು ಇಂದು. ಈ ನೆಪದಲ್ಲಿ ತಾತನ ಜೊತೆ ಕಳೆದ ತಮ್ಮ ಬಾಲ್ಯದ ದಿನಗಳನ್ನು ವಿನಯ್ ನೆನೆಸಿಕೊಂಡಿದ್ದು ಹೀಗೆ…

ಏಪ್ರಿಲ್ 24 ಎಂದರೆ ವಿನಯ್‌ಗೆ ನೆನಪಾಗುವುದು ತಾತ. ಅವರು ತೀರಿಕೊಂಡಾಗ ವಿನಯ್‌ಗೆ ಹದಿನಾರು–ಹದಿನೇಳು ವರ್ಷ. ಅಂದರೆ ತಾತನೊಡನೆ ಅವರ ಒಡನಾಟ ಕಡಿಮೆಯೇನಲ್ಲ. ಪ್ರತಿದಿನ ಶಾಲೆಗೆ ಅಥವಾ ಎಲ್ಲೇ ಹೊರಗೆ ಹೋಗುವಾಗ ತಾತನಿಗೆ ಹೇಳಿಯೇ ಹೋಗುವುದು ವಿನಯ್ ರೂಢಿಯಾಗಿತ್ತು. ಮನೆಗೆ ಬಂದ ನಂತರ ತಾತನ ಪಕ್ಕದಲ್ಲಿ ಕೂತು ಹರಟೆ ಹೊಡೆಯುವುದು ಮಾಮೂಲಾಗಿತ್ತು. ಎಲ್ಲೆಲ್ಲಿ ಸುತ್ತಿ ಬಂದೆ, ಹೊರಗಡೆ ಏನು ತಿಂದೆ, ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದೆ– ಇದು ತಾತನ ಕುಶಲೋಪರಿ. ಹೀಗೆ ಟಿಪಿಕಲ್ ತಾತ–ಮೊಮ್ಮಗನ ಸಂಬಂಧ ಅವರದು.

ಟ್ಯೂಷನ್‌ ಹೇಳಿಕೊಟ್ಟ ತಾತ
ಶಾಲೆಯಿಂದ ಬಂದ ವಿನಯ್ ಮತ್ತೆ ಟ್ಯೂಷನ್‌ಗೆ ಹೋಗಬೇಕಿತ್ತು. ಒಮ್ಮೊಮ್ಮೆ ಟ್ಯೂಷನ್ ಬೇಡವೆನಿಸಿದಾಗ ಅವರು ತಾತನ ಮಡಿಲು ಸೇರಿಬಿಡುತ್ತಿದ್ದರು. ಆಗ ತಾತನ ಜೊತೆಯಿರುವ ಮಗನನ್ನು ಕರೆಯಲು ಅಮ್ಮನಿಗೂ ಭಯ. ಹಾಗೊಮ್ಮೆ ಅಮ್ಮ ಕರೆದರೂ, ‘ಈಗಷ್ಟೇ ಶಾಲೆ ಮುಗಿಸಿಕೊಂಡು ಬಂದಿದ್ದಾನೆ. ಮತ್ತೆ ಇನ್ನೊಂದು ಶಾಲೆಗೆ ಕಳಿಸುವುದೇಕೆ’ ಎಂದು ತಾತನೂ ಮೊಮ್ಮಗನ ಪಕ್ಷವೇ. ಹಾಗೇ ಕೆಲವೊಮ್ಮೆ ಟ್ಯೂಷನ್ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ವತಃ ರಾಜಕುಮಾರ್ ಅವರೇ ಬಂದು ಕನ್ನಡ ಪದ್ಯಗಳನ್ನು ಹೇಳಿಕೊಡುತ್ತಿದ್ದದ್ದೂ ಉಂಟು.

