ಮನೋರಂಜನೆ

ನಟ ರಕ್ಷಿತ್ ಶೆಟ್ಟಿ ಅಭಿನಯದ ‘ವಾಸ್ತು ಪ್ರಕಾರ’ ಚಿತ್ರ: ವಾಸ್ತು ಹಲಗೆಯ ಮೇಲೆ ಮಾಲ್ಗುಡಿ ಕನಸು

Pinterest LinkedIn Tumblr

psmec01RAKSHIT2

-ಸಂದರ್ಶನ: ಗಣೇಶ ವೈದ್ಯ
ನಟ ರಕ್ಷಿತ್ ಶೆಟ್ಟಿ ಅಭಿನಯದ ‘ವಾಸ್ತು ಪ್ರಕಾರ’ ಚಿತ್ರ ಗುರುವಾರ (ಏಪ್ರಿಲ್ 2) ತೆರೆಗೆ ಬರುತ್ತಿದೆ. ಅವರ ಅಭಿನಯ ಮತ್ತು ನಿರ್ದೇಶನದಲ್ಲಿ ಕಳೆದ ವರ್ಷ ತೆರೆ ಕಂಡ ‘ಉಳಿದವರು ಕಂಡಂತೆ’ ಚಿತ್ರದ ನಂತರ ಅವರ ಯಾವ ಚಿತ್ರಗಳೂ ಬಿಡುಗಡೆ ಆಗಿಲ್ಲ. ಈಗ ಯೋಗರಾಜ್ ಭಟ್ ನಿರ್ದೇಶನವಿರುವ ‘ವಾಸ್ತು ಪ್ರಕಾರ’ದ ಮೇಲೆ ಅಭಿಮಾನಿಗಳ ನಿರೀಕ್ಷೆ ದೊಡ್ಡ ಪ್ರಮಾಣದಲ್ಲೇ ಇದೆ. ಹಾಗೇ ರಕ್ಷಿತ್ ಅವರಲ್ಲೂ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಆ ಬಗ್ಗೆ ಅವರು ‘ಮೆಟ್ರೊ’ ಜತೆ ಮಾತನಾಡಿದ್ದಾರೆ.

*ರಕ್ಷಿತ್ ತಮ್ಮ ಅಭಿಮಾನಿಗಳನ್ನು ತುಂಬಾ ಕಾಯಿಸುತ್ತಿದ್ದಾರಲ್ಲ?
ಸಿನಿಮಾ ಇಂಡಸ್ಟ್ರಿಯಲ್ಲಿ ಹೆಂಗೆ ಅಂತ ಹೇಳೋಕಾಗಲ್ಲ. ‘ವಾಸ್ತು ಪ್ರಕಾರ’ ಕಳೆದ ನವೆಂಬರ್‌ನಲ್ಲೇ ಬಿಡುಗಡೆಯಾಗಬೇಕಿತ್ತು. ಚಿತ್ರಮಂದಿರಗಳ ಕೊರತೆ, ವಿಶ್ವಕಪ್ ಹೀಗೆ ಕೆಲ ಕಾರಣಗಳಿಂದಾಗಿ ಐದು ತಿಂಗಳು ತಡವಾಯಿತು. ‘ಉಳಿದವರು ಕಂಡಂತೆ’ ನಂತರ ಮೂರು ತಿಂಗಳು ಬಿಡುವು ತೆಗೆದುಕೊಂಡಿದ್ದೆ. ಅದರ ನಂತರ ನಿರಂತರವಾಗಿ ಸಿನಿಮಾ ಮಾಡುತ್ತಲೇ ಇದ್ದೇನೆ. ಕೆಲ ಕಾರಣಗಳಿಂದಾಗಿ ನನ್ನ ಸಿನಿಮಾಗಳು ತಡವಾಗಿವೆ ಅಷ್ಟೆ.

