ಮನೋರಂಜನೆ

ನಾಟ್ಯಗಾಥೆಯ ಪ್ರವರ್ತಕಿ ಹೈದರಾಬಾದ್‌ನ ಭರತನಾಟ್ಯ ಕಲಾವಿದೆ ಸವಿತಾ ಶಾಸ್ತ್ರಿ

Pinterest LinkedIn Tumblr

psmec18savitha2_0

-ಪದ್ಮನಾಭ ಭಟ್‌
ಭಾರತೀಯ ವಿದ್ಯಾಭವನದಲ್ಲಿ ತಮ್ಮ ‘ಚೈನ್ಸ್‌ ಲವ್‌ ಸ್ಟೋರೀಸ್‌ ಆಫ್‌ ಶಾಡೋಸ್‌’ ಎಂಬ ವಿಶಿಷ್ಟ ನೃತ್ಯಗಾಥೆಯನ್ನು ಪ್ರದರ್ಶಿಸಲು ಬಂದಿದ್ದ ಹೈದರಾಬಾದ್‌ನ ಭರತನಾಟ್ಯ ಕಲಾವಿದೆ
ಸವಿತಾ ಶಾಸ್ತ್ರಿ ಅವರು ಪದ್ಮನಾಭ ಭಟ್‌ ಅವರೊಂದಿಗೆ ಮಾತಿಗೆ ಸಿಕ್ಕಾಗ ರೂಪುಗೊಂಡ ಬರಹವಿದು.

ಜಗತ್ತಿನಾದ್ಯಂತ ಎಲ್ಲ ಜನರನ್ನೂ ತಲುಪಿ, ಸಿನಿಮಾ ಅಥವಾ ರಂಗಭೂಮಿಯಷ್ಟೇ ಭರತನಾಟ್ಯವನ್ನೂ ಖ್ಯಾತಿಗೊಳಿಸಬೇಕು ಎಂಬುದು ನನ್ನ ಗುರಿ’ ಎಂದು ಮಾತಿಗಾರಂಭಿಸಿದರು ಸವಿತಾ ಶಾಸ್ತ್ರಿ.

ಭರತನಾಟ್ಯ ನೃತ್ಯ ಪ್ರಕಾರವನ್ನು ‘ಸಿದ್ಧ ಮಾದರಿ’ಯ ಚೌಕಟ್ಟಿನಿಂದ ಆಚೆ ತಂದು ಭಿನ್ನವಾಗಿ ಬಿಂಬಿಸುತ್ತಿರುವವರಲ್ಲಿ ಸವಿತಾಶಾಸ್ತ್ರಿ ಪ್ರಮುಖರು. ಈ ಉಲ್ಲಂಘನೆ ಭಾರತೀಯ ನೃತ್ಯ ಪ್ರಕಾರದ ಪುನರುಜ್ಜೀವನದ ದಾರಿಯೂ ಹೌದು ಎಂಬುದು ಅವರ ನಂಬಿಕೆ. ಜಾಗತಿಕ ಕಲಾ ಜಗತ್ತಿನಲ್ಲಿ ‘ನಾಟ್ಯ ಕಥಾಗಾರ್ತಿ’ (Dancing storyteller) ಎಂದೇ ಗುರ್ತಿಸಿಕೊಂಡಿರುವ ಸವಿತಾ, ಚೀನಾ, ದಕ್ಷಿಣ ಆಫ್ರಿಕಾ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಸವಿತಾ ಅವರ ‘ಶ್ರೀ ಸಾಯಿ ಆರ್ಟ್ಸ್‌’ ಕೂಡ ವಿದ್ಯಾರ್ಥಿಗಳಿಗೆ ತರಬೇತಿ, ಕಾರ್ಯಾಗಾರ ಹೀಗೆ ವಿವಿಧ ಚಟುವಟಿಕೆಗಳ ಮೂಲಕ ಭರತನಾಟ್ಯವನ್ನು ಇಂದಿನ ಪೀಳಿಗೆಗೆ ತಲುಪಿಸುವ ಹೊಸ ದಾರಿಗಳನ್ನು ಹುಡುಕುವಲ್ಲಿ ನಿರತವಾಗಿದೆ. ಮೂಲತಃ ಮಂಬೈನವರಾದ ಸವಿತಾ ಸದ್ಯಕ್ಕೆ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.

