ಮನೋರಂಜನೆ

ಅದಮ್ಯ ರಂಗ ಪ್ರೀತಿ

Pinterest LinkedIn Tumblr

psmec16adamya_0

– ಪದ್ಮನಾಭ ಭಟ್‌
‘ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌’ ಇದು ಮಾಲತೇಶ ಬಡಿಗೇರ ಮತ್ತು ಛಾಯಾ ಭಾರ್ಗವಿ ದಂಪತಿ ಪರಿಶ್ರಮದ ಫಲ.  ನಾಟಕ ಚಟುವಟಿಕೆಗಳಿಗಾಗಿ ತಮ್ಮ ಮನೆಯಲ್ಲಿಯೇ ಕಿರು ರಂಗಮಂದಿರ ನಿರ್ಮಿಸಿರುವುದು ವಿಶೇಷವಾಗಿದೆ.

ಮಾಲತೇಶ ಬಡಿಗೇರ ಕಳೆದ ಎರಡು ದಶಕಗಳಿಂದ ರಂಗಭೂಮಿಯಲ್ಲಿ ಕಾರ್ಯನಿರತರಾಗಿದ್ದಾರೆ. ನಿನಾಸಮ್‌ ಪದವೀಧರರಾದ ಅವರಿಗೆ ನಾಡಿನ ಬಹುತೇಕ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ ಅನುಭವವಿದೆ.

ಛಾಯಾ ಭಾರ್ಗವಿ ಕೂಡ ಕಳೆದ ಒಂದೂವರೆ ದಶಕದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ರಂಗ ನಿರಂತರ ತಂಡದಲ್ಲಿ ರಂಗಭೂಮಿಯ ಮೊದಲ ಪಾಠಗಳನ್ನು ಕಲಿತ ಅವರು ಕೆಲಕಾಲ ವಕೀಲರಾಗಿಯೂ ಕೆಲಸ ಮಾಡಿದರು. ನಂತರ ವಕೀಲಿ ವೃತ್ತಿ ತೊರೆದು ಪೂರ್ಣ ಪ್ರಮಾಣದಲ್ಲಿ ರಂಗಭೂಮಿಲ್ಲಿಯೇ ತೊಡಗಿಕೊಂಡರು.

ಇವರಿಬ್ಬರೂ ಸೇರಿ 2007ರಲ್ಲಿ ‘ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌’ ಆರಂಭಿಸಿದರು. ಇದಕ್ಕೂ ಮೊದಲು ಮಾಲತೇಶ ‘ಬಹುರೂಪಿ’ ಎಂಬ ನಾಟಕ ತಂಡವನ್ನೂ ಕಟ್ಟಿದ್ದರು.  ಬಹುರೂಪಿ ಈಗ ನೇಪಥ್ಯದ ಕೆಲಸಗಳಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದೆ.

ತಮ್ಮದೇ ಆದ ಒಂದು ರಂಗತಂಡವನ್ನು ಕಟ್ಟುವ ಅವಶ್ಯಕತೆ ಉಂಟಾದದ್ದನ್ನು ಮಾಲತೇಶ ವಿವರಿಸುವುದು ಹೀಗೆ:
‘ನಾನು ಹಲವಾರು ರಂಗ ತಂಡಗಳಿಗೆ ನಾಟಕವನ್ನು ನಿರ್ದೇಶಿಸಿದ್ದೇನೆ. ಆದರೆ ಅವೆಲ್ಲ ಒಂದೆರಡು ಪ್ರದರ್ಶನಗಳನ್ನು ಕಂಡು ನಿಂತು ಹೋಗುತ್ತವೆ. ನಮ್ಮದೇ ತಂಡವಿದ್ದರೆ ನಿರಂತರವಾಗಿ ಪ್ರದರ್ಶನ ನೀಡಬಹುದು. ಅಲ್ಲದೇ  ಕೇವಲ ನಿರ್ದೇಶನವಷ್ಟೇ ಅಲ್ಲದೇ ಬೆಳಕು, ಪ್ರಸಾಧನ, ವೇದಿಕೆ, ರಂಗಪರಿಕರ, ವಸ್ತ್ರ ವಿನ್ಯಾಸ ಹೀಗೆ ರಂಗಭೂಮಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಮಾಡಿದ ಅನುಭವ ನನಗಿದೆ. ಇವೆಲ್ಲ ಅನುಭವಗಳನ್ನು ಬಳಸಿಕೊಂಡು ಒಂದು ನಾಟಕ ತಂಡವನ್ನು ಸಮರ್ಥವಾಗಿ ಕಟ್ಟಿ ಬೆಳೆಸಬಹುದು ಎಂಬ ನಂಬಿಕೆ ಇತ್ತು. ನನಗೆ ಮತ್ತು ನನ್ನ ಪತ್ನಿ ಛಾಯಾ ಭಾರ್ಗವಿ ಅವರಿಗೆ ರಂಗಭೂಮಿಯ ಒಳಹೊರಗುಗಳು ಚೆನ್ನಾಗಿಯೇ ತಿಳಿದಿದ್ದರಿಂದ ತಂಡ ಕಟ್ಟುವುದು ಕಷ್ಟವಾಗಲಿಲ್ಲ’.

