ಮನೋರಂಜನೆ

ಸಂತೋಷ್‌ ಡಕಾರ್‌ ರ್ಯಾಲಿ ಹೆಗ್ಗಳಿಕೆ

Pinterest LinkedIn Tumblr

daker

– ಪಿ.ಜಿ. ವಿಜುಪೂಣಚ್ಚ

ಡಕಾರ್‌ ರ್ಯಾಲಿ ಬಗ್ಗೆ ಪತ್ರಿಕೆಗಳಲ್ಲಿ ಓದಿದಾಗ ಮತ್ತು ಟೀವಿಗಳಲ್ಲಿ ಅದರ ದೃಶ್ಯಸುರುಳಿಗಳನ್ನು ನೋಡಿದಾಗ ಮೈಜುಮ್‌ ಎನ್ನುತ್ತದೆ. ಅದು ವಿಶ್ವದಲ್ಲಿ ಮೋಟಾರು ಕ್ರೀಡೆಗೆ ಸಂಬಂಧಿಸಿದಂತೆ ಅದ್ಭುತ ಸಾಹಸಯಾನ.

ರೋಚಕತೆಯ ಉತ್ತುಂಗ. ಡಕಾರ್‌ ರ್ಯಾಲಿಯ ಇತಿಹಾಸದಲ್ಲಿ ಭಾರತೀಯರು ಸ್ಪರ್ಧಿಸಿದ್ದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಅಲ್ಲಿ ಸ್ಪರ್ಧಿಸಿ ವಿಶ್ವ ಮೋಟಾರು ಕ್ರೀಡಾ ಲೋಕದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಅವರು ಚುಂಚನಗುಪ್ಪೆ ಶಿವಶಂಕರ್‌ ಸಂತೋಷ್‌. ಅಪ್ಪಟ ಕನ್ನಡಿಗ.

ಅವರೊಡನೆ ಮಾತಿಗೆ ಕುಳಿತಾಗ ‘ಡಕಾರ್‌ ರ್ಯಾಲಿಯ ಅನುಭವಗಳ ಕುರಿತು ಮಾತುಗಳಲ್ಲಿ ಅದೆಷ್ಟೇ ಹೇಳಲು ಹೊರಟರೂ ಅದು ಕಡಿಮೆಯೆ. ನನ್ನ ಜೀವಮಾನ ಪೂರ್ತಿ ಹೇಳಿದರೂ ಮುಗಿಯದ ಕಥನ. ಅದೊಂದು ಭಾವ ಸಂಭ್ರಮ… ಅಷ್ಟೆ’ ಎನ್ನುತ್ತಾರೆ ಸಿ.ಎಸ್‌.ಸಂತೋಷ್‌.

‘ಲ್ಯಾಟಿನ್‌ ಅಮೆರಿಕಾದ ಅರ್ಜೆಂಟಿನಾ, ಚಿಲಿ, ಬೊಲಿವಿಯ ದೇಶಗಳಲ್ಲಿ ಹಾದು ಹೋಗುವ ಈ ರ್ಯಾಲಿಯಲ್ಲಿ ಸಾಗಿದಾಗ ಹೊಸತೊಂದು ಲೋಕವೇ ಕಣ್ಣೆದುರು ಅನಾವರಣಗೊಳ್ಳುತ್ತದೆ. ಅರ್ಜೆಂಟಿನಾದಲ್ಲಿ ಮೋಟಾರು ಕ್ರೀಡೆಯ ಜನಪ್ರಿಯತೆ ಕಂಡು ಮೂಕವಿಸ್ಮಿತನಾಗಿದ್ದೇನೆ. ನಮ್ಮ ಬೆಂಗಳೂರು ಮೈಸೂರು ರಸ್ತೆ ಉದ್ದಕ್ಕೂ ಇಕ್ಕೆಲಗಳಲ್ಲೂ ಜನ ಕಿಕ್ಕಿರಿದು ಸೇರುವುದನ್ನು ನಾವು ಕಲ್ಪಿಸಿಕೊಳ್ಳುವುದಾದರೆ, ಅಂತಹದ್ದೊಂದು ಜನವೈಭವವನ್ನು ನಾನು ಅರ್ಜೆಂಟಿನಾದಲ್ಲಿ ಕಂಡಿದ್ದೇನೆ.

