-ದಯಾನಂದ
ಹುಬ್ಬು ಗಂಟಿಕ್ಕಿ, ಕಣ್ಣು ಕಿರಿದುಮಾಡಿ, ಕೆನ್ನೆಯ ಸ್ನಾಯುಗಳನ್ನೆಲ್ಲಾ ಬಿಗಿಗೊಳಿಸಿ, ಹಲ್ಲು ಕಚ್ಚಿ ಕುಳಿತವರನ್ನು ಮಾತಿಗೆ ಎಳೆಯುವುದು ಸುಲಭವಲ್ಲ. ಆದರೆ, ಒಂದು ಕಿರುನಗೆ ಅಪರಿಚಿತರನ್ನೂ ಸ್ನೇಹಿತರನ್ನಾಗಿ ಮಾಡಬಲ್ಲದು. ನಗುವಿಗಿರುವ ಶಕ್ತಿ ಅಂಥದ್ದು. ನಕ್ಕರೆ ಮುತ್ತು ಉದುರುತ್ತವೆ ಎಂಬಂತೆ ವರ್ತಿಸುವ ಅದೆಷ್ಟೋ ಜನಕ್ಕೆ ನಗುವುದು ಮುಖ ಗಂಟಿಕ್ಕುವುದಕ್ಕಿಂತ ಪ್ರಯೋಜನಕಾರಿ ಎಂಬುದು ಗೊತ್ತಿಲ್ಲ. ನಗಲು ಮುಖದ 17 ಸ್ನಾಯುಗಳು ಸಾಕು. ಆದರೆ, ಮುಖ ಗಂಟಿಕ್ಕಲು 43 ಸ್ನಾಯುಗಳು ಕೆಲಸ ಮಾಡಬೇಕು. ಅಂದರೆ ನಗುವುದಕ್ಕಿಂತ ಮುಖ ಗಂಟಿಕ್ಕಲೇ ಹೆಚ್ಚು ಶ್ರಮಿಸಬೇಕು.
ನಗುವುದು ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲ ಸಂಬಂಧಗಳನ್ನು ಬೆಸೆಯುವ ದೃಷ್ಟಿ ಯಿಂದಲೂ ಅತಿ ಮುಖ್ಯ. ನಗುವಿಗೆ ನಗುವನ್ನು ಪಸರಿಸುವ ಗುಣವಿದೆ. ನೀವು ಒಂದು ಕಿರುನಗೆ ಬೀರಿದರೆ ಎದುರಿರುವ ವ್ಯಕ್ತಿಯ ಮುಖದ ಮೇಲೂ ಅರಿವಿಲ್ಲದಂತೆ ನಗು ಮೂಡುತ್ತದೆ. ಒಮ್ಮೆ ನಕ್ಕು ಸುಮ್ಮನಾದ ಮೇಲೆ ಮುಂದಿನ 45 ನಿಮಿಷ ದವರೆಗೂ ಮುಖದ ಸ್ನಾಯುಗಳು ಲವಲವಿಕೆ ಯಿಂದಿರುತ್ತವೆ ಎನ್ನುತ್ತದೆ ವೈದ್ಯ ವಿಜ್ಞಾನ.
ನಗೆಯೋಗ
ನಗುವಿನಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಒತ್ತಡ ನಿವಾರಣೆಯಾಗುತ್ತದೆ. ಮಾನಸಿಕವಾಗಿ ಅಷ್ಟೇ ಅಲ್ಲ ದೈಹಿಕ ನೋವುಗಳನ್ನೂ ಮರೆಸುವ ಅದ್ಭುತ ಶಕ್ತಿ ನಗುವಿಗಿದೆ. ಹೆಚ್ಚು ನಗುವವರನ್ನು ಹೃದಯ ಕಾಯಿಲೆಗಳು ಪೀಡಿಸುವುದು ಕಡಿಮೆ. ನಗು ಕೇವಲ ಒತ್ತಡ ನಿವಾರಕ ಮಾತ್ರವಲ್ಲ. ನಗುವಿನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚುತ್ತದೆ. ನಗೆಯೋಗದಲ್ಲಿ ತೊಡಗುವ ವರಿಂದ ರೋಗಗಳು ಸಾಕಷ್ಟು ದೂರದಲ್ಲಿರುತ್ತವೆ ಎನ್ನುತ್ತಾರೆ ವೈದ್ಯರು. ಹೀಗಾಗಿ ನಗೆಯೋಗ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.