ಸವಿತಾ ಅವರಿಗೆ ಭರತನಾಟ್ಯವೆಂದರೆ ಕಥೆ ಹೇಳುವ ಒಂದು ಸಾಧನ. ‘ನಾಟ್ಯ ಭಾಷೆಗಿಂತ ಪ್ರಬಲ ಮಾಧ್ಯಮ. ಅದು ಸಂವಹನ ಸಾಧನವೂ ಹೌದು. ಕಥೆಯನ್ನು ಲೇಖಕ ಅಕ್ಷರಗಳಲ್ಲಿ ಹೇಳುವುದಕ್ಕಿಂತ ಪರಿಣಾಮಕಾರಿಯಾಗಿ ನೃತ್ಯಗಾರರು ನೃತ್ಯದ ಮೂಲಕ  ಸಂವಹಿಸುತ್ತಾರೆ’ ಎಂಬುದು ಅವರ ಕಾಣ್ಕೆ.

ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮಗಳಿಗೆ ನೃತ್ಯದ ಮೇಲಿನ ಆಸಕ್ತಿಯನ್ನು ಗಮನಿಸಿದ ಸವಿತಾ ತಂದೆ ಮಗಳನ್ನು ರಾಜರಾಜೇಶ್ವರಿ ಸ್ಕೂಲ್‌ ಆಫ್‌ ಡಾನ್ಸಿಂಗ್‌ನ ಮೋಹನ್‌ ಅವರ ಬಳಿ ತರಬೇತಿಗೆ ಸೇರಿಸಿದರು. ಸವಿತಾ ತಾಯಿಯೂ ಮಗಳ ನೃತ್ಯಾಭ್ಯಾಸಕ್ಕೆ ನೀರೆರದರು. ‘ಭರತನಾಟ್ಯ ನನ್ನ ಪಾಲಿಗೆ ಅಹಂಕಾರದ ಪ್ರದರ್ಶನವಲ್ಲ. ಅಥವಾ ನನ್ನ ಸಂತೋಷಕ್ಕಾಗಿ ಮಾತ್ರ ನಾನು ನರ್ತಿಸುತ್ತೇನೆ ಎಂಬ ಆತ್ಮರತಿಯೂ ನನಗಿಲ್ಲ. ನಾನು ಭರತನಾಟ್ಯದ ಮೂಲಕ ಕಥೆಗಳನ್ನು ಹೇಳುತ್ತೇನೆ ಮತ್ತು ಆ ಕಥೆಗಳು ಸಮಕಾಲೀನ ಗುಣವನ್ನು ಹೊಂದಿರುತ್ತವೆ. ಇದೇ ನನ್ನ ನೃತ್ಯದ ಅನನ್ಯತೆ’ ಎಂದು ವಿವರಿಸುತ್ತಾರೆ ಸವಿತಾ.

ಆಯ್ಕೆಗಳ ತಾಕಲಾಟ
ಇವರ ನೃತ್ಯಗಾಥೆ ‘ಚೈನ್ಸ್‌ ಲವ್‌ ಸ್ಟೋರೀಸ್‌ ಆಫ್‌ ಶಾಡೋಸ್‌’ ಮಹಿಳೆಯರ ಬದುಕಿನ ಕಥನವೂ ಹೌದು. ಬೇರೆ ಬೇರೆ ವಯಸ್ಸು–ಕಾಲದ ಕಥನಗಳನ್ನು ಹೊಂದಿದ್ದರೂ ಮಹಿಳಾ ಜಗತ್ತಿನ ಸಾರ್ವತ್ರಿಕ ಸೂಕ್ಷ್ಮಗಳನ್ನು ಅನುರಣಿಸುವುದು ಇದರ ವಿಶಿಷ್ಟತೆ.

ನೈಜ ಘಟನೆಯನ್ನೇ ಆಧರಿಸಿ ರೂಪಿಸಲಾದ ನೃತ್ಯ ಕಥನವಿದು. ವೈಯಕ್ತಿಕ ಅಭಿಲಾಷೆ ಮತ್ತು ಸಾಮಾಜಿಕ ರಿವಾಜುಗಳು ನಡುವಣ ಆಯ್ಕೆಗಳ ತಾಕಲಾಟಗಳನ್ನು ಸಶಕ್ತವಾಗಿ ಬಿಂಬಿಸುತ್ತದೆ. ಇದರ ಬಗ್ಗೆ ಸವಿತಾ ನೀಡುವ ವಿವರಣೆಯಲ್ಲಿ ಅವರ ಕಲಾದೃಷ್ಟಿಕೋನವೂ ವ್ಯಕ್ತವಾಗುತ್ತದೆ.