ನೂರಾರು ಕಿ.ಮೀ. ಉದ್ದದ ರಸ್ತೆಗಳ ಎರಡೂ ಕಡೆ ಲಕ್ಷಾಂತರ ಜನ ನಿಂತಿರುತ್ತಾರೆ, ಕುಳಿತ್ತಿರುತ್ತಾರೆ. ಅಲ್ಲಿ ದಂಪತಿಗಳು, ಮಕ್ಕಳು ಹರ್ಷೋದ್ಘಾರ ಮಾಡುತ್ತಾ ಓಡಾಡುತ್ತಿರುತ್ತಾರೆ. ಅಜ್ಜಅಜ್ಜಿಯರು ತಣ್ಣಗೆ ಕುಳಿತು ನೋಡುತ್ತಿರುತ್ತಾರೆ. ಎಲ್ಲರಿಗೂ ಅದೊಂದು ಪಿಕ್ನಿಕ್‌ ಇದ್ದಂತೆ’ ಎನ್ನುತ್ತಾ ಸಂತೋಷ್‌ ತಮ್ಮ ನೆನಪಿನ ಬುತ್ತಿ ಬಿಚ್ಚುತ್ತಾರೆ. ಭಾರತದಲ್ಲಿ ಮೋಟಾರು ಕ್ರೀಡೆ ಜನಮನ ತಟ್ಟಿದ್ದು ಕಡಿಮೆಯೇ.

ಹಿಮಾಲಯ ರ್ಯಾಲಿ ಸಾಕಷ್ಟು ಸುದ್ದಿ ಮಾಡಿದೆ. ಅದೇ ರೀತಿ ಡೆಸರ್ಟ್‌ ಸ್ಟ್ರಾಮ್‌ ರ್ಯಾಲಿ ಕೂಡಾ. ಇನ್ನು ಕನ್ನಡಿಗರಿಗೆ ಪರಿಚಿತವೇ ಆದ ಕೆ.1000  ರ್ಯಾಲಿಯ ಮೂಲಕ ಸಾಕಷ್ಟು ಮಂದಿ ಮೋಟಾರು ಸಾಹಸಿಗರು ಗಮನ ಸೆಳೆದರು. ಸಂತೋಷ್‌ ಬೆಂಗಳೂರಿನಲ್ಲಿ ಸೇಂಟ್‌ ಜೋಸೆಫ್ಸ್‌ ಶಾಲೆ, ಶೇಷಾದ್ರಿಪುರಂ ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜುಗಳಲ್ಲಿ ಓದಿದವರು. ಓದುತ್ತಿದ್ದಾಗಲೇ ಇವರಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ. ಕೆಲವು ಕಾಲ ಬ್ಯಾಡ್ಮಿಂಟನ್‌ ಆಡಿದ್ದರು ನಂತರ ಕ್ರಿಕೆಟ್‌, ಗಾಲ್ಫ್‌ ಆಟಗಳಲ್ಲಿಯೂ ಸಾಕಷ್ಟು ಪರಿಶ್ರಮ ತೋರಿದ್ದರು.

‘ನಮ್ಮ ಮನೆಯಲ್ಲಿ ಎಲ್ಲರಿಗೂ ಒಂದೊಂದು ವಾಹನವಿತ್ತು. ಹೀಗಾಗಿ ನನ್ನ ತಂದೆಯವರು ನನಗೆ ಮೋಟಾರು ಬೈಕೊಂದನ್ನು ತೆಗೆದುಕೊಟ್ಟರು. ನಾನಾಗ ವಿದ್ಯಾರ್ಥಿ. ಅದರಲ್ಲಿ ಕಾಲೇಜಿಗೆ ಹೋಗಿ ಬರುವುದನ್ನಷ್ಟೇ ಮಾಡುತ್ತಿರಲಿಲ್ಲ. ಕಸರತ್ತುಗಳನ್ನು ಮಾಡುವುದರಲ್ಲಿ ಆಸಕ್ತಿ ವಹಿಸಿದೆ. ಹೀಗಾಗಿ ಬೆಂಗಳೂರಿನಲ್ಲೇ ಆಗ ನಡೆಯುತ್ತಿದ್ದ ಸಣ್ಣಪುಟ್ಟ ಮೋಟೊಕ್ರಾಸ್‌ ರೇಸ್‌ಗಳಲ್ಲಿ ಸ್ಪರ್ಧಿಸತೊಡಗಿದೆ.

