ಮನೋರಂಜನೆ

ರಂಗ ಆಯಾಮಗಳ ಚರ್ಚೆಗೊಂದು ಹೊಸ ವೇದಿಕೆ

Pinterest LinkedIn Tumblr

psmec11jagriti

-ಸಂದರ್ಶನ: ಪದ್ಮನಾಭ ಭಟ್‌
‘ದಿ ಜಾಗೃತಿ ರಿವ್ಯೂ’ ಸಂಪಾದಕಿ ಮಹಾಶ್ವೇತಾ ಪಾಲ್‌

ಬೆಂಗಳೂರಿನ ಇಂಗ್ಲಿಷ್‌  ರಂಗಭೂಮಿಯಲ್ಲಿ ತುಂಬ ಸಕ್ರಿಯವಾಗಿ ತೊಡಗಿಕೊಂಡಿರುವ ಸಂಸ್ಥೆ ‘ಜಾಗೃತಿ ಥಿಯೇಟರ್‌’. ದೇಶ ವಿದೇಶಗಳ ವಿಭಿನ್ನ ನಾಟಕ ತಂಡಗಳ ನಾಟಕ ಪ್ರಯೋಗಗಳನ್ನು ನಿರಂತರವಾಗಿ ಪ್ರದರ್ಶಿಸುತ್ತಿರುವ ಈ ಸಂಸ್ಥೆ ಇದೀಗ ಬೆಂಗಳೂರಿಗೇ ಮೀಸಲಾದ ಒಂದು ರಂಗಪತ್ರಿಕೆಯನ್ನು ಪ್ರಕಟಿಸುತ್ತಿದೆ. ‘ದಿ ಜಾಗೃತಿ ರಿವ್ಯೂ’ ಎಂಬ ಹೆಸರಿನ ಈ ಇಂಗ್ಲಿಷ್‌ ಪತ್ರಿಕೆಯ ಮೊದಲ ಸಂಚಿಕೆ ಏಪ್ರಿಲ್‌ 5ರಂದು ಬಿಡುಗಡೆಯಾಗಿದೆ.

ಬೆಂಗಳೂರಿನ ರಂಗಚಟುವಟಿಕೆಗಳ ಬಗೆಗಿನ ಮಾಹಿತಿಯನ್ನು ಆಸಕ್ತರಿಗೆ ತಲುಪಿಸುವ ಉದ್ದೇಶವನ್ನು ಹೊಂದಿರುವ ಈ ಪತ್ರಿಕೆ ಮುಂದೆ ತನ್ನ ವ್ಯಾಪ್ತಿಯನ್ನು ಹಿರಿದಾಗಿಸಿಕೊಂಡು ಸಾಂಸ್ಕೃತಿಕ ವಲಯದ ಎಲ್ಲ ಆಯಾಮಗಳನ್ನೂ ಒಳಗೊಳ್ಳುವ ಸೂಚನೆಯನ್ನು ನೀಡುತ್ತಿದೆ.
ಈ ಪತ್ರಿಕೆಯ ಸಂಪಾದನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಮಹಾಶ್ವೇತಾ ಪಾಲ್‌ ಪತ್ರಿಕೆಯ ಕುರಿತು ಮೆಟ್ರೊದೊಂದಿಗೆ ಮಾತನಾಡಿದ್ದಾರೆ.

ಏನಿದು ‘ಜಾಗೃತಿ ರಿವ್ಯೂ’?
ಬೆಂಗಳೂರು ರಂಗಭೂಮಿಯ ವಿದ್ಯಮಾನಗಳನ್ನು ಪ್ರಕಟಿಸುವ ಮತ್ತು ರಂಗಭೂಮಿಗೊಂದು ಒಳನೋಟ ದೊರಕಿಸುವ ಉದ್ದೇಶದಿಂದ ಆರಂಭವಾಗಿರುವ ಪತ್ರಿಕೆ ‘ದಿ ಜಾಗೃತಿ ರಿವ್ಯೂ’. ತೀರಾ ಸರಳವಾಗಿಯೇ ಆರಂಭವಾಗಿರುವ ಈ ಮಾಸ ಪತ್ರಿಕೆಯನ್ನು ಮುಂದೆ ಒಂದು ಸಮರ್ಥ ಸಾಂಸ್ಕೃತಿಕ ಪತ್ರಿಕೆಯನ್ನಾಗಿ ರೂಪಿಸುವ ಗುರಿ ಸಂಪಾದಕೀಯ ತಂಡಕ್ಕಿದೆ.

ಈ ಪತ್ರಿಕೆ ರಂಗಭೂಮಿ ಮತ್ತು  ಉಳಿದ ಪ್ರದರ್ಶನ ಕಲೆಗಳ ಕುರಿತಾದ ಸುದ್ದಿ, ಲೇಖನ ಹೀಗೆ ಎಲ್ಲ ಆಯಾಮಗಳಿಗೂ ತನ್ನ ಪರಿಧಿಯನ್ನು ಹಿಗ್ಗಿಸಿಕೊಳ್ಳುವ ಇರಾದೆಯನ್ನೂ ಹೊಂದಿದೆ. ಬೆಂಗಳೂರಿನಲ್ಲಿನ ವಿವಿಧ ರಂಗಭೂಮಿ ಸಮುದಾಯಗಳ ನಡುವೆ ಸಂವಹನ ಸಂಬಂಧಗಳನ್ನು ಪೋಷಿಸುವುದು. ರಂಗಭೂಮಿಯಲ್ಲಿ ಆಗುತ್ತಿರುವ ಮಹತ್ವದ ವಿದ್ಯಮಾನಗಳು ಮತ್ತು ಪ್ರಯೋಗಗಳ ಬಗ್ಗೆ ಜನರಿಗೆ ತಿಳಿಸಿಕೊಡುವುದು ನಮ್ಮ ಪತ್ರಿಕೆ ಮುಖ್ಯ ಉದ್ದೇಶ.

