ಮನೋರಂಜನೆ

ಗೆಲುವಿನ ಸಿಕ್ಸರ್ ಸಿಡಿಸಿದ ಧೋನಿ: ಝಿಂಬಾಬ್ವೆ ವಿರುದ್ಧ 6 ವಿಕೆಟ್ ಜಯ

Pinterest LinkedIn Tumblr

GPTIL-final__ಆಕ್ಲೆಂಡ್, ಮಾ.14: ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಸುರೇಶ ರೈನಾ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಮುರಿಯದ ಜೊತೆಯಾಟದಲ್ಲಿ ದಾಖಲಿಸಿದ 196 ರನ್‌ಗಳ ಸಹಾಯದಿಂದ ಭಾರತ ಶನಿವಾರ ಇಲ್ಲಿ ನಡೆದ ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಆರು ವಿಕೆಟ್‌ಗಳ ಜಯ ಗಳಿಸಿದೆ.
ಭಾರತ ಗ್ರೂಪ್ ಹಂತದ ಆರು ಪಂದ್ಯಗಳಲ್ಲಿ ಆರರಲ್ಲೂ ಜಯ ಗಳಿಸಿ ‘ಬಿ’ ಗ್ರೂಪ್‌ನ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಜೇಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮಾರ್ಚ್ 19ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಝಿಂಬಾಬ್ವೆ ತಂಡ ತಾನಾಡಿದ ಆರು ಪಂದ್ಯಗಳ ಪೈಕಿ ಐದರಲ್ಲೂ ಸೋತಿದ್ದು, ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಝಿಂಬಾಬ್ವೆ ಗೆಲುವಿಗೆ ಕಠಿಣ ಹೋರಾಟ ನಡೆಸಿತ್ತು. ತಂಡದ ನಾಯಕ ಬ್ರೆಂಡನ್ ಟೇಲರ್‌ಗೆ ಇದು ವಿದಾಯ ದ ಪಂದ್ಯವಾಗಿತ್ತು. ಆಕರ್ಷಕ ಶತಕ ದಾಖಲಿಸಿ ಗೆಲುವಿನೊಂದಿಗೆ ವೃತ್ತಿ ಬದು ಕಿಗೆ ವಿದಾಯ ಘೋಷಿಸುವ ಕನಸು ಕಂಡಿದ್ದರು. ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಭರ್ಜರಿ ಆಟ ಬ್ರೆಂಡನ್‌ಗೆ ವಿದಾಯ ಪಂದ್ಯದಲ್ಲಿ ಗೆಲುವು ನಿರಾಕರಿಸಿದರು.
ಗೆಲ್ಲಲು 288 ರನ್‌ಗಳ ಸವಾಲನ್ನು ಪಡೆದ ಭಾರತ ತಂಡ ಇನ್ನೂ 8 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಸತತ ಆರನೆ ಗೆಲುವಿನೊಂದಿಗೆ ಗ್ರೂಪ್‌ಹಂತದ ಸ್ಪರ್ಧೆಯನ್ನು ಕೊನೆಗೊಳಿಸಿ ಅಜೇಯವಾಗಿ ಕ್ವಾರ್ಟರ್ ಫೈನಲ್ ತಲುಪಿತು.
ಸುರೇಶ್ ರೈನಾ ಎರಡು ಬಾರಿ ಜೀವದಾನ ಪಡೆದಿದ್ದರು. ಅವರ ಸ್ಕೋರ್ 47ಕ್ಕೆ ತಲುಪಿದ್ದಾಗ ಸಿಕಂದರ್ ರಝಾ ಬೌಲಿಂಗ್‌ನಲ್ಲಿ ಹ್ಯಾಮಿ ಲ್ಟನ್ ಮಸಕಝ ಕ್ಯಾಚ್ ಕೈ ಚೆಲ್ಲಿದರು. ಅವರ ಸ್ಕೋರ್ 71ಕ್ಕೆ ತಲುಪಿದ್ದಾಗ ವಿಕೆಟ್‌ಕೀಪರ್ ಬ್ರೆಂಡನ್ ಟೇಲರ್ ಕ್ಯಾಚ್ ಕೈ ಬಿಟ್ಟರು.ಈ ಅವಕಾಶ ಸದುಪಯೋ ಗಪಡಿಸಿದ ರೈನಾ ಶತಕ ತಲುಪಿದರು. 94 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ರೈನಾ ಶತಕ ಪೂರ್ಣಗೊಳಿಸಿದರು. ಇದು ವಿಶ್ವಕಪ್‌ನಲ್ಲಿ ಅವರ ಮೊದಲ ಶತಕ. ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಸಂಖ್ಯೆಯನ್ನು ಐದಕ್ಕೆ ಏರಿಸಿದ್ದಾರೆ. ರೈನಾ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 74 ರನ್ ಗಳಿಸಿದ್ದರು. ಬಳಿಕ ಎಲ್ಲ ಪಂದ್ಯಗಳಲ್ಲಿ ರನ್ ಬರ ಎದುರಿಸಿದ್ದರು. ಝಿಂಬಾಬ್ವೆ ವಿರುದ್ಧ ಶತಕದೊಂದಿಗೆ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ.
ಭಾರತ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ (16),ಶಿಖರ್ ಧವನ್(4) ಮತ್ತು ಅಜಿಂಕ್ಯ ರಹಾನೆ (19) ಅವರನ್ನು ಬೇಗನೆ ಕಳೆದುಕೊಂಡಿತ್ತು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 38 ರನ್ ಗಳಿಸಿ ಔಟಾದರು. 22.4 ಓವರ್‌ಗಳಲ್ಲಿ 4 ವಿಕೆಟ್‌ಗೆ 92 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಬ್ಯಾಟಿಂಗ್‌ನ್ನು ಸುರೇಶ್ ರೈನಾ ಮತ್ತು ನಾಯಕ ಧೋನಿ ಮುನ್ನಡೆಸಿದರು. 48.4ನೆ ಓವರ್‌ನಲ್ಲಿ ಧೋನಿ ಅವರು ಪನ್ಯಂಗರ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತಕ್ಕೆ 6ನೆ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವಿಗೆ ಸಹಾಯ ಮಾಡಿದರು. ಧೋನಿ ಔಟಾಗದೆ 85 ರನ್(76 ಎಸೆತ, 8 ಬೌಂಡರಿ, 2 ಸಿಕ್ಸರ್ ) ಗಳಿಸಿದರು. ಸುರೇಶ್ ರೈನಾ ಔಟಾಗದೆ 110 ರನ್(104ಎಸೆತ, 9ಬೌಂಡರಿ, 4 ಸಿಕ್ಸರ್) ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಝಿಂಬಾಬ್ವೆ 48.5 ಓವರ್‌ಗಳಲ್ಲಿ 287 ರನ್‌ಗಳಿಗೆ ಆಲೌಟಾಗಿತ್ತು.

