ಮನೋರಂಜನೆ

ನಿರ್ದೇಶಕ ಟಿ.ಎನ್.ಸೀತಾರಾಂರಮಗ ಟಿ.ಎಸ್.ಸತ್ಯಜಿತ್ ರ ‘ಹಿಂಗ್ಯಾಕೆ’ ಚಿತ್ರ

Pinterest LinkedIn Tumblr

psmec28film_0

-ಗಣೇಶ ವೈದ್ಯ
ಜನಪ್ರಿಯ ಧಾರಾವಾಹಿ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಹೆಸರು ಗೊತ್ತಿರದ ಕನ್ನಡಿಗರು ಕಡಿಮೆಯೇ. ಆದರೆ ಧಾರಾವಾಹಿ ಕ್ಷೇತ್ರದಲ್ಲೇ ಇದ್ದ ಅವರ ಮಗ ಟಿ.ಎಸ್.ಸತ್ಯಜಿತ್ ಬಗ್ಗೆ ಎಷ್ಟು ಜನರಿಗೆ ಗೊತ್ತು? ‘ಚಿತ್ರಲೇಖ’, ‘ಮುಂಜಾವು’, ‘ಮಳೆಬಿಲ್ಲು’ಗಳಂತಹ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವವರು ಈ ಸತ್ಯಜಿತ್. ಧಾರಾವಾಹಿಗಳಲ್ಲೇ ಇದ್ದರೆ ಹೆಸರು ಮಾಡುವುದು ಕಷ್ಟ. ಹಾಗಾಗಿ ಸಿನಿಮಾ ಮಾಡಬೇಕೆಂದು ನಿರ್ಧರಿಸಿ ‘ಹಿಂಗ್ಯಾಕೆ’ ಎನ್ನುವ ಸಿನಿಮಾ ನಿರ್ದೇಶಿಸಿದ್ದಾರೆ.

ಅವರ ‘ಸಿನಿಮಾದಿಂದ ಜನಪ್ರಿಯತೆ’ ಕಲ್ಪನೆ ನಿಜವಾಗಿದೆ. ‘ಹಿಂಗ್ಯಾಕೆ’ ಬಿಡುಗಡೆಗೆ ಸಿದ್ಧವಾಗಿದೆ. ಬಿಡುಗಡೆಗೂ ಮುನ್ನವೇ ಸುದ್ದಿ ಮಾಡುತ್ತಿರುವ ಚಿತ್ರ ಅವರಿಗೆ ಒಂದಷ್ಟು ಹೆಸರು, ಹಣ ತಂದುಕೊಟ್ಟಿದೆ. ಸರಳ ವಿಚಾರವನ್ನು ಭಿನ್ನವಾಗಿ ಹೇಳುವ ಅವರ ಪ್ರಯತ್ನ ಇದುವರೆಗೆ ಸಿನಿಮಾ ನೋಡಿದವರಿಗೆ ಹಿಡಿಸಿದೆ. ಅದೇ ಕಾರಣಕ್ಕೆ ತಮಿಳು, ತೆಲುಗಿಗೂ ರಿಮೇಕ್ ಆಗುವ ಭಾಗ್ಯ ಸಿನಿಮಾಕ್ಕೆ ಒದಗಿದೆ.
ಚಿತ್ರ ವೀಕ್ಷಿಸಿರುವ ‘ಐ ಸಿನಿಮಾಸ್’ನ ಶ್ರೀನಿವಾಸ ರೆಡ್ಡಿ ಎಂಬುವವರು ‘ಎಲ್ಲರೂ ಸೇಫ್ ಆಗೋಕೆ ಪ್ರಯತ್ನಿಸುತ್ತಾರೆ. ಆದರೆ ಈ ಚಿತ್ರದಲ್ಲಿ ಅದರ ಹೊರತಾಗಿ ತಾಜಾತನವಿದೆ’ ಎಂದು ಸತ್ಯಜಿತ್ ಬೆನ್ನು ತಟ್ಟಿ ರಿಮೇಕ್ ಹಕ್ಕು ಪಡೆದಿದ್ದಾರೆ. ತಮಿಳು, ತೆಲುಗು ಎರಡಕ್ಕೂ ಅವರೇ ನಿರ್ಮಾಪಕರು.

ರೆಡ್ಡಿ ಅವರಿಗೆ ಮೊದಲು ಚೆನ್ನೈನಲ್ಲಿ ಸಿನಿಮಾ ತೋರಿಸಿದಾಗ ಅವರು, ‘ಚೆನ್ನಾಗಿದೆ. ಬೆಂಗಳೂರಿಗೆ ಬಂದಾಗ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದ್ದರು. ಆದರೆ ಒಂದೆರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದ ರೆಡ್ಡಿ ರಿಮೇಕ್ ಹಕ್ಕು ಪಡೆಯುವುದಾಗಿ ಹೇಳಿ ಸತ್ಯಜಿತ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಅಲ್ಲಿಗೆ ಬಿಡುಗಡೆಗೂ ಮುನ್ನವೇ ನಿರ್ದೇಶಕರಿಗೆ ‘ಮಿನಿಮಮ್ ಗ್ಯಾರಂಟಿ’ ದೊರತಂತಾಯ್ತು. ಮೊದಲ ಬಾರಿ ಅದೃಷ್ಟ ಪರೀಕ್ಷೆಗಿಳಿದ ನಿರ್ದೇಶಕನಿಗೆ ಇದಕ್ಕಿಂತ ಹೆಮ್ಮೆ ಬೇರಾವುದಿದೆ ಹೇಳಿ.