2005ರಲ್ಲಿ ಎಂಆರ್‌ಎಫ್‌ ರಾಷ್ಟ್ರೀಯ ಸೂಪರ್‌ ಕ್ರಾಸ್‌ ಚಾಂಪಿಯನ್‌ಷಿಪ್‌ನಲ್ಲಿ  ಮತ್ತು ಗಲ್ಫ್‌ ರಾಷ್ಟ್ರೀಯ ಡರ್ಟ್‌ ಟ್ರ್ಯಾಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದೆ. ಆ ನಂತರ ಮೋಟಾರು ಕ್ರೀಡೆಯೇ ನನ್ನ ಉಸಿರಾಯಿತು’ ಎಂದು ತಾವು ಈ ಕ್ರೀಡೆಯತ್ತ ನಡೆದು ಬಂದ ಹಾದಿಯ  ಬಗ್ಗೆ ಹೇಳುತ್ತಾರೆ.

ಸಂತೋಷ್‌ ಅವರಿಗೆ ಈಗ 31ರ ಹರೆಯ. ಮುಂದಿನ ಸಲವೂ ಡಕಾರ್‌ ರ್ಯಾಲಿಗೆ ಪ್ರವೇಶ ಗಿಟ್ಟಿಸಿ ಮೊದಲ 20ರ ಒಳಗಿನ ಸ್ಥಾನ ಪಡೆಯುವ ಹೆಬ್ಬಯಕೆ ಅವರಿಗಿದೆ. ಹೀಗಾಗಿ ಈಗಿನಿಂದಲೇ ಅದಕ್ಕೆ ತಯಾರಿ ಶುರು ಮಾಡಿದ್ದಾರೆ. ಕಳೆದ ವರ್ಷ ಮೊರಕ್ಕೊ, ಅಬುದಾಬಿ ಮತ್ತು ಕತಾರ್‌ನಲ್ಲಿ ನಡೆದ 3 ಹಂತಗಳ ವಿಶ್ವಕಪ್‌ ರ್ಯಾಲಿಯಲ್ಲಿ 9ನೇ ಸ್ಥಾನ ಗಳಿಸಿದ್ದಕ್ಕೆ ಸಂತೋಷ್‌ ಅವರಿಗೆ ಡಕಾರ್‌ ರ್ಯಾಲಿಗೆ ಆಹ್ವಾನ ಸಿಕ್ಕಿತ್ತು.

ಡಕಾರ್‌ನಲ್ಲಿ ಮೋಟಾರು ಬೈಕ್‌ಗಳ ವಿಭಾಗದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಬಂದಿದ್ದ ಆಯ್ದ 168 ಜನ ಸ್ಪರ್ಧೆಗೆ ಇಳಿದಿದ್ದರು. ಅದರಲ್ಲಿ 79 ಮಂದಿ ಸ್ಪರ್ಧೆಯನ್ನು ಪೂರ್ಣ ಗೊಳಿಸಿದ್ದರು. ಅವರ ನಡುವೆ ಸಂತೋಷ್‌ 36ನೇಯವರಾಗಿ ಗುರಿ ಮುಟ್ಟಿದ್ದರು. ಅಲ್ಲಿ ಒಟ್ಟು 9,295 ಕಿ.ಮೀ. ದೂರ ಕ್ರಮಿಸಲು ಇವರು 60 ಗಂಟೆ 39 ನಿಮಿಷ 20 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು. ಅಲ್ಲಿ ಮೊದಲಿಗರಾಗಿ ಗುರಿ ತಲುಪಿದ ಸ್ಪೇನ್‌ನ ಮಾರ್ಕ್‌ ಕೋಮಾ 46ಗಂಟೆ 3ನಿಮಿಷ 49 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು.

