ಮನೋರಂಜನೆ

ಓಂಪ್ರಕಾಶ್ ರಾವ್ ನಿರ್ದೇಶನದ ‘ಕಟ್ಟೆ’ಯಲ್ಲಿ ಮಾಲ್ಗುಡಿ ಕಂಪು

Pinterest LinkedIn Tumblr

crec27katte2

ಓಂಪ್ರಕಾಶ್ ರಾವ್ ನಿರ್ದೇಶನದ ‘ಕಟ್ಟೆ’ ಮುಂದಿನ ವಾರ (ಏಪ್ರಿಲ್ 3) ತೆರೆಕಂಡಿರುವ ಮತ್ತೊಂದು ಚಿತ್ರ. ವಿಶೇಷವೆಂದರೆ ಶಂಕರ್‌ನಾಗ್ ಅವರ ಯಶಸ್ವಿ ದೃಶ್ಯರೂಪಗಳಲ್ಲಿ ಒಂದಾದ ‘ಮಾಲ್ಗುಡಿ ಡೇಸ್’ನ ಒಂದಷ್ಟು ನೆನಪುಗಳನ್ನು ಈ ‘ಕಟ್ಟೆ’ ಕಟ್ಟಿಕೊಟ್ಟಿದೆ. ಅಂದರೆ ಕಟ್ಟೆಗೆ ‘ಮಾಲ್ಗುಡಿ ಡೇಸ್‌’ನ ಪ್ರೇರಣೆ ಇದೆ. ಹಾಗಾಗಿ ಚಿತ್ರವನ್ನು ಶಂಕರ್‌ನಾಗ್ ಅವರಿಗೆ ಅರ್ಪಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಸಾಮಾನ್ಯವಾಗಿ ಪ್ರತಿ ಊರಿನಲ್ಲೂ ಇರುವಂತಹ ಒಂದು ಕಟ್ಟೆ ಈ ಚಿತ್ರದಲ್ಲೂ ಇದೆ. ಆ ಕಟ್ಟೆಯಲ್ಲಿ ಊರಿನ ಒಂದಷ್ಟು ಉಂಡಾಡಿಗುಂಡರಂತಹ ಹುಡುಗರು ಕೂತು ಭವಿಷ್ಯದ ಬಗ್ಗೆ ಚಿಂತಿಸುವ ಕಥೆಯ ಹಿನ್ನೆಲೆ ಇಲ್ಲಿದೆ.   ನಾಲ್ವರ ಕಥೆಯನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದಾರಂತೆ. ಅಂದಹಾಗೆ, ಈ ‘ಕಟ್ಟೆ’ ತಮಿಳಿನ ‘ಕೇಡಿ ಬಿಲ್ಲ ಕಿಲಾಡಿ ರಂಗ’ ಚಿತ್ರದ ಕನ್ನಡ ರೂಪ.

ನಾಗಶೇಖರ್‌, ಚಂದನ್, ಓಂಪ್ರಕಾಶ್ ರಾವ್ ಹರಟೆ ಕಟ್ಟೆಯ ಸದಸ್ಯರು. ನಾಗಶೇಖರ್‌ಗೆ ಓಂಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ ಮತ್ತು ಚಂದನ್‌ಗೆ ರುಕ್ಸಾರ್ ಜೋಡಿಯಾಗಿದ್ದಾರೆ. ಓಂಪ್ರಕಾಶ್ ಅವರನ್ನು ಕಟ್ಟಿಕೊಂಡು ಅವರ ಬೇಜವಾಬ್ದಾರಿತನಕ್ಕೆ ಮರುಗುವ ಗೃಹಿಣಿಯಾಗಿ ಗೀತಾ ನಟಿಸಿದ್ದಾರೆ. ಹೊಸಬರನ್ನು ನೆಚ್ಚಿ, ಕಥೆಯನ್ನು ನಂಬಿ, ಬಂಡವಾಳ ಹೂಡಿದವರು ಉಮೇಶ್ ರೆಡ್ಡಿ.

