ಮನೋರಂಜನೆ

ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಏನು ಎತ್ತ…

Pinterest LinkedIn Tumblr

kpec13xabd1

– ಜಿ.ಶಿವಕುಮಾರ
ವಿದೇಶಿ ಆಟಗಾರರು ಆಡುವುದರಿಂದ ಅವರು ಪಂದ್ಯಕ್ಕೆ ಹೇಗೆ ಸಜ್ಜಾಗುತ್ತಾರೆ. ಆಟದ ಕೌಶಲಗಳು ಏನು.  ಪಂದ್ಯದ ವೇಳೆ ಯಾವ ರೀತಿಯ ತಂತ್ರಗಳನ್ನು ಹೆಣೆಯುತ್ತಾರೆ. ಹೀಗೆ ಹಲವು ಅಂಶಗಳನ್ನು ನಮ್ಮವರು ಅರಿತುಕೊಳ್ಳಬಹುದು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಈ ದೇಶದಲ್ಲಿ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದೆ. ಈ  ಟೂರ್ನಿ ಆರ್ಥಿಕ ಲಾಭದ ಉದ್ದೇಶದಿಂದಲೇ ರೂಪು ತಳೆದಿದೆ.  ಹೀಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಟೂರ್ನಿಯಲ್ಲಿ  ವಿದೇಶಿ ಆಟಗಾರರಿಗೂ ಆಡಲು ಅವಕಾಶ ನೀಡಿರುವುದು ಸಹಜ.

ವಿದೇಶಿ ಆಟಗಾರರು ಆಡುವುದರಿಂದ ಅವರು ಪಂದ್ಯಕ್ಕೆ ಹೇಗೆ ಸಜ್ಜಾಗುತ್ತಾರೆ. ಆಟದ ಕೌಶಲಗಳು ಏನು.  ಪಂದ್ಯದ ವೇಳೆ ಯಾವ ರೀತಿಯ ತಂತ್ರಗಳನ್ನು ಹೆಣೆಯುತ್ತಾರೆ. ಹೀಗೆ ಹಲವು ಅಂಶಗಳನ್ನು ನಮ್ಮವರು ಅರಿತುಕೊಳ್ಳಬಹುದು. ಇದರೊಂದಿಗೆ ಆಟದ ಗುಣಮಟ್ಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲೂಬಹುದು.

‘ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚು ಹರಿಸುತ್ತಿರುವ ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ಸ್‌, ಸ್ಟೀವನ್‌ ಸ್ಮಿತ್‌ ಅವರಂತಹ ಪ್ರಸಿದ್ಧ ಆಟಗಾರರನ್ನು ನಮ್ಮ ದೇಶದ ಬಹಳಷ್ಟು ಕ್ರಿಕೆಟಿಗರು ಹತ್ತಿರದಿಂದ ನೋಡಿಯೇ ಇರುವುದಿಲ್ಲ.   ಐಪಿಎಲ್‌ನಲ್ಲಿ ಇವರ ಜತೆ ಆಡುವ ಅವಕಾಶ ಸಿಕ್ಕರೆ ನಮ್ಮ ಆಟಗಾರರಿಗೆ ಹೊಸ ಕೌಶಲಗಳನ್ನು ಕಲಿಯುವ ಸದವಕಾಶ ದೊರೆಯುತ್ತದೆ’ ಎಂದು ಮಾಜಿ ಆಟಗಾರ ಎರ್ರಪಳ್ಳಿ ಪ್ರಸನ್ನ ನುಡಿದಿದ್ದಾರೆ.

ಪ್ರಸನ್ನ ಅವರ ಮಾತಿನಲ್ಲೂ ಸತ್ಯಾಂಶ ಇದೆ. ಈ ಹಿಂದಿನ ಟೂರ್ನಿಗಳಲ್ಲಿ ಆಸ್ಟ್ರೇಲಿಯಾದ ಘಟಾನುಘಟಿ ಆಟಗಾರರಾದ ಮ್ಯಾಥ್ಯೂ ಹೇಡನ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌, ಆ್ಯಂಡ್ರೂ ಸೈಮಂಡ್ಸ್‌, ಶೇನ್‌ ವಾರ್ನ್‌, ರಿಕಿ ಪಾಂಟಿಂಗ್‌, ಬ್ರೆಟ್‌ ಲೀ,  ಶ್ರೀಲಂಕಾದ ಸನತ್‌ ಜಯಸೂರ್ಯ, ಕುಮಾರ ಸಂಗಕ್ಕಾರ ಹೀಗೆ ಹಲವು ಮಂದಿ ವಿವಿಧ ತಂಡಗಳಲ್ಲಿ ಆಡಿದ್ದರು.

