ಮನೋರಂಜನೆ

ಕಪ್ಪು ಬಿಳುಪಿನ ಭಾವ ಬಿಂಬ…

Pinterest LinkedIn Tumblr

psmec13sameer1_0

‘Because We Come From Somewhere’ (ಯಾಕೆಂದರೆ ನಾವು ಎಲ್ಲಿಂದಲೋ ಬಂದವರು) ಎಂಬ ಈ ಕಪ್ಪು–ಬಿಳುಪು ಚಿತ್ರಸರಣಿಯನ್ನು ತೆರೆಯುತ್ತಾ ಹೋದಂತೆ ಬರಿ ಮಾತಿಗೆ ಸಿಗದ ನೂರು ಭಾವಗಳು ಮನದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಒಂದೊಂದು ಚಿತ್ರಗಳೂ ಮನದ ಹಾಳೆಯ ಮೇಲೆ ಹಲವು ಛಾಯೆಗಳನ್ನು ಬಿತ್ತುತ್ತಾ, ನೆನಪ ಹೂಗಳನ್ನು ಅರಳಿಸುತ್ತಾ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ.

ಅಂದಹಾಗೆ ಹಾವೇರಿ ಜಿಲ್ಲೆಯ ಸವಣೂರಿನ ಸತ್ಯಬೋಧಸ್ವಾಮಿ ಮಠದಲ್ಲಿ ರೂಪುತಾಳಿದ ಈ ಭಾವಚಿತ್ರಸರಣಿಯ ಹಿಂದಿನ ಕಣ್ಣು ಸಮೀರ್‌ ರಾಯಚೂರು ಅವರದ್ದು. ಮಠದಲ್ಲಿನ ಜೀವನ ಚಹರೆಗಳನ್ನು ಕಪ್ಪು–ಬಿಳುಪು ಚಿತ್ರಗಳಲ್ಲಿ ಹಿಡಿದಿಡುವ ಪ್ರಯತ್ನ ಈ ಸರಣಿಯಲ್ಲಿದೆ. ಮಠವನ್ನು ಕೇಂದ್ರವಾಗಿರಿಸಿಕೊಂಡಿದ್ದರೂ ಪೂಜೆ, ಧಾರ್ಮಿಕ ಆಚರಣೆಗಳ ಹೊರತಾಗಿ ದೈನಂದಿನ ಸುಂದರ ಕ್ಷಣಗಳ ಮೂಲಕ ಅಲ್ಲಿನ ಮನುಷ್ಯರ ಬದುಕನ್ನು ಅರಿಯುವ ಪ್ರಯತ್ನವಿರುವುದು ಈ ಚಿತ್ರಸರಣಿಯ ವಿಶೇಷತೆ.

ಸಮೀರ್‌ ಕಾನೂನು ಪದವೀಧರರು. ತಮ್ಮ ವೃತ್ತಿಯನ್ನು ತೊರೆದು, ಕಳೆದ ಒಂದು ವರ್ಷದಿಂದ ಹಾವೇರಿ ಸಮೀಪದ ಸವಣೂರಿನ ಮಠದಲ್ಲಿನ ಜೀವನವನ್ನು ತಮ್ಮ ಕ್ಯಾಮೆರಾದಲ್ಲಿ ದಾಖಲಿಸಲು ಮುಂದಾಗಿರುವುದರ ಹಿಂದೆ ಸಣ್ಣ ಕತೆಯಿದೆ. ಸಮೀರ್‌ ತಂದೆ ಹಾವೇರಿಯ ಸವಣೂರು ಮಠದಲ್ಲಿಯೇ ಹುಟ್ಟಿ ಬೆಳೆದವರು.  ಆದರೆ ಬ್ಯಾಂಕ್‌ ಉದ್ಯೋಗಿಯಾದ ಅವರು ವೃತ್ತಿ ಬದುಕಿನ ಬಹುಪಾಲು ಸಮಯವನ್ನು  ದೆಹಲಿ, ಮುಂಬೈ ಕೋಲ್ಕತ್ತ ಮತ್ತು ಚೆನ್ನೈ ನಗರಗಳಲ್ಲಿ ಕಳೆದರು. ಸಮೀರ್‌ ಹುಟ್ಟಿ ಪ್ರಾಥಮಿಕ ಶಿಕ್ಷಣ ಪಡೆದಿದ್ದೂ ಚೆನ್ನೈನಲ್ಲಿಯೇ.  2010ನಲ್ಲಿ ಕಾನೂನು ಪದವಿ ಪಡೆದ ಅವರು ನಂತರ ಒಂದು ವರ್ಷ ಬೆಂಗಳೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದರು.

