ಮನೋರಂಜನೆ

`ಶ್ರೀ ಸಾಯಿ ಮಂಜರಿ’: ನಿರ್ದೇಶಕ ಓಂ ಸಾಯಿ ಪ್ರಕಾಶ್ 100ನೇ ಚಿತ್ರ

Pinterest LinkedIn Tumblr

sai-prakash

ಸೆಂಟಿಮೆಂಟ್ ಚಿತ್ರಗಳ ಸರದಾರ ನಿರ್ದೇಶಕ ಓಂ ಸಾಯಿ ಪ್ರಕಾಶ್ `ಶ್ರೀ ಸಾಯಿ ಮಂಜರಿ’ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದು ಎಷ್ಟು ಮಂದಿಗೆ ಗೊತ್ತಿದೆಯೋ ಇಲ್ಲವೋ? 1993ರಲ್ಲಿ `ಭಗವಾನ್ ಶ್ರೀ ಸಾಯಿ ಬಾಬಾ’ ಹೆಸರಿನಲ್ಲಿ ಸಿನಿಮಾ ಮಾಡಿದ್ದ, ಸಾಯಿಪ್ರಕಾಶ್, ಈಗ `ಶ್ರೀ ಸಾಯಿ ಮಂಜರಿ’ ಚಿತ್ರವನ್ನು ರೂಪಿಸಿದ್ದಾರೆ. ಇದು ನಿರ್ದೇಶಕರಿಗೆ 100ನೇ ಚಿತ್ರ. ಅಲ್ಲದೆ ಈ ಚಿತ್ರದಲ್ಲಿ ಓಂ ಸಾಯಿಪ್ರಕಾಶ್, ಶ್ರೀ ಸಾಯಿಬಾಬಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಶರವಣ ಅವರ ಸೋದರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕೃಷ್ಣ, ರೋಜಾ, ಹರೀಶ್ ರಾಜ್, ದಿಶಾ ಪೂವಯ್ಯ ಇವರು ಚಿತ್ರದ ಮುಖ್ಯ ಜೋಡಿಗಳು. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಿತ್ರವಿದು. ಶ್ರೀ ಚಂದ್ರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ 11 ಹಾಡುಗಳಿವೆ. ಬಲರಾಂ ಎಂಬುವವರು ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್ ಮುಂತಾದವರು ಚಿತ್ರದಲ್ಲಿ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಕನಕಪುರ, ಹುಳಿಮಾವು, ಕಗ್ಗಲಹಳ್ಳಿ ಹಾಗೂ ಬೆಂಗಳೂರು ಸಾಯಿಬಾಬಾ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಸದ್ಯದಲ್ಲೇ ಶಿರಡಿಗೆ ಹೊರಟು ನಿಂತಿದೆ. `ಭಕ್ತಿ ಪ್ರಧಾನ ಸಿನಿಮಾ. ಸತ್ಯ ಚರಿತೆ ಪುಸ್ತಕವನ್ನು ಆಧರಿಸಿ ಈ ಚಿತ್ರವನ್ನು ಮಾಡಿದ್ದೇನೆ. ತುಂಬಾ ಚೆನ್ನಾಗಿದೆ. ಎಲ್ಲ ವರ್ಗದ ಪ್ರೇಕ್ಷಕರು ಕೂಡ ನೋಡುವಂಥ ಸಿನಿಮಾ ಇದು’ ಎಂದರು ನಿರ್ದೇಶಕ ಓಂ ಸಾಯಿಪ್ರಕಾಶ್. ಅಂದಹಾಗೆ ಇತ್ತೀಚೆಗಷ್ಟೆ ದೃಶ್ಯ ಮಾಧ್ಯಮಗಳಲ್ಲಿ ನಟ ನವೀನ್ ಕೃಷ್ಣರ ಸಾವಿನ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್‍ನಂತೆ ಪ್ರಸಾರ ಮಾಡಿದವು. ಪಾಪ ನವೀನ್ ಕೃಷ್ಣ ಅವರಿಗೆ ಏನಾಯಿತು ಎಂದುಕೊಂಡವರೇ ಹೆಚ್ಚು. ಆದರೆ, ನವೀನ್ ಕೃಷ್ಣ ಆ ಸಾಯಿಬಾಬಾನ ಮೇಲಾಣೆಗೂ ಸತ್ತಿಲ್ಲ ಎಂಬುದಕ್ಕೆ `ಶ್ರೀ ಸಾಯಿ ಮಂಜರಿ’ ಚಿತ್ರ ಕೂಡ ಒಂದು ಸಾಕ್ಷಿ ಎನ್ನಬಹುದು. ಅಂದರೆ ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

`ಸಿನಿಮಾ ಏನೇ ಕಮರ್ಷಿಯಲ್ ಆಗಿದ್ದರು ದೇವರು, ಪವಾಡ ಪುರುಷರ ಮೇಲೆ ಜನರಿಗೆ ನಂಬಿಕೆ ಇದೆ. ಅಂಥ ನಂಬಿಕೆಗಳಿಗೆ ಕಾರಣರಾದವರ ಮೇಲೆ ಸಿನಿಮಾ ಮಾಡಿದರೆ ಜನ ನೋಡುತ್ತಾರೆ’ ಎನ್ನುವ ನಂಬಿಕೆ ವ್ಯಕ್ತಪಡಿಸಿದರು ನವೀನ್ ಕೃಷ್ಣ.

Write A Comment