ಬಹು ಭಾಷಾ ನಟಿ ಮನಿಷಾ ಕೊಯಿರಾಲ ಕನ್ನಡಕ್ಕೆ ಬರುವುದೊಂದು ಬಾಕಿ ಉಳಿದಿತ್ತು. ಎ.ಎಂ.ಆರ್. ರಮೇಶ್ ನಿರ್ದೇಶನದ ‘ಗೇಮ್’ ಮೂಲಕ ಅದೂ ಈಡೇರಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ‘ಚಂದನವನ’ಕ್ಕೆ ಅವರು ನೀಡಿದ ಸಂದರ್ಶನ ಇಲ್ಲಿದೆ.
ಹಿಂದಿ, ನೇಪಾಳಿ, ತೆಲುಗು, ತಮಿಳು, ಮಲಯಾಳಂ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೀರಿ. ಇಷ್ಟು ದಿನ ಅವಕಾಶ ಸಿಕ್ಕಿರಲಿಲ್ಲವೇ?
ಯಾರೂ ನನಗೆ ಆಹ್ವಾನ ಕೊಟ್ಟಿರಲಿಲ್ಲ. ಹೀಗಾಗಿ ಕನ್ನಡಕ್ಕೆ ಬರುವುದು ಬಾಕಿ ಉಳಿದಿತ್ತು. ನಿರ್ದೇಶಕ– ನಿರ್ಮಾಪಕರು ಭೇಟಿಯಾಗಿ, ‘ಗೇಮ್’ನಲ್ಲಿ ಅಭಿನಯಿಸಲು ಕೇಳಿದರು. ದಕ್ಷಿಣ ಭಾರತದ ಮೂರು ಭಾಷೆಗಳ ಸಿನಿಮಾಗಳ ಬಳಿಕ ಕನ್ನಡಕ್ಕೆ ಬರುತ್ತಿರುವುದು ಖುಷಿ ಕೊಡುತ್ತಿದೆ.
‘ಗೇಮ್’ನಲ್ಲಿ ನಿಮ್ಮನ್ನು ಸೆಳೆದಿದ್ದು ಏನು?
ಮುಖ್ಯವಾಗಿ ಚಿತ್ರಕಥೆ ಹಾಗೂ ನನ್ನ ಪಾತ್ರ. ಇದರಲ್ಲಿ ನಾನು ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ತುಂಬ ಗಟ್ಟಿ ಪಾತ್ರ ಅದು. ವಿಭಿನ್ನ ಕಥೆಗೆ ವಿಶಿಷ್ಟ ಪಾತ್ರ ಸಿಕ್ಕರೆ ಹೇಗಿದ್ದೀತು? ‘ಗೇಮ್’ ಅಂಥದೊಂದು ವಿಶೇಷ ಚಿತ್ರ.
ಬಾಲಿವುಡ್‌ನಲ್ಲಿ ಏನೇನು ನಡೀತಿದೆ?
ಅವಕಾಶಗಳು ಸಾಕಷ್ಟಿವೆ. ಆದರೆ ಆಯ್ಕೆಯಲ್ಲಿ ವಿಚಾರ ಮಾಡುತ್ತೇನೆ. ಕಳೆದ ವರ್ಷ ಯಾವ ಸಿನಿಮಾ ಕೂಡ ತೆರೆ ಕಂಡಿಲ್ಲ. ಈ ಅಂತರದಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ಇನ್ನು ಮೂರು ಚಿತ್ರಗಳು ನಿರ್ಮಾಣದ ಹಂತದಲ್ಲಿವೆ. ನಿರ್ದೇಶನಕ್ಕೂ ಆಹ್ವಾನ ಬಂದಿದೆ.
ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಮಧ್ಯೆ ಕಂಡ ವ್ಯತ್ಯಾಸವೇನು?
ಅಲ್ಲಿನ ಕಾರ್ಯವೈಖರಿಗೂ ಇಲ್ಲಿಗೂ ತೀರಾ ಭಿನ್ನತೆ ಇದೆ! ಗುಣಮಟ್ಟದ ವಿಷಯಕ್ಕೆ ಬಂದಾಗ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ನಾನು ಗಮನಿಸಿದ ಒಂದು ಸಂಗತಿ ಎಂದರೆ, ಇಲ್ಲಿ ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಶ್ರಮವಹಿಸಿ ಎಲ್ಲರೂ ಕೆಲಸ ಮಾಡುತ್ತಾರೆ. ಎರಡೂ ಕಡೆಗಳಲ್ಲಿ ಕೆಲಸ ಮಾಡಿರುವ ಅನುಭವ ನನಗೆ ಸಿಕ್ಕಿರುವುದು ಅದೃಷ್ಟ.