ಮುಹಮ್ಮದ್ ಶಮಿ (3-48), ಉಮೇಶ್ ಯಾದವ್ (3-43) ಮತ್ತು ಮೋಹಿತ್ ಶರ್ಮ (3-48) ಉತ್ತಮ ದಾಳಿ ಸಂಘಟಿಸಿದರೂ ಝಿಂಬಾಬ್ವೆ ತಂಡ 48.5 ಓವರ್‌ಗಳಲ್ಲಿ 288 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ನಾಯಕ ಟೇಲರ್138 ರನ್ (110ಎಸೆತ , 15 ಬೌಂಡರಿ , 5 ಸಿಕ್ಸರ್) ಮತ್ತು ವಿಲಿಯಮ್ಸ್ 50 ರನ್, ಎರ್ವಿನ್ 27 ರನ್, ಸಿಕಂದರ್ ರಝಾ 28 ರನ್ ಮತ್ತು ಪನ್ಯಂಗರ 10 ರನ್ ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. 11 ಓವರ್‌ಗಳಲ್ಲಿ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಝಿಂಬಾಬ್ವೆ 100 ರನ್‌ಗಳ ಮೊತ್ತ ತಲುಪುವ ವಿಚಾರದಲ್ಲಿ ಅನುಮಾನ ಇತ್ತು. ಆದರೆ ಸಿಯಾನ್ ವಿಲಿಯಮ್ಸ್ ಮತ್ತು ಬ್ರೆಂಡನ್ ಟೇಲರ್ 93 ರನ್‌ಗಳ ಜೊತೆಯಾಟ ನೀಡಿದರು. ಟೇಲರ್ ವಿಶ್ವಕಪ್‌ನಲ್ಲಿ ಸತತ ಎರಡನೆ ಶತಕ ಪೂರ್ಣಗೊಳಿದರು. 99 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಟೇಲರ್ ವಿಶ್ವಕಪ್‌ನಲ್ಲಿ ಸತತ ಎರಡನೆ ಶತಕ ಬಾರಿಸಿದ್ದಾರೆ. 138 ರನ್ (110ಎ, 15ಬೌ,5ಸಿ) ಗಳಿಸಿ ನಿರ್ಗಮಿಸಿದರು.167ನೆ ಏಕದಿನ ಪಂದ್ಯದಲ್ಲಿ ಇದು ಅವರ 8ನೆ ಶತಕವಾಗಿದೆ.