ಹೆಸರಿನ ಹಿಂದೆ..
‘‘ಅದಮ್ಯ’ ಎಂದರೆ ದೃಢವಾದದ್ದು ಎಂದು. ಅದೊಂಥರ ಶಕ್ತಿ. ರಂಗಭೂಮಿಯ ಚಟುವಟಿಕೆಗಳಿಗೂ ಅಂಥದ್ದೊಂದು ಶಕ್ತಿಯಿದೆ. ಆದ್ದರಿಂದ ನಮ್ಮ ತಂಡಕ್ಕೆ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ ಎಂದು ಹೆಸರಿಟ್ಟೆವು’’ ಎಂದು ವಿವರಿಸುತ್ತಾರೆ ಮಾಲತೇಶ.

ಮೊದಮೊದಲ ಹೆಜ್ಜೆಗಳು
ಈ ತಂಡದ ಮೊದಲ ನಾಟಕ ಚಂದ್ರಶೇಖರ ಕಂಬಾರ ಅವರ ‘ಸಾಂಬಶಿವ ಪ್ರಹಸನ’. ಇದನ್ನು ಛಾಯಾ ಭಾರ್ಗವಿ ಅವರೇ ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ತಮ್ಮ ಉತ್ಸಾಹವನ್ನು ಹೆಚ್ಚಿಸಿಕೊಂಡ ಛಾಯಾ, ಕುವೆಂಪು ಅವರ ‘ಶೂದ್ರತಪಸ್ವಿ’ ನಾಟಕವನ್ನು ನಿರ್ದೇಶಿಸಿದರು. ಇದು ತಂಡದ ಎರಡನೇ ನಾಟಕ.

ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’ ಸಿ.ವೀರಣ್ಣ ಅವರ ‘ಸಾವಿರದವಳು’, ಎಂ.ಪಿ. ಪ್ರಕಾಶ ಅವರ ‘ಸೂರ್ಯ ಶಿಕಾರಿ’, ಬಿ. ಸುರೇಶ ಅವರ ‘ಗಿರಿಜಾ ಕಲ್ಯಾಣ’ (ನಿರ್ದೇಶನ: ಮಾಲತೇಶ ಬಡಿಗೇರ), ಹರಿಕೃಷ್ಣ ಅವರ ‘ಯುಯುತ್ಸು’, ಕುವೆಂಪು ಅವರ ‘ಮಹಾರಾತ್ರಿ’ (ನಿರ್ದೇಶನ :ಛಾಯಾ ಭಾರ್ಗವಿ) ಹೀಗೆ ಈ ತಂಡದ ಬಹುತೇಕ ಎಲ್ಲ ನಾಟಕಗಳನ್ನೂ ಮಾಲತೇಶ ಮತ್ತು ಛಾಯಾ ಭಾರ್ಗವಿ ಅವರೇ ನಿರ್ದೇಶಿಸಿದ್ದಾರೆ.

ಶೂದ್ರ ತಪಸ್ವಿ ನಾಟಕ ಇದುವರೆಗೆ ಸುಮಾರು 75 ಪ್ರದರ್ಶನಗಳನ್ನು ಕಂಡಿರುವುದು ತಂಡದ ಹೆಮ್ಮೆ. ಹಾಸ್ಯದ ಲೇಪನದೊಂದಿಗೆ ಗಂಭೀರ ವಿಚಾರವನ್ನು ಪ್ರತಿಪಾದಿಸುವ ‘ಗಿರಿಜಾ ಕಲ್ಯಾಣ’ 25ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಆಯ್ಕೆಯ ಮಾನದಂಡಗಳು
‘ನಾವು ಯಾವುದೇ ನಾಟಕವನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳುವಾಗ ತುಂಬ ಯೋಚಿಸಿ ಆಯ್ದುಕೊಳ್ಳುತ್ತೇವೆ. ನಾಟಕ ಪ್ರೇಕ್ಷಕ ಸ್ನೇಹಿಯಾಗಿರಬೇಕು. ಆದರೆ ಬರೀ ಮನರಂಜನೆಗಷ್ಟೇ ತನ್ನನ್ನು ಸೀಮಿತವಾಗಿಸಿಕೊಳ್ಳಬಾರದು. ಅಂತಹ ಗಟ್ಟಿ ವಸ್ತು ಇರುವ ನಾಟಕಗಳನ್ನೇ ಪ್ರದರ್ಶನಕ್ಕೆ ಆಯ್ದುಕೊಳ್ಳುತ್ತೇವೆ. ನಾವು ಮಾಡಿದ ನಾಟಕ ಪ್ರೇಕ್ಷಕರ ಮನಸ್ಸಿಗೆ ತಾಕಿ ಅವರ ನೆನಪಲ್ಲಿ ಶಾಶ್ವತ ಸ್ಥಾನ ಪಡೆಯಬೇಕು ಎಂಬುದು ನಮ್ಮ ಉದ್ದೇಶ’ ಎಂದು ನಾಟಕದ ಆಯ್ಕೆಯ ಬಗ್ಗೆ ಮಾಲತೇಶ ವಿವರಿಸುತ್ತಾರೆ.