ವೃತ್ತಿಯಲ್ಲಿ ವಕೀಲರಾಗಿದ್ದರೂ ಸಮೀರ್‌ ಧ್ಯಾನವೆಲ್ಲ ತಮ್ಮ ನೆಚ್ಚಿನ ಹವ್ಯಾಸವಾದ ಛಾಯಾಗ್ರಹಣದತ್ತಲೇ ಇತ್ತು. ಕೊನೆಗೆ ತನ್ನ ಹವ್ಯಾಸವನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿ ಕಾಯಂ ಆಗಿ ಕ್ಯಾಮೆರಾ ಕೈಗೆತ್ತಿಕೊಂಡರು. ಛಾಯಾಗ್ರಹಣವನ್ನು ವೃತ್ತಿಯನ್ನಾಗಿ ಸ್ವೀಕರಿಸುವಾಗ ಅದಕ್ಕೆ ತಕ್ಕ ತರಬೇತಿಯನ್ನೂ ಪಡೆದುಕೊಳ್ಳುವುದು ಸಮೀರ್ ಅವರಿಗೆ ಅನಿವಾರ್ಯವೆನಿಸಿತು. ಆದ್ದರಿಂದಲೇ ಮೆಸಾಚುಸೆಟ್ಸ್‌ನಲ್ಲಿನ ಹಾಲ್‌ಮಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಟೊಗ್ರಫಿಯಲ್ಲಿ ಒಂದು ವರ್ಷ ಛಾಯಾಗ್ರಹಣ ತರಬೇತಿ ಪಡೆದು ಬಂದರು. ಅಲ್ಲಿಂದ ಬಂದು 2012 ವಾಪಸ್‌ ಬಂದು ಫ್ರೀಲ್ಯಾನ್ಸ್‌ ಫೋಟೊಗ್ರಫಿಯಲ್ಲಿ ತೊಡಗಿಕೊಂಡರು.

ಕೆಲವು ಸಮಯದ ಬಳಿಕ ಸಮೀರ್‌ಗೆ ಛಾಯಾಗ್ರಹಣದ ವಿಭಿನ್ನ ಆಯಾಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಹಂಬಲವೂ ಹುಟ್ಟಿತು. ಈ ಹಂಬಲದ ಬೆನ್ನು ಹತ್ತಿದ ಸಮೀರ್‌ ದೆಹಲಿಯಲ್ಲಿನ ಎರಡು ಫೋಟೊಗ್ರಫಿ ಫೆಸ್ಟಿವಲ್‌ಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ಈ ಕೆಲಸ ಅವರಿಗೆ ಫೋಟೊಗ್ರಫಿಯ ಅನೇಕ ಆಯಾಮಗಳ ಬಗ್ಗೆ ಅರಿವು ಮೂಡಿಸಿತು. ಅಲ್ಲದೇ ಈ ಫೆಸ್ಟಿವಲ್‌ನ ಮೂಲಕವೇ ಸಮೀರ್‌ ಡಾಕ್ಯುಮೆಂಟರಿ ಛಾಯಾಗ್ರಹಣದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡರು.