ರಾಜಕುಮಾರ್ ಅವರು ಮನೆಯಲ್ಲಿರುವಾಗ ಮೊಮ್ಮಕ್ಕಳಿಗೆಲ್ಲ ನಾಟಕದ ಕಥೆ ಹೇಳುತ್ತಿದ್ದರು. ಅವರಿಗಾಗಿ ಹಾಡುಗಳನ್ನು ಹಾಡಿ ತೋರಿಸುವಾಗ, ಶ್ಲೋಕಗಳನ್ನು ಪಠಿಸುವಾಗ ತಾತನ ಜೊತೆ ಮೊಮ್ಮಕ್ಕಳೆಲ್ಲ ದನಿಗೂಡಿಸುವುದು ಸಾಮಾನ್ಯವಾಗಿತ್ತು.
‘ತಾತ ಮನೆಯಲ್ಲಿದ್ದಾಗ ಹೆಚ್ಚಾಗಿ ಇಂಗ್ಲಿಷ್ ಆ್ಯಕ್ಷನ್ ಚಿತ್ರಗಳನ್ನು ನೋಡುತ್ತಿದ್ದರು. ಆಗೆಲ್ಲ ನಮ್ಮನ್ನೂ ಜೊತೆಗೆ ಕೂರಿಸಿಕೊಳ್ಳುತ್ತಿದ್ದರು. ಅವರಿಗೆ ಬಾಂಡ್ ಚಿತ್ರಗಳೆಲ್ಲ ತುಂಬಾ ಹಿಡಿಸುತ್ತಿದ್ದವು’ ಎಂದು ನೆನಪಿನ ಪಟಲವನ್ನು ಉಜ್ಜುತ್ತಾರೆ ವಿನಯ್. ತಾತ ಮೊಮ್ಮಗನ ನಡುವೆ ಸಿನಿಮಾ–ನಟನೆ ಬಗ್ಗೆ ಹೆಚ್ಚಾಗಿ ಮಾತುಕತೆಗಳಿರದಿದ್ದರೂ ‘ಚೆನ್ನಾಗಿ ಹಾಡುವುದನ್ನು ಕಲಿ’ ಎಂದು ತಾತ ಹೇಳುತ್ತಿದ್ದರಂತೆ.

ವಿನಯ್‌ಗೆ ತಾತನ ಎಲ್ಲ ಚಿತ್ರಗಳು ಇಷ್ಟವೇ ಆದರೂ ತೀರಾ ಇಷ್ಟಪಡುವ, ತಕ್ಷಣಕ್ಕೆ ನೆನಪಾಗುವ ನಾಲ್ಕೈದು ಚಿತ್ರಗಳನ್ನು ಪಟ್ಟಿ ಮಾಡಿ ಎಂದರೆ ‘ಮಯೂರ’, ‘ಭಕ್ತಕುಂಬಾರ’, ‘ವೀರಕೇಸರಿ’ ಚಿತ್ರಗಳನ್ನು ಹೆಸರಿಸುತ್ತಾರೆ. ತಾತನ ಜೊತೆ ತಾನೂ ಅಭಿನಯಿಸಿದ್ದು ವಿನಯ್‌ಗೆ ಹೆಮ್ಮೆಯ ವಿಚಾರ. ಅದು ‘ಒಡಹುಟ್ಟಿದವರು’ ಚಿತ್ರದಲ್ಲಿ ರಾಜಕುಮಾರ್ ಅವರ ಮಗನಾಗಿ. ಆಗ, ‘ಮನೆಯಲ್ಲಿ ತಾತ ಎನ್ನುತ್ತಿದ್ದವನು ಇಲ್ಲಿ ನೋಡಿ ಅಪ್ಪ ಎನ್ನುತ್ತಾನೆ’ ಎಂದಿದ್ದರಂತೆ ರಾಜಕುಮಾರ್.

ತಾತ ತೋರಿದ ಜೀವನ ಪಾಠ
‘ತಾತ ಎಷ್ಟೇ ಜನಪ್ರಿಯರಾಗಿದ್ದರೂ ತುಂಬ ಸರಳವಾಗಿಯೇ ಬದುಕಿದ್ದವರು. ಮೊಮ್ಮಕ್ಕಳನ್ನೆಲ್ಲ ಸಮಾನವಾಗಿ ಕಾಣುತ್ತಿದ್ದರು. ಯಾರನ್ನೂ ಏಕವಚನದಿಂದ ಮಾತನಾಡಿಸಿದ್ದು ನಾನು ನೋಡಿಯೇ ಇಲ್ಲ. ಕೆಲಸದವರನ್ನೂ ಗೌರವಯುತವಾಗಿಯೇ ನಡೆಸಿಕೊಳ್ಳುವ ಪರಿಪೂರ್ಣ ವ್ಯಕ್ತಿತ್ವ ಅವರದಾಗಿತ್ತು. ಅವೆಲ್ಲ ನನ್ನನ್ನೂ ಪ್ರೇರೇಪಿಸಿದ ಗುಣಗಳು’ ಎನ್ನುತ್ತಾರೆ ವಿನಯ್. -‘ತಾತ ಎಂದಿಗೂ ನನ್ನ ನೆನಪಿನಲ್ಲೇ ಇರುತ್ತಾರೆ. ಅವರ ಪ್ರೀತಿ ಮಮತೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎನ್ನುವ ವಿನಯ್‌ಗೆ, ತಾತ ಬದುಕಿದ್ದಾಗ ಅವರ ಹುಟ್ಟುಹಬ್ಬಕ್ಕೆ ಹೊಸಬಟ್ಟೆಗಳನ್ನು ಕೊಳ್ಳುವುದು, ಸ್ನೇಹಿತರ ಮನೆಗೆ ಕರೆದುಕೊಂಡು ಹೋಗುತ್ತಿದ್ದುದು ಎಲ್ಲವೂ ಇನ್ನೂ ಹಸಿರು ಹಸಿರು.

Write A Comment