ರಾಜಸ್ತಾನ ರಾಯಲ್ಸ್‌ ತಂಡದ ಸಾರಥ್ಯ ವಹಿಸಿದ್ದ ಶೇನ್‌ ವಾರ್ನ್‌ 2008ರ ಋತುವಿನಲ್ಲಿ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದರು.
ಆಗ ತಂಡದಲ್ಲಿದ್ದ ಭಾರತದ ಯೂಸುಫ್‌ ಪಠಾಣ್‌, ಮುನಾಫ್‌ ಪಟೇಲ್‌, ರವೀಂದ್ರ ಜಡೇಜ ಮತ್ತು ಮೊಹಮ್ಮದ್‌ ಕೈಫ್‌ ಅವರಲ್ಲಿ ಅಡಗಿದ್ದ ಪ್ರತಿಭೆಗೆ ಅವರು ಸಾಣೆ ಹಿಡಿದಿದ್ದರು.   ಅವರ ನಾಯಕತ್ವ ಗುಣ ಕೂಡಾ ಈ ಆಟಗಾರರಿಗೆ ಮಾದರಿಯಾಗಿದ್ದು ಸುಳ್ಳಲ್ಲ.  ಆ ಟೂರ್ನಿಯಲ್ಲಿ ಯೂಸುಫ್‌ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

ಇದು ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆಯಿಂದ ನಮ್ಮ ಆಟಗಾರರ ಮೇಲೆ ಬೀರುವ ಗುಣಾತ್ಮಕ ಪ್ರಭಾವ ಎಂತಹದ್ದು ಎಂಬುದಕ್ಕೆ ಒಂದು ಉದಾಹರಣೆಯಷ್ಟೇ.

ಹಿಂದಿನ ಟೂರ್ನಿಗಳನ್ನು ಒಮ್ಮೆ ಮೆಲುಕು ಹಾಕಿದರೆ ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ‘ಈ ಟೂರ್ನಿಯಲ್ಲಿ ಕೇವಲ ಆಟಗಾರರು ಮಾತ್ರವಲ್ಲ ಗ್ಯಾರಿ ಕರ್ಸ್ಟನ್‌, ಟಾಮ್‌ ಮೂಡಿ, ಸ್ಟೀಫನ್‌ ಫ್ಲೆಮಿಂಗ್‌ ಅವರಂತಹ  ಕೋಚ್‌ಗಳ ಸಲಹೆ ಮತ್ತು ಮಾರ್ಗದರ್ಶನವೂ ನಮ್ಮ ಆಟಗಾರರಿಗೆ ಸಿಗುತ್ತದೆ.  ಇದರಿಂದ ಆಟದ ಎಲ್ಲಾ ವಿಭಾಗಗಳಲ್ಲೂ ಅವರು ಇನ್ನಷ್ಟು ಫ್ರೌಡಿಮೆ ಸಾಧಿಸಬಹುದು’  ಎಂಬುದು ಪ್ರಸನ್ನ ಅವರ ಅಭಿಪ್ರಾಯ.

