ಮನೋರಂಜನೆ

‘ರಾಟೆ’ ಚಿತ್ರದಲ್ಲಿ ಜೇಡರಬಲೆ

Pinterest LinkedIn Tumblr

pvec21mar15h RAATE

ಚಿತ್ರ:
ರಾಟೆ
ತಾರಾಗಣ:
ಶ್ರುತಿ ಹರಿಹರನ್‌, ಧನಂಜಯ್‌, ಬುಲೆಟ್‌ ಪ್ರಕಾಶ್‌, ಸುಚೇಂದ್ರ ಪ್ರಸಾದ್‌, ಮೋಹನ್‌ ಜುನೇಜಾ, ಇತರರು
ನಿರ್ದೇಶನ:
ಎ.ಪಿ. ಅರ್ಜುನ್‌
ನಿರ್ಮಾಪಕರು:
ವಿ. ಹರಿಕೃಷ್ಣ

‘ರಾಟೆ’ ಚಿತ್ರದಲ್ಲಿ ನಾಲ್ವರು ನಾಯಕರು. ತಾರಾಗಣವನ್ನೇ ಆಧರಿಸಿ ಹೇಳುವುದಾದರೆ ಸಿನಿಮಾದ ನಾಯಕ ಧನಂಜಯ್‌. ನಿರ್ಮಾಣದ ಜೊತೆಗೆ ಒಳ್ಳೆಯ ಸಂಗೀತವನ್ನೂ ನೀಡಿರುವ ದೃಷ್ಟಿಯಿಂದ ವಿ. ಹರಿಕೃಷ್ಣ ಕೂಡ ನಾಯಕನ ಸ್ಥಾನಕ್ಕೆ ಅರ್ಹರು. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ– ಹೀಗೆ ಆಲ್‌ರೌಂಡರ್‌ ಪಾತ್ರಧಾರಿ ನಿರ್ದೇಶಕ ಎ.ಪಿ. ಅರ್ಜುನ್‌ ಕೂಡ ಚಿತ್ರದ ನಾಯಕರಲ್ಲೊಬ್ಬರು.

ಆದರೆ, ಚಿತ್ರದ ನಿಜವಾದ ನಾಯಕ ಛಾಯಾಗ್ರಾಹಕ ಸತ್ಯ ಹೆಗಡೆ. ಹಳ್ಳಿಯ ಸೊಗಡು, ಬೆಂಗಳೂರಿನ ಆರ್ದ್ರ ಹಾಗೂ ಕ್ರೌರ್ಯದ ಮುಖಗಳು, ಕಾಡಿನ ಚೆಲುವು, ಕತ್ತಲಲ್ಲಿ ಸಂಯೋಜಿಸಿರುವ ಸಾಹಸದ ದೃಶ್ಯಗಳು– ಹೀಗೆ ಸತ್ಯ ಹೆಗಡೆ ಅವರ ಕ್ಯಾಮೆರಾ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಆ ಮಟ್ಟಿಗೆ ಅವರು ಚಿತ್ರದ ನಿಜವಾದ ನಾಯಕ. ಸಿನಿಮಾದ ಅರೆಕೊರೆಗಳನ್ನು ಮರೆಸುವಷ್ಟು ಅವರ ಕ್ಯಾಮೆರಾದ ಮಾಂತ್ರಿಕತೆ ಪ್ರಖರವಾಗಿದೆ.

ಓರ್ವ ತಂತ್ರಜ್ಞ ಇಡೀ ಸಿನಿಮಾವನ್ನು ಆವರಿಸಿಕೊಳ್ಳುವುದೆಂದರೆ ಅದು ನಿರ್ದೇಶಕನ ಸೋಲಾಗಿರುತ್ತದೆ. ‘ರಾಟೆ’ ಚಿತ್ರದ ನಿರ್ದೇಶಕರು ತಮ್ಮ ದುರ್ಬಲ ಕಥೆಯೊಂದನ್ನು ಛಾಯಾಗ್ರಾಹಕರ ಹೆಗಲಿಗೆ ಏರಿಸಿ ಹಗುರಾಗಿದ್ದಾರೆ. ದೃಶ್ಯ ಸೌಂದರ್ಯದ ಮೇಲೆ ನಿಂತಿರುವ ಸಿನಿಮಾ ತಾನು ಹೇಳಲು ಹೊರಟ ಕಥೆಗೆ ಇರಬಹುದಾದ ಸಾಧ್ಯತೆಗಳನ್ನು ಕೂಡ ಕೊಡವಿಕೊಳ್ಳುವ ಮೂಲಕ ಸಡಿಲವಾಗಿದೆ.