ಸ್ಕೋರ್ ಪಟ್ಟಿ

ಝಿಂಬಾಬ್ವೆ 48.5 ಓವರ್‌ಗಳಲ್ಲಿ 287/10
ಚಾಮು ಚಿಬಾಬಾ ಸಿ ಧವನ್ ಬಿ ಶಮಿ 7
ಮಸಕಝ ಸಿ ಧೋನಿ ಬಿ ಯಾದವ್2
ಸೊಲೊಮನ್ ಮಿರ್ ಸಿ ಧೋನಿ ಬಿ ಮೋಹಿತ್ 9
ಬ್ರೆಂಡನ್ ಟೇಲರ್ ಸಿ ಧವನ್ ಬಿ ಮೋಹಿತ್ 138
ವಿಲಿಯಮ್ಸ್ ಸಿ ಆ್ಯಂಡ್ ಬಿ ಅಶ್ವಿನ್50
ಎರ್ವಿನ್ ಸಿ ಆ್ಯಂಡ್ ಬಿ ಮೋಹಿತ್ 27
ಸಿಕಂದರ ರಝಾ ಬಿ ಶಮಿ 28
ರೆಜಿಸ್ ಚಕಬ್ವ ಸಿ ರೋಹಿತ್ ಬಿ ಯಾದವ್ 10
ಪನ್ಯಂಗರ ಸಿ ಯಾದವ್ ಬಿ ಶಮಿ 6
ಮುಪರಿವ ಔಟಾಗದೆ1
ಚಟಾರ ಬಿ ಯಾದವ್ 0
ಇತರ 9
ವಿಕೆಟ್ ಪತನ:

1-11, 2-13, 3-33, 4-126, 5-235, 6-241, 7-276, 8-285, 9-286, 10-287. ಬೌಲಿಂಗ್ ವಿವರ:
ಮುಹಮ್ಮದ್ ಶಮಿ 9-2-48-3
ಉಮೇಶ್ ಯಾದವ್ 9.5-1-43-3
ಮೋಹಿತ್ ಶರ್ಮ 10-1-48-3
ರವಿಚಂದ್ರನ್ ಅಶ್ವಿನ್ 10-0-75-1
ರವೀಂದ್ರ ಜಡೇಜ 10-0-71-0

ಭಾರತ 48.4 ಓವರ್‌ಗಳಲ್ಲಿ 288/4
ರೋಹಿತ್ ಶರ್ಮ ಸಿ ರಝಾ ಬಿ ಪನ್ಯಂಗರ 16
ಶಿಖರ್ ಧವನ್ ಬಿ ಪನ್ಯಂಗರ 4
ವಿರಾಟ್ ಕೊಹ್ಲಿ ಬಿ ರಝಾ 38
ಅಜಿಂಕ್ಯ ರಹಾನೆ ರನೌಟ್(ರಝಾ/ಟೇಲರ್) 19
ಸುರೇಶ್ ರೈನಾ ಔಟಾಗದೆ 110
ಎಂಎಸ್ ಧೋನಿ ಔಟಾಗದೆ 85
ಇತರ 16
ವಿಕೆಟ್ ಪತನ:

1-21, 2-21, 3-71,4-92. ಬೌಲಿಂಗ್ ವಿವರ:
ಪನ್ಯಂಗರ 8.4-1-53-2
ಚಟಾರ 10-1-59-0
ಮುಪರಿವ 10-0-61-0
ಸೊಲೊಮನ್ ಮಿರ್ 5-029-0
ವಿಲಿಯಮ್ಸ್ 5-0-31-0
ಸಿಕಂದರ್ ರಝಾ 8-0-37-1ಮಸಕಝ 2-0-15-0

Write A Comment