‘‘ಚೈನ್ಸ್‌ ಲವ್‌ ಸ್ಟೋರೀಸ್‌ ಆಫ್‌ ಶಾಡೋಸ್‌’ಯಲ್ಲಿ ನಾನೇನೂ ದೈವತ್ವ ಅಥವಾ ಕರ್ಮ ಸಿದ್ಧಾಂತದಂತಹ ತತ್ವಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಸಮಾಜದ ರಿವಾಜುಗಳಿಗೆ ಅನುಗುಣವಾಗಿ ಬದುಕುತ್ತೀರೋ ಅಥವಾ ನಿಮ್ಮ ಮಹತ್ವಾಕಾಂಕ್ಷೆ ಮತ್ತು ಆತ್ಮದ ಅಭಿಲಾಷೆಗೆ ಕಿವಿಗೊಡುತ್ತೀರೋ? ಇದು ಪ್ರತಿಯೊಬ್ಬರೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆ.

ಅದರಲ್ಲಿಯೂ ಮಹಿಳೆಯರ ಜೀವನ ಸಂದರ್ಭದಲ್ಲಿಯಂತೂ ಈ ಎರಡರ ನಡುವಿನ ಆಯ್ಕೆ ತುಂಬ ಸಂಕೀರ್ಣವಾದದ್ದು.. ‘ಚೈನ್ಸ್…’ ಇದು ಮಹಿಳೆಯ ಬದುಕಿನ ಮೂರು ಆಯಾಮಗಳನ್ನು ಚಿತ್ರಿಸುತ್ತದೆ. ಬದುಕಿನ ಸಂದರ್ಭಗಳು ಅವಳ ಬದುಕಿನ ಕಥೆಯನ್ನೇ ಬದಲಿಸಿಬಿಡುವ ಕಥನವಿದು. ಇವೆಲ್ಲದರ ಆಚೆಗೂ ನಮ್ಮಲ್ಲಿ ಉಳಿದೇ ಬಿಡುವ ಮತ್ತದೇ ಪ್ರಶ್ನೆ ‘ನಮ್ಮ ಬದುಕನ್ನು ರೂಪಿಸುವವರು ಯಾರು?’ ಈ ನೃತ್ಯ ರೂಪಣೆಗೆ ಅವರು ಒಂಬತ್ತು ತಿಂಗಳು ಶ್ರಮಿಸಿದ್ದಾರೆ.

ಪರಿಶ್ರಮವೇ ನಿಪುಣತೆಗೆ ದಾರಿ
‘ವೇದಿಕೆಯನ್ನು ಏರುವ ಪ್ರತಿ ಕಲಾವಿದನೂ ತಾಂತ್ರಿಕವಾಗಿಯೂ ನಿಪುಣನಾಗಿರಬೇಕು. ಕಲಾವಿದ ಎಷ್ಟು ಸಾಧ್ಯವಿದ್ದಷ್ಟೂ ಹೆಚ್ಚು ಸಮಯವನ್ನು ತರಬೇತಿಯಲ್ಲಿ ಕಳೆಯಬೇಕು. ನಿಪುಣತೆಗೆ ಪ್ರಯತ್ನದ ಹೊರತಾದ ಯಾವುದೇ ಅಡ್ಡದಾರಿಯಿಲ್ಲ. ಸಂಗೀತವೂ ನೃತ್ಯದ ಒಂದು ಅಂಗ. ಸಂಗೀತಕ್ಕೆ ನೃತ್ಯಗಾರ/ಗಾರ್ತಿ ಭಾವನಾತ್ಮವಾಗಿ ಸ್ಪಂದಿಸಬೇಕು’ ಎಂದು ನೃತ್ಯಸಾಧನೆಯ ಬಗ್ಗೆ ಹೇಳುತ್ತಾರೆ ಸವಿತಾ.

ಯುವಕರ ಆಕರ್ಷಿಸುವ ಅಗತ್ಯ
ಸಾಂಪ್ರದಾಯಿಕ ನೃತ್ಯದಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಹಿರಿಯ ಕಲಾವಿದರಿಗೆ ಇಂದಿನ ಯುವಜನರು ತಮ್ಮ ನೃತ್ಯಪ್ರಕಾರದತ್ತ ಆಸಕ್ತಿ ತೋರುತ್ತಿಲ್ಲ ಎಂಬ ಅಸಮಧಾನವಿರುತ್ತದೆ. ಆದರೆ ಸವಿತಾ ಅವರದು ಇದಕ್ಕೆ ಪೂರ್ತಿ ವಿರುದ್ಧ ನಿಲುವು. ಇಂದಿನ ಯುವಜನರು ಸಾಂಪ್ರದಾಯಿಕ ನೃತ್ಯದ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದ್ದಾರೆ ಎಂಬ ಆರೋಪ ಇದೆಯಲ್ಲವೇ? ಎಂದು ಪ್ರಶ್ನಿಸಿದರೆ ಸವಿತಾ ಕೊಂಚ ಖಾರವಾಗಿಯೇ ಉತ್ತರಿಸುತ್ತಾರೆ.