ಚಿತ್ರದ ನಿರ್ದೇಶಕ ಅರ್ಜುನ್‌ ಅವರಿಗೆ ತಾನು ಏನನ್ನು ಹೇಳಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿದೆ. ಗೀತೆಗಳ ಮಾಧುರ್ಯದ ಮೂಲಕ ಸಿನಿಮಾಕ್ಕೊಂದು ಲಹರಿಯ ಸ್ಪರ್ಶವನ್ನು ನೀಡುವಲ್ಲಿ ಅವರು ಪರಿಣತರು. ಆದರೆ, ಈ ಕಸುಬುದಾರಿಕೆ ಅವರೇ ಸೃಷ್ಟಿಸಿಕೊಂಡ ಅಪಸವ್ಯಗಳಲ್ಲಿ ಮಸುಕಾಗಿದೆ.

ಯುವ ಪ್ರೇಮಿಗಳಿಬ್ಬರು ಹಳ್ಳಿಯಿಂದ ಬೆಂಗಳೂರಿಗೆ ಬಂದು ಹಲವು ಕಷ್ಟಗಳಿಗೆ ಸಿಲುಕಿ, ದುರಂತ ಅಂತ್ಯವನ್ನು ಕಾಣುವುದು ‘ರಾಟೆ’ ಸಿನಿಮಾದ ಕಥೆ. ಈ ಕಥೆಯಲ್ಲಿ ಮೂತ್ರಪಿಂಡ ಕಳವಿನ ಪ್ರಸಂಗವೊಂದಿದೆ. ಮೂತ್ರಪಿಂಡ ಜಾಲದ ಕರಾಳ ಜಗತ್ತನ್ನು ನಿರ್ದೇಶಕರು ಬೀದಿ ರೌಡಿಗಳ ಹೊಡೆದಾಟಕ್ಕೆ ಇಳಿಸುವ ಮೂಲಕ ತೆಳುಗೊಳಿಸಿದ್ದಾರೆ. ಕೊರವಂಜಿ ಪಾತ್ರದ ಬಳಕೆ ಕೂಡ ಬಾಲಿಶವಾಗಿದೆ. ಬೆಂಗಳೂರು ನಗರವನ್ನು ಹೃದಯಹೀನವಾಗಿ ಚಿತ್ರಿಸುವ ಗಾಂಧಿನಗರದ ಚಾಳಿಗೆ ‘ರಾಟೆ’ ಹೊಸ ಸೇರ್ಪಡೆಯಾಗಿದೆ.

ಚಿತ್ರದ ನಾಯಕಿ ಶ್ರುತಿ ಹರಿಹರನ್‌ ಹಾಗೂ ಧನಂಜಯ್‌ ತಮ್ಮ ತಾರುಣ್ಯದ ಕಾವು ಹಾಗೂ ನಟನೆಯ ಹುಮ್ಮಸ್ಸಿನಿಂದ ಇಷ್ಟವಾಗುತ್ತಾರೆ. ತಾರಾಗಣದಲ್ಲಿನ ನಿಜವಾದ ಅಚ್ಚರಿ ಬುಲೆಟ್‌ ಪ್ರಕಾಶ್‌. ಅವರ ಈವರೆಗಿನ ವೃತ್ತಿಜೀವನದ ಅತ್ಯುತ್ತಮ ಪಾತ್ರ ಈ ಚಿತ್ರದ್ದು. ಉಳಿದಂತೆ ಪುಟ್ಟ ಪಾತ್ರಗಳಲ್ಲಿ ಮೋಹನ್‌ ಜುನೇಜಾ ಹಾಗೂ ಸುಚೇಂದ್ರ ಪ್ರಸಾದ್‌ ನೆನಪಿನಲ್ಲುಳಿಯುತ್ತಾರೆ.
ನಟ ದರ್ಶನ್‌ ಅವರ ಚಿತ್ರವೊಂದನ್ನು ನೋಡುವ ನಾಯಕಿಯ ಆಸೆಯೇ ‘ರಾಟೆ’ ಚಿತ್ರದ ಪ್ರೇಮಿಗಳ ದುರಂತಕ್ಕೆ ಕಾರಣ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಮಾತನ್ನು ನೆನಪಿಸುವಂತಿರುವ ಈ ಪ್ರಸಂಗ, ಸಮಕಾಲೀನ ಕನ್ನಡ ಸಿನಿಮಾಗಳ ಸಾಮಾಜಿಕ ಪರಿಣಾಮಕ್ಕೂ ಉದಾಹರಣೆಯಂತಿದೆ, ಅಲ್ಲವೇ?

Write A Comment