ಯುವ ಕಲಾವಿದರಿಗೆ ಆದ್ಯತೆ
ಯುವ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡುವುದು ಈ ತಂಡದ ವಿಶೇಷತೆಗಳಲ್ಲೊಂದು.
‘ನಾವು ಸಾಮಾನ್ಯವಾಗಿ ಯಾವುದೇ ನಾಟಕ ಮಾಡುವಾಗ ತರಬೇತಿ ಪಡೆದ ಕಲಾವಿದರನ್ನು ಆಯ್ದುಕೊಳ್ಳುವುದಿಲ್ಲ. ರಂಗಭೂಮಿಯಲ್ಲಿ ತೀವ್ರ ಆಸಕ್ತಿ ಇರುವ ಹೊಸ ಕಲಾವಿದರನ್ನೇ ಆಯ್ದುಕೊಂಡು ನಾಟಕ ಮಾಡುತ್ತೇವೆ. ಹೊಸ ಹೊಸ ಜನರು ರಂಗಭೂಮಿಗೆ ಬರುವಂತಾಗಬೇಕು. ಜನರಲ್ಲಿ ರಂಗಭೂಮಿ ಅಭಿರುಚಿ ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಮಾಲತೇಶ.
ಹಾಗೆಂದು ಸುಮ್ಮನೇ ಕಾಲಹರಣಕ್ಕಾಗಿ ರಂಗಭೂಮಿಗೆ ಬರುವವರಿಗೂ ಇಲ್ಲಿ ಅವಕಾಶವಿಲ್ಲ.

‘ಸುಮ್ಮನೇ ಹೀಗೆ ಬಂದು ಹಾಗೆ ಹೋಗುವವರಿಗೂ ನಾವು ಅವಕಾಶ ಕೊಡುವುದಿಲ್ಲ. ಒಂದು ನಾಟಕದಲ್ಲಿ ಕೆಲಸ ಮಾಡಿದ್ದಾರೆಂದರೆ ಕನಿಷ್ಠ ಇಪ್ಪತೈದು ಪ್ರದರ್ಶನಗಳಿಗಾದರೂ ಕೆಲಸ ಮಾಡಬೇಕು ಎಂದು ಅವಕಾಶ ನೀಡುವಾಗಲೇ ಹೇಳಿಬಿಡುತ್ತೇವೆ. ಯಾಕೆಂದರೆ ರಂಗಭೂಮಿ ಕಾಲಹರಣದ ಸಾಧನವಲ್ಲ. ಇಲ್ಲಿಗೆ ಬಂದ ಮೇಲೆ ಗಂಭೀರವಾಗಿ ತೊಡಗಿಕೊಳ್ಳಬೇಕು. ಆಗಲೇ ರಂಗಭೂಮಿಯ ಆಳ ಅಗಲಗಳನ್ನು ಅರಿಯಲು ಸಾಧ್ಯ’ ಎಂದು ಮಾಲತೇಶ ಸ್ಪಷ್ಟಗೊಳಿಸುತ್ತಾರೆ.

ಆದಾಯ ಮೂಲ
ಮಾಲತೇಶ ಮತ್ತು ಛಾಯಾ ಭಾರ್ಗವಿ ಅವರು ಈಗಲೂ ಬೇರೆ ಬೇರೆ ತಂಡಗಳಿಗೆ ನಾಟಕ ನಿರ್ದೇಶನ ಮಾಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ರಂಗ ತರಬೇತಿ ನೀಡುತ್ತಾರೆ. ಅದರಿಂದ ಬಂದ ಹಣದಿಂದಲೇ ತಂಡದ ವೆಚ್ಚ ಭರಿಸುತ್ತಾರೆ. ಉಳಿದಂತೆ ಪ್ರೇಕ್ಷಕರು ನೀಡುವ ಟಿಕೆಟ್‌ ಹಣವೇ ಈ ತಂಡದ ಆದಾಯ ಮೂಲ.

