ದಕ್ಷಿಣ ಭಾರತದ ಒಬ್ಬೊಬ್ಬರೇ ಬಾಲಿವುಡ್ ಪ್ರವೇಶ ಮಾಡಿ ಸುದ್ದಿಯಾಗುತ್ತಿದ್ದಾರೆ. ಕೆಲವರಿಗೆ ಹೆಸರು, ಕೀರ್ತಿ ಲಭಿಸಿದರೆ, ಮತ್ತೆ ಕೆಲವರು ಬರಿಗೈನಲ್ಲಿ ವಾಪಸಾಗಿರುವ ಉದಾಹರಣೆಗಳು ಇವೆ. ಆದರೂ, ಪ್ರತಿಭಾ ಪಲಾಯನ ಮಾತ್ರ ನಿಂತಿಲ್ಲ! ಸದ್ಯ ಬಿ-ಟೌನ್ ಅಂಗಳಕ್ಕೆ ಬಲಗಾಲಿಟ್ಟು ಪುರಪ್ರವೇಶ ಮಾಡುತ್ತಿರುವುದು ಕನ್ನಡದ ನಟಿ ಎನ್ನುವುದು ಹೆಗ್ಗಳಿಕೆ ವಿಚಾರ. ಈಗಾಗಲೇ ಕನ್ನಡತಿ ದೀಪಿಕಾ ಪಡುಕೋಣೆ ಭಾರೀ ಪ್ರಭಾವ ಬೀರುತ್ತಿರುವುದು ನಿಮಗೆಲ್ಲ ಗೊತ್ತಿದೆ. ಈಗಿನ ಹೆಸರು ಲಕ್ಷ್ಮೀ ರೈ!!
ಕಳೆದ ವರ್ಷ ಮುಹೂರ್ತ ಕಂಡಿದ್ದ ರವಿಚಂದ್ರನ್ ನಟನೆಯ ‘ಶೃಂಗಾರ’ ಚಿತ್ರದಲ್ಲಿ ಅವಕಾಶ ಪಡೆದಿದ್ದ ಲಕ್ಷ್ಮೀ, ಆನಂತರ ಕಾಣೆಯಾಗಿದ್ದರು. ಆ ಬಳಿಕ ‘ಶೃಂಗಾರ’ ಕೂಡ ಸದ್ದಿಲ್ಲದಂತೆ ಮೌನವಾಯಿತು ಎನ್ನಿ. ಇನ್ನು ಲಕ್ಷ್ಮೀ ಹೆಸರಿಗಷ್ಟೇ ಕನ್ನಡದ ನಟಿ. ಅವರ ಸಿನಿಬದುಕು ಶುರುಗೊಂಡಿದ್ದು ತಮಿಳು ಚಿತ್ರರಂಗದಿಂದ. ಅವರ ಖಾತೆಯಲ್ಲಿ ತಮಿಳು ಚಿತ್ರಗಳಿಗೇ ಹೆಚ್ಚಿನ ಮನ್ನಣೆ. ಮಲಯಾಳಂ, ತೆಲುಗು ಚಿತ್ರಗಳಲ್ಲೂ ಅವರಿಗೆ ತಕ್ಕಮಟ್ಟಿನ ಖ್ಯಾತಿ ಇದೆ. ನಾಲ್ಕೈದು ಕನ್ನಡ ಚಿತ್ರಗಳಲ್ಲಿ ನಟಿಸಿರುವುದರಿಂದ ಅವರನ್ನು ಚತುರ್ಭಾಷ ನಟಿ ಎನ್ನಲಡ್ಡಿಯಿಲ್ಲ. ಸದ್ಯ ಅವರೀಗ ಸೋನಾಕ್ಷಿ ಸಿನ್ಹಾ ನಟನೆಯ ‘ಅಕಿರಾ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ಮುಖೇನ ಬಾಲಿವುಡ್ಗೆ ಎಂಟ್ರಿ ಹಾಕಿದ್ದಾರೆ.
ಇದನ್ನು ಟ್ವಿಟರ್ ಮೂಲಕ ಖಚಿತಪಡಿಸಿರುವ ಲಕ್ಷ್ಮೀ, ‘ನಾನು ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದನ್ನು ಹೇಳಿಕೊಳ್ಳುವುದಕ್ಕೆ ಖುಷಿಯಾಗುತ್ತದೆ.
ಹಿಂದಿಯಲ್ಲಿ ‘ಅಕಿರಾ’ ನನ್ನ ಮೊದಲ ಚಿತ್ರವಾಗಲಿದೆ’ ಎಂದಿದ್ದಾರೆ. ಅಲ್ಲಿಗೆ ಅವರನ್ನು ಪಂಚಭಾಷಾ ನಟಿ ಎನ್ನಬಹುದೇನೋ? ಹೊಗಲಿಬಿಡಿ. ಇನ್ನೂ, ಈ ಚಿತ್ರಕ್ಕೆ ತಮಿಳಿನ ಎ.ಆರ್. ಮುರುಗದಾಸ್ ನಿರ್ದೇಶಕ ಎಂಬುದು ಗಮನಿಸಬೇಕಾದ ಅಂಶ. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ‘ಅಕಿರಾ’ದಲ್ಲಿ ಖಳನಾಗಿ ಅಬ್ಬರಿಸಲಿದ್ದು, ಅವರಿಗೆ ಜೋಡಿಯಾಗಿ ಲಕ್ಷ್ಮೀ ಕಾಣಿಸಿಕೊಳ್ಳಲಿದ್ದಾರಂತೆ. ಇದರಿಂದ ಶಾನೆ ಖುಷಿಗೊಂಡಿರುವ ಅವರು, ‘ಅನುರಾಗ್ ಅವರಂಥ ಅದ್ಭುತ ನಿರ್ದೇಶಕ, ನಟನೊಂದಿಗೆ ತೆರೆಹಂಚಿಕೊಳ್ಳುವುದು ನನಗೆ ಸೌಭಾಗ್ಯವೇ ಸರಿ. ಬಾಲಿವುಡ್ ಪ್ರವೇಶಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ’ ಅಂತ ಖುಷಿಪಡುತ್ತಾರೆ.
‘ಅಕಿರಾ’ ಮೂಲಕ ಸೋನಾಕ್ಷಿ ಸಿನ್ಹಾ ಮೊದಲ ಬಾರಿಗೆ ಸಾಹಸ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಮಹಿಳಾ ಕೇಂದ್ರಿತ ಚಿತ್ರದಲ್ಲಿ ಸೋನು ತಂದೆ ಶತ್ರುಘ್ನ ಸಿನ್ಹಾ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.