ಹಿಮಾಲಯಕ್ಕೆ ಹೋಲಿಕೆ ಬೇಡ
* ಮೋಟೊಕ್ರಾಸ್‌ನಿಂದ ರ್ಯಾಲಿಯತ್ತ ಆಸಕ್ತಿ ವಹಿಸಲು ಕಾರಣ
ಕಿರಿಯ ವಯಸ್ಸಿನ ಹುಮ್ಮಸ್ಸಿನಲ್ಲಿ ಮೋಟೊಕ್ರಾಸ್‌ ಮಾಡಬಹುದು. ಅಲ್ಲಿ ಕಸರತ್ತು ಮುಖ್ಯವಾಗುತ್ತದೆ. ಜತೆಗೆ ಜೀವದ ಹಂಗು ತೊರೆದು ಮುನ್ನುಗ್ಗುವ ಹುಚ್ಚು ಧೈರ್ಯ ಬೇಕು. ಆದರೆ ರ್ಯಾಲಿಗೆ ಅತೀವ ಜಾಣ್ಮೆ ಬೇಕು. ಯೋಗಪಟುವಿಗೆ ಇರುವಂತಹ ಏಕಾಗ್ರತೆ ಬೇಕು. ತಾಳ್ಮೆ  ಸಹಿಷ್ಣುತೆ ಎಲ್ಲವೂ ಬೇಕು. ಒಮ್ಮೆ ರ್ಯಾಲಿಯ ರೋಮಾಂಚನ ಅನುಭವಿಸಿದವನು ಮತ್ತೆ ಅದರಿಂದ ದೂರ ನಿಲ್ಲುವುದು ಕಡಿಮೆ.

ನಿಮಗೆ ತೀವ್ರವಾದ ಗಾಯವಾಗಿತ್ತಾ
ಹೌದು, ಲೆಕ್ಕವಿಲ್ಲದಷ್ಟು ಸಲ ಬಿದ್ದಿದ್ದೇನೆ. ಎದ್ದಿದ್ದೇನೆ. ಆದರೆ 2012ರಲ್ಲಿ ಅಬುದಾಬಿಯಲ್ಲಿ ನಡೆದಿದ್ದ ರ್ಯಾಲಿಯ ಸಂದರ್ಭದಲ್ಲಿ ಗ್ಯಾಸೊಲಿನ್‌ ಸೋರಿಕೆಯಿಂದ ಏಕಾಏಕಿ ಬೆಂಕಿ ಭುಗಿಲಾದಾಗ ನನ್ನ ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಹೆಲಿಕಾಪ್ಟರ್‌ನಲ್ಲಿ ತಕ್ಷಣ ನನ್ನನ್ನು ಆಸ್ಪತ್ರೆಗೆ ಸಾಗಿ ಸಿದ್ದರಿಂದ ಪ್ರಾಣ ಉಳಿಯಿತು. ಈಗಲೂ ನನ್ನ ಕೊರಳು, ಭುಜದ ಬಳಿ ಸುಟ್ಟಗಾಯಗಳ ಆಳವಾದ ಕಲೆಗಳಿವೆ.

ಡಕಾರ್‌  ರ್ಯಾಲಿಯಲ್ಲಿ ಅಪಾಯ ಎದುರಾಗಿತ್ತಾ
ಹೌದು. ಹಾದಿಯಲ್ಲಿ ಕೆಲವು ಸಲ ಬಿದ್ದಿದ್ದೆ. ಭುಜದಲ್ಲಿ ಗಾಯವಾಗಿತ್ತು. ಮೂಗಿನಿಂದ ರಕ್ತ ಒಸರುತಿತ್ತು. ಎಡಮೊಣಕಾಲಿಗೆ ತೀವ್ರವಾದ ಪೆಟ್ಟಾಗಿತ್ತು.

ನಮ್ಮ ಮಟ್ಟಿಗೆ ಅದ್ಭುತ ಎನಿಸುವ ಹಿಮಾಲಯನ್‌ ರ್ಯಾಲಿ ಬಗ್ಗೆ ಈಗ ಏನನ್ನಿಸುತ್ತದೆ
ಡಕಾರ್‌ ಎದುರು ಇದು ಏನೇನೂ ಅಲ್ಲ. ಅಂತಹ ಹೋಲಿಕೆಯೂ ಸರಿಯಲ್ಲ.