ತರಬೇತಿ ಶಿಬಿರಗಳು
ನಾಟಕ ಪ್ರದರ್ಶನವಷ್ಟೇ ಅಲ್ಲದೇ, ವಿದ್ಯಾರ್ಥಿಗಳಲ್ಲಿ ರಂಗಭೂಮಿ ಅಭಿರುಚಿ ಬೆಳೆಸುವ ಉದ್ದೇಶದಿಂದ ನಾಟಕ ತರಬೇತಿ ಶಿಬಿರಗಳನ್ನೂ ಪ್ರತಿವರ್ಷ ನಡೆಸುತ್ತಿದೆ. ಈ ಶಿಬಿರಗಳಲ್ಲಿ ನಟನೆಯಷ್ಟೇ ಅಲ್ಲದೇ, ಬೆಳಕು, ಸಂಗೀತ, ವೇದಿಕೆ, ಮುಖವಾಡಗಳ ತಯಾರಿಕೆ ಹೀಗೆ ರಂಗಭೂಮಿಯ ಎಲ್ಲ ಆಯಾಮಗಳ ಬಗ್ಗೆಯೂ ತರಬೇತಿ ನೀಡಲಾಗುವುದು.  ಶಿಬಿರದ ಕೊನೆಯಲ್ಲಿ ಒಂದು ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸುವ ಪರಿಪಾಠ ಕೂಡ ಇದೆ.

ಮನೆಯಲ್ಲಿಯೇ ರಂಗಮಂದಿರ
ತಮ್ಮ ಮನೆಯಲ್ಲಿಯೇ ನೂರು ಜನ ಕುಳಿತುಕೊಳ್ಳಬಹುದಾದ ಒಂದು ರಂಗಮಂದಿರವನ್ನು ನಿರ್ಮಿಸಿರುವುದು ಮಾಲತೇಶ ಮತ್ತು ಛಾಯಾ ಅವರ ರಂಗಪ್ರೀತಿಗೆ ಒಂದು ನಿದರ್ಶನವಾಗಿದೆ.
ಕೆಂಗೇರಿ ಉಪನಗರದ ರಾಮಜ್ಯೋತಿ ನಗರದ ದುಭಾಷಿಪಾಳ್ಯದ ತಮ್ಮ ನಿವಾಸದಲ್ಲಿ ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ನಿರ್ಮಿಸಲಾಗಿರುವ ಈ ರಂಗ ಮಂದಿರಕ್ಕೆ ‘ಕಲಾಸೌಧ’ ಎಂದು ಹೆಸರಿಡಲಾಗಿದೆ.

‘ನಾನು ಇಷ್ಟು ವರ್ಷ ರಂಗಭೂಮಿಯಲ್ಲಿ ದುಡಿದ ಹಣವನ್ನೆಲ್ಲ ವಿನಿಯೋಗಿಸಿ ಈ ಕಿರು ರಂಗಮಂದಿರವನ್ನು ಕಟ್ಟಿದ್ದೇನೆ. 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ರಂಗಮಂದಿರವನ್ನು ಪೂರ್ತಿಯಾಗಿ ರಂಗ ಚಟುವಟಿಕೆಗಳಿಗೇ ಮೀಸಲಾಗಿಸಿದ್ದೇವೆ’ ಎನ್ನುತ್ತಾರೆ ಮಾಲತೇಶ.

ನಾಟಕದ ತಾಲೀಮು, ರಂಗ ವಿಚಾರ ಸಂಕಿರಣ, ನಾಟಕ ಶಿಬಿರ, ನಾಟಕ ಪ್ರಯೋಗ, ತರಬೇತಿ ಕಾರ್ಯಾಗಾರಗಳು ಹೀಗೆ ವರ್ಷ ಪೂರ್ತಿರಂಗ ಚಟುವಟಿಕೆಗಳನ್ನು ನಡೆಸಬೇಕು ಎಂಬ ಯೋಜನೆ ಅವರಿಗಿದೆ.

‘ತಿಂಗಳ ಅತಿಥಿ’ ಎಂಬ ಹೆಸರಿನಲ್ಲಿ ಪ್ರತಿ ತಿಂಗಳೂ ರಂಗಭೂಮಿಗೆ ಸಂಬಂಧಿಸಿದ ಗಣ್ಯರನ್ನು
ಕರೆದು ಅವರೊಡನೆ ಸಂವಾದ ಏರ್ಪಡಿಸುವ ಕಾರ್ಯಕ್ರಮವೂ ಸದ್ಯದಲ್ಲಿಯೇ ಆರಂಭಿಸಲಿದ್ದಾರೆ.
ಇದೇ ರಂಗಮಂದಿರದಲ್ಲಿ ಏಪ್ರಿಲ್‌ 20ರಿಂದ ಮಕ್ಕಳ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

Write A Comment