ಸಮೀರ್‌ ತಂದೆ ವೃತ್ತಿಜೀವನವನ್ನು ಹುಟ್ಟೂರಿನಿಂದ ದೂರವೇ ಕಳೆದಿದ್ದರೂ ತಮ್ಮ ಮೂಲ ನೆಲೆಯಾದ ಮಠದ ಬಗ್ಗೆ ಶ್ರದ್ಧೆ ಉಳಿಸಿಕೊಂಡಿದ್ದರು. ‘ನಮ್ಮ ಹಿಂದಿನ ಏಳು ತಲೆಮಾರುಗಳಿಂದ ಹಾವೇರಿಯ ಸವಣೂರಿನಲ್ಲಿರುವ ಈ ಮಠ ನಮ್ಮ ಪೂರ್ವಜರ ಮೇಲ್ವಿಚಾರಣೆಯಲ್ಲಿಯೇ ಇದೆ. ನಮ್ಮ ತಂದೆ ಹುಟ್ಟಿದ್ದೂ ಅಲ್ಲಿಯೇ. ಈಗ ನಮ್ಮ ಕುಟುಂಬ ಬೆಳೆದಿದ್ದು, ಪ್ರತಿ ವರ್ಷ ಒಬ್ಬೊಬ್ಬರು ಸದಸ್ಯರು ಮಠದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ.  ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ಅಪ್ಪನ ಸರದಿ ಬಂದಾಗ ಮಠದ ಮೇಲ್ವಿಚಾರಣೆಗೆ ನೋಡಿಕೊಳ್ಳಲು ಮಠಕ್ಕೆ ತೆರಳಲು ನಿರ್ಧರಿಸಿದರು. ಅವರ ಈ ನಿರ್ಧಾರ ನನ್ನಲ್ಲಿ ಮಠದ ಬಗ್ಗೆ ಆಸಕ್ತಿ ಹುಟ್ಟಿಸಿತು.’ ಎಂದು ಈ ಚಿತ್ರಸರಣಿಗೆ ಪ್ರೇರಣೆಯಾದ ಸಂಗತಿಯನ್ನು ವಿವರಿಸುತ್ತಾರೆ ಸಮೀರ್‌.

ಹಾಗೆಂದು ಸಮೀರ್‌ ಅವರಿಗೆ ಧರ್ಮ–ದೇವರ ಬಗ್ಗೆ ಅಷ್ಟೇನೂ ನಂಬಿಕೆಯಿಲ್ಲ. ಆವರ ಕುತೂಹಲವಿದ್ದುದು ದೇವರು ಧಾರ್ಮಿಕ ನಂಬಿಕೆಗಳಿಗಿಂತ ಹೆಚ್ಚಾಗಿ ಆ ಕಾರ್ಯಗಳಲ್ಲಿ ಸಾರ್ಥಕತೆಯನ್ನು ಕಾಣುತ್ತಿರುವ ಮನುಷ್ಯರಲ್ಲಿ. ‘ಸಾಮಾನ್ಯವಾಗಿ ಮಠ, ದೇವಾಲಯಗಳ ಫೋಟೊಗ್ರಫಿ ದೇವರು ಇಲ್ಲವೇ ಕಟ್ಟಡ, ಅಲಂಕಾರ, ಶಿಲ್ಪಗಳನ್ನೇ ಕೇಂದ್ರೀಕರಿಸಿರುತ್ತದೆ. ಆದರೆ ನನ್ನ ಉದ್ದೇಶ ಮಠದಲ್ಲಿನ ಜನರ ಬದುಕಿನ ಜೀವಂತ ಕ್ಷಣಗಳನ್ನು ಸೆರೆಹಿಡಿಯುವುದಾಗಿತ್ತು.