ಡಕಾರ್‌ನಲ್ಲಿ ನಿಮ್ಮ ಖರ್ಚು ವೆಚ್ಚ ಹೇಗೆ
ಭಾರತದಲ್ಲಿ ನನಗೆ ಪ್ರಾಯೋಜಕರದೇ ಕೊರತೆ. ಆರಂಭದಲ್ಲಿ ಟಿವಿಎಸ್‌ ಸಂಸ್ಥೆಯವರು ಬೆಂಬಲಿಸಿದರು. ಇದೀಗ ಡಕಾರ್‌ಗೆ ನನಗೆ ಆಹ್ವಾನ ಬಂದಾಗ ನನಗೆ ಆಸ್ಟ್ರೀಯದ ಕೆಟಿಎಂ ಸಂಸ್ಥೆ ಬೆಂಬಲಕ್ಕೆ ಬಂದಿತು. ಅವರ ತಂಡಕ್ಕೆ ನಾನು ₹80 ಲಕ್ಷ ಕೊಟ್ಟಿದ್ದೇನೆ. ಅಲ್ಲಿ ನನಗೆ ಅಗತ್ಯ ನೆರವನ್ನು ಅವರು ಒದಗಿಸಿದರು. ಒಟ್ಟಾರೆ, ಆ ರ್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಸುಮಾರು ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಖರ್ಚಾಯಿತು. ನನ್ನ ಗೆಳೆಯರು ಮತ್ತು ನನ್ನ ತಂದೆಯವರೇ ಬಹುಪಾಲು ಹಣವನ್ನು ಒದಗಿಸಿದರು.

ಮೋಟಾರು ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿದರೆ ವರ್ಷಕ್ಕೆ ಎಷ್ಟು ಹಣ ಬೇಕಾಗುತ್ತದೆ
ಸುಮಾರು ಒಂದು ಕೋಟಿಯಿಂದ ಐದು ಕೋಟಿ ರೂಪಾಯಿವರೆಗೆ. ವಿದೇಶಗಳಲ್ಲಿ ಇದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡುತ್ತಾರೆ.

ಬೆಂಗಳೂರಿನಲ್ಲಿ ನಿಮ್ಮ ತರಬೇತಿ ಹೇಗೆ
ಬೆಂಗಳೂರು ನಗರದಲ್ಲಿ ತರಬೇತಿಗೆ ಎಲ್ಲಿದೆ ಸ್ಥಳ. ಹೀಗಾಗಿ ನಾನು ಬೆಂಗಳೂರಿನಲ್ಲಿದ್ದಾಗ ವಾರಕ್ಕೆ ಐದು ದಿನ ಕೋಲಾರಕ್ಕೆ ಹೋಗುತ್ತೇನೆ. ಅಲ್ಲಿಂದ 18 ಕಿ.ಮೀ. ದೂರದಲ್ಲಿರುವ ಆವನಿ ಬೆಟ್ಟದ ತಪ್ಪಲ ಲ್ಲಿರುವ ಹೊಳ್ಳಳ್ಳಿ ಕೆರೆ ಬಳಿ ಅಭ್ಯಾಸ ನಡೆಸುತ್ತೇನೆ. ಸುಮಾರು ಮುನ್ನೂರು ಎಕರೆಯಷ್ಟಿರುವ ಕೆರೆಯಲ್ಲಿ ನೀರಿಲ್ಲ.

ಅಲ್ಲಿಯೇ ಪಕ್ಕದಲ್ಲಿರುವ ನೀಲಗಿರಿ ತೋಪಿನಲ್ಲೂ ಅಭ್ಯಾಸ ನಡೆಸುತ್ತೇನೆ. ತರಬೇತಿಗಾಗಿ ನಾನು ಹೆಚ್ಚು ಸಮಯ ವಿದೇಶಗಳಲ್ಲಿಯೇ ಇರುತ್ತೇನೆ. ಭಾರತದಲ್ಲಿ ಅಂತಹ ತರಬೇತಿಗೆ ಅವಕಾಶ ಕಡಿಮೆ. ಇಲ್ಲಿ ನಾನೊಬ್ಬನೇ ಅಭ್ಯಾಸ ನಡೆಸಬೇಕು. ಅಲ್ಲಾದರೆ ಹತ್ತಾರು ಟ್ರ್ಯಾಕ್‌ಗಳಿರುತ್ತವೆ. ಸಾವಿರಾರು ಮಂದಿ ಅಭ್ಯಾಸ ನಡೆಸುತ್ತಿರುತ್ತಾರೆ.