‘ನನ್ನ ಪ್ರಕಾರ ಶಾಸ್ತ್ರೀಯ ನೃತ್ಯಗಾರ/ಗಾರ್ತಿಯರೇ ಭಾರತದ ಯುವಜನತೆಯ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದ್ದಾರೆ! ಯುವಕರ ಆಸಕ್ತಿಯನ್ನು ಕುದುರಿಸುವ ನಿಟ್ಟಿನಲ್ಲಿ ಅವರ ವಿಫಲತೆಯನ್ನು ಪ್ರೇಕ್ಷಕರ ಮೇಲೆ ಹಾಕುವುದು ಸರಿಯಲ್ಲ. ಇಂದಿನ ಯುವಜನತೆ ಜಾಣರು. ಅವರು ಮನರಂಜನೆ ಬಯಸುತ್ತಾರೆ. ಪಾಶ್ಚಾತ್ಯ ಕಲಾಪ್ರಕಾರಗಳು ಅದನ್ನು ನಮ್ಮ ಕಲಾಪ್ರಕಾರಗಳಿಗಿಂತ ಪರಿಣಾಮಕಾರಿಯಾಗಿ ನೀಡುತ್ತಿವೆ. ಅದರಿಂದ ಸಹಜವಾಗಿ ಯುವಕರು ಅತ್ತ ಆಕರ್ಷಿತರಾಗುತ್ತಾರೆ. ನೀವು ಅವರ ಭಾಷೆಯಲ್ಲಿ ಮಾತನಾಡಿ, ಆಗ ಅವರು ನಿಮ್ಮ ಮಾತನ್ನು ಕೇಳುತ್ತಾರೆ’ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ಸದ್ಯಕ್ಕೆ ‘ಚೈನ್ಸ್‌..’ ನೃತ್ಯ ಪ್ರದರ್ಶನದ ಪ್ರವಾಸದಲ್ಲಿ ನಿರತಳಾಗಿರುವ ಸವಿತಾ ಈ ಬೇಸಿಗೆಯಲ್ಲಿ ‘ಇನ್‌ ಗಾಡ್ಸ್‌ ಕಂಟ್ರಿ’ ಎಂಬ ನೃತ್ಯರೂಪಕ ರೂಪಿಸುವ ಸಿದ್ಧತೆಯಲ್ಲಿದ್ದಾರೆ. ಅದನ್ನು ಅವರೇ ಸಂಯೋಜಿಸಿ ನಿರ್ದೇಶಿಸಿರುವ ಈ ನೃತ್ಯವನ್ನು ನನ್ನ ವಿದ್ಯಾರ್ಥಿಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಿದ್ದಾರೆ.

ಬೆಂಗಳೂರಿನ ಬಾಂಧವ್ಯ ಹಳೆಯದು
ಇದುವರೆಗಿನ ತಮ್ಮ ಎಲ್ಲ ನೃತ್ಯಗಾಥೆಗಳನ್ನು ಸವಿತಾ ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದಾರೆ.
‘ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಕರೆತರುತ್ತಿರುವ ಬೆಂಗಳೂರಿನ ವೀಕ್ಷಕರಿಗೆ ನಾನು ಆಭಾರಿ. ನನ್ನ ಮತ್ತು ಈ ನಗರದ ಬಾಂಧವ್ಯ ತುಂಬ ಹಳೆಯ ಕಾಲದ್ದು. ನನ್ನ ಯಾವುದೇ ಕೃತಿಯ ಆರಂಭಿಕ ಮೂರು ಪ್ರದರ್ಶನಗಳಲ್ಲಿ ಒಂದು ಪ್ರದರ್ಶನ ಬೆಂಗಳೂರಿನಲ್ಲಿಯೇ ನಡೆಯುತ್ತದೆ. ಇದೊಂದು ಲವಲವಿಕೆಯ ಸಾಂಸ್ಕೃತಿಕ ಜಾಗೃತ ನಗರಿ. ಅಭಿಜಾತ ಸಂಪ್ರದಾಯ ಮತ್ತು ಆಧುನಿಕ ವಿಚಾರಧಾರೆಗಳು ಅನನ್ಯವಾದ ಹದದಲ್ಲಿ ಬೆರೆತುಕೊಂಡಿರುವ ನಗರ ಬೆಂಗಳೂರು.’ ಎಂದು ಉದ್ಯಾನನಗರಿಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

Write A Comment