ಕನ್ನಡದಲ್ಲಿ ಏಪ್ರಿಲ್ 17ಕ್ಕೆ ‘ಹಿಂಗ್ಯಾಕೆ’ ಬಿಡುಗಡೆಯಾಗಲಿದೆ. ಆದರೆ ತಮಿಳು ತೆಲುಗಿನಲ್ಲಿ ನಿರ್ದೇಶಕರು ಯಾರೆಂದು ನಿರ್ಧಾರವಾಗಿಲ್ಲ. ಒಂದು ವೇಳೆ ನೀವೇ ನಿರ್ದೇಶಕರಾಗುವ ಅವಕಾಶ ಬಂದರೆ ಏನು ಮಾಡುತ್ತೀರಿ ಎಂದರೆ, ‘ಬಹುಶಃ ನನಗೆ ಕರೆ ಬರಲಾರದು. ಹಾಗೊಮ್ಮೆ ಬಂದರೂ ನಾನು ಒಪ್ಪಿಕೊಳ್ಳುವುದು ಅನುಮಾನ. ಈಗಾಗಲೇ ಒಮ್ಮೆ ಸಿನಿಮಾ ಮಾಡಿದ್ದೀನಿ. ಮತ್ತೆ ಅದೇ ಸಿನಿಮಾಕ್ಕಾಗಿ ತಲೆ ಕೆಡಿಸಿಕೊಳ್ಳುವುದಕ್ಕಿಂತ ನನ್ನ ಹೃದಯಕ್ಕೆ ಹತ್ತಿರವಾದ ಕನ್ನಡದಲ್ಲೇ ಹೊಸತಾಗಿ ಏನಾದರೂ ಮಾಡಬಹುದಲ್ಲ’ ಎಂಬ ನಿಲುವು ಪ್ರಕಟಿಸುತ್ತಾರೆ ಸತ್ಯಜಿತ್.

‘ಕಾಲೇಜಿನಲ್ಲಿ ಓದುತ್ತಿರುವ ಹುಡುಗ. ಅಲ್ಲಿ ಏನೇನೆಲ್ಲ ನಡೆಯುತ್ತದೆ. ನಂತರ ಸಂದರ್ಶನ ಎದುರಿಸಿ ಕೆಲಸ ಗಿಟ್ಟಿಸುತ್ತಾನೆ. ಒಬ್ಬ ಹುಡುಗಿಯನ್ನು ಭೇಟಿಯಾಗುತ್ತಾನೆ. ಮುಂದೆ ಏನೇನಾಗುತ್ತದೆ’ ಎಂಬುದಷ್ಟೇ ಕಥೆ. ಈ ಸರಳ ಕಥೆಯನ್ನು ಭಿನ್ನ ಚಿತ್ರಕಥೆ ಇಟ್ಟುಕೊಂಡು ಭರ್ತಿ ಹಾಸ್ಯದ ಮೂಲಕ ಹೇಳ ಹೊರಟಿದ್ದಾರೆ ಸತ್ಯಜಿತ್. ಚಿತ್ರ ಮಂದಿರದಲ್ಲಿ ಕಳೆವ ಎರಡು ಗಂಟೆ ಸಂಪೂರ್ಣವಾಗಿ ಮನರಂಜನೆ ಸಿಗುತ್ತದೆ ಎಂಬ ಗ್ಯಾರಂಟಿ ನೀಡುತ್ತಾರೆ.

ಇಂಗ್ಲಿಷ್‌ನ ಪಿ.ಜಿ. ವುಡ್‌ಹೌಸ್ ಅವರ ಬರಹ ಹಾಗೂ ದೇವಾಂಗ್ ಪಟೇಲ್ ಎಂಬ ಹಿಂದಿಯ ಸಂಗೀತ ನಿರ್ದೇಶಕರ ತೆಳು ಹಾಸ್ಯ ಪ್ರಜ್ಞೆಯಿಂದ ಸತ್ಯಜಿತ್ ಪ್ರೇರಿತರಾದವರು. ಅದೇ ಪರಿಕಲ್ಪನೆ ಮೇಲೆ ‘ಹಿಂಗ್ಯಾಕೆ’ ಸಿದ್ಧವಾಗಿದೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಯಾವ ದೃಶ್ಯವೂ ಒಂದು ನಿಮಿಷ ಕೂಡ ಮೀರಿಲ್ಲವಂತೆ. ಹೊಸಬರನ್ನು ಇಟ್ಟುಕೊಂಡು ದೋಣಿ ಸಾಗಿಸಿರುವ ಅವರ ಕೈಲಿ ಇನ್ನೂ ಒಂದೆರಡು ಸ್ಕ್ರಿಪ್ಟ್ ತಯಾರಿವೆ. ‘ಹಿಂಗ್ಯಾಕೆ’ ಫಲಿತಾಂಶ ನೋಡಿಕೊಂಡು, ಆಮೇಲೆ ಆ ಸಿನಿಮಾ ಕೆಲಸಗಳನ್ನು ಶುರು ಮಾಡಲಿದ್ದಾರೆ.