ಈ ಸಲ ಡಕಾರ್‌ನಲ್ಲಿ ಪೋಲೆಂಡ್‌ನ ಮೈಕೆಲ್‌ ಹರ್ನಿಕ್‌ ಸಾವನ್ನಪ್ಪಿದರಲ್ಲಾ
ಹೌದು. ಮನಕಲಕುವ ನೆನಪು ಅದು. ಮೂರನೇ ಸ್ಟೇಜ್‌ನಲ್ಲಿ ಸ್ಪರ್ಧೆ ಆರಂಭವಾದಾಗ ಅಲ್ಲಿ 7 ಡಿಗ್ರಿ ಉಷ್ಣಾಂಶವಿತ್ತು.  ಅಲ್ಲಿಂದ ಇನ್ನೂರು ಕಿ.ಮೀ. ಕೆಳಗೆ ಬಂದಾಗ ಅಲ್ಲಿ 43 ಡಿಗ್ರಿ ಉಷ್ಣಾಂಶವಿತ್ತು. ಈ ನಡುವೆ ಅವರು ಬೈಕ್‌ನಿಂದ ಬಿದ್ದಿದ್ದರು. ಆಗ ಅವರ ನೀರಿನ ಡಬ್ಬ ಒಡೆದು ಹೋಗಿತ್ತು. ಅವರ ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾಗಿ ಹಾದಿಯಲ್ಲಿಯೇ ಅವರು ಸಾವನ್ನಪ್ಪಿದರು. ಒಂದು ಕಡೆ ಬೈಕ್‌ಗೆ ಪೆಟ್ರೋಲ್‌ ತುಂಬಿಸಿಕೊಳ್ಳುತ್ತಿದ್ದಾಗ ಅವರನ್ನು ಭೇಟಿಯಾಗಿ ಮಾತನಾಡಿದ ನೆನಪು ನನ್ನ ಮನದಲ್ಲಿನ್ನೂ ಹಸಿರಾಗಿದೆ.

ಹಳೆಯ ಹೆಸರೇ ಉಳಿಯಿತು
ಡಕಾರ್‌ ರ್ಯಾಲಿಯ ಜನಪ್ರಿಯತೆ ಯಿಂದಾಗಿ ಡಕಾರ್‌ ಎಂಬ ಸ್ಥಳ ದಕ್ಷಿಣ ಅಮೆರಿಕಾದಲ್ಲಿಯೇ ಇರಬಹುದೆಂಬ ಭಾವನೆ ಸಹಜ. ಆದರೆ ಡಕಾರ್‌ ನಗರ ಇರುವುದು ಆಫ್ರಿಕಾ ಖಂಡದ ಸೆನಗಲ್‌ ದೇಶದಲ್ಲಿ !

1978ರಲ್ಲಿ ಮೊದಲ ಬಾರಿಗೆ ಪ್ಯಾರಿಸ್‌ ನಗರದಿಂದ ಸೆನಗಲ್‌ನ ಡಕಾರ್‌ ನಗರದ ವರೆಗೆ ರ್ಯಾಲಿ ನಡೆದಿತ್ತು. ಆ ರ್ಯಾಲಿ ಆ ದಿನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು.  2007ರವರೆಗೆ ನಿರಂತರವಾಗಿ ಈ ರ್ಯಾಲಿ ನಡೆದಿತ್ತು. ಆದರೆ 2008ರಲ್ಲಿ ರ್ಯಾಲಿಯ ಸಂದರ್ಭ ದಲ್ಲಿ ಉಗ್ರರ ದಾಳಿ ಭೀತಿ ವ್ಯಾಪಕವಾಗಿತ್ತು. ಹೀಗಾಗಿ ಆ ಸಲ ರ್ಯಾಲಿಯನ್ನು ರದ್ದುಗೊಳಿಸಲಾ ಯಿತು. ಸುಮಾರು 10 ಸಾವಿರ ಕಿಲೋ ಮೀಟರ್‌ ದೂರದ ಆ ರ್ಯಾಲಿಯಲ್ಲಿ 500ಕ್ಕೂ ಹೆಚ್ಚು ವಾಹನಗಳು ಸ್ಪರ್ಧಿಸುತ್ತಿದ್ದವು.

ಆ ರ್ಯಾಲಿಯನ್ನು ನಂತರದ ದಿನಗಳಲ್ಲಿ ಹಿಂದಿನಂತೆ ನಡೆಸಲು ಸಾಧ್ಯವಾಗಲಿಲ್ಲ. ಉಗ್ರರ ಭಯದಿಂದ ಪ್ರಾಯೋಜಕರು ಹಿಂದೆ ಸರಿದರು. ಆಗ ದಕ್ಷಿಣ ಅಮೆರಿಕಾದಲ್ಲಿ ಇದೇ ರ್ಯಾಲಿಯನ್ನು ನಡೆಸಲು ನಿರ್ಧರಿಸಲಾಯಿತು. 2009ರಿಂದ ಈ ರ್ಯಾಲಿ ದಕ್ಷಿಣ ಅಮೆರಿಕಾದಲ್ಲೇ ಯಶಸ್ವಿಯಾಗಿ ನಡೆಯುತ್ತಿದೆ.