ರಂಗಭೂಮಿಗೇ ಮೀಸಲಾದ ಪತ್ರಿಕೆಯ ಅವಶ್ಯಕತೆ ಯಾವೆಲ್ಲ ಕಾರಣಕ್ಕೆ ಇದೆ?
ರಂಗಭೂಮಿಯಲ್ಲಿನ ವಿದ್ಯಮಾನಗಳು, ಪ್ರಯೋಗಗಳು, ಸಾಧನೆಗಳನ್ನು ಚರ್ಚಿಸಲು ಒಂದು ವೇದಿಕೆಯ ಅವಶ್ಯಕತೆ ಇದ್ದೇ ಇದೆ. ‘ದಿ ಜಾಗೃತಿ ರಿವ್ಯೂ’  ಬೇರೆ ಬೇರೆ ಮೂಲಗಳಿಂದ ಬೆಂಗಳೂರು ರಂಗಭೂಮಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕುತ್ತದೆ.
ತುಂಬಾ ಕಷ್ಟದ ಹಾದಿಯನ್ನು ಸವೆಸಿಯೂ ರಂಗಭೂಮಿಯ ಮೇಲಿನ ಪ್ರೀತಿಯಿಂದ  ಅದನ್ನು ಜೀವಂತವಾಗಿಸಿದ ಮತ್ತು ರಂಗಭೂಮಿಗೊಂದು ಹೊಸ ದಿಶೆ ಕಲ್ಪಿಸಿದ ವ್ಯಕ್ತಿಗಳ ಸಾಧನೆಯನ್ನು ಸ್ಮರಿಸಿಕೊಳ್ಳಲೂ ಒಂದು ನಿರ್ದಿಷ್ಟ ವೇದಿಕೆಯ ಅವಶ್ಯಕತೆ ಇದೆ. ಇದನ್ನು  ನಮ್ಮ ಪತ್ರಿಕೆ ಒದಗಿಸುತ್ತದೆ.

ಈ ಪತ್ರಿಕೆಯ ಹೂರಣದ ಬಗ್ಗೆ ಹೇಳಿ?
ಮುಖ್ಯವಾಗಿ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿತವಾದ ಅಥವಾ ಪ್ರದರ್ಶಿತವಾಗಲಿರುವ ಮೂರು ಉತ್ಕೃಷ್ಟ ನಾಟಕಗಳ ಬಗ್ಗೆ ಈ ಪತ್ರಿಕೆಯಲ್ಲಿ ಚರ್ಚಿಸಲಾಗುವುದು. ‘ಟೆಟೆ-ಎ-ಟೆಟೆ’ ಸ್ಥಿರಶೀರ್ಷಿಕೆಯಲ್ಲಿ  ಒಬ್ಬರು ರಂಗಕರ್ಮಿಯೊಂದಿಗೆ ಸಂದರ್ಶನ ನಡೆಸಿ ಪ್ರಕಟಿಸಲಾಗುವುದು. ‘ಗ್ಲೋಬಲ್‌ ಕನೆಕ್ಟ್‌’ ಎಂಬ ಅಂಕಣದಲ್ಲಿ ಜಗತ್ತಿನ ಬೇರೆ ಬೇರೆ ನಾಟಕ ತಂಡಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು.

ಜಾಗೃತಿ ಥಿಯೇಟರ್‌ ನಡೆಸುವ ರಂಗಭೂಮಿ ಶಿಕ್ಷಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿಸುವ ‘ದಿ ಜೆಟ್‌ ಕಾರ್ನರ್‌’ ಎಂಬ ಅಂಕಣವೂ ಇದೆ. ‘ಇನ್‌ ಫೋಕಸ್‌’ ಇದು ಬೆಂಗಳೂರಿನ ರಂಗಭೂಮಿಯ ಪ್ರಚಲಿತ ವಿದ್ಯಮಾನಗಳಿಗೆ ಮೀಸಲಾದ ಜಾಗ. ಇವಿಷ್ಟೇ ಅಲ್ಲದೇ ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ಜಗತ್ತಿಗೆ ಸಂಬಂಧಿಸಿದ ಎಲ್ಲ ರೀತಿಯ ವಿಷಯಗಳೂ ಈ ಪತ್ರಿಕೆಯಲ್ಲಿ ಓದಬಹುದು.

ಆಸಕ್ತರು ಈ ಪತ್ರಿಕೆನ್ನು ಹೇಗೆ ಹೊಂದಬಹುದು?
ಜಾಗೃತಿ ಜಾಲತಾಣ www.jagrititheatre.comದಲ್ಲಿ ‘ದಿ ಜಾಗೃತಿ ರಿವ್ಯೂ’ ಲಭ್ಯವಿದೆ. ಮೊದಲ ಸಂಚಿಕೆಯನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವಿದೆ.  ವೈಟ್‌ಫೀಲ್ಡ್‌ ಸಮೀಪದ ರೆಸ್ಟೋರೆಂಟ್‌ಗಳು, ಪುಸ್ತಕ ಮಳಿಗೆಗಳ, ಹೋಟೆಲ್‌ಗಳಲ್ಲಿಯೂ ಈ ಪತ್ರಿಕೆಯ ಮುದ್ರಿತ ಪ್ರತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಬೆಂಗಳೂರಿನ ಎಲ್ಲ ರಂಗಮಂದಿರಗಳಲ್ಲಿಯೂ ‘ದಿ ಜಾಗೃತಿ ರಿವ್ಯೂ’ ಸಿಗುತ್ತದೆ.

Write A Comment