ಆಳವಾದ ಅಧ್ಯಾತ್ಮ ಅನುಭವಕ್ಕಿಂತ ಹೆಚ್ಚಾಗಿ ಅಲ್ಲಿನ ಮನುಷ್ಯರು ದೇವರ ಸೇವೆಯ ಜತೆಜತೆಗೆ ಮಾನವೀಯ ಸಂಬಂಧಗಳಲ್ಲಿಯೂ ಹೇಗೆ ಸಂತೋಷವನ್ನು ಕಾಣುತ್ತಾರೆ ಎನ್ನುವುದನ್ನು ಅರಿಯುವ ಪ್ರಯತ್ನ ನನ್ನದು. ಆದ್ದರಿಂದಲೇ ನನ್ನ ಚಿತ್ರಗಳು ದೇವರಿಗಿಂತ ಹೆಚ್ಚಾಗಿ ಮನುಷ್ಯ ಕೇಂದ್ರಿತವಾಗಿವೆ’ ಎಂದು ಅವರು ವಿವರಿಸುತ್ತಾರೆ. ಸಮೀರ್‌ ಅವರ ಕುಟುಂಬದ ಸದಸ್ಯರೇ ಅವರ ಫೋಟೊಗ್ರಫಿಯ ವಸ್ತುವೂ ಆಗಿರುವುದರಿಂದ ಈ ಚಿತ್ರಸರಣಿಗೊಂದು ಭಾವನಾತ್ಮಕ ನೆಲೆಯೂ ದಕ್ಕಿದೆ.

ಸಮೀರ್‌ ರಾಯಚೂರು
1 ಸವಣೂರಿನ ಮಠದ ಜಗತ್ತನ್ನು ಅಭಿವ್ಯಕ್ತಗೊಳಿಸಲು ಕಪ್ಪು ಬಿಳುಪೇ ಹೆಚ್ಚು  ಸೂಕ್ತವೆನಿಸಿತು.  ಎಲ್ಲಕ್ಕಿಂತ ಹೆಚ್ಚಾಗಿ ಆ ಮಠದ ಬೆಳಕಿನ ವಿನ್ಯಾಸ ನನ್ನನ್ನು ತುಂಬ ಸೆಳೆಯಿತು. ಅಲ್ಲಿನ ಕಿಟಕಿಗಳು, ಅದರಿಂದ ತೂರಿಬರುವ ಬೆಳಕು ಮೂಡಿಸುವ ವಿನ್ಯಾಸ. ಬದುಕಿನ ವಿವಿಧ ಕ್ಷಣಗಳು ಅಲ್ಲಿ ಬಿಂಬಿತವಾಗುವ ಪರಿ ಇವೆಲ್ಲವನ್ನೂ ಅಷ್ಟೇ ಜೀವಂತವಾಗಿ ಸೆರೆಹಿಡಿಯಲು ಕಪ್ಪು–ಬಿಳುಪು ಚಿತ್ರಗಳಲ್ಲಿ ಮಾತ್ರ ಸಾಧ್ಯ ಎಂದು ನನಗನಿಸಿತು. ಆದ್ದರಿಂದಲೇ ಕಪ್ಪು–ಬಿಳುಪು ಚಿತ್ರದಲ್ಲಿಯೇ ಇದನ್ನು ಸೆರೆಹಿಡಿಯಲು ಯತ್ನಿಸಿದೆ.

2 ಕಳೆದ ವರ್ಷ ಮಾರ್ಚ್‌ 10ರಲ್ಲಿ  ನಾನು ಮೊದಲು ಸವಣೂರು ಮಠಕ್ಕೆ ಭೇಟಿ ನೀಡಿದ್ದು.  ನಂತರ ಪ್ರತಿ ತಿಂಗಳಿಗೊಮ್ಮೆ ಮೂರು ನಾಲ್ಕು ದಿನದ ಮಟ್ಟಿಗೆ ಮಠದಲ್ಲಿ ಉಳಿದುಕೊಂಡು ಇಲ್ಲಿನ ಚಿತ್ರಗಳನ್ನು ಸೆರೆಹಿಡಿದಿದ್ದೇನೆ.

