ಮನೋರಂಜನೆ

ಕನ್ನಡ ಚಿತ್ರ: ಮಳೆ ನಿಲ್ಲುವವರೆಗೂ: ತಾಳ್ಮೆ ಇರಲಿ

Pinterest LinkedIn Tumblr

male

* ಮಹಾಬಲೇಶ್ವರ ಕಲ್ಕಣಿ

ಕನ್ನಡ ಬೆಳ್ಳಿ ಪರದೆ ಸಾಕಷ್ಟು ಮಳೆ ಕಂಡಿದೆ. ಬಹುತೇಕ ಮಳೆ ಚಿತ್ರಗಳು ಪ್ರೀತಿ, ಪ್ರೇಮದ ಸುತ್ತಲೇ ಸುತ್ತಿವೆ. ಆದರೆ ‘ಮಳೆ ನಿಲ್ಲುವವರೆಗೂ’ ಚಿತ್ರದಲ್ಲಿ ನಟ, ನಿರ್ದೇಶಕ ಮೋಹನ್ ಮಳೆಯನ್ನು ಹಾರರ್ ಚಿತ್ರಕ್ಕೆ ವಸ್ತುವನ್ನಾಗಿ ಬಳಸಿಕೊಂಡಿದ್ದಾರೆ.

ನಾಯಕ ಖಾಸಗಿ ಕಂಪನಿಯ ಕೆಲಸಗಾರ. ತನ್ನ ಕಂಪನಿ ಮಾಲೀಕನ ಹೆಂಡತಿಯನ್ನೇ ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಮಾಲೀಕನ ಸಾವಿಗೆ ಬಲೆ ಹೆಣಿಯುತ್ತಾನೆ. ಗಂಡನಿಂದ ಯಾವ ಸುಖವನ್ನೂ ಪಡೆಯದ ನಾಯಕಿ (ಕವಿತಾ ಬೋರಾ) ಪತಿಯಿಂದ ವಿಮುಕ್ತಿ ಪಡೆಯಲು ನಾಯಕನಿಗೆ ಸಾಥ್ ನೀಡಿ ಹೃದಯಾಘಾತದಿಂದ ಸಾಯುವಂತೆ ಮಾಡುತ್ತಾರೆ. ಇದನ್ನು ಪತ್ತೆ ಹಚ್ಚಲು ಮಾಲೀಕನ ಅಪ್ಪ (ದತ್ತಣ್ಣ) ಉಪಾಯ ಮಾಡುತ್ತಾನೆ. ಮಳೆಗಾಲದ ಒಂದು ದಿನ ಒಂಟಿ ಮನೆಯೊಂದರಲ್ಲಿ ನಾಯಕನನ್ನು ತನ್ನ ಬೋನಿನಲ್ಲಿ ಕೆಡವಿಕೊಳ್ಳುತ್ತಾನೆ. ಕೋರ್ಟ್ ರೂಪದ ಹೊಸದೊಂದು ಆಟವಾಡೋಣವೆಂದು, ಮನೆಯನ್ನೇ ಕೋರ್ಟ್ ಮಾದರಿಯಾಗಿ ಪರಿವರ್ತಿಸಿ, ನಾಯಕನನ್ನು ವಿಚಾರಣೆ ಮಾಡಲು ಪ್ರಾರಂಭಿಸುತ್ತಾನೆ. ದತ್ತಣ್ಣನಿಗೆ ಇನ್ನೂ ಐದು ಜನ ಸ್ನೇಹಿತರು ಇದಕ್ಕೆ ಸಹಕಾರಿ ಆಗುತ್ತಾರೆ. ವಿಚಾರಣೆ ವೇಳೆ ನಾಯಕ ಅಪರಾಧಿ ಎನ್ನುವುದು ಸಾಬೀತಾಗಿ, ಗಲ್ಲಿಗೇರಿಸಬೇಕೆಂಬ ನಿರ್ಣಯಕ್ಕೆ ಬರಲಾಗುತ್ತದೆ. ಇದಕ್ಕೆ ಹೆದರಿದ ನಾಯಕ, ಒಂಟಿ ಮನೆ ಬಿಟ್ಟು ಓಡುತ್ತಿರುವಾಗ ಕಾಲು ಜಾರಿ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಇದು ಚಿತ್ರದ ಕತೆ.

ಚಿತ್ರಕ್ಕೆ ಇಂಗ್ಲಿಷಿನ ‘ಫ್ಲೇರ್ ಗೇಮ್ಸ್’ ಎಂಬ ನಾಟಕ ಸ್ಫೂರ್ತಿಯಂತೆ. ನಿರ್ದೇಶಕ ಮೋಹನ್, ಸ್ಫೂರ್ತಿ ಪಡೆದು ಚಲನಚಿತ್ರ ಮಾಡುವ ಬದಲು ಮತ್ತೇ ನಾಟಕವನ್ನೇ ಮಾಡಿದ್ದಾರೆ. ಚಿತ್ರ ಮಾಡುವ ಬದಲಿಗೆ ರಂಗಭೂಮಿಗೆ ಇದನ್ನು ಅಳವಡಿಸಿದ್ದರೆ ಇನ್ನಷ್ಟು ತೂಕ ಬರುತಿತ್ತು. ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದತ್ತಣ್ಣ, ಲೋಹಿತಾಶ್ವ, ಗಿರಿರಾಜ್, ಸುರೇಶ್ ಅಭಿನಯಕ್ಕೆ ಹೆಚ್ಚು ಅವಕಾಶ ಸಿಕಿಲ್ಲ. ಬಹುತೇಕರು ಸಂಭಾಷಣೆಯಲ್ಲೇ ಕಳೆದು ಹೋಗುತ್ತಾರೆ. ತಕ್ಕಮಟ್ಟಿಗೆ ಸಂಭಾಷಣೆ ಗೆಲ್ಲುತ್ತದೆ.ಆದರೆ ಮನರಂಜನೆಗೆ ತೀವ್ರ ಬರಗಾಲ.

ಪ್ರಸಾದ್ ಬಾಬು ಕ್ಯಾಮೆರಾದಲ್ಲಿ ಮಲೆನಾಡಿನ ಸುಂದರ ಪರಿಸರ ಆರಂಭದ ಕೆಲಕಾಲ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಆ ಖುಷಿ ಅಷ್ಟೇ ಬೇಗ ಮಾಯವಾಗುತ್ತದೆ. ಚಿತ್ರದಲ್ಲಿ ಎರಡೇ ಹಾಡುಗಳಿದ್ದು ಅವೂ ಅಷ್ಟೇನು ಗಮನ ಸೆಳೆಯುವುದಿಲ್ಲ.

Write A Comment