ಹೇಗೆ ನಗಬೇಕು? ಎಷ್ಟು ನಗಬೇಕು? ಯಾವಾಗೆಲ್ಲಾ ನಗಬೇಕು? ನಗು ಹೇಗೆ ಹಿತವಾಗಿರಬೇಕು? ಎಂಬುದನ್ನೆಲ್ಲಾ ನಗೆಯೋಗದ ತರಗತಿಗಳಲ್ಲಿ ಹೇಳಿ ಕೊಡಲಾಗುತ್ತದೆ. ನಗರಗಳಲ್ಲಿ ನಗೆಯೋಗದ ತರಗತಿಗಳೂ ಹೆಚ್ಚುತ್ತಿವೆ. ಆದರೆ, ಹಾಸ್ಯ ಪ್ರವೃತ್ತಿ ಇರುವವರಿಗೆ ನಗೆ ಎಂಬುದು ಸು‘ಯೋಗ’ವಾಗಿಯೇ ದೊರೆತಿರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆ ಯೋಗ ಕಲಿಸುವ ‘ನಗೆಯೋಗಿ’ಗಳೂ ಈಗ ಹೆಚ್ಚಾಗಿದ್ದಾರೆ. ದೇಶ ವಿದೇಶಗಳಲ್ಲಿ ಬೃಹತ್ ‘ನಗೆ ಮಿಲನ’ದಂಥ ಕಾರ್ಯಕ್ರಮಗಳೂ ಕೂಡಾ ಜನಪ್ರಿಯವಾಗುತ್ತಿವೆ. ಹೆಚ್ಚೆಚ್ಚು ಜನ ಈ ಕಾರ್ಯಕ್ರಮಗಳಲ್ಲಿ ಕಲೆತು ನೆಗಯ ದೊಡ್ಡ ಅಲೆಗಳನ್ನೇ ಎಬ್ಬಿಸುತ್ತಾರೆ.
ಹ್ಹ ಹ್ಹ ಹ್ಹ …
ಉದ್ಯಾನಗಳಲ್ಲಿ ಬೆಳಿಗ್ಗೆ, ಸಂಜೆ ಜೋರು ಶಬ್ದ ಮಾಡುವ ‘ಹ್ಹ ಹ್ಹ ಹ್ಹ…’ ಕೇಳಿಯೇ ಇರುತ್ತೀರಿ. ನಗರಗಳ ಪ್ರತಿ ಉದ್ಯಾನದಲ್ಲೂ ಕನಿಷ್ಠ ಒಂದೊಂದು ನಗೆಕೂಟಗಳು ಈಗ ಸಾಮಾನ್ಯ ಎಂಬಂತಾಗಿದೆ. ನಗೆಕೂಟಗಳಲ್ಲಿ ಎಲ್ಲರೊಂದಿಗೆ ಸೇರಿ ಕೈ ಮೇಲೆತ್ತಿ, ಇಳಿಸಿ, ಎಡ ಬಲಕ್ಕೆ, ಮುಂದೆ ಹಿಂದೆ ಬಾಗಿ ದೊಡ್ಡ ನಗೆ ಬೀರುವುದು ಕೂಡಾ ಅನನ್ಯ ಅನುಭವವೇ. ಮೊದ ಮೊದಲು ‘ಇದೇನು ಹುಚ್ಚರ ಹಾಗೆ ನಗ್ತಾರೆ’ ಎಂದು ಮೂಗುಮುರಿಯುತ್ತ, ಮುಖ ಗಂಟಿಕ್ಕುತ್ತಿದ್ದವರೂ ಕ್ರಮೇಣ ನಗೆಕೂಟಗಳ ಸದಸ್ಯರಾಗಿದ್ದಾರೆ. ಬೆಳಿಗ್ಗೆ, ಸಾಧ್ಯವಾದರೆ ಸಂಜೆಯೂ ಒಂದರ್ಧ ಗಂಟೆ ನಗೆಕೂಟಗಳಲ್ಲಿ ಎಲ್ಲರೊಳಗೆ ಒಂದಾಗಿ ನಕ್ಕರೆ ಮನಸ್ಸು ಅರಳುತ್ತದೆ ಎಂಬುದು ಸುಳ್ಳಲ್ಲ. ವಯಸ್ಸಾದವರು ಮಾತ್ರವಲ್ಲದೆ ಮಕ್ಕಳು, ಯುವಕರು ಕೂಡಾ ಈಗ ನಗೆಕೂಟಗಳಿಗೆ ಸೇರುತ್ತಿದ್ದಾರೆ. ವಯಸ್ಸಿನ ಮಿತಿ ಇಲ್ಲದೆ ನಗೆಕೂಟಗಳು ಎಲ್ಲರನ್ನೂ ಸೆಳೆದುಕೊಳ್ಳುತ್ತಿವೆ. ಇದೇ ಅಲ್ಲವೆ ನಗುವಿನ ಶಕ್ತಿ!