ಈ ರ್ಯಾಲಿ ಅರ್ಜೆಂಟಿನಾ, ಚಿಲಿ, ಬೊಲಿವಿಯಾದ ರಸ್ತೆಗಳಲ್ಲಿ ಸಾಗುತ್ತವೆ. ಕಳೆದ ಮೂರೂವರೆ ದಶಕಗಳಲ್ಲಿ ಈ ರ್ಯಾಲಿಯ ಸಂದರ್ಭದಲ್ಲಿ ವಿವಿಧ ಘಟನೆ ಗಳಲ್ಲಿ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ. ಇದು ಈ ರ್ಯಾಲಿಯ ಭೀಕರತೆಗೊಂದು ನಿದರ್ಶನ.
ಈ ರ್ಯಾಲಿಯಲ್ಲಿ ಕೆಟಿಎಂ ಬೈಕು ಗಳೇ ಕಳೆದ ಒಂದು ದಶಕದಿಂದ ಪ್ರಶಸ್ತಿ ಗೆಲ್ಲುತ್ತಿವೆ. ಇಲ್ಲಿ ಹೊಂಡಾ, ಯಮಹಾ, ಶೆರ್ಕೊ, ಬಿಎಂಡಬ್ಲ್ಯು, ಕಗೀವಾ ಮೋಟಾರು ಬೈಕುಗಳೂ ಸವಾಲು ಒಡ್ಡುತ್ತಲೇ ಬಂದಿವೆ.

ಪ್ರಶಸ್ತಿಗಳು
2005: ಎಂಆರ್‌ಎಫ್‌ ರಾಷ್ಟ್ರೀಯ ಸೂಪರ್‌ಕ್ರಾಸ್‌ ಚಾಂಪಿಯನ್‌ಷಿಪ್‌.
ರಾಷ್ಟ್ರೀಯ ಡರ್ಟ್‌ ಟ್ರ್ಯಾಕ್‌ ಚಾಂಪಿಯನ್‌ಷಿಪ್‌.
2006:ದುಬೈನಲ್ಲಿ ನಡೆದ ಅಲ್‌ ಐನ್‌ ಮೋಟೊಕ್ರಾಸ್‌.
2007: ರಾಷ್ಟ್ರೀಯ ಸೂಪರ್‌ಕ್ರಾಸ್‌ ಚಾಂಪಿಯನ್‌ಷಿಪ್‌.
2008: ಎಂಆರ್‌ಎಫ್‌ ಸೂಪರ್‌ ಕ್ರಾಸ್‌ ಮತ್ತು ಗಲ್ಫ್‌ ದರ್ಟ್‌ ಟ್ರ್ಯಾಕ್‌  ಚಾಂಪಿಯನ್‌ಷಿಪ್‌.
2009: ಶ್ರೀಲಂಕಾದಲ್ಲಿ ಮಹಾರಗಾಮ ಮೋಟೋಕ್ರಾಸ್‌.
2010: ಎಂಆರ್‌ಎಫ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌. ರೊಲನ್‌ ರಾಷ್ಟ್ರೀಯ ದರ್ಟ್‌ ಟ್ರ್ಯಾಕ್‌ ಚಾಂಪಿಯನ್‌ಷಿಪ್‌, ಶ್ರೀಲಂಕಾದಲ್ಲಿ ನೂರ್‌ ಎಲಿನ್‌ ಮೋಟೊ ಕ್ರಾಸ್‌, ಫಾಕ್ಸ್‌ಹಿಲ್‌ ಸೂಪರ್‌ಕ್ರಾಸ್‌, ವಿಜಯಬಾಹು ಮೋಟೊಕ್ರಾಸ್‌ ಕೂಟಗಳಲ್ಲಿ ಪ್ರಶಸ್ತಿ.
2012: ಚಂಡೀಗಡದಲ್ಲಿ ನಡೆದ ರಾಷ್ಟ್ರೀಯ ಕೂಟ. ಹಿಮಾಲಯನ್‌ ರ್ಯಾಲಿ.
2014: ರಾಜಸ್ತಾನದ ಡೆಸರ್ಟ್‌ ಸ್ಟ್ರಾಮ್‌ ರ್ಯಾಲಿ.

Write A Comment