‘ಐಪಿಎಲ್‌ ವೇಳೆ ನಮ್ಮ ಆಟಗಾರರು ಜಾಕ್‌ ಕಾಲಿಸ್‌, ಮುತ್ತಯ್ಯ ಮುರಳೀಧರನ್‌, ಮೈಕಲ್‌ ಹಸ್ಸಿ ಅವರ  ಜತೆ ಡ್ರೆಸಿಂಗ್‌ ಕೊಠಡಿ ಹಂಚಿಕೊಳ್ಳುತ್ತಾರೆ. ಇದರಿಂದ  ಅವರ ಮನಸ್ಥಿತಿ ಹೇಗಿರುತ್ತೆ. ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ. ಕಠಿಣ ಸಂದರ್ಭಗಳಲ್ಲಿ ಯಾವ ರೀತಿ ವರ್ತಿಸುತ್ತಾರೆ.  ಸಹ ಆಟಗಾರರ ಜತೆ ಹೇಗೆ ನಡೆದುಕೊಳ್ಳುತ್ತಾರೆ  ಇತ್ಯಾದಿ ಗುಣಾತ್ಮಕ ಅಂಶಗಳನ್ನು ಅವರಿಂದ ಕಲಿಯಬಹುದು’ ಎಂದು ಬ್ರಿಜೇಶ್‌ ಪಟೇಲ್‌  ಹೇಳಿದ್ದಾರೆ.

ಆಟಗಾರರಿಗೆ ಫಿಟ್ನೆಸ್‌ ಅತ್ಯಗತ್ಯ. ದೈಹಿಕ ಕ್ಷಮತೆ ಕಾಯ್ದುಕೊಳ್ಳದ ಹೊರತು ದೀರ್ಘಕಾಲ ಕ್ರಿಕೆಟ್‌ ಆಡುವುದು ಅಸಾಧ್ಯ. ಹಿಂದೆ ಆಡಿದ್ದ ಶ್ರೀಲಂಕಾದ ಕುಮಾರ ಸಂಗಕ್ಕಾರ, ಮಾಹೇಲ ಜಯವರ್ಧನೆ, ಆ್ಯಡಮ್‌ ಗಿಲ್‌ ಕ್ರಿಸ್ಟ್‌ ಅವರು 34, 35ರ ವಯಸ್ಸಿನಲ್ಲೂ ಲೀಲಾಜಾಲವಾಗಿ ರನ್‌ ಗಳಿಸುತ್ತಿದ್ದದ್ದು ಉಲ್ಲೇಖಾರ್ಹ. ಈ ವಿಚಾರದಲ್ಲೂ ನಮ್ಮ ಆಟಗಾರರಿಗೆ ಇವರು ಮಾದರಿಯಾಗಬಲ್ಲರು.

ಅವರು ಯಾವ ರೀತಿ ದೈಹಿಕ ತಾಲೀಮು ನಡೆಸುತ್ತಾರೆ. ಅವರ ಆಹಾರ ಕ್ರಮ ಹೇಗಿರುತ್ತೆ. ತಾಲೀಮಿನ ವೇಳೆ ಯಾವೆಲ್ಲಾ ಕಸರತ್ತು ನಡೆಸುತ್ತಾರೆ. ಭಾರತದ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನೂ ಆಟಗಾರರು ತಿಳಿದುಕೊಳ್ಳಬಹುದು.

ನಮ್ಮ ಆಟಗಾರರು ವಿದೇಶಿ ಆಟಗಾರರ ಜತೆ ಐಪಿಎಲ್‌ನಲ್ಲಿ ಆಡುವುದರಿಂದ ಅವರ ಬಲ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರಿತುಕೊ ಳ್ಳುತ್ತಾರೆ. ಅವರು ಸರಣಿ ಆಡಲು ಭಾರತಕ್ಕೆ ಬಂದಾಗ ಇಲ್ಲವೇ ನಾವು ಅವರ ನೆಲದಲ್ಲಿ ಆಡಲು ಹೋದಾಗ ಇವುಗಳ ಲಾಭ ಪಡೆದು ಅವರನ್ನು ಸೋಲಿಸಬಹುದು ಎಂಬ ಅಭಿಪ್ರಾಯವೂ  ಇದೆ.