* ‘ವಾಸ್ತು…’ ಮೇಲೆ ನಿಮ್ಮ ನಿರೀಕ್ಷೆಗಳೇನು?
ಇದು ಬಹು ತಾರಾಗಣವಿರುವ ಚಿತ್ರ. ಜಗ್ಗೇಶ್, ಪಾರುಲ್ ಯಾದವ್, ಐಶಾನಿ ಶೆಟ್ಟಿ ನಟನೆಯಲ್ಲಿದ್ದರೆ ಭಟ್ಟರ ನಿರ್ದೇಶನವಿದೆ. ಭಟ್ಟರ ನಿರ್ದೇಶನ ಅಂದರೆ ಸಹಜವಾಗಿಯೇ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಇದ್ದೇ ಇರುತ್ತದೆ. ನನಗೂ ಈ ಚಿತ್ರ ಒಳ್ಳೆಯ ಯಶಸ್ಸು ಕೊಡುತ್ತದೆಂಬ ಭರವಸೆಯಿದೆ. ಈ ಚಿತ್ರ ಗೆದ್ದರೆ ಭವಿಷ್ಯ ಒಳ್ಳೆಯದಾಗಿರುತ್ತದೆ. ಏಕೆಂದರೆ ಮುಂದೆ ‘ರಿಕ್ಕಿ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸರತಿಯಲ್ಲಿವೆ.

*ನೀವು ವಾಸ್ತು ಪರವೇ– ವಿರುದ್ಧವೇ?
ವಾಸ್ತು ಕೆಟ್ಟದ್ದಂತೂ ಇಲ್ಲ. ಜಗ್ಗಣ್ಣ ವಾಸ್ತು ಇಂಥದ್ದನ್ನೆಲ್ಲ ನಂಬುವವರು. ಭಟ್ಟರು ತಾರ್ಕಿಕವಾಗಿ ಚರ್ಚಿಸುವವರು. ಇಬ್ಬರ ಮಧ್ಯೆ ನಾನು ಸಿಕ್ಕಿಕೊಂಡಿದ್ದೆ. ಭಟ್ಟರು ವಾಸ್ತು ವಿರೋಧಿ ಅಲ್ಲ. ಆದರೆ ಕುರುಡರಂತೆ ಅದನ್ನು ಅನುಸರಿಸುವುದನ್ನು ಅವರು ಪ್ರಶ್ನಿಸುತ್ತಾರೆ. ಒಮ್ಮೆ ಕಟ್ಟಿರುವ ಮನೆಯನ್ನು ವಾಸ್ತು ಸರಿ ಇಲ್ಲ ಎಂದು ಅದನ್ನು ಒಡೆದು ಮತ್ತೆ ಕಟ್ಟುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದು ಅವರ ವಾದ. ಚಿತ್ರವೂ ವಾಸ್ತು ವಿರೋಧವಾಗಿ ಏನಿಲ್ಲ. ನಾನೂ ಆ ಸಿದ್ಧಾಂತದ ಹಿಂಬಾಲಕ. ಹಾಗೆಯೇ ನಾನು ಹೊಸ ಮನೆ ಕಟ್ಟಿಸುವುದಾದರೆ ವಾಸ್ತು ಪ್ರಕಾರವೇ ಕಟ್ಟಿಸುತ್ತೇನೆ. ಸುಮ್ಮನೇ ಯಾಕೆ ‘ರಿಸ್ಕ್’ ತಗೋಬೇಕು ಅಲ್ವಾ?

*ಉಳಿದ ಚಿತ್ರಗಳು ಎಲ್ಲಿಯವರೆಗೆ ಬಂದಿವೆ?
‘ರಿಕ್ಕಿ’ಯಲ್ಲಿ ಒಂದೆರಡು ಹಾಡುಗಳು ಬಾಕಿಯಿವೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಕೆಲವು ದೃಶ್ಯಗಳ ಚಿತ್ರೀಕರಣವಾಗಬೇಕಿದೆ. ಅಷ್ಟಾದರೆ ಆ ಚಿತ್ರಗಳೂ ಬಿಡುಗಡೆಗೆ ಸಿದ್ಧ. ‘ವಾಸ್ತು ಪ್ರಕಾರ’ದ ನಂತರವೇ ಆ ಸಿನಿಮಾಗಳನ್ನು ಬಿಡುಗಡೆ ಮಾಡುವ ಯೋಜನೆಯಿಂದಾಗಿ ಸ್ವಲ್ಪ ನಿಧಾನಕ್ಕೆ ಚಿತ್ರೀಕರಣ ಮುಗಿಸುತ್ತಿದ್ದೇವೆ. ಅದರ ನಂತರ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ‘ದಪ್ಪ ಮೆಣಸಿನಕಾಯಿ’, ಗಿರಿರಾಜ್ ನಿರ್ದೇಶನದಲ್ಲಿ ‘ವಾಂಟೆಡ್’ ಮತ್ತೊಂದು ‘ಶ್ರೀಮನ್ನಾರಾಯಣ’ ಚಿತ್ರಗಳು ಸದ್ಯ ಕೈಲಿವೆ.

*‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಶೀರ್ಷಿಕೆ ಆಸಕ್ತಿದಾಯಕವಾಗಿದೆಯಲ್ಲ?
ಹಳೇ ಕಾಲದಲ್ಲಿ ಯಾರಾದರೂ ಕಾಣೆಯಾದಾಗ ದೂರದರ್ಶನದಲ್ಲಿ ‘ಕಾಣೆಯಾಗಿದ್ದಾರೆ’ ಪ್ರಕಟಣೆ ಬರುತ್ತಿತ್ತು. ಅದರಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಎಂದು ಗುರುತು ಹೇಳಲಾಗುತ್ತಿತ್ತು. ಅದೇ ಪ್ರೇರಣೆಯಿಂದ ಚಿತ್ರಕ್ಕೆ ಈ ಹೆಸರಿಡಲಾಗಿದೆ. ಇದರಲ್ಲಿ ಅನಂತ್‌ನಾಗ್ ಅವರು ನನ್ನ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಅವರ ಇಳಿಗಾಲದಲ್ಲಿ ಅವರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ. ಒಮ್ಮೆ ಅವರು ಕಾಣೆಯಾಗಿಬಿಡುತ್ತಾರೆ. ಅವರ ಕುರಿತಾದ ಪ್ರಕಟಣೆಯಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಪ್ರಸ್ತಾಪವಾಗುತ್ತದೆ.

*ಸುದೀಪ್‌ಗೆ ನಿರ್ದೇಶನ ಮಾಡುತ್ತೀರಂತೆ?
ಹೌದು. ಸುದೀಪ್ ಅವರಿಗೆ ‘ಉಳಿದವರು ಕಂಡಂತೆ’ ಇಷ್ಟವಾಗಿತ್ತು. ಹಾಗಾಗಿ ನನ್ನ ನಿರ್ದೇಶನದ ‘ಥಗ್ಸ್ ಆಫ್ ಮಾಲ್ಗುಡಿ’ಯಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ಸುದೀಪ್ ಅವರು ನಟಿಸುತ್ತಿದ್ದಾರೆಂದರೆ ಕಮರ್ಷಿಯಲ್ ಅಂಶಗಳೂ ಇರಬೇಕಾಗುತ್ತವೆ. ಅಂಥ ಅಂಶಗಳಿರುವ ಕಥೆ ‘ಥಗ್ಸ್ ಆಫ್ ಮಾಲ್ಗುಡಿ’. ‘ಮಾಲ್ಗುಡಿ ಡೇಸ್’ ಎಲ್ಲರಿಗೂ ಗೊತ್ತೇ ಇದೆ. ಆದರೆ ಮಾಲ್ಗುಡಿ ಕಾಲ್ಪನಿಕ ಪ್ರದೇಶ. ಈ ಕಥೆಯೂ ಮಾಲ್ಗುಡಿಯಲ್ಲೇ ನಡೆಯುವುದು. ಸದ್ಯ ಕೈಲಿರುವ ಚಿತ್ರಗಳನ್ನು ಮುಗಿಸಿಕೊಂಡು ಈ ವರ್ಷದ ಕೊನೆಯಲ್ಲಿ ‘ಥಗ್ಸ್ ಆಫ್ ಮಾಲ್ಗುಡಿ’ ಆರಂಭಿಸುತ್ತೇನೆ.
***
ನಾನು ಹೊಸ ಮನೆ ಕಟ್ಟಿಸುವುದಾದರೆ ವಾಸ್ತು ಪ್ರಕಾರವೇ ಕಟ್ಟಿಸುತ್ತೇನೆ. ಸುಮ್ಮನೇ ಯಾಕೆ ‘ರಿಸ್ಕ್’ ತಗೋಬೇಕು ಅಲ್ವಾ?
ರಕ್ಷಿತ್‌ ಶೆಟ್ಟಿ, ನಟ

Write A Comment