ಕನ್ನಡ ಸಿನಿಮಾಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ಇಲ್ಲಿನ ಚಿತ್ರರಂಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಪ್ರತಿಭಾವಂತರ ತಾಣ ಇದು. ಹೊಸಬರು ವಿಭಿನ್ನ ರೀತಿಯ ಸಿನಿಮಾ ಮಾಡುತ್ತಿದ್ದಾರೆ. ಅಂಥ ಸಿನಿಮಾಗಳು ಯಶಸ್ವಿಯಾಗಿರುವುದು ಒಳ್ಳೆಯ ಬೆಳವಣಿಗೆ. ಈಗ ಈ ಚಿತ್ರರಂಗಕ್ಕೆ ಬಂದು ನಾನು ಗಮನಿಸಿರುವುದು, ಇಲ್ಲಿನವರ ಶಿಸ್ತು! ಅದಂತೂ ನನಗೆ ಹೆಚ್ಚು ಇಷ್ಟವಾಗಿದೆ.
ಹೊಸ ತಲೆಮಾರಿನ ನಿರ್ದೇಶಕರ ಬಗ್ಗೆ ಏನನ್ನಿಸುತ್ತದೆ?
ಆಗಿನ ದಿನಕ್ಕೂ ಈಗಿನ ಸಮಯಕ್ಕೂ ಕೆಲಸದ ಶೈಲಿ ಬದಲಾಗಿಬಿಟ್ಟಿದೆ. ಹೊಸಬರು ಒಳ್ಳೊಳ್ಳೆ ಕಥೆ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದಾರೆ. ನಿರೂಪಣೆಯಲ್ಲಿ ಹೊಸತನ ಕಾಣುತ್ತಿದೆ. ಅದಕ್ಕೆ ತಂತ್ರಜ್ಞಾನದ ನೆರವು ಸಾಕಷ್ಟಿದೆ. ಹೀಗಾಗಿ ಸಿನಿಮಾ ಮಾಡುವ ಬಗೆಯಲ್ಲಿ ಸಾಕಷ್ಟು ಹೊಸತನ ಕಾಣಿಸುತ್ತಿದೆ.
ಮಣಿರತ್ನಂ ನಿರ್ದೇಶನದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಿರಿ. ಅವರ ಬಗ್ಗೆ..?
ಓಹ್! ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ! ಸದಾ ಶಿಸ್ತು ಪಾಲಿಸುವ ಅದ್ಭುತ ನಿರ್ದೇಶಕ ಅಂತಷ್ಟೇ ಹೇಳಬಲ್ಲೆ! ಅವರ ಚಿತ್ರಗಳಲ್ಲಿ ಅಭಿನಯಿಸಲು ಅದೃಷ್ಟ ಮಾಡಿರಬೇಕು. ನನ್ನನ್ನು ಚಿತ್ರರಸಿಕರು ಗುರುತಿಸುವುದು ಮಣಿರತ್ನಂರ ‘ಬಾಂಬೆ’ ಹಾಗೂ ‘ದಿಲ್‌ಸೇ’ ಚಿತ್ರಗಳ ಮೂಲಕ. ಅಂಥ ಮಹಾನ್ ನಿರ್ದೇಶಕನ ಸಿನಿಮಾಗಳಲ್ಲಿ ನಾನು ಕಾಣಿಸಿಕೊಂಡಿದ್ದೆ ಎಂಬುದೇ ನನಗೆ ಹೆಮ್ಮೆ ಅನಿಸುತ್ತದೆ.
ಸಿನಿಮಾಗಳ ಹೊರತಾಗಿ ಮತ್ತಾವ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೀರಿ?
ಮಹಿಳಾ ಹಕ್ಕುಗಳ ಬಗ್ಗೆ ನಡೆಯುವ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದೇನೆ. ಮಹಿಳೆಯರ ಮೇಲಿನ ಹಿಂಸೆಗಳನ್ನು ತಡೆಯಲು ನಡೆಯುತ್ತಿರುವ ಜಾಗೃತಿ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೂ ಇಂಥವೇ ಒಂದಷ್ಟು ಕ್ರಿಯಾಶೀಲ ಚಟುವಟಿಕೆಗಳಲ್ಲಿ ಇದ್ದೇನೆ.