3 ಇದೊಂದು ಸುದೀರ್ಘ ಯಾನ. ಈ ಕಲಿಕಾ ಯಾನ ನನ್ನನ್ನು ವೈಯಕ್ತಿಯವಾಗಿ ಬೆಳೆಸಿದೆ.  ನಾನು ಈ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಳ್ಳದೇ ಇದ್ದಿದ್ದರೆ ಸವಣೂರಿನ ಮಠದ ಆ ಜಗತ್ತನ್ನು ಇಷ್ಟು ಆಳವಾಗಿ ಗ್ರಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಇದು ನನ್ನ ಮನಸ್ಸನ್ನು ಇನ್ನಷ್ಟು ಪವಿತ್ರಗೊಳಿಸಿದೆ. ಹೊಸ ಹೊಸ ಜನರನ್ನು ಭೇಟಿ ಮಾಡಿದ್ದೇನೆ. ಬದುಕನ್ನು ವಿಭಿನ್ನವಾಗಿ ನೋಡಲು ಸಾಧ್ಯವಾಗಿದೆ.

4 ‘ಇನ್ನೊಂದು ವಾರದಲ್ಲಿ ಮಠದ ಮೇಲ್ವಿಚಾರಣಾ ಅವಧಿ ಮುಗಿದು ನನ್ನ ತಂದೆ ಮತ್ತೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇದುವರೆಗೆ ಮಠದ ಜೀವನವನ್ನು ದಾಖಲು ಮಾಡುವುದಷ್ಟನ್ನೇ ಗುರಿಯಾಗಿಸಿಕೊಂಡಿದ್ದ ನಾನು ಈ ಯೋಜನೆಯನ್ನು ಇನ್ನೂ ಮುಂದುವರಿಸಲು ನಿರ್ಧರಿಸಿದ್ದೇನೆ. ಕಳೆದ ಒಂದು ವರ್ಷದಿಂದ ಮಠದ ಧಾರ್ಮಿಕ ವಾತಾವರಣದಲ್ಲಿಯೇ ಕಳೆದ ನನ್ನ ತಂದೆ ತಾಯಿ ಮರಳಿ ನಗರದ ಬದುಕಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನೂ ಈ ಸರಣಿ ಚಿತ್ರಗಳ ಮುಂದಿನ ಸರಣಿಯಲ್ಲಿ ಮುಂದುವರಿಸಲು ನಿರ್ಧರಿಸಿದ್ದೇನೆ.

5 ಹಿಮಾಲಯದ ಲಡಾಕ್‌ನ ಕಣಿವೆಯಲ್ಲಿ ಚಳಿಗಾಲದಲ್ಲಿ ಅವರ ಜನರ ಬದುಕಿನ ಸಂಸ್ಕೃತಿಯನ್ನು ಸೆರೆಹಿಡಿಯುವುದು ನನ್ನ ಮುಂದಿನ ಯೋಜನೆ. ಸಾಮಾನ್ಯವಾಗಿ ಎಲ್ಲರೂ ಅಲ್ಲಿಗೆ ಬೇಸಿಗೆಯಲ್ಲಿಯೇ ಹೋಗುತ್ತಾರೆ. ಚಳಿಗಾಲದಲ್ಲಿ ಯಾರೂ ತೆರಳುವುದಿಲ್ಲ. ಆದರೆ ಮದುವೆಯಂತಹ ಅನೇಕ ಕಾರ್ಯಕ್ರಗಳು ನಡೆಯುವುದು ಚಳಿಗಾಲದಲ್ಲಿಯೇ. ಆದ್ದರಿಂದ ಚಳಿಗಾಲದಲ್ಲಿಯೇ ಅಲ್ಲಿಗೆ ತೆರಳಿ ಅಲ್ಲಿನ ಬದುಕನ್ನು ಸೆರೆಹಿಡಿಯುವುದು ನನ್ನ ಮುಂದಿನ ಯೋಜನೆ.

Write A Comment