ಹುಡುಗಿ ಹಿಂದೆ ಬಿದ್ದು ಅವಳಿಂದ ಸದಾ ಕಾಲ ಬೈಸಿಕೊಂಡು, ಚಿಲ್ಲರೆ ಖರ್ಚಿಗೂ ತಂದೆಯ ಜೇಬಿನಿಂದ ಹಣ ಕದ್ದು, ಪ್ರತಿ ರಾತ್ರಿ ಕಡಿದು ಬಂದು ಮನೆಯಲ್ಲಿ ಕಿರಿಕಿರಿ ಮಾಡುವ ‘ಮನೆಗೆ ಮಾರಿ’ ಪಾತ್ರ ನಾಗಶೇಖರ್‌ ಅವರದು. ಯುವಜನತೆ ಸಮಾಜಕ್ಕೆ ಒಳ್ಳೆಯ ನಾಗರಿಕರಾಗದೆ, ಮನೆಗೆ ಉಪಕಾರಿಯಾಗದೆ, ಅಪ್ಪ ಅಮ್ಮನಿಗೆ ಒಳ್ಳೆಯ ಮಕ್ಕಳಾಗದೆ ಹೋದರೆ ಅವರ ಜೀವನದಲ್ಲಿ ಏನಾಗಬಹುದು ಎಂಬುದೇ ‘ಕಟ್ಟೆ’ ಕಥೆ. ಕೊನೆಗೂ ಹೆತ್ತವರೇ ಮಕ್ಕಳಿಗೆ ಒಳಿತು ಬಯಸುವವರು ಎಂಬ ಸಂದೇಶ ಚಿತ್ರದಲ್ಲಿದೆಯಂತೆ.

ಹಳ್ಳಿಕಟ್ಟೆಯ ಸುಧಾರಿತ ಆವೃತ್ತಿ ‘ಕಟ್ಟೆ’ ಎನ್ನುವುದು ಶ್ರಾವ್ಯ ಅನಿಸಿಕೆ. ಹಾಸ್ಯದ ಮೂಲಕವೇ ಪ್ರತಿ ಸಂಬಂಧದ ಮಹತ್ವ ತಿಳಿಸುವ ಪ್ರಯತ್ನ ನಮ್ಮ ಸಿನಿಮಾ ಎಂದವರು ಬಣ್ಣಿಸುತ್ತಾರೆ. ಅವರು ಯಾವಾಗಲೂ ನಾಯಕನಿಗೆ ಬೈಯುತ್ತಲೇ ಇರುವ ನಾಯಕಿ. ನಮ್ಮದು ಕಟ್ಟೆ ಪುರಾಣ ಮಾಡುವ ಹುಡುಗರ ಭ್ರಮೆ ಬಿಡಿಸುವ ಚಿತ್ರ ಎನ್ನುತ್ತಾರೆ ಚಂದನ್. ರುಕ್ಸಾರ್‌ಗೆ ಇದು ಮೊದಲ ಕನ್ನಡ ಚಿತ್ರ.

ಎಸ್.ಎ ರಾಜ್‌ಕುಮಾರ್ ಸಂಗೀತ, ರವಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಒಂದೊಂದು ಹಾಡನ್ನೂ ವಿಶಿಷ್ಟ ಪರಿಕಲ್ಪನೆ ಹಿನ್ನೆಲೆಯಲ್ಲಿ ನೃತ್ಯ ಸಂಯೋಜಕ ತ್ರಿಭುವನ್ ಸಂಯೋಜಿಸಿದ್ದಾರಂತೆ. ಮುಮೈತ್ ಖಾನ್‌ ಕೂಡ ಒಂದು ‘ವಿಶೇಷ ನೃತ್ಯ’ಕ್ಕೆ ಮೈ ಬಳುಕಿಸಿರುವುದು ‘ಕಟ್ಟೆ’ಯ ವಿಶೇಷಗಳಲ್ಲೊಂದು. ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.

Write A Comment