ಖುಲಾಯಿಸಿದ ಲಕ್; ಜ್ಯೋತಿಷಿ ನಿರ್ಮಾಪಕ!

‘ಹಿಂಗ್ಯಾಕೆ’ ಸಿದ್ಧವಾದ ಕಥೆ ಕುತೂಹಲವಾಗಿದೆ. ‘ಮುಂಜಾವು’ ಧಾರಾವಾಹಿಯ ಕಥೆಯ ಮೇಲೆ ಕೆಲಸ ಮಾಡಲು ಹೋಗಿ ಅದ್ಯಾಕೋ ಸರಿ ಬಾರದಿದ್ದಾಗ ಸತ್ಯಜಿತ್ ಕೊಂಚ ಖಿನ್ನತೆಗೂ ಒಳಗಾಗಿದ್ದರಂತೆ. ಆಗ ಯಾರೋ ಮಹಾನುಭಾವರು ಸತ್ಯಜಿತ್‌ ಅವರನ್ನು ಒಬ್ಬ ಜ್ಯೋತಿಷಿಯ ಬಳಿ ಕರೆದೊಯ್ದಿದ್ದಾರೆ. ‘ನನ್ನ ಟೈಮ್ ಯಾವಾಗ ಸರಿ ಹೋಗುತ್ತೆ’ ಎಂಬ ಸತ್ಯಜಿತ್ ಪ್ರಶ್ನೆಗೆ, ‘ಇನ್ನೊಂದು ಆರು ತಿಂಗಳು ಸುಮ್ಮನಿರು. ಆಮೇಲೆ ಲಕ್ ಖುಲಾಯಿಸುತ್ತೆ’ ಎಂದಿದ್ದರು ಜ್ಯೋತಿಷಿಗಳು.

ನಾಲ್ಕಾಯ್ತು, ಐದಾಯ್ತು, ಆರು ತಿಂಗಳಾದರೂ ಸತ್ಯಜಿತ್‌ಗೆ ಅಂಥ ಯಾವ ಬದಲಾವಣೆಗಳೂ ಕಾಣದಿದ್ದಾಗ, ‘ನೀವು ಹೇಳಿದಂತೆ ಯಾವ ಬದಲಾವಣೆಯೂ ಆಗಿಲ್ಲವಲ್ಲ’ ಎಂದು ಜ್ಯೋತಿಷಿಗೆ ಬೆನ್ನುಬಿದ್ದರು. ಆಗ ಜ್ಯೋತಿಷಿ, ‘ಸರಿ. ಈಗ ನೀನೇನು ಮಾಡಬೇಕಂತಿದ್ದೀಯಾ’ ಎಂದು ಕೇಳಿದ ತಕ್ಷಣ ‘ಸಿನಿಮಾ ಮಾಡಬೇಕೆಂದಿದ್ದೇನೆ’ ಎಂದಿದ್ದಾರೆ ಸತ್ಯಜಿತ್. ಅದಕ್ಕೆ ಜೈ ಎಂದ ಜ್ಯೋತಿಷಿ, ‘ಹಾಗೇ ಆಗಲಿ. ನಿನ್ನ ಸಿನಿಮಾವನ್ನು ನಾನೇ ನಿರ್ಮಾಣ ಮಾಡುತ್ತೇನೆ. ಒಳ್ಳೆಯದಾಗುತ್ತದೆ.

ಹೋಗಿ ಬಾ’ ಎಂದು ಆಶೀರ್ವಚನ ನೀಡಿದರು. ಇದೇ ಜ್ಯೋತಿಷಿ ವಿಜಯ್ ಆಚಾರ್ ಮತ್ತು ಸತ್ಯಜಿತ್ ತಂದೆ ಸೀತಾರಾಂ ಅವರೇ ಸಿನಿಮಾಕ್ಕೆ ಬಂಡವಾಳ ಹೂಡಿದವರು. ಅಲ್ಲಿಗೆ ಜ್ಯೋತಿಷಿಯ ಮಾತು ನಿಜವಾಗಿದೆ. ಆರಲ್ಲದಿದ್ದರೆ ಸ್ವಲ್ಪ ತಡವಾಗಿಯಾದರೂ ಸತ್ಯಜಿತ್‌ ಲಕ್ ಖುಲಾಯಿಸಿದೆ.

Write A Comment