ಈ ಮಾತನ್ನು ಪ್ರಸನ್ನ ಅವರು ಒಪ್ಪುವುದಿಲ್ಲ.  ‘ಭಾರತದಲ್ಲಿ ಆಡುವುದಕ್ಕೂ ವಿದೇಶಿ ಪರಿಸ್ಥಿತಿಗಳಲ್ಲಿ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ಗಳು ಹೆಚ್ಚಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ವೇಗಿಗಳಿಗೆ ಸಹಾಯವಾಗಬಲ್ಲ ಬೌನ್ಸಿ ಪಿಚ್‌ಗಳು ಸಿದ್ಧಗೊಂಡಿರುತ್ತವೆ. ಹೀಗಿದ್ದಾಗ ಅವರ ಪ್ರತಿಕೂಲ ಅಂಶಗಳು ಗೊತ್ತಿದ್ದರೂ ಅವರ ನೆಲದಲ್ಲಿ ಅವರನ್ನು ಕಟ್ಟಿ ಹಾಕುವುದು ಸುಲಭವಲ್ಲ.

ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಮತ್ತು ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋತಿದ್ದೇ ಇದಕ್ಕೆ ನಿದರ್ಶನ’ ಎಂಬುದು ಅವರ ವಾದ.

ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವುದರಿಂದ ನಮ್ಮ ಆಟಗಾರರಿಗೆ ಅನಾನುಕೂಲಕ್ಕಿಂತ ಪ್ರಯೋಜನವೇ ಹೆಚ್ಚು ಎಂಬುದಂತೂ ಸತ್ಯ.
*
‘ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಅವಕಾಶ ನೀಡುವುದರಿಂದ ಬಿಸಿಸಿಐಗೆ ಹೆಚ್ಚು ಪ್ರಯೋಜನ.  ವಿಶ್ವ ಪ್ರಸಿದ್ಧ ಕ್ರಿಕೆಟಿಗರು ಇದರಲ್ಲಿ ಆಡಿದರೆ, ಕ್ರಿಕೆಟ್‌ ಆಡುವ ಎಲ್ಲಾ ರಾಷ್ಟ್ರಗಳ ಜನರೂ  ಈ ಟೂರ್ನಿಯನ್ನು ನೋಡುತ್ತಾರೆ.  ಇದರಿಂದ ಟೂರ್ನಿಯ ಜನಪ್ರಿಯತೆಯೂ ಹೆಚ್ಚುತ್ತದೆ. ಮೊದಲ  ಆವೃತ್ತಿಯಲ್ಲಿ ಸಿಕ್ಕ ಜನ ಬೆಂಬಲವೇ ಇದಕ್ಕೆ ಸಾಕ್ಷಿ ’.
– ಎರ್ರಪಳ್ಳಿ ಪ್ರಸನ್ನ, ಮಾಜಿ ಟೆಸ್ಟ್‌ ಆಟಗಾರ.

‘ಟೂರ್ನಿಯಲ್ಲಿ ಡೇಲ್‌ ಸ್ಟೇಯ್ನ್‌, ಮಿಷೆಲ್‌ ಜಾನ್ಸನ್‌, ಮಿಷೆಲ್‌ ಸ್ಟಾರ್ಕ್‌, ಜೇಮ್ಸ್‌ ಫಾಕ್ನರ್‌ ಅವರಂತಹ ಶ್ರೇಷ್ಠ ಬೌಲರ್‌ಗಳು ಆಡುತ್ತಾರೆ. ಅಭ್ಯಾಸದ ವೇಳೆ ಭಾರತದ ಆಟಗಾರರಿಗೆ ಅವರು ಕೆಲ ಅಗತ್ಯ ಬೌಲಿಂಗ್‌ ತಂತ್ರಗಳನ್ನು ಹೇಳಿಕೊಡುತ್ತಾರೆ. ಯಾವ ಸಂದರ್ಭದಲ್ಲಿ ಯಾರ್ಕರ್‌ ಹಾಕಬೇಕು, ಎಷ್ಟು ವೇಗದಲ್ಲಿ ಚೆಂಡು ಎಸೆಯಬೇಕು ಎಂಬಿತ್ಯಾದಿ ಅಂಶಗಳನ್ನು ಅವರಿಂದ ನಮ್ಮ ಬೌಲರ್‌ಗಳು ಕಲಿಯಬಹುದು.’
– ಬ್ರಿಜೇಶ್‌ ಪಟೇಲ್‌, ಮಾಜಿ ಟೆಸ್ಟ್‌ ಆಟಗಾರ.

Write A Comment