ನಗು… ನಕ್ಕು ಹಗುರಾಗು
*ಒತ್ತಡ ನಿವಾರಣೆ
*ಸಹಜ ರಕ್ತ ಪರಿಚಲನೆ
*ನೋವಿನಿಂದ ಬಿಡುಗಡೆ
*ಸ್ನಾಯುಗಳಿಗೆ ಆರಾಮ
*ಹೃದ್ರೋಗಗಳು ದೂರ
*ರೋಗ ನಿರೋಧಕ ಶಕ್ತಿ ಹೆಚ್ಚಳ
*ಕೋಪಕ್ಕೆ ಕಡಿವಾಣ
*ಆಕರ್ಷಕ ವ್ಯಕ್ತಿತ್ವ ಬೆಳವಣಿಗೆ
*ಆತ್ಮ ವಿಶ್ವಾಸ ವೃದ್ಧಿ
*ಹರಡುವ ನಗೆಯಲೆ
*ಹಿತ ವಾತಾವರಣ ಸೃಷ್ಟಿ
***
ಕಗ್ಗದ ನಗೆವ್ಯಾಖ್ಯೆ
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ
***
ನಗುವೇ ಯೋಗ
ನಕ್ಕರೆ ನಮಗೆ ಅರಿವಿಲ್ಲದಂತೇ ಅದೆಷ್ಟೋ ಉಪಯೋಗಗಳನ್ನು ಪಡೆದಿರುತ್ತೇವೆ. ಜತೆಗೆ ನಗುವಿನ ಹಲವು ಆಯಾಮಗಳನ್ನು ತಿಳಿದುಕೊಳ್ಳುವುದು ಆರೋಗ್ಯ ಹಾಗೂ ಸಾಮಾಜಿಕ ಸಂಬಂಧ ವೃದ್ಧಿಯ ದೃಷ್ಟಿಯಿಂದಲೂ ಮುಖ್ಯ. ನಗೆಕೂಟಗಳೂ ಈಗ ಹೆಚ್ಚಾಗುತ್ತಿವೆ. ನಗೆಯೋಗದ ಬಗ್ಗೆ ಜನರ ಕುತೂಹಲ ಈಗ ಹೆಚ್ಚಾಗಿದೆ. ನಗೆಕೂಟಗಳ ನಗೆಯೋಗದ ಸದಸ್ಯರಾಗುವುದು ಬಹಳ ಸುಲಭ. ನಗೆಕೂಟ ಸೇರಿ ನಗಲು ಶುರು ಮಾಡಿದರೆ ಸಾಕು. – ವಿ.ರಾಮಮೂರ್ತಿ, ನಗೆ ರಾಯಭಾರಿ, ಕರ್ನಾಟಕ ನಗೆಯೋಗ ಸಂಘಟನೆ
ನಗಿಸುವುದು ಸೃ‘ಧರ್ಮ’!
‘ಜನ ಇತ್ತೀಚೆಗೆ ನಗುವುದನ್ನು ಮರೆಯುತ್ತಿದ್ದಾರೆ. ಸಹಜ ನಗು ಕಾಣೆಯಾಗುತ್ತಿದೆ. ವಯಸ್ಸಾದ ಮೇಲೆ ಆರೋಗ್ಯದ ಕಾರಣಕ್ಕೆ ಬಲವಂತವಾಗಿ ನಗುವುದಕ್ಕಿಂತ ಆಯಾ ವಯಸ್ಸಿನಲ್ಲಿ ಸಹಜವಾದ ನಗೆಯನ್ನು ಕಾಯ್ದುಕೊಳ್ಳುವುದು ಮುಖ್ಯ. ನಗೆಯ ಬಗ್ಗೆ ಮಾತನಾಡುವುದಕ್ಕಿಂತ ನಗಿಸುವುದೇ ನನಗೆ ಪ್ರಿಯ. – ಸೃಜನ್ ಲೋಕೇಶ್, ಹಾಸ್ಯ ಕಾರ್ಯಕ್ರಮ ನಿರೂಪಕ